`ರಜತ ಮಹೋತ್ಸವ’ದ ಸಂಭ್ರಮದಲ್ಲಿ ಮಹಿಳಾ ಸೇವಾ ಸಮಾಜದ ಶಾಲೆಗಳು

`ರಜತ ಮಹೋತ್ಸವ’ದ ಸಂಭ್ರಮದಲ್ಲಿ ಮಹಿಳಾ ಸೇವಾ ಸಮಾಜದ ಶಾಲೆಗಳು

ಜಂಬೂ ದ್ವೀಪ, ಭರತ ಖಂಡೇ, ಕರ್ನಾಟ ರಾಜ್ಯದೋಳ್ ದೇವನಗರಿ ದಾನಿಗಳ ನಗರಿ, ಶಿಕ್ಷಣ ಕಾಶಿ, ಬೆಣ್ಣೆನಗರಿ ಖ್ಯಾತಿಯ ದಾವಣಗೆರೆಯ ಹೃದಯ ಭಾಗದೋಳ್ ಇರ್ಪ ಮಹಿಳಾ ಸೇವಾ ಸಮಾಜದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಬೆಳ್ಳಿಹಬ್ಬದ ಸಡಗರ, ಸಂಭ್ರಮ.

ಭಾರತ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರ್ತಿ, ದಾವಣಗೆರೆ ಭಾಗದ ಮಹಿಳಾ ಸಬಲೀಕರಣದ ಮುಕುಟಮಣಿ ಆದ ಶ್ರೀಮತಿ ಬಳ್ಳಾರಿ ಸಿದ್ದಮ್ಮನವರು 01, ಫೆಬ್ರುವರಿ 1911 ಸುದಿನದಂದು `ಮಹಿಳಾ ಸೇವಾ ಸಮಾಜ’ವೆಂಬ ಬೀಜವನ್ನು ಬಿತ್ತಿದರು. ಅದು ಕಾಲಾನುಕಾಲೇ ಹಲವಾರು ಮಹಿಳಾ ಮಣಿಗಳ ನೇತೃತ್ವದಲ್ಲಿ `ಎಳೆಗರು ಎತ್ತಾಗದೇ, ಮಿಡಿ ಪಣ್ನಾಗದೇ’ ಎಂಬಂತೆ ಏಪ್ರಿಲ್ 2007 ರಂದು ಮಹಿಳಾ ಸೇವಾ ಸಮಾಜವು ತನ್ನ ‘ವಜ್ರಮಹೋತ್ಸವ’ ವನ್ನು ಆಚರಿಸಿಕೊಂಡಿತು.

ಸಮಾಜಸೇವೆ, ಶಿಕ್ಷಣ, ಮಹಿಳಾ ಸಬಲೀಕರಣ, ಆರ್ಥಿಕ ಸ್ವಾವಲಂಬಲನೆಯ ಧ್ಯೇಯವನ್ನು ಹೊತ್ತು, 1994-95ರಲ್ಲಿ ಅಂದಿನ ಎಲ್ಲಾ ಮಹಿಳಾ ಸೇವಾ ಸಮಾಜದ ಮಹಿಳಾ ಮಣಿಗಳು, ಅಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು, ದಾನಿಗಳು, ಮುಂತಾದವರ ಸಹಾಯ – ಸಹಕಾರದೊಂದಿಗೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಾಗೂ ಪ್ರೌಢ ಶಾಲೆಗಳು ಮೊಳಕೆಯೊಡೆದವು, ಈ ಮೊಳಕೆಗಳು ಕಾಲಾನುಕಾಲೇ ಸಮಾಜದ ಪೋಷಣೆಯಲ್ಲಿ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿ, ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ ಎಂದು ಹೇಳಲು ಹರ್ಷವಾಗುತ್ತಿದೆ, ಹಮ್ಮೆಯಾಗುತ್ತಿದೆ.

1994-95ರಲ್ಲಿ ಪ್ರಾರಂಭವಾದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಿರಂತರವಾಗಿ ನಡೆದು ಮೊದಲು ಬಾಲಕಿಯರಿಗೆ ಮಾತ್ರ ಪ್ರಾರಂಭವಾಗಿ ಮುಂದುವರೆದು ಸಹ – ಶಿಕ್ಷಣವಾಗಿ ಮಾರ್ಪಟ್ಟಿತು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳು 2015 ರಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳ ಪರಿಶ್ರಮ ಹಾಗೂ ಅನುಮೋದನೆಯ ಮೇರೆಗೆ ಸಂಸ್ಥೆಯ ಮಾಜಿ ಜಂಟಿ ಕಾರ್ಯದರ್ಶಿ ದಿ|| ಶ್ರೀಮತಿ ಐನಳ್ಳಿ ವಸಂತಕುಮಾರಿಯವರ ಸಹಕಾರದಿಂದ ಕರ್ನಾಟಕ ಸರ್ಕಾರದ ಅನುದಾನಕ್ಕೆ ಒಳಪಟ್ಟಿರುತ್ತದೆ. ತತ್ಸಂಬಂಧ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಶಿಕ್ಷಕ ವೃಂದ ಚಿರಋಣಿಯಾಗಿರುತ್ತದೆ.

