ಮಲೇಬೆನ್ನೂರು, ಜ.22- ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಬರುವ ಫೆಬ್ರವರಿ 8 ಮತ್ತು 9 ರಂದು ಹಮ್ಮಿಕೊಂಡಿರುವ 5ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಯ ವೇದಿಕೆ ಹಾಗೂ ಮಹಾಮಂಟಪ ನಿರ್ಮಾಣಕ್ಕೆ ಭಾನುವಾರ ಹಂದರಕಂಬ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಪೂಜೆಯ ದಿವ್ಯ ನೇತೃತ್ವ ವಹಿಸಿದ್ದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಈ ವೇಳೆ ಮಾತನಾಡಿ, ವಾಲ್ಮೀಕಿ
ಜಾತ್ರೆ ಸ್ವಾಭಿಮಾನದ ಸಂಕೇತವಾಗಿದ್ದು, ಜಾತ್ರೆಯ ಮೂಲಕ ಅಖಂಡ ಕರ್ನಾಟಕ ಬೇಡ, ವಾಲ್ಮೀಕಿ ನಾಯಕ ಸಮುದಾಯವನ್ನು ಒಂದೇ ವೇದಿಕೆಗೆ ಕರೆತಂದು ವಿಷಯಾಧಾರಿತ ಚರ್ಚೆ ಮಾಡಲಾಗುವುದು. ಸಮುದಾಯದ ಸಾಂಸ್ಕೃತಿಕ ಇತಿಹಾಸವನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವುದು ಮತ್ತು ಸಂವಿಧಾನದಲ್ಲಿ ಇರುವ ಹಕ್ಕುಗಳ ಬಗ್ಗೆ ತಿಳಿಸು ವುದು ಸೇರಿದಂತೆ ಹತ್ತು ಹಲವು ವಿಷಯಗಳನ್ನು ಸಮಾಜದ ಗಮನಕ್ಕೆ ತರಲಾಗುವುದು.
ಮಹಿಳಾ ಗೋಷ್ಠಿ, ಕೃಷಿಕರ ಗೋಷ್ಠಿ, ನೌಕರರ ಗೋಷ್ಠಿ, ಯುವ ಗೋಷ್ಠಿಗಳನ್ನು ಜಾತ್ರೆಯಲ್ಲಿ ಸಂಘಟಿಸಲಾಗುವುದೆಂದು ತಿಳಿಸಿದ ಸ್ವಾಮೀಜಿ ಅವರು ಈ ಬಾರಿ ನೂತನ ರಥ ಲೋಕಾರ್ಪಣೆಗೊಳ್ಳಲಿದ್ದು, ಉದ್ಘಾಟನೆಗೆ ರಾಷ್ಟ್ರಪತಿಗಳಿಗೆ ಆಹ್ವಾನ ನೀಡಲಾಗಿದೆ ಎಂದರು.
ಜಾತ್ರಾ ಸಮಿತಿ ಅಧ್ಯಕ್ಷರಾದ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸ್ವಾಮೀಜಿಯವರ 246 ದಿನಗಳ ಹೋರಾಟದ ಫಲವಾಗಿ ಎಸ್ಸಿ-ಎಸ್ಟಿ ಜನರಿಗೆ ಮೀಸಲಾತಿ ಹೆಚ್ಚಳವಾಗಿದೆ. ಈ ಸಂತಸದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರಾ ಸಮಿತಿಗೆ ತನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ತನಗೆ ಖುಷಿ ತಂದಿದೆ ಎಂದರು.
