ಶಿವಯೋಗ ಸಾಧನೆ, ಸಿದ್ಧಿಯ ಸತ್ಪುರುಷ ಶ್ರೀ ಉಜ್ಜಯಿನಿ ಸಿದ್ಧಲಿಂಗ ಭಗವತ್ಪಾದರು

ಶಿವಯೋಗ ಸಾಧನೆ, ಸಿದ್ಧಿಯ ಸತ್ಪುರುಷ ಶ್ರೀ ಉಜ್ಜಯಿನಿ ಸಿದ್ಧಲಿಂಗ ಭಗವತ್ಪಾದರು

ಇಂದು ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ

ವಿಶ್ವದಲ್ಲಿ ವಿವಿಧ ಧರ್ಮಗಳು ಉದಯಿ ಸುವುದರೊಂದಿಗೆ ವೃಷ್ಟಿಯ ಪ್ರಗತಿ ಮತ್ತು ಸಮಷ್ಠಿಯ ಉನ್ನತಿಗೆ ಸದಾ ಶ್ರಮಿಸುತ್ತಾ ಬಂದಿದೆ. ಇಂತಹ ಧರ್ಮಗಳ ಸಂಗಮವಾಗಿರುವ ಭಾರತದ ನೆಲದಲ್ಲಿ ವೀರಶೈವ ಧರ್ಮವು  ಶ್ರೀ ಜಗದ್ಗುರು ಪಂಚಾಚಾರ್ಯರ ಆಣತಿಯಂತೆ ಸ್ಥಾಪನೆಗೊಂಡು ಧಾರ್ಮಿಕ ಜಾಗೃತಿಯ ಜೊತೆಗೆ ಸಾಮಾಜಿಕ ಸತ್ಕ್ರಾಂತಿಯುಂಟು ಮಾಡಿದ ಒಂದು ವಿಶಿಷ್ಟ ಧರ್ಮವಾಗಿದೆ.

ಯುಗಗಳ ಇತಿಹಾಸ, ಪರಂಪರೆ ಹೊಂದಿರುವ ಈ ಪವಿತ್ರ ಧರ್ಮಪೀಠಗಳ ಶ್ರೀ ಜಗದ್ಗುರುಗಳು ಜನಮನದಲ್ಲಿ ಧಾರ್ಮಿಕ ಆಚಾರ, ವಿಚಾರಗಳನ್ನು ಅರುಹಿ, ಜಾಗತಿಕ ಶಾಂತಿ, ಸಮೃದ್ದಿಯನ್ನು ತಂದಿತ್ತ ಕಾರಣೀ ಯುಗ ಪುರುಷರಾಗಿದ್ದಾರೆ.

ಇಂಥ ವೀರಶೈವ ಪಂಚಪೀಠಗಳಲ್ಲಿ ಒಂದಾಗಿ  ರುವ ಶ್ರೀ ಮದುಜ್ಜಯಿನಿ ಸದ್ಧರ್ಮ ಪೀಠ ಸದಾ ಸಮಾಜಮುಖಿಯಾಗಿ ಮಾನವೀಯ ಮೌಲ್ಯ ಗಳನ್ನು ಬೆಳೆಸುವುದರೊಂದಿಗೆ ಎಲ್ಲಾ ಸಮುದಾಯ ಗಳ ಜನತೆಗೆ ಸರ್ವೋದಯ, ಸಮನ್ವಯ ಸಾಮರಸ್ಯ ಹಾಗೂ ಶಾಂತಿ, ಸಮೃದ್ಧಿಯ ಸಂದೇಶ ನೀಡುತ್ತಾ ಬಂದಿದೆ. ಈ ಪವಿತ್ರ ಪರಂಪರೆಯಲ್ಲಿ ಅನೇಕ ಶ್ರೀ ಭಗವತ್ಪಾದರು ತಾವು ನಡೆದ ಧರ್ಮದ ಹಾದಿಯಲ್ಲಿ ಜನತೆಯನ್ನು ಮುನ್ನಡೆಸಿ, ಸಾರ್ಥಕತೆ ಪಡೆದಿದ್ದಾರೆ. ಅವರಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಸಹ ಒಬ್ಬರಾಗಿದ್ದಾರೆ.

