ಸೇವೆಯ ಮಾಡುತ್ತ ಕಲಿಯೋಣ ಬನ್ನಿ, ಸೇವೆಯ ಸವಿಜೇನು ಹಂಚೋಣ ಬನ್ನಿ

Home ಲೇಖನಗಳು ಸೇವೆಯ ಮಾಡುತ್ತ ಕಲಿಯೋಣ ಬನ್ನಿ, ಸೇವೆಯ ಸವಿಜೇನು ಹಂಚೋಣ ಬನ್ನಿ
ಸೇವೆಯ ಮಾಡುತ್ತ ಕಲಿಯೋಣ ಬನ್ನಿ, ಸೇವೆಯ ಸವಿಜೇನು ಹಂಚೋಣ ಬನ್ನಿ

ಪ್ರತಿ ವರ್ಷ ಸೆಪ್ಟೆಂಬರ್ 24ನ್ನು ರಾಷ್ಟ್ರೀಯ ಸೇವಾ ಯೋಜನೆಯ ದಿನವೆಂದು ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ. ಮಹಾತ್ಮ ಗಾಂಧೀಜಿಯವರ ಗೌರವಾರ್ಥಕವಾಗಿ ಮತ್ತು ಪುಣ್ಯಸ್ಮರಣೆಗಾಗಿ ಅವರ ಜನ್ಮ ಶತಮಾನೋತ್ಸವ ವರ್ಷವಾದ 1969 ರಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಚಾಲನೆ ನೀಡಿ ಸೆಪ್ಟೆಂಬರ್ 24 ರಂದು ದೇಶದ ವಿವಿಧ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ‘ಎನ್.ಎಸ್.ಎಸ್. ದಿನ’ವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ನಮ್ಮ ರಾಷ್ಟ್ರ ಮುಂದುವರೆಯಬೇಕಾದರೆ ನಮ್ಮ ಯುವ ಜನಾಂಗ, ಅದರಲ್ಲೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬದುಕಿನೊಡನೆ ನೇರ ಸಂಪರ್ಕ ಇಟ್ಟುಕೊಳ್ಳಬೇಕೆಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. 

`ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ ಮತ್ತು ಶಿಕ್ಷಣದೊಂದಿಗೆ ಸೇವೆ’ ಎಂಬ ಎರಡು ಉದ್ಧೇಶಗಳನ್ನು ಹೊಂದಿ ವಿದ್ಯಾರ್ಥಿಗಳಿಗೆ ಸಮಾಜ ಸೇವೆ ಬಗ್ಗೆ ತಿಳಿಸಿ ಮಹತ್ವದ ವಿಚಾರವನ್ನು ರಾಷ್ಟ್ರೀಯ ಸೇವಾ ಯೋಜನೆಯು ಅನುವು ಮಾಡಿಕೊಟ್ಟಿದೆ. 

‘ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು’ ಎನ್ನುವ ಕವಿವಾಣಿಯ ಮಾತಿನಂತೆ ಎನ್.ಎಸ್.ಎಸ್. ಒಂದು ಅನುಭವ. ಎನ್.ಎಸ್.ಎಸ್.ನ ಧ್ಯೇಯ ವಾಕ್ಯ `ನನಗಲ್ಲ ನಿನಗೆ, ನಿಸ್ವಾರ್ಥ ಸೇವೆ ಮತ್ತು ಬೇರೆ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡು ಮಾನವೀಯತೆಯ ನೆಲೆಗಳನ್ನು ಪ್ರತಿಬಿಂಬಿಸಲು ಸಹಕಾರಿಯಾಗಿದೆ. ಎನ್.ಎಸ್.ಎಸ್. ಎಂದರೆ ‘ನಾನು ಸದಾ ಸಿದ್ದ ಅಥವಾ ಶಿಸ್ತಿನ ಸಿಪಾಯಿ ಎಂದು ಅರ್ಥೈಸಬಹುದು. ಎನ್.ಎಸ್.ಎಸ್.ನವರು ‘ದೇಶ ಕಟ್ಟುತ್ತಾರೆ’ ಎನ್.ಸಿ.ಸಿ ಯವರು ‘ದೇಶ ರಕ್ಷಿಸುತ್ತಾರೆ’ಎನ್ನುವ ಮಾತಿದೆ. ಹಾಗಾಗಿ ಎನ್.ಎಸ್.ಎಸ್.ರವರು ಸದಾ ಶ್ರಮದ ಜೊತೆಗೆ ಸೇವೆಗೆ ಸದಾ ಸಿದ್ದ ಎಂಬುದನ್ನು ತಿಳಿಯಬಹುದು. 

