ಸರ್ಕಾರಿ ಶಾಲೆಯ ಶಿಕ್ಷಕರ ಸೇವೆ ಅನನ್ಯ

ಸರ್ಕಾರಿ ಶಾಲೆಯ ಶಿಕ್ಷಕರ ಸೇವೆ ಅನನ್ಯ

ಹರಿಹರ, ಜ. 22- ಆಡಳಿತ ಸರ್ಕಾರಗಳು ಶಿಕ್ಷಣದ ಮೌಲ್ಯವನ್ನು ಹೆಚ್ಚಿಸಲು ದಿನಕ್ಕೊಂದು ಹೊಸ ಯೋಜನೆಗಳನ್ನು ಜಾರಿ ಮಾಡುತ್ತವೆ, ಅವುಗಳನ್ನು ಅನುಷ್ಠಾನಿಸಲು ಸರ್ಕಾರಿ ಶಾಲೆಗಳ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹನಗವಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಆರ್.ಬಿ ಮೆಚ್ಚುಗೆ ವ್ಯಕ್ತಪಡಿಸಿದರು. 

ತಾಲ್ಲೂಕಿನ ಹನಗವಾಡಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಳ್ಳೂಡಿ ಕ್ಲಸ್ಟರ್ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಶಿಕ್ಷಕರು ಸರ್ಕಾರಗಳು ನೀಡುವ ಎಲ್ಲಾ ಕೆಲಸಗಳನ್ನೂ ಸಹ ಜವಾಬ್ದಾರಿಯುತವಾಗಿ ಮಾಡುತ್ತಿದ್ದಾರೆ. ಮಕ್ಕಳ ಕಲಿಕೆಯನ್ನು ಹೆಚ್ಚಿಸುವ ನಿಟ್ಟನಲ್ಲಿ ಈ ಕಲಿಕಾ ಹಬ್ಬವನ್ನು ಆಚರಿಸುತ್ತಿರುವುದು ಶ್ಲ್ಯಾಘನೀಯ. 

ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿ.ವಿ ನೋಡುವುದನ್ನು ಬಿಟ್ಟು ಕಲಿಕೆಯ ಕಡೆ ಮನಸ್ಸನ್ನು ಕಟ್ಟಿ ಹಾಕಬೇಕು. ನೀವುಗಳು ಉತ್ತಮ ಪ್ರಜೆಗಳಾಗಿ, ಉನ್ನತ ಹುದ್ದೆಗಳನ್ನು ಪಡೆದರೆ ನಿಮಗೆ ಕಲಿಸಿದ ಶಿಕ್ಷಕರ ಕೀರ್ತಿ ಹೆಚ್ಚುತ್ತದೆ ಎಂದು ಸಲಹೆ ನೀಡಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಕಲಿಕೆಗೆ ಒತ್ತು ನೀಡಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೋವಿಡ್ ನಂತರ ಸರ್ಕಾರಿ ಶಾಲೆಗಳ ಕಲಿಕಾ ವಿಧಾನದಲ್ಲಿ ಅನೇಕ ಬದಲಾವಣೆಗಳಾಗಿವೆ ಎಂದು ಹೇಳಿದರು.

ಬಿಆರ್‍ಸಿ ಕೃಷ್ಣಪ್ಪ ಮಾತನಾಡಿ, ಕೋವಿಡ್ ಪರಿಣಾಮದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಶಾಲೆಯಲ್ಲಿ ಮಗುವಿನ ಕಲಿಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿ ಕಲಿಯಬೇಕಾದ ವಿಷಯ ವಸ್ತುವನ್ನು ಕಲಿತಿಲ್ಲ, ಅದನ್ನು ಸರಿದೂಗಿಸಲು ಸರ್ಕಾರ ಈ ಕಲಿಕಾ ಹಬ್ಬವನ್ನು ಜಾರಿ ಮಾಡಿದೆ ಎಂದು ತಿಳಿಸಿದರು.

ಈ ವೇಳೆ ಹನಗವಾಡಿ ಗ್ರಾ.ಪಂ ಅಧ್ಯಕ್ಷರಾದ ಕವಿತಾ ಕೆ.ಟಿ, ಉಪಾಧ್ಯಕ್ಷರಾದ ಎಸ್.ಎಂ. ರೇವಣಸಿದ್ದೇಶ್, ಮಾಜಿ ಅಧ್ಯಕ್ಷರಾದ ಸವಿತಾ ಶೇಖರಪ್ಪ, ಲಕ್ಷ್ಮವ್ವ ವಾಮದೇವ, ಸದಸ್ಯರಾದ ದ್ರಾಕ್ಷಾಯಣಮ್ಮ, ಸುಜಾತ, ಶಾರದಮ್ಮ, ಹನುಮಂತಪ್ಪ, ಪುಷ್ಪಾ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗೌಡ್ರ ನಾಗರಾಜ್, ಸಂಜೀವ್ ಬಣಕಾರ್, ಅಕ್ಷರ ದಾಸೋಹ ಅಧಿಕಾರಿ ರಾಮಕೃಷ್ಣಪ್ಪ, ಮಂಜುಳಾ, ಆರ್.ಪಿ.ಗಳಾದ ಸುರೇಶ್ ಹಂಚನಗೌಡ್ರು, ಮುಜಾಹಿದ್‌, ಸುಶೀಲಮ್ಮ, ರೇಣುಕಮ್ಮ, ನಾಗರಾಜ್, ತೀರ್ಥಪ್ಪ, ಮಂಜುನಾಥ್, ಲಿಂಗರಾಜ್, ಮುಖ್ಯಶಿಕ್ಷಕರಾದ ಕುಬೇಂದ್ರ ಮೆಕ್ಕಪ್ಪನವರ್, ಗದಿಗೆಪ್ಪ ಹಳೆಮನಿ, ಬೆಳ್ಳೂಡಿ ಮತ್ತು ಹನಗವಾಡಿ ಶಾಲೆಗಳ ಶಿಕ್ಷಕ ವೃಂದದವರು ಹಾಜರಿದ್ದರು.