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಭಗವತ್ಪಾದರಾದ ಇವರು ವೀರಶೈವ ಧರ್ಮ ಮತ್ತು ಸಂಸ್ಕೃತಿಯನ್ನು ಬಲಗೊಳಿಸಿ ಅದನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಮುಖೇನ ಅದರ ಅಖಂಡತೆಯನ್ನು ವಿಸ್ತರಿಸಿದ ಮಹಾಮಹಿಮರಲ್ಲಿ ಪ್ರಮುಖರಾಗಿದ್ದಾರೆ.

ಚಿತ್ರದುರ್ಗ ಸೀಮೆಯ ಬಂಗಾರನಾಯಕನಹಳ್ಳಿ ಹಿರೇಮಠದ ವೇ. ಚನ್ನಬಸವಯ್ಯ ಮತ್ತು ಗುರು ಸಿದ್ಧಮ್ಮ ಇವರ ಪುಣ್ಯ ಗರ್ಭದಲ್ಲಿ ದಿನಾಂಕ 1.2.1890 ರಂದು ಜನಿಸಿ ಎಲ್ಲಾ ಗುರು, ಹಿರಿಯರ ಅಚ್ಚು ಮೆಚ್ಚಿನ ಸಾಧಕನಾಗಿ ಬೆಳೆದು, ತನ್ನ 8 ನೇ ವಯಸ್ಸಿನಲ್ಲಿಯೇ ಇಷ್ಟಲಿಂಗ ದೀಕ್ಷೆ ಹಾಗೂ ಧರ್ಮೋ ಪದೇಶ ಪಡೆದು 1906 ರಂದು ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರುವಾಗಿ ನಿಯುಕ್ತಿ ಹೊಂದಿ, ತಮ್ಮ ಅಧಿಕಾರವನ್ನು ಸ್ವೀಕರಿಸಿ, ಪೀಠವನ್ನು ಮುನ್ನಡೆಸುವಲ್ಲಿ ಯಶಸ್ವಿಯಾದ ಧೀರ ಪುರುಷರು.

ಪತಂಜಲಿ ಮಹರ್ಷಿಯ ಯೋಗಶಾಸ್ತ್ರ, ಷಡ್ ದರ್ಶನಗಳ ಅಧ್ಯಯನ ಹಾಗೂ ಸಿದ್ಧಾಂತ ಶಿಖಾ ಮಣಿ, ಭಗವದ್ಗೀತೆಯಂಥ ವಿಷಯಗಳ ಚಿಂತನೆಯ ಮೂಲಕ ತಮ್ಮ ವಿದ್ವತ್ತನ್ನು ಹೆಚ್ಚಿಸಿಕೊಂಡವರು.

ಶ್ರೀ ಭಗವತ್ಪಾದರು ಸದಾ ಇಷ್ಟಲಿಂಗ ಪೂಜೆ, ಜಪ, ತಪಗಳಿಂದ ದಿವ್ಯಜ್ಞಾನಿಯಾಗಿ ಶಿವಯೋಗ ಸಿದ್ಧಿಯನ್ನು ಸಾಧಿಸಿಕೊಂಡು ಜೀವನದ ಕಷ್ಟ, ನಷ್ಟಗಳಿಗೆ ಸಿಲುಕಿ ಬಾಯಿ ಬಿಡುವ ಭಕ್ತರಿಗೆ ತಮ್ಮ ಶಕ್ತಿಯನ್ನು ಅನುಗ್ರಹಿಸುತ್ತಿದ್ದ ಅಪ್ರತಿಮ ಶಿವಯೋಗಿಗಳು. ನಿರಂತರವಾಗಿ ತಮ್ಮ ಆಚಾರ, ವಿಚಾರಗಳನ್ನು ಕಾಯ್ದುಕೊಂಡು ಸಂಸ್ಕೃತ, ವೇದ, ಆಗಮಗಳನ್ನು ಅಧ್ಯಯನ ಮಾಡಿ, ಶಿವಾದ್ವೈತವನ್ನು ಮತ್ತಷ್ಟು ಪ್ರಜ್ವಲಗೊಳಿಸಿ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಲಗಳ ಮುಖೇನ ಶಿವಯೋಗವನ್ನು ಸಾಧಿಸುವ ಪರಿಯನ್ನು ಅತ್ಯಂತ ವ್ಯವಸ್ಥಿತವಾಗಿ ಬೋಧಿಸುತ್ತಿದ್ದರು.