ರಾಷ್ಟ್ರೀಯ  ಸೇವಾ ಯೋಜನೆಯ ಚಿಹ್ನೆ:

ರಾಷ್ಟ್ರೀಯ  ಸೇವಾ ಯೋಜನೆ ಚಿಹ್ನೆಯ ಗುರುತು ‘ಚಕ್ರ’ದ ಚಿತ್ರ. ಈ ಚಕ್ರ ಯಾವತ್ತೂ ಚಲನಶೀಲವಾಗಿದ್ದು ಚಲಿಸುತ್ತಾ ಬೆಳವಣಿಗೆ ಹೊಂದುವುದನ್ನು ತಿಳಿಸುತ್ತದೆ. ಈ ಚಲನಶೀಲತೆ ವಿದ್ಯಾರ್ಥಿ ಬದುಕಿನಲ್ಲೂ ಕಾಣಬೇಕೆಂದು ಇದರ ಉದ್ದೇಶ.  ಓಡಿಸ್ಸಾ ರಾಜ್ಯದ ಕೊನಾರ್ಕ್‌ ಸೂರ್ಯ ದೇವಾಲಯದ ರಥದ ಚಕ್ರವನ್ನು ಆಧಾರವಾಗಿರಿಸಿಕೊಂಡು ರಾಷ್ಟ್ರೀಯ ಸೇವಾ ಯೋಜನೆಯ ಚಿಹ್ನೆಯನ್ನ ನಿರ್ಮಿಸಲಾಗಿದೆ. ರಥದ ಚಕ್ರದಲ್ಲಿ ಎಂಟು ಅಡ್ಡಪಟ್ಟಿಗಳಿದ್ದು ಪ್ರತಿಯೊಂದು ಕಾಲದ ಸಂಕೇತವಾಗಿದ್ದು, ಮೂರು ಗಂಟೆಗಳ ಒಂದೊಂದು ಹಂತವನ್ನು ತಿಳಿಸುತ್ತದೆ. ಸ್ವಯಂ ಸೇವಕ 24 ಗಂಟೆಗಳೂ ಸೇವೆಗೆ ಲಭ್ಯವಿದ್ದಾನೆ ಎಂದು ತಿಳಿಸುತ್ತದೆ. ಚಿಹ್ನೆಯಲ್ಲಿ ಕೆಂಪು, ಬಿಳಿ, ನೀಲಿ ಬಣ್ಣಗಳಿವೆ. ಕೆಂಪು ಬಣ್ಣವು ಉತ್ಸಾಹ ಮತ್ತು ತ್ಯಾಗವನ್ನು, ಬಿಳಿಬಣ್ಣವು ಶಾಂತಿ ಮತ್ತು ಸಹಬಾಳ್ವೆಯನ್ನು,  ನೀಲಿ ಬಣ್ಣವು ಸಮೃದ್ಧಿ ಮತ್ತು ಮನುಷ್ಯನ ಅಭಿವೃದ್ಧಿಯನ್ನು ತಿಳಿಸುತ್ತದೆ.

ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ :

♦ ತಾವು ವಾಸಿಸುವ ಸಮುದಾಯ ಅಥವಾ ಸಮಾಜದ ಸಮಸ್ಯೆಯನ್ನು ಅರಿಯಲು ಪ್ರಯತ್ನಿಸುವುದು.

♦ ಸಮಾಜದಲ್ಲಿ ತಮ್ಮ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ತಮ್ಮನ್ನು ತಾವು ಅರಿಯುವುದು.

♦ ಸಮಾಜದ ಅಗತ್ಯಗಳನ್ನು ಗುರುತಿಸಿ, ಈ ಬಗ್ಗೆ ತಾವು ಏನು ಮಾಡಬಹುದು ಎಂದು ಆಲೋಚಿಸಿ, ಈ ಬಗ್ಗೆ ಪ್ರಯತ್ನಿಸುವುದು. 

♦ ವಿದ್ಯಾವಂತರು ಮತ್ತು ಅವಿದ್ಯಾವಂತರ ಮನೋಭಾವದಲ್ಲಿರಬಹುದಾದ ಅಂಶವನ್ನು ಕಡಿಮೆ ಮಾಡುವುದು.

♦ ಸಾಮಾಜಿಕ ಹಾಗು ಪೌರ ಕರ್ತವ್ಯಗಳನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳಲು ಪ್ರಯತ್ನಿಸುವುದು.

