ಮೌನ ಸಾಧನೆಯ ವ್ಯಕ್ತಿತ್ವದ ಅಥಣಿ ವೀರಣ್ಣ

ಬಹುಮುಖ ಪ್ರತಿಭೆಯ ಅಥಣಿ ವೀರಣ್ಣನವರು 77ರ ಹುಟ್ಟುಹಬ್ಬದ  ಸಂಭ್ರಮದಲ್ಲಿದ್ದಾರೆ. ವೀರಣ್ಣನವರು ಹಲವಾರು ಕ್ಷೇತ್ರಗಳಲ್ಲಿ ನಿಷ್ಠೆಯಿಂದ, ಕಾರ್ಯತತ್ಪರತೆಯಿಂದ ದುಡಿಯುತ್ತಾ ಬರುತ್ತಿದ್ದಾರೆ. ಉದಾ.: ಲೆಕ್ಕ ಪರಿಶೋಧನೆ, ಕೈಗಾರಿಕೋದ್ಯಮ, ಆಡಳಿತ ನಿರ್ವಹಣೆ, ಶೈಕ್ಷಣಿಕ ಕಾರ್ಯ, ಕೆಲವು ವಿಷಯಗಳಲ್ಲಿ ವಿಶೇಷ ಅಭಿರುಚಿ, ಆಸಕ್ತಿ, ಸಂಘ-ಸಂಸ್ಥೆಗಳಿಗೆ ಸೇವೆ ಪರಿಣಾಮವಾಗಿ ಸಾಮಾಜಿಕ ಮನ್ನಣೆ, ಸನ್ಮಾನ, ಪ್ರಶಸ್ತಿಗಳು ಲಭಿಸಿವೆ. ಇವುಗಳಲ್ಲಿ ವಾಣಿಜ್ಯ ಮತ್ತು ಶೈಕ್ಷಣಿಕ ಹಾಗೂ ಲೆಕ್ಕ ಪರಿಶೋಧನಾ ಕ್ಷೇತ್ರಕ್ಕೆ ಮಾಡಿದ ಅನುಪಮ ಸೇವೆ ಸ್ತುತ್ಯಾರ್ಹವಾದುದು.

`ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವಾ…’ 

ಒಬ್ಬ ಸದಭಿರುಚಿಯುಳ್ಳ ವ್ಯಕ್ತಿಯ ಚಿಂತನೆ ಹೇಗಿರಬೇಕೆಂದು ಶ್ರೀ ಡಿ.ವಿ.ಜಿಯವರು ಬಹಳ ಸುಂದರವಾಗಿ ಈ ಗೀತೆಯ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ವೀರಣ್ಣನವರ ಕುರಿತು ಬರೆಯುವಾಗ ನನಗೆ ತಕ್ಷಣ ಹೊಳೆಯುವುದು.    ಮೇಲಿನ ಸಾಲುಗಳು. ಖ್ಯಾತ ಲೆಕ್ಕ ಪರಿಶೋಧಕರು, ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು, ಹಲವಾರು ಭಾಷೆಗಳಲ್ಲಿ ಪ್ರಭುತ್ವ, ಆದರೂ ತಮ್ಮ ಸಾಧನೆಯ ಬಗ್ಗೆ ಎಂದೂ ಹೆಗ್ಗಳಿಕೆಯಿಂದ ಹೇಳಿಕೊಂಡವರಲ್ಲ, ಖಂಡಿತವಾಗಿ ಅವರು ಪ್ರದರ್ಶನ ಪಟುವಲ್ಲ, ವಿದ್ಯೆ ಮತ್ತು ವಿನಯ ಅವರಿಗೆ ಎರಡು ಕಣ್ಣುಗಳಿದ್ದಂತೆ.  ಅವರ ಧ್ಯೇಯವೇ Simple Living and  High thinking.

