ಬೆಳಗುವ ಜ್ಯೋತಿಗೆ ಜಾತಿ ಇರುವುದಿಲ್ಲ : ಗಿರಿಸಿದ್ದೇಶ್ವರ ಶ್ರೀ

ಬೆಳಗುವ ಜ್ಯೋತಿಗೆ ಜಾತಿ ಇರುವುದಿಲ್ಲ : ಗಿರಿಸಿದ್ದೇಶ್ವರ ಶ್ರೀ

ಎಷ್ಟೇ ಕೆಲಸವಿರಲಿ  ಮಕ್ಕಳಿಗಾಗಿ ಕೆಲ ಸಮಯ ಕಡ್ಡಾಯವಾಗಿ ಮೀಸಲಿಡಿ : ಮಾಜಿ ಶಾಸಕ ಶಾಂತನಗೌಡ

ಹೊನ್ನಾಳಿ, ಜ.23- ಜಗವ  ಬೆಳಗುವ ಜ್ಯೋತಿಗೆ ಜಾತಿ ಇರುವುದಿಲ್ಲ. ಕೇವಲ ನೀತಿ ಮಾತ್ರ ಇರುತ್ತದೆ ಎಂದು ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಎಚ್. ಕಡದಕಟ್ಟೆಯ ಶ್ರೀ ಸಾಯಿ ಗುರುಕುಲ ವಸತಿಯುತ ಶಾಲೆ ಮತ್ತು ಶ್ರೀ ಸಾಯಿ ಗುರುಕುಲ ಪದವಿ ಪೂರ್ವ ಕಾಲೇ ಜುಗಳ 14ನೇ ವಾರ್ಷಿಕೋತ್ಸವ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿರುವಂತೆ ಬೆಳಕು ಕೊಳಚೆ ಪ್ರದೇಶದ ಮೇಲೂ ಬೀಳುತ್ತದೆ, ಅದೇ ರೀತಿ ದೇವಾಲಯಗಳ ಗೋಪುರಗಳ ಮೇಲೂ ಬೀಳುತ್ತದೆ. ಬೆಳಕಿಗೆ ಯಾವುದೇ ಭೇದವಿರುವುದಿಲ್ಲ. ಅದರಂತೆ ಶಿಕ್ಷಣ ಮತ್ತು ಪ್ರತಿಭೆಗಳಿಗೆ ಕೂಡ ಯಾವುದೇ ಭೇದ-ಭಾವ ಇರುವುದಿಲ್ಲ ಎಂದು ತಿಳಿಸಿದರು.

ಮಕ್ಕಳ ಶಿಕ್ಷಣಕ್ಕೆ ಸುಂದರ ಪರಿಸರದಲ್ಲಿ ಸುಸಜ್ಜಿತ ಕಟ್ಟಡಗಳಿದ್ದು, ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ತಮ್ಮ ಮಕ್ಕಳು ಮೊಬೈಲ್‍ಗಳಿಂದ ದೂರವಿರುವಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಶ್ರೀ ಸಾಯಿ ಗುರುಕುಲ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಆಧುನಿಕ ಜೀವನ ಶೈಲಿಯಿಂದಾಗಿ ಪೋಷಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ಅವಲೋಕಿಸುವ ವ್ಯವಧಾನ ಹೊಂದಿಲ್ಲ. ಅವರ ಬೇಕು-ಬೇಡಗಳ ಬಗ್ಗೆ ಸರಿಯಾಗಿ ಅರಿಯದ ಕಾರಣ ಅದೆಷ್ಟೋ ಮಕ್ಕಳು ತಮ್ಮ ಪೋಷಕರ ನೈಜ ಪ್ರೀತಿಯಿಂದ ವಂಚಿತರಾಗಿ ದಾರಿ ತಪ್ಪುವ ಅನೇಕ ಪ್ರಸಂಗಗಳಿವೆ. ಈ ಕಾರಣದಿಂದ  ಪೋಷಕರು ತಾವು ಎಷ್ಟೇ ಕೋಟಿ-ಕೋಟಿ ಗಳಿಸಲಿ ಅಥವಾ ಎಷ್ಟೇ ಬಿಡುವಿಲ್ಲದ ಕೆಲಸದ ಒತ್ತಡಗಳಲ್ಲಿರಲಿ ತಮ್ಮ ಮಕ್ಕಳಿಗಾಗಿ ಕೆಲ ಸಮಯವನ್ನು ಕಡ್ಡಾಯವಾಗಿ ಮೀಸಲಿರಿಸಿ, ಅವರೊಂದಿಗೆ ಉತ್ತಮ ಒಡನಾಟ ಹೊಂದಬೇಕು ಎಂದು ತಿಳಿಸಿದರು.

ಟ್ರಸ್ಟ್‍ನ ಉಪಾಧ್ಯಕ್ಷ ಡಿ.ಎಚ್. ಶಂಕ್ರಪ್ಪಗೌಡ್ರು, ಕಾರ್ಯದರ್ಶಿ ಸೌಮ್ಯ ಡಿ.ಎಸ್.ಪ್ರದೀಪ್‍ಗೌಡ, ಜಂಟಿ ಕಾರ್ಯದರ್ಶಿ ಎಚ್.ಬಿ. ಅರುಣ್, ಖಜಾಂಚಿ ಸೋಮಪ್ಪ, ನಿರ್ದೇಶಕಿ ವಾಣಿ ಡಿ.ಎಸ್. ಸುರೇಂದ್ರಗೌಡ, ಶ್ರೀ ಸಾಯಿ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಜಿ. ಸುರೇಂದ್ರ, ಉಪ-ಪ್ರಾಂಶುಪಾಲ ಚಂದ್ರಶೇಖರ್, ಮುಖ್ಯ ಶಿಕ್ಷಕಿ ಡಾ.ಎಸ್.ವಿ. ಗೌರಿ, ಶಿಕ್ಷಣ ಸಂಯೋಜಕ ಹರೀಶ್ ಕುಮಾರ್, ಶಿಕ್ಷಕರಾದ ಬಿ. ಕೃಷ್ಣಮೂರ್ತಿ, ದಾಕ್ಷಾಯಣಿ, ಸಾವಿತ್ರಮ್ಮ, ಎಂ. ಸ್ವರೂಪ, ಕೆ. ವಿದ್ಯಾ ಇತರರು ಮಾತನಾಡಿದರು.

ಮುಖಂಡರಾದ ಬೆನಕನಹಳ್ಳಿ ಹಾಲಪ್ಪಗೌಡ, ಡಿ.ಎಸ್. ಪ್ರದೀಪ್‍ಗೌಡ, ದಿಡಗೂರು ಎ.ಜಿ. ಪ್ರಕಾಶ್ ಇತರರು ಇದ್ದರು.