ಮನುಜನಿಗೆ ಬಳುವಳಿಯಾಗಿರುವ ಕಲ್ಪವೃಕ್ಷ ಕಡೆಗಣಿಸದಿರಿ…

Home ಲೇಖನಗಳು ಮನುಜನಿಗೆ ಬಳುವಳಿಯಾಗಿರುವ ಕಲ್ಪವೃಕ್ಷ ಕಡೆಗಣಿಸದಿರಿ…
ಮನುಜನಿಗೆ ಬಳುವಳಿಯಾಗಿರುವ ಕಲ್ಪವೃಕ್ಷ ಕಡೆಗಣಿಸದಿರಿ…

ಮನುಜನಿಗೆ ಬಳುವಳಿಯಾಗಿರುವ ಕಲ್ಪವೃಕ್ಷ ಕಡೆಗಣಿಸದಿರಿ…

ತೆಂಗು ಕಲ್ಪವೃಕ್ಷ… ತನ್ನ ಭಾಗದ ಎಲ್ಲಾ ವಸ್ತುಗಳನ್ನು ಮನುಜನ ಉಪಯೋಗಕ್ಕೆ ಬಳುವಳಿಯಾಗಿ ನೀಡುತ್ತಿರುವ ವೃಕ್ಷ ತೆಂಗು. ತಾಯಿಯ ಎದೆ ಹಾಲಿನ ನಂತರ ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುವ ಪದಾರ್ಥ ತೆಂಗು. ಇಂತಹ ಅಮೃತ ವಸ್ತುವಿಗೆ ಸರಿಸಾಟಿ ಪಾನೀಯ ಇನ್ನೊಂದಿಲ್ಲ. ಆದರೆ ನಮ್ಮ ದೇಶದಲ್ಲಿ ಇದರ ಬಳಕೆಯು ಏಕೋ ಏನೋ ನಿರೀಕ್ಷಿತ ಮಟ್ಟದಲ್ಲಿ ಇಲ್ಲ.

 ಪ್ರತಿ ವರ್ಷ ಸೆಪ್ಟೆಂಬರ್ ಎರಡನೇ ತಾರೀಖಿನಂದು ವಿಶ್ವ ತೆಂಗು ದಿನಾಚರಣೆಯನ್ನು ಆಚರಿಸುತ್ತೇವೆ. Asian Pacific Coconut Community (APCC)  ಎನ್ನುವ ಸರ್ಕಾರದ ಸಂಸ್ಥೆಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದ ನೆನಪಿಗಾಗಿ 2009 ರಿಂದ ಪ್ರಪ್ರಥಮ ವಿಶ್ವ ತೆಂಗು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ವರ್ಷ ‘ಕೋವಿಡ್ 19  ಪಿಡುಗಿನ ನಡುವೆ ಮತ್ತು ನಂತರ ಸುಸ್ಥಿರ ತೆಂಗಿನ ಕುಟುಂಬವನ್ನು ಕಟ್ಟುವೆಡೆ ಚೇತರಿಕೆಯುಳ್ಳ ಸುರಕ್ಷಿತ ತಂತ್ರಜ್ಞಾನಗಳನ್ನು ಬಳಸುವುದು’  ಎಂಬ ಧ್ಯೇಯ ವಾಕ್ಯದಿಂದ ಆಚರಿಸಲಾಗುತ್ತಿದೆ.

 ತೆಂಗಿನ ಮರದಿಂದ ಆಹಾರ, ಪಾನೀಯ, ಸೌದೆ, ವಸತಿಗೆ ಮರ ಮುಟ್ಟು, ಕೈಗಾರಿಕೆಗೆ ಕಚ್ಚಾ ವಸ್ತು, ಸಿಪ್ಪೆಯ ಉತ್ಪನ್ನಗಳು, ಮೌಲ್ಯವರ್ಧಿತ ಪದಾರ್ಥಗಳು ಇನ್ನೂ ಹಲವಾರು ಉತ್ಪನ್ನಗಳನ್ನು ಮನುಜ ಕುಲಕ್ಕೆ ದೊರಕಿಸುತ್ತಿದೆ.  ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ರೋಗಗಳ ವಿರುದ್ಧ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ತೆಂಗಿನ ಕಾಯಿಯ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಮೂಳೆಗಳು ಬಲಿಷ್ಠವಾಗುತ್ತವೆ. ತೆಂಗಿನ ಕಾಯಿಯಲ್ಲಿ ಅಧಿಕ ನಾರಿನ ಅಂಶವಿರುವುದರಿಂದ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿಯಾಗುತ್ತದೆ.

ಇಷ್ಟೆಲ್ಲಾ ಪೋಷಕಾಂಶಗಳ ಆಗರವಾಗಿರುವ ತೆಂಗು ಬೆಳೆಯ ಬಗ್ಗೆ ರೈತರ ನಿರ್ಲಕ್ಷ್ಯ ಸಲ್ಲ. ಇಂದು ಅಡಿಕೆ ಬೆಳೆಯ ಭರಾಟೆಯಲ್ಲಿ ತೆಂಗು ತನ್ನ ಮೊನಚನ್ನು ಕಳೆದುಕೊಳ್ಳುತ್ತಿದೆ. ಇದುವರೆಗೂ ನಮ್ಮ ರೈತರು ಇದನ್ನು ಮುಖ್ಯ ಬೆಳೆಯಾಗಿ ಪರಿಗಣಿಸಿಯೇ ಇಲ್ಲ. ATM  ಮಿಷಿನಿನಂತೆ ಕಾಯಿ ಇಳಿಸುತ್ತೇವೆ ಹೊರತು ವಾಪಸ್ ಅದಕ್ಕೆ ಬೇಕಾದ ಸೂಕ್ತ ಪೋಷಕಾಂಶಗಳನ್ನು Deposit  ಮಾಡುತ್ತಿಲ್ಲ.

