ಹರಪನಹಳ್ಳಿ, ಜ. 9- ಪಂಚಮಸಾಲಿ ಲಿಂಗಾಯತರಿಗೆ 2ಎ ಬದಲಾಗಿ 2ಡಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ಪ್ರಸ್ತಾವನೆ ಕುರಿತು ಮುಂಬರುವ ಹರ ಜಾತ್ರೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಚೆಗೆ ನಮ್ಮ ಮಠಕ್ಕೆ ಕರ್ನಾಟಕ ಉಸ್ತುವಾರಿ ಅರುಣಕುಮಾರ ರವರ ಜೊತೆ ನಡ್ಡಾ ಅವರು ಆಗಮಿಸಿದಾಗ ಒಬಿಸಿ ಮೀಸಲಾತಿ ಕುರಿತು ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇವೆ. ಇದಕ್ಕೆ ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.
ಜ.14 ಹಾಗೂ 15 ರಂದು ನಡೆಯುವ ಹರ ಜಾತ್ರೆಯಲ್ಲಿ ಮುಖ್ಯಮಂತ್ರಿ, ನಿಕಟಪೂರ್ವ ಮುಖ್ಯಮಂತ್ರಿ, ಇತರೆ ಜನಪ್ರತಿನಿಧಿಗಳು ಹಾಗೂ 1994 ರಿಂದ ಮೀಸಲಾತಿ ಕುರಿತು ಹೋರಾಟ ನಡೆಸಿದ ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದು, ಅಂದು 2ಡಿ ಬಗ್ಗೆ ಚರ್ಚಿಸಿ ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ಹೇಳಿದರು.
ನಾವು ಕೇಳಿದ್ದು 2ಎ ಮೀಸಲಾತಿ ಕೊಡಿ ಎಂದು ಆದರೆ ಸರ್ಕಾರ 2ಡಿ ಕೊಡುವುದಾಗಿ ಹೇಳಿದ್ದರೂ ಎಷ್ಟು ಮೀಸಲಾತಿ ಕೊಡಬೇಕು, ಏನೇನು ಸೌಲಭ್ಯ ಕೊಡುತ್ತಾರೆ ಎಂಬ ಸ್ಪಷ್ಟತೆ ಇಲ್ಲ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗದವರು ಇನ್ನೂ ಅಂತಿಮ ವರದಿ ನೀಡಿಲ್ಲ, ಅಂತಿಮ ವರದಿ ನೀಡಿದ ಬಳಿಕ ಸರ್ಕಾರ ಏನು ಮಾಡುತ್ತಿದೆ ಎಂದು ಕಾದು ನೋಡಬೇಕಿದೆ ಎಂದು ಹೇಳಿದರು.
ಒಟ್ಟಿನಲ್ಲಿ ರಾಜ್ಯದ 2ಡಿ ವಿಚಾರ ಹರ ಜಾತ್ರೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.
ಹರ ಜಾತ್ರೆಯಲ್ಲಿ ತರಳಬಾಳು, ವಾಲ್ಮೀಕಿ, ಕಾಗಿನೆಲೆ, ವೇಮನಾನಂದ ಶ್ರೀಗಳು ಹಾಗೂ ಇತರೆ ಸ್ವಾಮೀಜಿಗಳು, ನಟ ಡಾಲಿ ಧನಂಜಯ ಪಾಲ್ಗೊಳ್ಳುವರು ಎಂದು ಹೇಳಿದರು.
ಹರ ಜಾತ್ರೆಯಲ್ಲಿ ರೈತರ ಸಮಾವೇಶ, ಪಲ್ಲಕ್ಕಿ ಉತ್ಸವ, ವಿಜಾಪುರದ ಜ್ಞಾನ ಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಯವರಿಗೆ ನುಡಿ ನಮನ ಹಾಗೂ 2ಎ ಗಾಗಿ ಬೃಹತ್ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಅವರು ತಿಳಿಸಿದರು. ಹಗುರವಾಗಿ ಮಾತನಾಡುವವರನ್ನು ಹಗುರವಾಗಿ ಬಿಟ್ಟು ಬಿಡುತ್ತೇವೆ ಎಂದು ಕೂಡಲ ಸಂಗಮ ಪೀಠದ ಕೆಲವರ ಟೀಕೆಗೆ ಉತ್ತರಿಸಿದರು.
ಹರ ಜಾತ್ರೆಗೆ ಹರಪನಹಳ್ಳಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಪಂಚಮಸಾಲಿ ಸಮಾಜದ ವಿಜಯನಗರ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್, ತಾಲ್ಲೂಕು ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ಮಾಜಿ ಅಧ್ಯಕ್ಷ ಜಿ.ಕೆ.ಮಲ್ಲಿಕಾರ್ಜುನ, ತಾಲ್ಲೂಕು ಪಂಚಮಸಾಲಿ ಮಹಿಳಾ ಅಧ್ಯಕ್ಷರಾದ ಶ್ರೀಮತಿ, ಬೇಲೂರು ಅಂಜಪ್ಪ, ಶಶಿಧರ ಪೂಜಾರ, ಪುಷ್ಪಾ ದಿವಾಕರ, ಚಂದ್ರಶೇಖರ ಪೂಜಾರ, ಐಗೋಳ ಚಿದಾನಂದ, ಜೆ.ಓಂಕಾರಗೌಡ, ಮಂಜುನಾಥ ಪೂಜಾರ, ಗಣೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.