ನಾಡಿನ ಹಲವು ಧರ್ಮಪೀಠಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಂದರ್ಭಗಳಲ್ಲಿ ತಮ್ಮ ಪ್ರಬುದ್ಧ ಚಿಂತನೆ ಮತ್ತು ಕ್ರಿಯಾತ್ಮಕ ಆಚರಣೆಯ ಮೂಲಕ ಅವುಗಳನ್ನು ಪರಿಹರಿಸುತ್ತಿದ್ದರು. ಜಾತಿ, ಮತ, ಪಂಥಗಳ ಮೇರೆಯನ್ನು ದಾಟಿ ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ ಹಂಬಲ ಹೊಂದಿ ಬೇಡಿ ಬಂದ ಭಕ್ತರಿಗೆ ಧರ್ಮ, ಸಂಸ್ಕಾರ, ಸಂದೇಶಗಳನ್ನು ನೀಡುತ್ತಿದ್ದರು. ತಾವು ಆಚರಿಸಿದ ಕಡೆಗಳೆಲ್ಲ ಕುಡಿಯುವ ನೀರು, ಕಲಿಯುವ ಶಾಲೆ, ಸಂಸ್ಕಾರ, ಸಂಸ್ಕೃತಿ ನೀಡುವ ದೇವ ಮಂದಿರ. ಮುಕ್ತಿ ನೀಡುವ ರುದ್ರಮುನಿ ಹಾಗೂ ದೀನ ದಲಿತರ ಶೋಷಿತ, ಅಸಹಾಯಕರಿಗೆ ಜೀವನ ಸೌಲಭ್ಯದ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ಜಾತ್ಯತೀತ ಸಮಾಜವಾದ ಪ್ರಜಾಸತ್ತಾತ್ಮಕ ನಿಲುವುಗಳನ್ನು ಎತ್ತಿ ಹಿಡಿಯುತ್ತಿದ್ದರು. ಇದಕ್ಕೆ ಪವಾಡ ಸದೃಶಗಳೆಂಬಂತೆ ಸಿದ್ಧಲಿಂಗನ ಬಾವಿಗಳು ಉತ್ತರ ಕರ್ನಾಟಕದಲ್ಲಿ ಇಂದಿಗೂ ಸಾಕ್ಷಿಯಾಗಿವೆ.

ಭಕ್ತರಿಗೆ ಏನೇ ಕಷ್ಟ, ಕಾರ್ಪಣ್ಯಗಳು ಬಂದರೂ ತಮ್ಮ ತಪಃಶಕ್ತಿಯಿಂದ ಅವೆಲ್ಲವುಗಳನ್ನು ಪರಿಹರಿಸಿ, ಅವರಲ್ಲಿ ಧರ್ಮ ಶ್ರದ್ಧೆ, ದೈವ ಶ್ರದ್ಧೆ ಬೆಳೆಯುವಂತೆ ಮಾಡಿದ್ದರು.

ಜನತೆಯ ಬದುಕಿಗೆ ಬೇಕಾಗಿದ್ದ ಸಂಸ್ಕಾರ ಮತ್ತು ಶಿಕ್ಷಣವನ್ನು ನೀಡಲು ಹಾಗೂ ಅನ್ನ ದಾಸೋಹ ಮತ್ತು ವಿದ್ಯಾದಾನಕ್ಕೆ ಅನುಕೂಲ ಕಲ್ಪಿಸಲು ತಾವು ಸಾವಿರಾರು ಹೊನ್ನುಗಳನ್ನು ಅನುಗ್ರಹಿಸಿ, ವೀರಶೈವ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದವರು. ಈ ಸಂಘ ಇಂದು ನಾಡಿನೆಲ್ಲೆಡೆ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಟ್ಟಿದೆ.

