ಬಿಜೆಪಿ ಅಧಿಕಾರದಲ್ಲಿದ್ದರೆ ಕಾರ್ಮಿಕರು ನಿರ್ನಾಮ

ಹರಪನಹಳ್ಳಿ,ಜ.10- ಬಿಜೆಪಿ ದೇಶದ ಸಂಪತ್ತನ್ನು ಅದಾನಿ, ಅಂಬಾನಿಗಳಿಗೆ ಮಾರಾಟ ಮಾಡುತ್ತಿದ್ದು ಈ ಸರ್ಕಾರಗಳನ್ನು ಮುಂಬರುವ ಚುನಾವಣೆಯಲ್ಲಿ ಕಿತ್ತೊಗೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್  ಹೇಳಿದರು. 

ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಕಾರ್ಮಿಕ ವಿಭಾಗದ ಕಾರ್ಯಕರ್ತರ ಸಮಾವೇಶ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ದೇಶದ ಕಾರ್ಮಿಕರು ನಿರ್ನಾಮವಾಗಲಿದ್ದಾರೆ ಎಂದರು.

ಸರ್ಕಾರಿ ಉದ್ದಿಮೆಗಳನ್ನು ಖಾಸಗಿ ವ್ಯಕ್ತಿ ಗಳಿಗೆ ಮಾರಾಟ ಮಾಡುತ್ತಿದ್ದು ಇದರಿಂದ ಅಲ್ಲಿನ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿ ದ್ದಾರೆ. ಸರ್ಕಾರಿ ಸ್ವಾಮ್ಯದಲ್ಲಿದ್ದರೆ ದೀನ ದಲಿತರು ಮೀಸಲಾತಿ ಕೇಳುತ್ತಾರೆ. ಅದಕ್ಕಾಗಿ ಅವುಗಳನ್ನು ಮಾರಿ ಬಡ ಕೂಲಿ ಕಾರ್ಮಿಕರ ಬದುಕನ್ನು ಬರ್‌ಬಾದ್ ಮಾಡುತ್ತಿದ್ದಾರೆ.

 ಅಲ್ಲದೇ, ಅಣ್ಣ – ತಮ್ಮಂದಿರ ತರಹ ಸಹ ಬಾಳ್ವೆ ಸಾಗಿಸುತ್ತಿರುವ ಮುಸ್ಲಿಂ ಹಾಗೂ ಇತರೆ ಜನಾಂಗದ ಮಧ್ಯೆ ಕೋಮು ದಳ್ಳುರಿಯನ್ನು ಸೃಷ್ಠಿ ಮಾಡಿ ದೇಶದ ಶಾಂತಿಗೆ ಬಿಜೆಪಿ ಸರ್ಕಾರಗಳು ಭಂಗ ಮಾಡುತ್ತಿವೆ. ತಮ್ಮ ಆಡಳಿತದ ವೈಫಲ್ಯಗಳನ್ನು ಮರೆ ಮಾಚಲು ಪಾಕಿಸ್ತಾನ ವಿರುದ್ದ ಕೂಗು ಹಾಕಿ ಅಧಿಕಾರ ಮಾಡುತ್ತಿದ್ದಾರೆ ಎಂದು ದೂರಿದರು. 

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿರಾಜ್   ಶೇಖ್ ಮಾತನಾಡಿ, ಭ್ರಷ್ಟಾಚಾರದ ಬಿಜೆಪಿ  ರಾಷ್ಟ್ರ ಧ್ವಜಸ್ತಂಭ ಸ್ಥಾಪನೆಯಲ್ಲಿ ಲಂಚ, ಗುಡಿಗುಂಡಾರಗಳ ಅನುದಾನದಲ್ಲಿ ಶೇ.30ರಷ್ಟು ಲಂಚ, ಗುತ್ತಿಗೆದಾರ ಕಮೀಷನ್, ಈ ಎಲ್ಲಾ ಲಂಚಗಳ ಸರಮಾಲೆಯಿಂದ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಟೆಂಡರ್ ನೆಪದಲ್ಲಿ ಹಾಲಿ ಸಚಿವರು ಹಾಗೂ ಶಾಸಕರು ತಮ್ಮ ಆಪ್ತರ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಸ್ಥಾಪಿಸಿರುವ ಧ್ವಜ ಸ್ತಂಭ ಆಟದ ಮೈದಾನವನ್ನೇ ನುಂಗಿದ್ದಲ್ಲದೇ ಬಿಡುಗಡೆಯಾದ 7 ಕೋಟಿ ಅನುದಾನಕ್ಕೆ ಲೆಕ್ಕವಿಲ್ಲ.  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದರು. 

