ಗ್ರಾಮ ವಾಸ್ತವ್ಯದಿಂದ ಜನರ ಮನೆ ಬಾಗಿಲಿಗೆ ಸೌಲಭ್ಯ

ಗ್ರಾಮ ವಾಸ್ತವ್ಯದಿಂದ ಜನರ ಮನೆ ಬಾಗಿಲಿಗೆ ಸೌಲಭ್ಯ

ಮಾಯಕೊಂಡ, ಜ.22- ಅಧಿಕಾರಿಗಳು ಗ್ರಾಮ ವಾಸ್ತವ್ಯದಲ್ಲಿ ಬರುವ ಸಮಸ್ಯೆಗಳನ್ನು ನಿರ್ಲಕ್ಷಿಸದೇ ಸ್ಪಂದಿಸಬೇಕು ಎಂದು ಶಾಸಕ ಪ್ರೊ.ಲಿಂಗಣ್ಣ ಕರೆ ನೀಡಿದರು.

ಇಲ್ಲಿಗೆ ಸಮೀಪದ ಗಂಗನಕಟ್ಟೆ ಗ್ರಾಮದಲ್ಲಿ ನಿನ್ನೆ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಧ್ಯವರ್ತಿಗಳ ಕಾಟ‌ ತಪ್ಪಿಸಿ, ಜನರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಲಾಗಿದೆ. ಅಧಿ ಕಾರಿಗಳು ಜನರ ಅಹವಾಲುಗಳನ್ನು ನೆಪ‌ ಮಾತ್ರಕ್ಕೆ ಸ್ವೀಕರಿಸಿ,‌ ನಿರ್ಲಕ್ಷಿಸಬಾರದು. ಏನೋ  ಬಂದು, ಹೋದರು ಎಂಬಂತಾಗದೇ ಜನಸಾ ಮಾನ್ಯರಿಗೆ ಸ್ಪಂದಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪಿ ಸಲು ಆಡಳಿತ ಯಂತ್ರ ಶ್ರಮಿಸಬೇಕು ಎಂದರು.

ತಹಶೀಲ್ದಾರ್ ಡಾ. ಅಶ್ವತ್ಥ್‌ ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ನಾಗರಿಕರ ಅಲೆದಾಟ ತಪ್ಪಿಸಿ, ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಲು ಗ್ರಾಮ ವಾಸ್ತವ್ಯ ಸಹಕಾರಿ ಯಾಗಿದ್ದು, ಗ್ರಾಮಸ್ಥರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಸರ್ವೇ ಇಲಾಖೆ ವಿರುದ್ದ ದೂರು : ದಿಶಾ ಸಮಿತಿ‌ ಸದಸ್ಯ ಸಂಗಣ್ಣ, ಪ್ರತೀ ಸಾರಿಯೂ ಎಂಟತ್ತು ಸಾವಿರ ಹಣ ಎಲ್ಲಿಂದ ತರಬೇಕು? ಸರ್ಕಾರದಲ್ಲಿ ಈ ರೀತಿ ಲಂಚ ಕೇಳಿದರೆ‌ ಬಡವರ ಗತಿ ಏನು? ಎಂದರು. 

ದಾವಣಗೆರೆ ಜನತಾ ಬಜಾರ್ ಅಧ್ಯಕ್ಷ ಜಿ.ಡಿ. ಗುರುಸ್ವಾಮಿ ಮಾತನಾಡಿ, ಒಗ್ಗೂಡಿಸಿದ ಪಹಣಿಗಳನ್ನು ನಾಲ್ಕಾರು ವರ್ಷದಿಂದ ಪೋಡು ಮಾಡದೇ ಸತಾಯಿಸುತ್ತಿದ್ದಾರೆ‌ ಎಂದು ಆರೋಪಿಸಿದರು.

ತಹಶೀಲ್ದಾರ್ ಅಶ್ವತ್ಥ್‌, ಪೋಡಿ‌ ಮುಕ್ತ ಗ್ರಾಮ ಯೋಜನೆ ಇದೇ ಗ್ರಾಮದಿಂದ ಆರಂಭ ಮಾಡಬೇಕು. ಇನ್ನು ಮುಂದೆ ಸರ್ವೇಯರ್ ಅಳತೆ ಮಾಡಬೇಕಾಗಿಲ್ಲ. ಪಿಡಿಒ ಅವರೇ ದಿಶಾಂಕ್ ಆಪ್ ಮೂಲಕ ಅಳತೆ ಮಾಡಬೇಕು. ಸ್ವಾಮಿತ್ವ ಕಾರ್ಡ್ ಬರಲಿದ್ದು, ಜಮೀನು‌ ಮಾರಾಟ, ಖರೀದಿ ಇತ್ಯಾದಿಗೆ ಬಳಸಬಹುದು ಎಂದರು.

ಬೆಸ್ಕಾಂ ಎಇಇ ತೀರ್ಥೇಶ್, ಪಂಪ್‌ಸೆಟ್‌ಗಳಿಗೆ 7ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದರು.

ಆಹಾರ ಶಿರಸ್ತೇದಾರ್ ಬುಡೇನ್ ಸಾಬ್, ಪಡಿತರ ಚೀಟಿಗೆ ಸದಸ್ಯರ ಹೆಸರನ್ನು ಆನ್‌ಲೈನ್‌ನಲ್ಲಿ ಸೇರಿಸಬೇಕು. ಪಡಿತರ ಅಕ್ಕಿಗೆ ಸಾರವರ್ಧಿತ ಅಕ್ಕಿ ಬೆರೆಸಿದೆ ಎಂದರು.

ಧನ್ಯಕುಮಾರ್ ಸ್ವಾಗತಿಸಿದರು. ಬಸವಾರಾಧ್ಯ ನಿರೂಪಿಸಿದರು. ಸಿದ್ದರಾಮೇಶ್ ವಂದಿಸಿದರು.

ಮದ್ಯ ಮಾರಾಟ, ಉಪ್ಪು‌ ನೀರು ಪೂರೈಕೆ ತಡೆಯಿರಿ : ಗಂಗನಕಟ್ಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡುತ್ತಾರೆ. ಇಸ್ಪೀಟ್ ಆಡುವವರ ಹಾವಳಿಯೂ ಹೆಚ್ಚಿದ್ದು, ಕುಟುಂಬಗಳು ಹಾಳಾಗಿವೆ. ಇದನ್ನು ಮೊದಲು ನಿಯಂತ್ರಿಸುವ ಕೆಲಸ‌ ಮಾಡಿ‌ ಎಂದು ಮಹಿಳೆಯರು ಶಾಸಕರಿಗೆ ಆಗ್ರಹಿಸಿದರು. ಶಾಸಕರು ಕೂಡಲೇ ಅಕ್ರಮ‌ ಮದ್ಯ, ಜೂಜಾಟ ನಿಯಂತ್ರಿಸಬೇಕು ಎಂದು ಮಾಯಕೊಂಡ ಪಿಎಸ್ಐಗೆ ಸೂಚಿಸಿದರು.