ಧರ್ಮಪೀಠಗಳ ಸುಧಾರಣೆ ಹಾಗೂ ಮಹತ್ವ ವನ್ನು ಹೆಚ್ಚಿಸಲು ತಮ್ಮ ಅಧ್ಯಕ್ಷತೆಯಲ್ಲಿ ಭಾರತದ ಧರ್ಮದ ಪುಣ್ಯನೆಲೆವೀಡು ವಾರಣಾಸಿಯಲ್ಲಿ 1918 ನೇ ಮಾರ್ಚ್ 20 ರಂದು ಮಹಾ ಸಮ್ಮೇಳನ ವನ್ನು ಅರ್ಥಪೂರ್ಣವಾಗಿ ನಡೆಸಿ, ಎಲ್ಲಾ ಧರ್ಮೀ ಯರು  ವೀರಶೈವರನ್ನು ಗೌರವಿಸುವಂತೆ ಮಾಡಿದ್ದ ವರು. ಸಮಾಜದ ಉನ್ನತಿ ಮತ್ತು ಪ್ರಗತಿಗಾಗಿ ಹಾಗೂ ಏಕತೆ ಮತ್ತು ಸಮನ್ವಯತೆ ಸಾಧಿಸಲು ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ಜರುಗಿದ ವೀರಶೈವ ಮಹಾಸಭೆಯ 5 ನೇ ಅಧಿವೇ ಶನದ ಸಾರಥ್ಯ, ಸಾನ್ನಿಧ್ಯ ವಹಿಸಿ, ತಮ್ಮ ಸಂದೇಶದಲ್ಲಿ ಸಹಕಾರ, ಸಮೃದ್ಧಿ, ಸಹಬಾಳ್ವೆ, ಸಮನ್ವಯತೆ ಮುಂತಾದ ಸಮಜೋದ್ಧಾರ್ಮಿಕ ಮೌಲ್ಯಗಳನ್ನು ಹರಿಯಬಿಟ್ಟಿದ್ದು, ಇಂದಿನ ವೀರಶೈವ ಧರ್ಮ ಹಾಗೂ ಸಮಾಜದ ಗಟ್ಟಿತನಕ್ಕೆ ಅಡಿಪಾಯವಾಗಿದೆ. ಇದೇ ಜಿಲ್ಲೆಯ ಬುಕ್ಕಾಂಬುದಿ ಬೆಟ್ಟದಲ್ಲಿ ಉಗ್ರ ವಾದ ತಪಸ್ಸನ್ನು  ಕೈಗೊಂಡು ಯೋಗಿಕ ಶಕ್ತಿಯನ್ನು ಪಡೆದು ಅಷ್ಟಸಿದ್ಧಿಗಳನ್ನು ಸಾಧಿಸಿಕೊಂಡು ಅವುಗಳನ್ನು ಭಕ್ತರಿಗೆ ಧಾರೆ ಎರೆಯುತ್ತಿದ್ದ ದೃಶ್ಯಗಳು ಇಂದಿಗೂ ಅವರ್ಣನೀಯವಾಗಿವೆ.

ಹೀಗೆ ಭಕ್ತರನ್ನು ಬೆಳಕಿನಡೆಗೆ ಕರೆತಂದು, ಜ್ಞಾನ ಕ್ರಿಯೆಗಳನ್ನು ಧಾರೆಯೆರೆದು ಶಿವಾದ್ವೈತ ಸಿದ್ಧಾಂತದ ಪ್ರಬೋಧಕರಾಗಿ, ಲಿಂಗ ಗುಣ, ಸಂಪನ್ನ ಶಿವಾಚಾರದ ಗಣಿಯಾಗಿ, ಗುರು, ಲಿಂಗ ಜಂಗಮತ್ವದ ಗುರು ಸಾರ್ವಭೌಮರಾಗಿ, ಪಂಚಪೀಠಗಳ ಕಾರಣಿಕ ಯುಗಪುರುಷರಾಗಿ, ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಶಕ್ತಿ ತುಂಬಿದ ಜ್ಞಾನ ಸೂರ್ಯರಾದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಸಾವಿರಾರು ಪವಾಡಗಳು ಹಾಗೂ ಸಂಕಲ್ಪಿತ ಕಾರ್ಯಗಳನ್ನು ಕಾರ್ಯಗತಗೊಳಿಸುವ ಮುಖೇನ ಭಕ್ತರ ಹೃದಯದಲ್ಲಿ ಸಾಧನೆಯ ಸಿದ್ಧಿ ಸತ್ಪುರುಷನೆಂದೇ ಅಭಿದಾನವನ್ನು ಪಡೆದು ಉಳಿಸಿಕೊಂಡವರು. ಇಂಥ ಪರಮ ತಪೋನಿಧಿಗಳ ಪವಾಡ ಸದೃಶ ಬಹುಮುಖಿ ಕಾರ್ಯಗಳು ಭಕ್ತರ ಹೃನ್ಮಂದಿರಗಳಲ್ಲಿ ಈಗಲೂ ವಿರಾಜಮಾನವಾಗಿವೆ.