ಮಹಿಳಾ ಶಿಕ್ಷಣ, ಮಹಿಳಾ ಸಬಲೀಕರಣಕ್ಕೆ ಬೆಂಬಲ ನೀಡುವ ಹಾಗೂ ಪೋಷಿಸುವ ಆಶಯದೊಂದಿಗೆ 2009ರಲ್ಲಿ ಪದವಿಪೂರ್ವ ಕಾಲೇಜು ದಿ|| ಶ್ರೀಮತಿ ಪುಟ್ಟಮ್ಮ ಮಹಾರುದ್ರಯ್ಯನವರ ಕನಸಿನ ಕೂಸು ಹಾಗೂ ಅವರ ಸಹೋದರಿಯರು ತಮ್ಮ ಮಾತಾಪಿತೃಗಳ ಸವಿನೆನಪಿಗಾಗಿ ಉದಾರವಾಗಿ ಕೊಟ್ಟ ದೇಣಿಗೆಯಿಂದ ಸುಸಜ್ಜಿತ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಿಸಿ ಪ್ರಸ್ತುತ 09 ಉಪನ್ಯಾಸಕರು, 01 ಬೋಧಕೇತರರು ಒಟ್ಟು 10 ಜನ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 160 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.

ಮಹಿಳಾ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಒತ್ತನ್ನು ನೀಡುವ ಮಹದುದ್ಧೇಶದಿಂದ ಮಹಿಳಾ ಪದವಿ ಪೂರ್ವ ಕಾಲೇಜನ್ನು 2018 ರಲ್ಲಿ ಪ್ರಾರಂಭಿಸಲಾಯಿತು. ಈ ಪದವಿ ಪೂರ್ವ ಕಾಲೇಜಿನಲ್ಲಿ ಕಲೆ ಹಾಗೂ ವಾಣಿಜ್ಯ ವಿಭಾಗಗಳಿದ್ದು, ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ವಿಜಯಪುರದಿಂದ ಮಾನ್ಯತೆ ಪಡೆದಿದೆ. ಇಲ್ಲಿ ಸುಮಾರು 100 ರಿಂದ 110 ವಿದ್ಯಾರ್ಥಿಗಳು ಶಿಕ್ಷಣವನ್ನು ಯಶಸ್ವಿಯಾಗಿ ಪಡೆಯುತ್ತಿದ್ದಾರೆ. ಪ್ರಸ್ತುತ 15 ಜನ ಉಪನ್ಯಾಸಕರು, ಇಬ್ಬರು ಬೋಧಕೇತರ ವರ್ಗದವರು ಕಾರ್ಯನಿರ್ವಹಿಸುತ್ತಿದ್ದಾರೆ. ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕಿನ ಮಹಾ ಪ್ರಬಂಧಕರಾದ ದಿ|| ಶ್ರೀಮತಿ ಸರೋಜಮ್ಮ ಹನಗವಾಡಿ ಮಠ ಇವರ ಸ್ಮರಣಾರ್ಥವಾಗಿ ಶ್ರೀಮತಿ ಮನೋರಮಾ ಹನಗವಾಡಿಮಠ ಇವರು ಕೊಟ್ಟ ದೇಣಿಗೆಯಿಂದ ಸಭಾಂಗಣ ನಿರ್ಮಾಣವಾಗಿದೆ. ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಪುಷ್ಠಿ ಕೊಡುವ ಉದ್ದೇಶದಿಂದ ಆರಂಭವಾದ ಹೊಲಿಗೆ ತರಬೇತಿ ಕೇಂದ್ರ ನೂರಾರು ಮಹಿಳೆಯರ ಬದುಕಿಗೆ ಮುನ್ನುಡಿ ಬರೆದು, ಆರ್ಥಿಕ ಸ್ವಾವಲಂಬನೆಯ ಆಶಾಕಿರಣವನ್ನು ಮೂಡಿಸಿದೆ.

ಮಹಿಳಾ ಸೇವಾ ಸಮಾಜ ಶಾಲೆಯ ಸಂಕೀರ್ಣಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಸಮಾಜದ ಆಡಳಿತ ಮಂಡಳಿಯವರು ವಿದ್ಯಾರ್ಜನೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಆರ್ಥಿಕ ಸಹಾಯ ನೀಡುತ್ತಿದ್ದಾರೆ.