ಒಬ್ಬ ವ್ಯಕ್ತಿ  ತಾನು ಜೀವನದಲ್ಲಿ ಏನನ್ನು ಸಾಧಿಸಿದೆನೆಂದು ಹೇಳಿಕೊಂಡಾಗ, ಹೆಗ್ಗಳಿಕೆ ಕೊಚ್ಚಿಕೊಂಡಾಗ ಅದಕ್ಕೆ ಅರ್ಥವಿಲ್ಲ. ಆದರೆ ಅವರ ಸಾಧನೆಯನ್ನು ಗುರುತಿಸಿ ಜನ-ಸಮಾಜ ಅವರನ್ನು ಮನತುಂಬಿ ಹೊಗಳಿ ಮನ್ನಣೆ ನೀಡಿದಾಗಲೇ ಅವರ ಸಾಧನೆಗೆ ಅರ್ಥ ಮತ್ತು ಬೆಲೆ.

ಅಥಣಿ ವೀರಣ್ಣನವರನ್ನು ವಿವರಿಸುವುದು ಸ್ವಲ್ಪ ಕಷ್ಟವೆನಿಸಿದರೂ ನಿಜವಾಗಿ ಅವರದ್ದು ಬಿಡಿಸಿಟ್ಟ ವ್ಯಕ್ತಿತ್ವ.  ಅವರಲ್ಲೊಬ್ಬ ಕಲಾವಿದನಿದ್ದಾನೆ. ಕತೆಗಾರನಿದ್ದಾನೆ.  ಅನೇಕ ತತ್ವ ವಿಚಾರಗಳಿವೆ. ಚಿಂತನಾಶೀಲತೆಯಿದೆ, ಎಲ್ಲದಕ್ಕೂ ಮುಖ್ಯ ಅವರ ಭಾಷಾ ವೈಖರಿ ಹಾಗೂ ಆಸಕ್ತಿ, ವೈವಿಧ್ಯಗಳು ಬೆರಗು ಹುಟ್ಟಿಸುವಂತವು.

ಕಂಡದ್ದನ್ನು ಕಂಡ ಹಾಗೇ ಚಿಕಿತ್ಸಕ ಬುದ್ಧಿಯಿಂದ ಅದನ್ನು ವಿಮರ್ಶಿಸುವ ಬುದ್ಧಿ ಇವ ರದು. ಮಾನವೀಯತೆಗೆ ಹೆಚ್ಚು ಬೆಲೆ ಕೊಡುವ ಇವರು ಪ್ರತಿಯೊಂದು ವಿಚಾರದಲ್ಲಿಯೂ ವಿಮರ್ಶಾತ್ಮಕ ದೃಷ್ಟಿಯನ್ನು ಬೀರುತ್ತಾರೆ.  

ನೇರ-ನುಡಿ, ನೇರ ನಡೆಯ ವ್ಯಕ್ತಿತ್ವ ಇವರದು. ಅಷ್ಟೇ ಅಲ್ಲ ಸಮಾಜದಿಂದಲೂ ಇದನ್ನೇ ಬಯಸುತ್ತಾರೆ.

ಶ್ರೀಯುತರು `ಮನಸಿನುದ್ವೇಗದಲಿ ಭೋಗದಲಿ ಅತಿ ಬೇಡವಲ್ಲಿಯೂ ಮಂಕುತಿಮ್ಮ’’ ಎಂಬ ತತ್ವವನ್ನು ಅಕ್ಷರಶಃ ಪಾಲಿಸುವ ವ್ಯಕ್ತಿತ್ವ ಉಳ್ಳವರು. ಶ್ರೀಯುತರದು ಮೌನ ಸಾಧನೆ. “ತೃಪ್ತಿಗಿಂತ ಅಧಿಕ ನಿಧಿಯಿಲ್ಲ!  ತಾಳ್ಮೆಗಿಂತ ಅಧಿಕ ಗುಣವಿಲ್ಲ’’ ಎಂಬುದು ಅವರು ನಂಬಿದ ಸೂಕ್ತಿ. 