 ನಮ್ಮ ರಾಜ್ಯದಲ್ಲಿ ತೆಂಗನ್ನು ಸುಮಾರು 624032 ಹೆಕ್ಟರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು ಉತ್ಪಾದನೆ 2206198 ಮೆಟ್ರಿಕ್ ಟನ್ ಗಳಷ್ಟಿದೆ. ನಮ್ಮ ಜಿಲ್ಲೆಯಲ್ಲಿ ಸುಮಾರು  9305 ಹೆಕ್ಟರ್ ಪ್ರದೇಶದಲ್ಲಿ  47602 ಮೆಟ್ರಿಕ್ ಟನ್ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಸರಾಸರಿ ಶೇಕಡ ಐದರಷ್ಟು ವಿಸ್ತೀರ್ಣ ಕಡಿಮೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

 ತೆಂಗಿನ ಬೆಳೆಯ ವಿಸ್ತೀರ್ಣ ಕಡಿಮೆಯಾಗಲು ಪ್ರಮುಖ ಕಾರಣಗಳೆಂದರೆ.

* ರೋಗ ಮತ್ತು ಕೀಟಗಳ ಹಾವಳಿ

* ಬೆಲೆಯ ಅಸ್ತಿರತೆ

* ಉಪ ಉತ್ಪನ್ನ ಮತ್ತು ಮೌಲ್ಯವರ್ಧನೆಯ ಕೊರತೆ

* ಪೋಕಾಂಶಗಳ ಅಸಮರ್ಪಕ ನಿರ್ವಹಣೆ

* ಕಾಯಿ ಕೇಳುವುದಕ್ಕೆ ಕಾರ್ಮಿಕರ ಕೊರತೆ

* ಉತ್ತಮ ಗುಣಮಟ್ಟದ ಸಸಿಗಳ ಅಲಭ್ಯತೆ

* ಅಡಿಕೆ ಬೆಳೆಯ ವಿಸ್ತೀರ್ಣ ಹೆಚ್ಚಾಗಿರುವುದು.

ಇಷ್ಟೆಲ್ಲಾ ತೊಂದರೆಗಳಿದ್ದರೂ ತೋಟದ ಸುತ್ತಲೂ ಬೆಳೆಯಲು ಸೀಮಿತವಾಗಿರುವ ಈ ಬೆಳೆಯನ್ನು ವೈಜ್ಞಾನಿಕ ಸ್ಪರ್ಶದಿಂದ ಪುನಶ್ಚೇತನ ಮಾಡುವ ಅಗತ್ಯವಿದೆ. ಅಂತಹ ಕೆಲವು ಯೋಜನೆಗಳೆಂದರೆ..

* ತೋಟಗಾರಿಕೆ ಇಲಾಖೆಯ ವತಿಯಿಂದ ಗುಣಮಟ್ಟದ ಸಸಿಗಳ ಉತ್ಪಾದನೆ ಮತ್ತು ಮಾರಾಟ

* ಮಣ್ಣು ಪರೀಕ್ಷೆಯ ಆಧಾರದಲ್ಲಿ ಪೋಷಕಾಂಶಗಳ ನಿರ್ವಹಣೆ

* ಹನಿ ನೀರಾವರಿಗೆ ಪ್ರೋತ್ಸಾಹ, ತೆಂಗಿನ ಬೆಳೆಯಲ್ಲಿ ಮಿಶ್ರ ಬೆಳೆಗಳಿಗೆ ಉತ್ತೇಜನ

* ರೈತ ಉತ್ಪಾದಕ ಕಂಪನಿಗಳ ಮೂಲಕ ಸಂಸ್ಕರಣೆ ಮತ್ತು ಮಾರುಕಟ್ಟೆಗೆ ಅವಕಾಶ

* ತೆಂಗಿನ ಕಾಯಿ ಕೇಳುವ ಕೌಶಲ್ಯ ತರಬೇತಿಯನ್ನು ಹೆಚ್ಚಿಸುವುದು.

* ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತಂಗಿನ ನಾರಿನ ಉತ್ಪನ್ನಗಳ ಕೈಗಾರಿಕೆ ಸ್ಥಾಪನೆ ಮಾಡುವುದು. 

ತೆಂಗಿನ ವಿಚಾರದಲ್ಲಿ ರೈತರ ದೃಷ್ಟಿಕೋನ ಬದಲಾಗಬೇಕಿದೆ. ಮೊದಲು ನಾವು ತೆಂಗಿನ ಉತ್ಪನ್ನಗಳನ್ನು ಬಳಸುವುದನ್ನು ಕಲಿಯಬೇಕಿದೆ. ನಂತರ ತಂತಾನೇ ಕಚ್ಚಾ ಪದಾರ್ಥಕ್ಕೆ ಉತ್ತಮ ಬೆಲೆ ಬರಲಿದೆ. ಇಂದು ವಿಶ್ವ ತೆಂಗಿನ ದಿನದಂದು ನಾವೆಲ್ಲ ಇದರ ಅಸ್ತಿತ್ವವನ್ನು ಉಳಿಸಿ, ಬೆಳೆಸಿ, ಬಳಸುವ ನಿರ್ಧಾರವನ್ನು ಕೈಗೊಳ್ಳೋಣ.

– ಬಸವನಗೌಡ ಎಂ. ಜಿ.

ತೋಟಗಾರಿಕೆ ವಿಜ್ಞಾನಿಗಳು

ತರಳಬಾಳು ಕೃಷಿ ವಿಜ್ಞಾನ ಕೇಂದ್ರ

ದಾವಣಗೆರೆ.