ಪ್ರಸ್ತುತವಾಗಿ `ಸಮಾಜ ಸೇವೆಯೇ ಜೀವನ’ ಎಂಬ ಧ್ಯೇಯದೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಕೆ. ಕೆ. ಸುಶೀಲಮ್ಮನವರು, ಉಪಾಧ್ಯಕ್ಷರಾದ ಎಮ್ಮಿ ಶಾರದಮ್ಮನವರು, ಕಾರ್ಯದರ್ಶಿಗಳಾದ ಶ್ರೀಮತಿ ಜಯಮ್ಮ ನೀಲಗುಂದ, ಸಹಕಾರ್ಯದರ್ಶಿಗಳಾದ ಐ.ಕೆ. ಮಂಜುಳ, ಕೋಶಾಧ್ಯಕ್ಷರಾದ ಶ್ರೀಮತಿ ಸ್ವರ್ಣಲತಾ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯೆಯರ ಸಹಾಯ, ಸಹಕಾರ, ಮಾರ್ಗದರ್ಶನ, ಬೆಂಬಲದೊಂದಿಗೆ ವರ್ಷದಿಂದ ವರ್ಷಕ್ಕೆ ಮಹಿಳಾ ಸೇವಾ ಸಮಾಜ ಸಂಸ್ಥೆಯು ಪ್ರಗತಿ ಪಥದತ್ತ ಮುನ್ನಡೆಯುತ್ತಿದೆ. 

25 ಸಂವತ್ಸರಗಳನ್ನು ಯಶಸ್ವಿಯಾಗಿ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ `ರಜತ ಸೌರಭ’ ಶಿರೋನಾಮೆಯಡಿ ಸ್ಮರಣ ಸಂಚಿಕೆಯನ್ನು ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಬೂಸನೂರ್ ಅವರ ಸಂಪಾದಕತ್ವದಲ್ಲಿ ಹೊರತರಲಾಗುತ್ತಿದೆ. ಇದರ ಮುಖ್ಯ ಸಂಚಾಲಕರಾಗಿ ಸಮಾಜದ ಕಾರ್ಯದರ್ಶಿ ಶ್ರೀಮತಿ ನೀಲಗುಂದ ಜಯಮ್ಮ, ಸಮಾಜದ ಆಡಳಿತ ವರ್ಗದ ನಿರ್ದೇಶಕರುಗಳು ಹಾಗೂ ಆಡಳಿತಾಧಿಕಾರಿ   ವಾಮದೇವಪ್ಪ ಮತ್ತು ಸಂಪಾದಕ ಮಂಡಳಿಯಲ್ಲಿ ಶಾಲೆಯ ಶಿಕ್ಷಕ ವೃಂದ ಪಾಲ್ಗೊಂಡಿದೆ.

ಹೀಗೆ ಹತ್ತು ಹಲವಾರು ಮುಖಗಳಲ್ಲಿ ಮಹಿಳಾ ಶಿಕ್ಷಣ, ಸಬಲೀಕರಣಕ್ಕೆ ಹೊಸ ಭಾಷ್ಯ ಬರೆದ ಮಹಿಳಾ ಸೇವಾ ಸಮಾಜ ನೂರಾರು ಮಹಿಳೆಯರ ಬೆಂಬಲ ಮಾರ್ಗದರ್ಶನ, ದಾನ, ಸಹಾಯ, ಸಹಕಾರಗಳಲ್ಲಿ ಪೋಷಣೆಗೊಂಡು ಯಶಸ್ವಿಯಾಗಿ 25 ವಸಂತಗಳನ್ನು ಪೂರೈಸುತ್ತಿದೆ. ನಮ್ಮ ಸಂಸ್ಥೆಯ ಹಿರಿಯ ಚೇತನಗಳು ಕದಳಿಶ್ರೀ, ಅಕ್ಕಪ್ರಶಸ್ತಿ ಯಂತಹ ನೂರಾರು ಪ್ರಶಸ್ತಿಗಳಿಗೆ ಸನ್ಮಾನಗಳಿಗೆ ಭಾಜನರಾಗಿದ್ದಾರೆ ಮತ್ತು ವಿದ್ಯಾರ್ಥಿಗಳು ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಮುಂತಾದ ಪಠ್ಯ ಹಾಗೂ ಪತ್ಯೇತರ ಚಟುವಟಿಕೆ ಗಳಲ್ಲಿ ಭಾಗವಹಿಸಿ `ಸಂಸ್ಕೃತಿ ಸೌರಭವನ್ನು’ ಪಸರಿಸುತ್ತಿದ್ದಾರೆ ಇಂತಹ ಸಂಸ್ಥೆಯು ಆಲದ ಮರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯುತ್ತಿದ್ದು, ತನ್ನ ಸಮಾಜ ಸೇವೆ ಹಾಗೂ ಶಿಕ್ಷಣದ ಧ್ಯೇಯವನ್ನು ಸಾಕಾರಗೊಳಿಸುತ್ತಾ ನೂರಾರು ವಸಂತಗಳನ್ನು ಕಾಣಲಿ ಎಂದು ಆಶಿಸುತ್ತೇವೆ.

– ಜಗದೀಶ ಎನ್.ಎಸ್‌.

ಮೊ. 9986418797