ಮೊಬೈಲ್ – ಟಿವಿ ಮಹಿಳೆಯರ, ಮಕ್ಕಳ ಸುಂದರ ಬದುಕು ಕಸಿದುಕೊಂಡಿವೆ

ಮೊಬೈಲ್ – ಟಿವಿ ಮಹಿಳೆಯರ, ಮಕ್ಕಳ ಸುಂದರ ಬದುಕು ಕಸಿದುಕೊಂಡಿವೆ

ಜಗಳೂರು: ಮಹಿಳಾ ವಿಚಾರ ಗೋಷ್ಠಿಯಲ್ಲಿ ಬಿ.ಗೀತಾ ಬೇಸರ

ಜಗಳೂರು, ಜ.8- ಆಧುನಿಕ ತಂತ್ರಜ್ಞಾನದ ಮೊಬೈಲ್, ಟಿವಿ, ಮಹಿಳೆಯರ, ಮಕ್ಕಳ ಸುಂದರ ಬದುಕನ್ನು ಕಸಿದುಕೊಂಡಿವೆ ಎಂದು ಧರ್ಮಸ್ಥಳ ಯೋಜನೆ ಟ್ರಸ್ಟ್‌ನ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಗುರುಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವಜರ ಕಾಲದ ಗೃಹಿಣಿಯರು ಅಡುಗೆ ಮನೆ ಕೆಲಸ, ಕೃಷಿ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುತ್ತಿದ್ದರು. ಆದರೆ ಪ್ರಸಕ್ತವಾಗಿ ಮಹಿಳೆಯರು ಯಂತ್ರೋಪಕರ ಣಗಳ ಮೇಲೆ ಅವಲಂಬಿತರಾಗಿ ಸೋಮಾರಿಗಳಾಗುತ್ತಿರುವುದಲ್ಲದೆ, ಆರೋಗ್ಯವಂತರ ಸಂಖ್ಯೆ ಕ್ರಮೇಣ ಕ್ಷೀಣಿಸುತ್ತಿದೆ ಎಂದರು.

ಮಕ್ಕಳನ್ನು ಮೊಬೈಲ್‌ನಿಂದ ದೂರ ವಿಟ್ಟು ಪುಸ್ತಕ ಅಭ್ಯಾಸ ರೂಢಿಸಬೇಕು ಹಾಗೂ ತಾಯಂದಿರ ಕಷ್ಟಗಳನ್ನು ಮಕ್ಕಳಿಗೆ ಮನವರಿಕೆ ಮಾಡಬೇಕು. ಆತ್ಮಹತ್ಯೆಯತ್ತ ಮುಖ ಮಾಡುವುದನ್ನು ತಡೆಗಟ್ಟಬೇಕು ಎಂದು ಕಿವಿಮಾತು ಹೇಳಿದರು.

ಸರಳ ಜೀವನ ಸಾಗಿಸಿದಾಗ ಮಹಿಳಾ ಸಬಲೀಕರಣ ಸಾಧ್ಯ. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದಿಂದ ಸಾಲ ಸೌಲಭ್ಯ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ ಎಂದು ಸಲಹೆ ನೀಡಿದರು.

ಉಪನ್ಯಾಸಕಿ ಸ್ವಪ್ನ ಸಂಸ್ಕೃತಿ ಮತ್ತು ಸಂಸ್ಕಾರ ವಿಷಯ ಕುರಿತು ಉಪನ್ಯಾಸ ನೀಡಿ, ಸಮಾಜದಲ್ಲಿ ಉತ್ತಮ‌ ನಡತೆಯಿಂದ, ಪರಿಶ್ರಮದಿಂದ ಪರಿಪಕ್ವತೆ ಪಡೆದು ಮಾನವನಾದರೆ ಅದು ಸಂಸ್ಕೃತಿ. ಜೀವನದಲ್ಲಿ ಅನುಕರಣೆ ತೊರೆದು ಧರ್ಮದ ಮೂಲ ತತ್ವಗಳನ್ನು ಅಳವಡಿಸಿಕೊಂಡರೆ, ಅದೇ ಸಂಸ್ಕೃತಿ ಎಂದು ಪ್ರತಿಪಾದಿಸಿದರು.

ಕಾನೂನು ಸಲಹೆಗಾರ್ತಿ ಎಂ.ಎನ್. ಮಧುರಾ ಮಾತನಾಡಿ, ಜಿಲ್ಲೆಯಲ್ಲಿ ಜಗಳೂರಿನಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಜ್ಞಾನ ವಿಕಾಸ ಕಾರ್ಯ ಕ್ರಮದ ವಿಷಯಗಳು ಮಕ್ಕಳಿಗೂ ಅನ್ವಯ ವಾಗಬೇಕು. ಮಹಿಳೆಯರು ವಿಚ್ಛೇದನದ ಬಗ್ಗೆ ಚಿಂತಿಸದೆ  ಕೌಟುಂಬಿಕವಾಗಿ ಹೊಂದಾ ಣಿಕೆ ಜೀವನ ನಡೆಸಬೇಕು ಎಂದರು.

ವೇದಿಕೆಯಲ್ಲಿ ಅಲಂಕೃತ ಕುಂಭಗಳ‌ು, ಸಿರಿಧಾನ್ಯ ಪ್ರದರ್ಶನ, ರಂಗೋಲಿ, ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆ ಉತ್ತಮ ಕೇಂದ್ರ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಸಮಾರಂಭದಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ, ಜಿಲ್ಲಾ ನಿರ್ದೇಶಕ ಎಸ್.ಜನಾರ್ದನ್, ಪ್ರಾದೇಶಿಕ ಸಮನ್ವಯ ಅಧಿಕಾರಿ ಅನುಷಾ, ಜಿಲ್ಲಾ ಜಾಗೃತಿ ವೇದಿಕೆ ಉಪಾಧ್ಯಕ್ಷ ಪಿ.ಎಸ್.ಅರವಿಂದನ್, ಯೋಜನಾಧಿಕಾರಿ ಗಣೇಶ್ ನಾಯ್ಕ, ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಫಾದರ್ ವಿಲಿಯಂ ಮಿರಾಂದ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.