ಹರಿಹರ : ನಗರಸಭೆ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ

ಹರಿಹರ : ನಗರಸಭೆ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ

ಹರಿಹರ, ಜ. 20 – ನಗರಸಭೆಗೆ ಹೆಚ್ಚು ಜನ ಬರುವ ಕಾರಣ, ನೂತನ ಸುಸಜ್ಜಿತ ಕಟ್ಟಡದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಶಾಸಕ ಎಸ್. ರಾಮಪ್ಪ ಸೂಚನೆ ನೀಡಿದ್ದಾರೆ.

ನಗರಸಭೆ ಆವರಣದಲ್ಲಿ 4 ಕೋಟಿ 22 ಲಕ್ಷ ರೂಪಾಯಿ ವೆಚ್ಚದ ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ವೇದಿಕೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು 15 ವರ್ಷ ನಗರಸಭೆ ಸದಸ್ಯನಾಗಿದ್ದಾಗ ಶಿಥಿಲ ಕಟ್ಟಡ ಇತ್ತು. ಈಗ ಶಾಸಕನಾಗಿರುವಾಗ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿರುವುದು ಸಂತೋಷ ತಂದಿದೆ ಎಂದರು.

ಯಾವುದೇ ಲೋಪ ಆಗದಂತೆ ಗುಣಮಟ್ಟದ ಕಾಮಗಾರಿ ಆಗಬೇಕು. ಸರ್ಕಾರ ನಿಗದಿಪಡಿಸಿರುವ ಸಮಯಕ್ಕೂ ಮೊದಲೇ ಕಾಮಗಾರಿ ಮುಗಿಸುವುದರಿಂದ ಜನರಿಗೆ ಅನುಕೂಲವಾಗುತ್ತದೆ ಎಂದರು.

ಜಲಸಿರಿ ಯೋಜನೆಯಲ್ಲಿ ನಲ್ಲಿ ಅಳವಡಿಕೆಗೆ ಮೆಟೀರಿಯಲ್‌ ಇಲ್ಲ ಎಂದು ಗುತ್ತಿಗೆದಾರ ಹೇಳುತ್ತಾರೆ ಮತ್ತು ಒಂದು ಮನೆಗೆ 4.5 ಸಾವಿರ ನೀರಿನ ಬಿಲ್ ನೀಡುತ್ತಾರೆ ಎಂದು ದೂರುತ್ತಾರೆ. ಈ ಲೋಪಗಳನ್ನು ಸರಿಪಡಿಸಲು ಮುಂದಾಗಬೇಕಾಗಿದೆ ಎಂದವರು ತಿಳಿಸಿದರು.

ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಯುಜಿಡಿ ಮತ್ತು ಜಲಸಿರಿ ಕಾಮಗಾರಿಯಿಂದ ಹಾಳಾಗಿದ್ದ ರಸ್ತೆಗಳ ದುರಸ್ತಿಗೆ ಎಸ್.ಎಫ್.ಸಿ ಅಡಿ 8 ಕೋಟಿ ಅನುದಾನ ಬಂದಿದೆ. ಬೇರೆ ಅನುದಾನಗಳೂ ಸೇರಿ ಪ್ರತಿ ವಾರ್ಡಿನ ರಸ್ತೆಗೆ 40-50 ಲಕ್ಷ ರೂ. ದೊರೆಯಲಿದೆ ಎಂದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಸರ್ಕಾರಕ್ಕೆ ವಾಪಸ್‌ ಹೋಗಿದ್ದ ಹಣ ಶಾಸಕರ ಪರಿಶ್ರಮದಿಂದ ವಾಪಸ್‌ ಬಂದಿದೆ. ಸದಸ್ಯರು ಒಗ್ಗಟ್ಟಿನಿಂದ ಇರುವುದರಿಂದ ಅನೇಕ ಕೆಲಸಗಳಾಗುತ್ತಿವೆ ಎಂದರು.

ನಗರಸಭೆ ಅಧ್ಯಕ್ಷೆ ಶಾಹೀನಾಬಾನು ದಾದಾಪೀರ್, ನಗರಸಭೆ ಉಪಾಧ್ಯಕ್ಷ ವಾಮನಮೂರ್ತಿ, ನಗರಸಭೆ ಸದಸ್ಯರಾದ ರಜನಿಕಾಂತ್, ಎಸ್.ಎಂ. ವಸಂತ ಮಾತನಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ರತ್ನಮ್ಮ ಡಿ. ಉಜ್ಜೇಶ್, ಉಷಾ ಅಂಗಡಿ ಮಂಜುನಾಥ್, ಅಬ್ದುಲ್ ಅಲಿಂ. ಎಂ.ಎಸ್. ಬಾಬುಲಾಲ್, ದಿನೇಶ್ ಬಾಬು, ಅಶ್ವಿನಿ ಕೃಷ್ಣ,  ಪಕ್ಕೀರಮ್ಮ, ನಿಂಬಕ್ಕ ಚಂದಾಪೂರ್, ಷಹಜಾದ್ ಸನಾವುಲ್ಲಾ, ಸುಮಿತ್ರ ಮರಿದೇವ, ಕವಿತಾ ಮಾರುತಿ, ಇಬ್ರಾಹಿಂ, ಹನುಮಂತಪ್ಪ,  ರಾಘವೇಂದ್ರ, ಸುರೇಶ್ ತೇರದಾಳ,   ಮುಖಂಡರಾದ ದಾದಾಪೀರ್ ಭಾನುವಳ್ಳಿ, ಜಾಕೀರ್, ಮನ್ಸೂರು ಮದ್ದಿ, ನಗರಸಭೆ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಆರ್.ಐ ಮಂಜುನಾಥ್,  ಇಂಜಿನಿಯರ್ ಅಬ್ದುಲ್ ಹಮೀದ್, ಮಹಾಂತೇಶ್, ಆರೋಗ್ಯ ಇಲಾಖೆ ರವಿಪ್ರಕಾಶ್, ಗುರುಪ್ರಸಾದ್, ಗಾಯತ್ರಿ,  ನಾಗರಾಜ್, ಜಿ.ಕೆ. ಪ್ರವೀಣ್, ಹರ್ಷವರ್ಧನ್, ಗುತ್ತಿಗೆದಾರ ಬೆಂಗಳೂರು ಸತೀಶ್ ಮತ್ತಿತರರು ಹಾಜರಿದ್ದರು.