2023ರಲ್ಲಿ ಗಂಡನ ಮೇಲೆ ವೈವಾಹಿಕ ಅತ್ಯಾಚಾರದ ತೂಗುಕತ್ತಿ

2023ರಲ್ಲಿ ಗಂಡನ ಮೇಲೆ ವೈವಾಹಿಕ ಅತ್ಯಾಚಾರದ ತೂಗುಕತ್ತಿ

ಅತ್ಯಾಚಾರಕ್ಕೆ ಸಂಬಂಧಿಸಿದ 375ನೇ ಸೆಕ್ಷನ್‌ನಿಂದ ಗಂಡ – ಹೆಂಡತಿ ಸಂಬಂಧವನ್ನು ಇದುವರೆಗೂ ಹೊರಗಿಡಲಾಗಿತ್ತು. ಗಂಡನ ವಿರುದ್ಧ ಹೆಂಡತಿ ಅತ್ಯಾಚಾರ ಪ್ರಕರಣ ದಾಖಲಿಸುವಂತಿರಲಿಲ್ಲ. ಆದರೆ,  ಕಳೆದ ವರ್ಷ ತೀರ್ಪೊಂದನ್ನು ನೀಡಿದ್ದ ಕರ್ನಾಟಕ ಹೈಕೋರ್ಟ್, ಗಂಡನ ವಿರುದ್ಧವೂ ಹೆಂಡತಿ ಅತ್ಯಾಚಾರ ಪ್ರಕರಣ ದಾಖಲಿಸಬಹುದು ಎಂದು ತಿಳಿಸಿತ್ತು. 

ಕಳೆದ ವರ್ಷಾಂತ್ಯದ ವೇಳೆಗೆ ಈ ವಿಷಯ ಸುಪ್ರೀಂ ಕೋರ್ಟ್‌ ಎದುರು ಬಂದಾಗ, ಗಂಡನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬಹುದು ಎಂಬ ಹೈಕೋರ್ಟ್ ತೀರ್ಪನ್ನು ಬೆಂಬಲಿಸುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ. ಇದರೊಂದಿಗೆ, ಅತ್ಯಾಚಾರ ಪ್ರಕರಣದಿಂದ ಗಂಡನನ್ನು ರಕ್ಷಿಸುವ ಕಾಯ್ದೆಯ ಬುಡ ಅಲ್ಲಾಡುತ್ತಿದೆ. ಹೊಸ ವರ್ಷದಲ್ಲಿ ಈ ಪ್ರಕರಣ ಮತ್ತಷ್ಟು ಗಮನ ಸೆಳೆಯುವ ನಿರೀಕ್ಷೆಯೂ ಇದೆ.

ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳಲ್ಲಿ ಈ ವಿಷಯದಲ್ಲಿ ಬೇರೆ ಬೇರೆ ನಿಲುವುಗಳಿವೆ. ಕೆಲ ದೇಶಗಳಲ್ಲಿ ಗಂಡನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಬಹುದು, ಕೆಲ ದೇಶಗಳಲ್ಲಿ ದಾಖಲಿಸು ವಂತಿಲ್ಲ. ಇನ್ನು ಕೆಲ ದೇಶಗಳಲ್ಲಿ ತೀವ್ರ ದೈಹಿಕ ಹಲ್ಲೆ ನಡೆದ ಸಂದರ್ಭದಲ್ಲಿ ಮಾತ್ರ ಗಂಡನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಬಹುದು.

ಈ ಸೆಕ್ಷನ್‌ಗೆ ತಿದ್ದುಪಡಿ ಅಗತ್ಯವಿದ್ದಲ್ಲಿ, ಶಾಸಕಾಂಗವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಏಕೆಂದರೆ, ಕಾಯ್ದೆ ಯಾವ ಸ್ವರೂಪದಲ್ಲಿದ್ದರೆ ಸೂಕ್ತ ಎಂಬುದು ಶಾಸಕಾಂಗದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಮುಕ್ತವಾಗಿ ಚರ್ಚೆಗೆ ಬರಬೇಕು. ಆಗಲೇ ಸರಿಯಾದ ನಿರ್ಧಾರ ಸಾಧ್ಯ.