♦ ಕಲಿತ ವಿದ್ಯೆಯ ಫಲವನ್ನು ಪ್ರಚಲಿತ ಸಮಸ್ಯೆಗಳ ಪರಿಹಾರಕ್ಕೆ ಹೇಗೆ ಬಳಸಿಕೊಳ್ಳಬಹುದೆಂದು ಕಂಡುಕೊಳ್ಳುವುದು.

♦ ಬಡವರು, ದೀನ ದಲಿತರು ಹಾಗೂ ಗ್ರಾಮೀಣ ಸಮುದಾಯದ ಜನರ ಸಮಸ್ಯೆಗಳ ಬಗ್ಗೆ ಸ್ಪಂದಿಸುವುದು.

♦ ಸೌಹಾರ್ದತೆ, ಸಹಕಾರ ಮನೋಭಾವ, ಸೇವಾ ಮನೋಭಾವ ಸಹ ಜೀವನಗಳನ್ನು ಮೈಗೂಡಿಸಿಕೊಳ್ಳುವುದು.

♦ ಪರಸ್ಪರ ಒಬ್ಬರನ್ನೊಬ್ಬರು ಅರಿಯುವುದು ಮತ್ತು ಜೀವನಾನುಭವ ಪಡೆಯುವುದು.

♦ ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಜಾಗೃತಿ ಬೆಳೆಸುವುದು.

♦ ರಾಷ್ಟ್ರೀಯ ಭಾವೈಕ್ಯತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಲ್ಲಿಯೂ ಈ ಮನೋಭಾವವನ್ನು ಬೆಳೆಸಲು ಪ್ರಯತ್ನಿಸು ವುದು. 

♦ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳು ವುದು.

♦ ವಿದ್ಯಾರ್ಥಿಗಳಿಗೆ  ಶಿಬಿರಗಳನ್ನು ಏರ್ಪಡಿಸಿ ಅರಿವು ಮೂಡಿಸುವುದು.

♦ ಪ್ರಕೃತಿ ವಿಕೋಪ, ಬೆಂಕಿ, ಅನಾಹುತ, ಮತಿಯ ಗಲಭೆ ಇತ್ಯಾದಿ ಸಂದರ್ಭಗಳಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು.

ಹೀಗೆ ರಾಷ್ಟ್ರೀಯ ಸೇವಾ ಯೋಜನೆಯು ‘ನಾನು ನನಗಾಗಿ ಮಾತ್ರವಲ್ಲ, ನಮ್ಮೆಲ್ಲರಿಗಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ವ್ಯಕ್ತಿಯು ಸಮಾಜದ ಅಭ್ಯುದಯದ ಮೂಲಕ ತನ್ನ ಅಭ್ಯುದಯದ ಗುರಿ ಕಾಣುತ್ತಾನೆ. ವಿದ್ಯಾರ್ಥಿ ಹಾಗೂ ಯುವ ಜನರಲ್ಲಿ ಬಾಹುಬಲ, ಬುದ್ಧಿಬಲ, ಆದರ್ಶ, ಉತ್ಸಾಹ ಇದು ಸಮಾಜದ ಏಳಿಗೆಗೆ ದುಡಿಯಬೇಕೆಂಬ ಹಂಬಲ ಅವರಲ್ಲಿ ಇರುತ್ತದೆ. ಆ ಶಕ್ತಿ ಉತ್ಸಾಹಗಳನ್ನು ಬಳಸಿಕೊಂಡು ಅವರನ್ನು ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸುವುದು. ಈ ಯೋಜನೆಯ ಮುಖ್ಯ ಗುರಿಯೂ ಸಹ ಆಗಿದೆ.

ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿಜ್ಞಾ ವಿಧಿಯಾಗಿ `ನಾನು ನನ್ನ ದೇಶಕ್ಕಾಗಿ ಸಮರ್ಪಣಾ ಭಾವದಿಂದ ದುಡಿದು ಅದರ ಸ್ವಾತಂತ್ರ್ಯ ಮತ್ತು ಐಕ್ಯತೆಯನ್ನು ಬಲಗೊಳಿಸುತ್ತೇನೆಂದು ಪ್ರತಿಜ್ಞೆಗೈಯ್ಯುತ್ತೇನೆ. ಅಲ್ಲದೇ ನಾನು ಯಾವುದೇ ತರಹದ ಹಿಂಸಾಕಾರ್ಯದಲ್ಲಿ ತೊಡಗದೆ ಧರ್ಮ, ಪ್ರದೇಶ, ರಾಜಕೀಯ ಹಾಗೂ ಆರ್ಥಿಕ ಕುಂದು ಕೊರತೆಗಳನ್ನು ಶಾಂತಿ ಹಾಗೂ ಸಂವಿಧಾನಾತ್ಮಕವಾಗಿ ಪರಿಹರಿಸುವಲ್ಲಿ ಪ್ರಯತ್ನಿಸುತ್ತೇನೆಂದು ಪ್ರಮಾಣ ಮಾಡುತ್ತೇನೆ’ ಎನ್ನುವುದು ಆಗಿದೆ. ಅಲ್ಲದೇ ರಾಷ್ಟ್ರೀಯ ಸೇವಾ ಯೋಜನೆಯ ಗೀತೆಯಾಗಿ ಡಾ. ಎಂ.ಬಿ.ದಿಲ್‍ಷಾದ್‌ರವರು ಬರೆದಿರುವ…. 