ಉಸ್ತುವಾರಿ ಕವಿತಾ ರೆಡ್ಡಿ ಮಾತನಾಡಿ. ವೈಯಕ್ತಿಕ ಬದುಕಿಗಾಗಿ ನಾವಲ್ಲ, ಪಕ್ಷಕ್ಕಾಗಿ ನಾವು. ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಗಳೆಲ್ಲಾ ಒಂದೇ ವೇದಿಕೆಯಲ್ಲಿ ಕಾಣಿಸಿ ಇತಿಹಾಸ ಸೃಷ್ಟಿಸಿದ್ದಾರೆ. ವಿದ್ಯಾಸಿರಿ ನಾಡು ಎಂಬ ಸ್ವಾಗತ ಫಲಕದೊಂದಿಗೆ ನಗರಕ್ಕೆ ಕಾಲಿಡುವ ನಾವುಗಳು ಹಾಲಿ ಶಾಸಕರು ಸ್ಕಿಲ್ ಇಂಡಿಯಾ, ಮೇಕ್‍ಇನ್ ಇಂಡಿಯಾ ದಂತಹ ಸಾಕಷ್ಟು ಯೋಜನೆಗಳಿದ್ದರೂ ಒಂದೇ ಒಂದು ಟೆಕ್ನಿಕ್ ಕಾಲೇಜ್ ತರಲಾಗಿಲ್ಲ. ಕಾರ್ಖಾನೆಗಳಿಲ್ಲ, ಉತ್ತಮ ಶಾಲೆಗಳಿಲ್ಲ, ಟ್ರೈನಿಂಗ್ ಸೆಂಟರ್‍ಗಳಿಲ್ಲ, ಯಾವುದೂ ಇಲ್ಲದೆ  ರೆಡ್ಡಿಯವರು ಕೇವಲ ವಿಸಿಟರ್ ಶಾಸಕರಾಗಿದ್ದಾರೆಯೇ ಎಂದು ಪ್ರಶ್ನಿಸಿದರು.

ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ,   ಎಂ.ಪಿ.ವೀಣಾ ಮಹಾಂತೇಶ್, ಶಶಿಧರ ಪೂಜಾರ, ಹೆಚ್.ಬಿ.ಪರಶುರಾಮ್, ಅಂಬಾಡಿ ನಾಗರಾಜ್, ಉಮೇಶಬಾಬು, ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಎ.ಮೂಸಾಸಾಬ್, ಎಂ.ಟಿ.ಸುಭಾಷ್ ಚಂದ್ರ, ವಗ್ಗಾಲಿ ನಜೀರ್ ಸಾಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ ಮಾತನಾಡಿದರು.  

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರೇಮ   ಕುಮಾರ ಗೌಡ, ಪುರಸಭೆ ಸದಸ್ಯ ಜಾಕೀರ್ ಸರಖಾವಸ್, ಮುಖಂಡರಾದ ಪಿ.ಎಲ್ ಪ್ಯೋಮ್ಯನಾಯ್ಕ್, ಹೆಚ್.ಕೆ.ಹಾಲೇಶ್, ಮಂಜಪ್ಪ ಹಲಗೇರಿ, ಮುತ್ತಿಗಿ ಜಂಬಣ್ಣ, ಕಂಚಿಕೇರಿ ಜಯಲಕ್ಷ್ಮಿ, ಎನ್.ಮಜ್ಜೀದ್, ತಿಮ್ಮನಾಯ್ಕ್, ರಾಜುನಾಯ್ಕ್, ವೇದುನಾಯ್ಕ್, ತಿಮ್ಮಾರೆಡ್ಡಿ ಹಾಗೂ ಇತರರು ಭಾಗವಹಿಸಿದ್ದರು.