ಹೆಣ್ಣು ಇತರರಿಗೆ ಆಶ್ರಯ – ಆಸರೆಯ ಬೆಳಕು

ಹೆಣ್ಣು ಇತರರಿಗೆ ಆಶ್ರಯ – ಆಸರೆಯ ಬೆಳಕು

ಹರಪನಹಳ್ಳಿಯಲ್ಲಿ  ವೀಣಾ ಮಹಾಂತೇಶ್

ಹರಪನಹಳ್ಳಿ, ಜ. 20- ಹೆಣ್ಣು ಪರಾವಲಂಬಿಯಲ್ಲ. ಇತರರಿಗೆ ಆಶ್ರಯ ಹಾಗೂ ಆಸರೆಯ ಬೆಳಕು. ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ ಎಂದು ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಹೇಳಿದರು.

ಪಟ್ಟಣದ ನಟರಾಜ ಕಲಾಭವನದಲ್ಲಿ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಹುಟ್ಟಿನಿಂದ ಸಾವಿನವರೆಗೂ ಇತರರ ಸೇವೆಯಲ್ಲಿಯೇ ಲೀನವಾಗುವ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳನ್ನು ಸಹಿಸಿಕೊಂಡು ಸಾಗುತ್ತಿರುವ ಮಹಿಳೆ ಪುರುಷರಿಗೆ ಪೈಪೋಟಿಯಲ್ಲ. ಸಮಾನಳು. ಅಲ್ಪಬುದ್ಧಿಯ ಹೆಣ್ಣು ಎಂದು ಹೀಯ್ಯಾಳಿ ಸುವವರಿಗೆ ಸಾಧನೆಯಿಂದ ಸಾಬೀತು ಮಾಡಿ ರುವ ಮಹಿಳೆ ಒಲೆಯ ಮುಂದೆ ಸೀಮಿತ ವಾಗದೆ, ವೇದಿಕೆಗೆ ಬರಬೇಕು ಎನ್ನುವ ಉದ್ದೇಶದಿಂದ ಟ್ರಸ್ಟ್ ವತಿಯಿಂದ ತಾಲ್ಲೂ ಕಿನ 25 ಕಡೆಗಳಲ್ಲಿ ಟೈಲರಿಂಗ್ ತರಬೇತಿ ನೀಡಲಾಗಿತ್ತು. ಸ್ವಯಂ ಉದ್ಯೋಗವನ್ನು ಕೈಗೊಳ್ಳುವ ನಿಟ್ಟಿನಲ್ಲಿ ತರಬೇತಿ, ಮಾರುಕಟ್ಟೆ ವ್ಯವಸ್ಥೆ ಕುರಿತಾಗಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುವುದು  ಎಂದರು.

ನಿವೃತ್ತ ಮುಖ್ಯ ಶಿಕ್ಷಕರಾದ ಲಲಿತಮ್ಮ ಮಾತನಾಡಿ, ಹೆಣ್ಣು ಭೋಗದ ವಸ್ತುವಲ್ಲ. ಅಡುಗೆಯ ಯಂತ್ರವಲ್ಲ. ಅವರೊಂದು ವಚನ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರು. ಕುಟುಂಬ ಮತ್ತು ದೇಶದ ಬೆಳಕು ಹೆಣ್ಣು. ಪುರುಷ ಮತ್ತು ಮಹಿಳೆಯರಿಗೆ ಸಮಾನತೆಯಿದ್ದರೆ ಮಾತ್ರ ಪ್ರಪಂಚದ ಉಳಿವು. ಸಮಾಜ ಸೇವೆಯ ಮುಂದೆ ರಾಜಕೀಯ ಗಿಮಿಕ್ ಸಮನಲ್ಲ ಎನ್ನುವುದಕ್ಕೆ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ವೀಣಾ ಮಹಾಂತೇಶ್ ಅನೇಕ ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲ್ಯಾಘನೀಯ ಎಂದರು.

ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೇಶ್, ನ್ಯಾಯವಾದಿ ಸಿದ್ದಲಿಂಗನಗೌಡ, ಯುವ ಕಾಂಗ್ರೆಸ್ ಉಪಾಧ್ಯಕ್ಷ ದಾದಾಪೀರ್ ಮಕರಬ್ಬಿ, ಗಾಯತ್ರಮ್ಮ, ತಿಮ್ಮಲಾಪುರದ ನಾಗರಾಜ, ಮನೋಜ ಉಪಸ್ಥಿತರಿದ್ದರು.