ಜಾತ್ರಾ ಸಮಿತಿ ಸಂಚಾಲಕ ಹಾಗೂ ಕೆ.ಪಿ.ಸಿ.ಸಿ. ಎಸ್ಟಿ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ವಾಲ್ಮೀಕಿ ಜಾತ್ರೆ ಮೂಲಕ ಸಮಾಜದಲ್ಲಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಬಗ್ಗೆ ಅರಿವು ಮೂಡಿಸುತ್ತಿರುವ ಶ್ರೀಗಳ ಶ್ರಮ ಸಾರ್ಥಕವಾಗಿದೆ. ನಮ್ಮ ಸಮಾಜ ರಾಜ್ಯದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಒಂದಾಗಿ ಮುನ್ನಡೆಯಲು ಈ ಜಾತ್ರೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಎಸ್ಸಿ ವಿಶ್ರಾಂತ ಸದಸ್ಯ ಜಿ.ಟಿ ಚಂದ್ರಶೇಖರಪ್ಪ, ನಿವೃತ್ತ ಅಧಿಕಾರಿ ಹರ್ತಿಕೋಟಿ ವೀರೇಂದ್ರ ಸಿಂಹ, ಮುಖಂಡ ಹೊದಿಗೆರೆ ರಮೇಶ್, ಮಂಗೇನಹಳ್ಳಿ ಲೋಹಿತ್, ಕೆಪಿಟಿಸಿಎಲ್, ಎಇಇ ಕೆ.ಎಸ್ ಜಯಪ್ಪ ವಾಲ್ಮೀಕಿ ಸ್ಮರಣ ಸಂಪುಟ 5ರ ಸಂಪಾದಕ ಪ್ರೊ. ಕರಿಯಪ್ಪ ಮಾಳಗಿ, ಸಂಪುಟ-4ರ ಸಂಪಾದಕ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿದರು.
ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಧರ್ಮದರ್ಶಿ ಕೆ.ಬಿ. ಮಂಜುನಾಥ, ತಿಮ್ಮೇನಹಳ್ಳಿ ಚಂದ್ರಪ್ಪ, ರಾಜನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಚೈತ್ರ ಲಂಕೇಶ್, ಹರಿಹರ ನಗರಸಭೆ ಸದಸ್ಯ ದಿನೇಶ್ ಬಾಬು, ಮಹಿಳಾ ಮುಖಂಡರಾದ ಶ್ರೀಮತಿ ವಿಜಯಶ್ರೀ ಮಹೇಂದ್ರಕುಮಾರ್, ಶ್ರೀಮತಿ ಪಾರ್ವತಿ ಬೋರಯ್ಯ, ಶ್ರೀಮತಿ ಗೌರಮ್ಮ ಮಂಜುನಾಥ್, ಪ್ರಾಧ್ಯಾಪಕರಾದ ಡಾ. ಪ್ರಹ್ಲಾದಪ್ಪ, ಡಾ. ತಿಪ್ಪೇಸ್ವಾಮಿ, ಶಿಕ್ಷಕ ವಾಸನ ಮಹಾಂತೇಶ್, ದಾವಣಗೆರೆಯ ತರುಣ್ ಇವೆಂಟ್ಸ್ ಮಾಲೀಕ ಹುಲ್ಮನಿ ಪ್ರಸಾದ್, ಹರಿಹರದ ಮಕರಿ ಪಾಲಾಕ್ಷಪ್ಪ, ಹಂಚಿನಮನಿ ದೇವೇಂದ್ರಪ್ಪ, ರಾಜು, ಕುಂಬಳೂರು ವಾಸು, ಪತ್ರಕರ್ತ ಜಿಗಳಿ ಪ್ರಕಾಶ್, ಗಂಗಾವತಿ ತಾಲ್ಲೂಕಿನ ಹನುಮಂತಪ್ಪ, ನಾರಾಯಣಪ್ಪ, ವೀರಭದ್ರಪ್ಪ ನಾಯಕ, ದುರುಗಪ್ಪ ದಳಪತಿ, ಬೆಂಗಳೂರಿನ ಪ್ರಭುಸ್ವಾಮಿ, ಎಂ. ಮಾಧು, ಜಗದೀಶ್, ಶಿವಮೂರ್ತಿ, ದೇವು, ಚಂದ್ರು ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.