ರಾಷ್ಟ್ರೀಯ ಸೇವಾ ಯೋಜನೆಯ ಮಾಡಿಹರು ಸೇವೆಯ ಮಾಡೋಣ ಬನ್ನಿ.

ನಾವು ಸೇವೆಯ ಮಾಡೋಣ ಬನ್ನಿ ಸೇವೆಯ ಮಾಡೋಣ ಬನ್ನಿ.

ಕೈ ಕೆಸರಾಗಲಿ ನೆಲ ಹುಲುಸಾಗಲಿ, ಸೇವೆಯ ಮಾಡೋಣ ಬನ್ನಿ.

ಎನ್ನುವ ಗೀತೆ. ಕರ್ನಾಟಕ ರಾಜ್ಯದ ಎನ್.ಎಸ್.ಎಸ್. ಗೀತೆ ಆಗಿದೆ. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಸಂಯಮ, ಉತ್ತಮ ನಾಯಕತ್ವ, ಶ್ರಮದಾನ, ಪರಿಸರ ಸರಕ್ಷಣೆ, ಆರೋಗ್ಯ ಜಾಗೃತಿ, ಪ್ರಗತಿಪರ ಚಿಂತನೆ, ಸಾಂಸ್ಕೃತಿಕ ಚಟುವಟಿಕೆ, ಸಹಬಾಳ್ವೆ, ಬ್ರಾತೃತ್ವ, ಜಾತ್ಯತೀತತೆ, ಭಾವೈಕ್ಯತೆ ಇತ್ಯಾದಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಈ ಯೋಜನೆ ಸಹಕಾರಿಯಾಗುವುದು. ಎನ್.ಎಸ್.ಎಸ್. ಗೀತೆಯಲ್ಲಿ ದಿಲ್‍ಷಾದ್‌ರವರು ಹೇಳುವಂತೆ `ಸೇವೆಯ ಮಾಡುತ್ತ ಕಲಿಯೋಣ ಬನ್ನಿ, ಸೇವೆಯ ಸವಿಜೇನು ಸವಿಯೋಣ ಬನ್ನಿ, ಸೇವೆಯ ಸವಿಜೇನು ಹಂಚೋಣ ಬನ್ನಿ, ಶ್ರಮಯೇವ ಜಯತೇ ಶ್ರಮಯೇವ ಜಯತೇ…’ ಎನ್ನುತ್ತಾ ಸೇವೆಯ ಮೂಲಕ ಶಿಕ್ಷಣ ಹಾಗೂ ಶಿಕ್ಷಣದ ಮೂಲಕ ಸೇವೆಯನ್ನು ನೀಡುವ ಯೋಜನೆಯೇ ರಾಷ್ಟ್ರೀಯ ಸೇವಾ ಯೋಜನೆ. ಇಂದು ಕರ್ನಾಟಕ ರಾಜ್ಯವೊಂದರಲ್ಲಿ ಸುಮಾರು 3.5 ಲಕ್ಷ ಸ್ವಯಂಸೇವಕರು ಮತ್ತು 3,500 ಕಾರ್ಯಕ್ರಮಾಧಿಕಾರಿಗಳು ಇರುವುದು ಹೆಮ್ಮೆಯ ಸಂಗತಿ ಆಗಿದೆ. 

– ಡಾ. ಹೆಚ್.ಆರ್. ತಿಪ್ಪೇಸ್ವಾಮಿ

ಕಾರ್ಯಕ್ರಮಾಧಿಕಾರಿ, 

ರಾಷ್ಟ್ರೀಯ ಸೇವಾ ಯೋಜನೆ,

  ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜು, 

ದಾವಣಗೆರೆ