ಸಲಿಂಗ ಸಂಬಂಧವನ್ನು ಅಪರಾಧ ಮುಕ್ತಗೊಳಿಸುವ ವಿಷಯದ ಬಗ್ಗೆ ನ್ಯಾಯಾಂಗವೇ ನಿರ್ಧರಿಸಲಿ ಎಂದು ಶಾಸಕಾಂಗ ಈ ಹಿಂದೆ ಕೈ ತೊಳೆದುಕೊಂಡಿತ್ತು. ವೈವಾಹಿಕ ಅತ್ಯಾಚಾರದಂತಹ ವಿಷಯದಲ್ಲೂ ಅದೇ ದಾರಿ ಹಿಡಿಯಬಾರದು. 

ಅತ್ಯಾಚಾರ ಕಾಯ್ದೆ ಕಠಿಣವಾಗಿದೆ. ಹೀಗಿರುವಾಗ, ಗಂಡನನ್ನು ಈ ರೀತಿಯ ಪ್ರಕರಣದಲ್ಲಿ ಸಿಲುಕಿಸುವ ಮೊದಲು ಸೂಕ್ತ ಸಮಾಲೋಚನೆ ಆಗಬೇಕಿದೆ. ವರದಕ್ಷಿಣೆ ಪ್ರಕರಣಗಳ ದುರ್ಬಳಕೆ ಜಗತ್ತಿಗೇ ಗೊತ್ತಿದೆ, ಆದರೆ, ಅದನ್ನು ಬದಲಿಸುವ ಮನಸ್ಸು ಯಾರಿಗೂ ಇಲ್ಲ. ಆದೇ ಹಾದಿಯಲ್ಲಿ ವೈವಾಹಿಕ ಅತ್ಯಾಚಾರ ಪ್ರಕರಣ ದುರ್ಬಳಕೆ ಆಗದು ಎಂದು ಯಾರಾದರೂ ಹೇಳಿದರೆ, ಅವರಿಗೆ ಭಾರತದ ಭ್ರಷ್ಟ ವ್ಯವಸ್ಥೆಯ ಬಗ್ಗೆ ಗೊತ್ತಿಲ್ಲ ಎಂದೇ ಭಾವಿಸಬೇಕಾಗುತ್ತದೆ.

ಎಲ್ಲಾ ವೈವಾಹಿಕ ಅತ್ಯಾಚಾರಗಳನ್ನು ಒಂದೇ ರೀತಿ ಪರಿಗಣಿಸಬಾರದು. ಅತ್ಯಾಚಾರದ ತೀವ್ರತೆಯ ಆಧಾರದ ಮೇಲೆ ಶಿಕ್ಷೆಯ ಪ್ರಮಾಣ ಇರಬೇಕು. ಈಗಾಗಲೇ ಬ್ರಿಟನ್‌ನಲ್ಲಿ ಈ ರೀತಿಯ ಪದ್ಧತಿ ಇದೆ ಎಂಬ ವಾದಗಳೂ ಇವೆ. ಈ ಬಗ್ಗೆಯೂ ಸೂಕ್ತ ಚರ್ಚೆ ನಡೆಯಬೇಕಿದೆ.

ಅಂದ ಹಾಗೆ, ಅತ್ಯಾಚಾರ ಪ್ರಕರಣವೂ ಪಕ್ಷಪಾತಿಯಾಗಿದೆ. ಈ ಪ್ರಕರಣದ ಅನ್ವಯ ಗಂಡಸರ ಮೇಲೆ ಮಾತ್ರ ಅತ್ಯಾಚಾರ ಪ್ರಕರಣ ದಾಖಲಿಸಬಹುದು. ಹೆಣ್ಣು ಅತ್ಯಾಚಾರ ಎಸಗಿದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವಂತಿಲ್ಲ. ಸಾವಿರಾರು ವರ್ಷಗಳ ಹಿಂದೆ ವಾತ್ಸಾಯನ ಋಷಿ ಬರೆದ ಕಾಮಸೂತ್ರದಲ್ಲಿ ಸಲಿಂಗ ಸಂಬಂಧದ ಉಲ್ಲೇಖಗಳಿವೆ. ಈಗ 21ನೇ ಶತಮಾನದಲ್ಲಿ ಸಲಿಂಗ ಸಂಬಂಧಕ್ಕೆ ಕೋರ್ಟ್ ಮಾನ್ಯತೆ ಕೊಟ್ಟಿದೆ. ಸಲಿಂಗ ಸಂಬಂಧಗಳಿದ್ದಾಗ ಅತ್ಯಾಚಾರ ನಡೆಯುತ್ತದೆ ಎಂಬುದು ಕನಿಷ್ಠ ಜ್ಞಾನ ಇರುವವರಿಗಾದರೂ ಗೊತ್ತಾಗುತ್ತದೆ. ಆದರೆ, ಕನಿಷ್ಠ ಜ್ಞಾನಕ್ಕೂ ಶಾಸನ ರೂಪಿಸುವವರು ಎಳ್ಳು ನೀರು ಬಿಟ್ಟಂತಿದೆ.