ತಮ್ಮ ಬಡತನವನ್ನು ಮೆಟ್ಟಿ ಹಲವಾರು ರೀತಿಯ ಕಷ್ಟಗಳನ್ನು ದಾಟಿ, ಇವತ್ತು ಸಾಧಕರ ಪಟ್ಟಿಯಲ್ಲಿರುವ ಕೆಲವು ಅಪರೂಪದ ವ್ಯಕ್ತಿತ್ವ ಹೊಂದಿ ಸಾಧನೆಯ ಹಾದಿಯಲ್ಲಿ ಸಾಗಿರುವ ಅವರದು ಗೌರವಾನ್ವಿತ ವ್ಯಕ್ತಿತ್ವ.  

ನಾಡಿನಾದ್ಯಂತ ಚಿರಪರಿಚಿತ ರಾಗಿರುವ ಅಥಣಿ ವೀರಣ್ಣನವರು ವಿಶಿಷ್ಟ ವ್ಯಕ್ತಿತ್ವದಿಂದ ಇತರರಿಗಿಂತ ವಿಭಿನ್ನರಾಗಿದ್ದಾರೆ. ಹಿರಿ-ಕಿರಿಯರಿಗೆ ಸ್ನೇಹಿತರಾಗು ತ್ತಾರೆ. ಮಾರ್ಗದರ್ಶಿಗಳಾಗುತ್ತಾರೆ. ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋರಿಸುವ ಗುರುಗಳಾಗುತ್ತಾರೆ. ತಮ್ಮ ಜೊತೆ ಇರುವವರಿಗೆ ಕುತೂಹಲ ಮೂಡಿಸುತ್ತಾ, ಮಾನವೀಯ ಪ್ರಜ್ಞೆ, ಆತ್ಮ ವಿಶ್ವಾಸ ಮೂಡಿಸುತ್ತಾರೆ. ಮಹಾನಗರಕ್ಕೆ, ಶಿಕ್ಷಣ ಕ್ಷೇತ್ರಕ್ಕೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಮುಖ್ಯವಾಗಿ ಮನೆತನಕ್ಕೆ ಗೌರವಯುತ ಸ್ಥಾನವನ್ನು ತಂದುಕೊಟ್ಟ ಪ್ರಮುಖ ವ್ಯಕ್ತಿಗಳಲ್ಲಿ ಅಥಣಿ ವೀರಣ್ಣನವರು ಒಬ್ಬರು. ಇಂಥವರು ನಮ್ಮ ಜೊತೆ ಇದ್ದಾರೆ ಎಂಬುದು ಹೆಮ್ಮೆಪಡುವಂತಹ ವಿಷಯ.

ನಿತ್ಯ ವ್ಯಾಯಾಮ, ನಿಯಮಿತ ಆಹಾರ ಪದ್ಧತಿ, ವ್ಯವಸ್ಥಿತ ಜೀವನ ವಿಧಾನ, ಆದರ್ಶ ವ್ಯಕ್ತಿತ್ವ, ನಾಡಿನ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿಸಿದೆ. ಸರಳ ಸಜ್ಜನಿಕೆ, ಸ್ನೇಹ, ಸೌಜನ್ಯಗಳಿಗೆ ಪ್ರತಿರೂಪ. ಅಥಣಿ ವೀರಣ್ಣನವರು ಸಕುಟುಂಬ ಆಯುರಾರೋಗ್ಯ ಸಕಲ ಸೌಭಾಗ್ಯಗಳಿಂದ ಆನಂದಮಯ ಜೀವನವನ್ನು ನಡೆಸಲೆಂದು ಹಾರೈಸೋಣ. 

– ಜೆಂಬಿಗಿ ಮೃತ್ಯುಂಜಯ 

ಕನ್ನಡ ಉಪನ್ಯಾಸಕರು, ದಾವಣಗೆರೆ.