ಪುರಂದರ ದಾಸರ ಕೃತಿಗಳ ಸಾರ ಮಾನವ ಜನ್ಮದ ಕಲ್ಯಾಣವಾಗಿದೆ

ಪುರಂದರ ದಾಸರ ಕೃತಿಗಳ ಸಾರ ಮಾನವ ಜನ್ಮದ ಕಲ್ಯಾಣವಾಗಿದೆ

ಹರಿಹರ, ಜ. 22 – ದಾರ್ಶನಿಕರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅನುಸರಿಸಿ, ಅಳವಡಿಸಿಕೊಳ್ಳುವ ದೃಷ್ಟಿಯಿಂದ ಮಹಾತ್ಮರ ಜಯಂತಿ ಮತ್ತು ಆರಾಧನೆಗಳನ್ನು ಆಚರಿಸಲಾಗುತ್ತದೆ ಎಂದು ದಾವಣಗೆರೆ ತಾಲ್ಲೂಕು ಕಬ್ಬೂರು ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ಅಜಯ್ ನಾರಾಯಣ ಹೇಳಿದರು.

ಹರಿಹರದ ಹರಿಹರೇಶ್ವರ ಭವನದಲ್ಲಿ ಲಕ್ಷ್ಮೀಶ ಕಲಾ ಸಂಘವು ತಾ. ಕಸಾಪ, ತಾ. ಕಜಾಪ ಹಾಗೂ ಸಾಹಿತ್ಯ ಸಂಗಮ ಇವರ ಸಹಯೋಗದಲ್ಲಿ ಹಮ್ಮಿಕೊಂಡ, ಪುರಂದರದಾಸರ ಆರಾಧನೆ ಹಾಗೂ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಪುರಂದರದಾಸರ ಕುರಿತು ಉಪನ್ಯಾಸ ನೀಡಿದರು.

ಪುರಂದರ ದಾಸರ ಕೃತಿಗಳ ಸಾರ ಮಾನವ ಜನ್ಮದ ಕಲ್ಯಾಣವಾಗಿದೆ. ಅವರ ಕೃತಿಗಳಲ್ಲಿ ಉನ್ನತ ಮೌಲ್ಯಗಳಿವೆ ಎಂದು ಹೇಳಿದರು.

ಕುಮಾರವ್ಯಾಸ ಜಯಂತಿಯ ಅಂಗವಾಗಿ ‘ಶ್ರೀ ಕೃಷ್ಣ ಸಂಧಾನ’ ಕಥಾ ಭಾಗವನ್ನು ಚಿತ್ರದುರ್ಗದ ಚಂಪಕಾ ಶ್ರೀಧರ್ ವಾಚಿಸಿದರೆ, ಮತ್ತೂರಿನ ವಿದ್ವಾನ್ ಅಚ್ಯುತ್‌ ಅವಧಾನಿಗಳು ವಾಖ್ಯಾನಿಸಿದರು.

ಮುಖ್ಯ ಅತಿಥಿಯಾಗಿ ಹರಿಹರ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಹಾಗೂ ತಾ. ಕಜಾಪ ಅಧ್ಯಕ್ಷ ಬಿ ಬಿ ರೇವಣ ನಾಯ್ಕ ಲಕ್ಷ್ಮೀಶ ಕಲಾ ಸಂಘದ ಸದಸ್ಯರಾದ ದಿನೇಶ್ ಕೊಣ್ಣೂರು  ಉಪಸ್ಥಿತರಿದ್ದರು.  ಇತ್ತೀಚಿಗೆ  ನಿಧನರಾದ ಗಮಕಿ ಮತ್ತೂರಿನ ಪದ್ಮಶ್ರೀ ಹೆಚ್.ಆರ್. ಕೇಶವಮೂರ್ತಿ ಹಾಗೂ ಹರಿಹರದ ಉದ್ಯಮಿ ತುಕಾಮಣಿಸಾ ಭೂತೆ ಅವರಿಗೆ ಶ್ರದ್ಧಾಂಜಲಿ  ಸಲ್ಲಿಸಲಾಯಿತು.

ಲಕ್ಷ್ಮೀಶ ಕಲಾ ಸಂಘದ ಅಧ್ಯಕ್ಷ ಎಸ್. ಹೆಚ್.  ಹೂಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ವಿ.ಸೃಷ್ಟಿ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಚಂದ್ರಕಲಾ ಸುರೇಶ್ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಜಾತ ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ  ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್ ವಂದಿಸಿದರು.