ಹೆಣ್ಣಿನ ಮೇಲೆ ಹೆಣ್ಣು ದೌರ್ಜನ್ಯ ನಡೆಸಿದಾಗ ಗೃಹ ಹಿಂಸಾಚಾರ ಕಾಯ್ದೆ ಅನ್ವಯಿಸುವಂತಿಲ್ಲ ಎಂದು ಸೆಕ್ಷನ್ 498ಎ ತಿಳಿಸುತ್ತದೆ. ಸೆಕ್ಷನ್ 354ರ ಅನ್ವಯ ಹೆಣ್ಣಿನ ಮಾನಕ್ಕೆ ಧಕ್ಕೆ ತರುವಂತಿಲ್ಲ. ಆದರೆ, ಗಂಡಿನ ಮಾನಕ್ಕೆ ಯಾವುದೇ ರಕ್ಷಣೆ ಇಲ್ಲ. ಜೀವನಾಂಶಕ್ಕೆ ಸಂಬಂಧಿಸಿದ 125ನೇ ಸೆಕ್ಷನ್ ಕಥೆಯೂ ಇದೇ ರೀತಿ ಇದೆ. ವೈಯಕ್ತಿಕ ಸಂಬಂಧಗಳಿಗೆ ಸಂಬಂಧಿಸಿದ ಹಲವು ಕಾನೂನುಗಳು ಈಗಾಗಲೇ ಪುರುಷರಿಗೆ ವಿರುದ್ಧವಾಗಿವೆ.

ಸಮಾಜ ಬದಲಾಗಿದೆ, ಬದಲಾಗುತ್ತಿದೆ. ಬದಲಾದ ಸಮಾಜದಲ್ಲಿ ಸಾಕಷ್ಟು ಮಹಿಳೆಯರಿಗೆ ಅಧಿಕಾರ ಸಿಕ್ಕಿದೆ. ಎಲ್ಲಿ ಅಧಿಕಾರವೋ ಅಲ್ಲಿ ದುರ್ಬಳಕೆ, ಎಲ್ಲಿ ದುರ್ಬಳಕೆಯೋ ಅಲ್ಲಿ ದೌರ್ಜನ್ಯ. ಹೀಗಾಗಿ ಎಲ್ಲ ಮಹಿಳೆಯರನ್ನು ಒಂದೇ ತಕ್ಕಡಿಯಲ್ಲಿಟ್ಟು, ಎಲ್ಲ ಪುರುಷರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಆಧುನಿಕ ಕಾನೂನು ಪದ್ಧತಿಯಲ್ಲ.

ವೈವಾಹಿಕ ಕಾನೂನು ಬಗ್ಗೆ ನಿರ್ಧರಿಸುವುದನ್ನು ನ್ಯಾಯಾಂಗದ ಕೈಗೆ ಕೊಡುವುದನ್ನು ಬಿಟ್ಟು, ಶಾಸಕಾಂಗ ತನ್ನ ಜವಾಬ್ದಾರಿ ನಿರ್ವಹಿಸಬೇಕಿದೆ. ಸೂಕ್ತ ಕಾನೂನು ಜಾರಿಗೆ ತರಬೇಕಿದೆ. ಇಲ್ಲವಾದರೆ, ಭ್ರಷ್ಟ ನ್ಯಾಯ ವ್ಯವಸ್ಥೆಯಲ್ಲಿ ಗಂಡು ಜಾತಿಯ ಸುಲಿಗೆಗೆ  ರಹದಾರಿ ಮಾಡಿಕೊಟ್ಟಂತಾಗುತ್ತದೆ ಅಷ್ಟೇ.


 ಶ್ರೀನಿವಾಸ್ ಎಸ್.ಎ.
 ದಾವಣಗೆರೆ.
[email protected]