ಶ್ರೀ ರಂಭಾಪುರಿ ಶಿವಾನಂದ ಶಿವಾಚಾರ್ಯ ಭಗವತ್ಪಾದರಿಗೆ ರಂಭಾಪುರಿ ಪೀಠದ ಜಗದಾಚಾರ್ಯರನ್ನಾಗಿ ಹಾರೈಸಿ, ಅಭಿನಂದಿಸಿದ್ದು ಹಾಗೂ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರಿಗೆ ಮುಂದೊಂದು ದಿನ ಜಗದ್ಗುರುಗಳಾಗುವಂತೆ ಆಶೀರ್ವಾದ ಮಾಡಿದ್ದು ಹಾಗೂ ವೀರಶೈವ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರಕ್ಕಾಗಿ 1927 ರ ಶ್ರೀ ಜಗದ್ಗುರು ದಾರುಕ ಜಯಂತಿ ಶುಭ ಸಂದರ್ಭದಲ್ಲಿ ಪಂಚಾಚಾರ್ಯ ಪ್ರಭಾ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಶ್ರೀ ಕಾಶಿನಾಥ ಶಾಸ್ತ್ರಿಗಳವರ ದಕ್ಷ ಸಂಪಾದಕತ್ವದೊಂದಿಗೆ ಪಂಚಪೀಠಾಚಾರ್ಯರ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಾಭಿವೃದ್ಧಿ ಕಾರ್ಯಗಳನ್ನು ಅನಾವರಣಗೊಳಿಸಿದ್ದು, ಅತ್ಯಂತ ಅವಿಸ್ಮರಣೀಯ ಚಾರಿತ್ರ್ಯಿಕ ಸಂಗತಿಯಾಗಿದೆ.

ಪ್ರಸ್ತುತ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದ ಪರಂಪರೆ ಹಾಗೂ ಧರ್ಮಾಚರಣೆಗಳನ್ನು ಅನುಷ್ಠಾನಗೊಳಿಸುವ ಮುಖೇನ ಲಿ. ಭಗವತ್ಪಾದರ ಪವಾಡ ಸದೃಶ ಕಾರ್ಯಗಳನ್ನು ಪರಮ ತಪೋನಿಧಿ ಲಿಂ. ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ  87 ನೇ ವರ್ಷದ ಪುಣ್ಯ ಸಂಸ್ಮರಣೆ ನಿಮಿತ್ತ ಪ್ರಸ್ತುತ ಜಗದ್ಗುರುಗಳು ಚಿಕ್ಕಮಗಳೂರು ಜಿಲ್ಲೆಯ ಬುಕ್ಕಾಂಬುದಿ ತಪೋ ಕ್ಷೇತ್ರದಲ್ಲಿ ದಿನಾಂಕ 11.1.2023 ರಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಮಂಗಳ ಸಾರಥ್ಯದಲ್ಲಿ  ಪುಣ್ಯ ಸ್ಮರಣೋತ್ಸವ ಮತ್ತು ಶ್ರೀ ಉಜ್ಜಯಿನಿ ಮಹಾಪೀಠದಲ್ಲಿ ಶ್ರೀ ಸಿದ್ಧಲಿಂಗ ಜಗದ್ಗುರುಗಳ ಸಂಸ್ಮರಣೆ ನಾಡಿನ ಭಕ್ತಾದಿಗಳ ಉಪಸ್ಥಿತಿಯಲ್ಲಿ ಜರುಗುವುದು.


ನಿರಂಜನ ದೇವರಮನೆ, ಚಿತ್ರದುರ್ಗ