ಜಾಗತಿಕ ಸ್ತನ್ಯಪಾನ ಸಪ್ತಾಹ – 2021 : ಎದೆಹಾಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ

ತಾಯಿಯ ಎದೆ ಹಾಲು ಅಮೃತ ಸಮಾನ ಸದೃಢ ಆರೋಗ್ಯವಂತ ಮಗುವಿನ ಭದ್ರ ಬುನಾದಿಗೆ ಎದೆಹಾಲು ಸೋಪಾನ , ಆಗಸ್ಟ್ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸುತ್ತಿದ್ದೇವಷ್ಟೆ. ಈ ವರ್ಷದ ಘೋಷಣೆ ಏನೆಂದರೆ `ಎದೆಹಾಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬುದಾಗಿದೆ. ಹೀಗಾಗಿ ಪ್ರತಿಯೊಬ್ಬರು ಇದರ ಮಾಹಿತಿ ಹೊಂದಿರುವುದು ಸೂಕ್ತವಾಗಿದೆ. 

ಯಾಕೆ ನಾವು ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ ? 

ವರ್ಷ ವರ್ಷವೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಕೂಡ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಶೇ. 88 ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲೋ ಆಗುತ್ತಿವೆ, ಅದರಲ್ಲಿ ಶೇ.51 ರಷ್ಟು ಬಾಣಂತಿಯರು ಹುಟ್ಟಿದ ಅರ್ಧ ಘಂಟೆಯೊಳಗೆ ಎದೆಹಾಲು ಕೊಡುತ್ತಿದ್ದಾರೆ. ಶೇ.61. 9 ರಷ್ಟು ತಾಯಂದಿರು ಆರು ತಿಂಗಳು ತುಂಬುವವರೆಗೂ ಎದೆಹಾಲು ಕೊಡುತ್ತಿದ್ದಾರೆ. ಶೇ. 56 ರಷ್ಟು ಮಕ್ಕಳಿಗೆ 6-8 ತಿಂಗಳೊಳಗೆ ಸಮಯೋಚಿತ ಪೂರಕ ಆಹಾರವನ್ನು ನೀಡುತ್ತಿದ್ದಾರೆ. ಇವೆಲ್ಲಾ ಅಂಕಿ-ಅಂಶಗಳಿಂದ ತಿಳಿಯುವುದೇನೆಂದರೆ ಯಶಸ್ವೀ ಹಾಲುಣಿಸಲು ಇನ್ನೂ ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಹಾಗಾಗಿ ಮೊದಲನೆಯದಾಗಿ ಗರ್ಭಿಣಿ ಸ್ತ್ರೀಯರಿಗೆ ಮಾಹಿತಿ ನೀಡುವುದಾಗಿದೆ. 

ಗರ್ಭಿಣಿ ಸ್ತ್ರೀ : ತಾಯಿಗೆ ಪ್ರಸವ ಪೂರ್ವವೇ ಎದೆಹಾಲಿನ ಮಹತ್ವದ ಬಗ್ಗೆ ಗೊತ್ತಿದ್ದರೆ ಆಕೆ ಹೆರಿಗೆಯ ನಂತರ ಸುಲಭವಾಗಿ ಮಗುವಿಗೆ ಹಾಲುಣಿಸಲು ಸಿದ್ಧಳಾಗುತ್ತಾಳೆ.

ಎದೆ ಹಾಲಿನ ಮಹತ್ವ : ಹುಟ್ಟಿದ ಅರ್ಧ ಘಂಟೆಯೊಳಗೆ ಮಗುವಿಗೆ ಹಾಲುಣಿಸಲು ಪ್ರಾರಂ ಭಿಸಬೇಕು. ಹಾಗು 6 ತಿಂಗಳು ತುಂಬುವವರೆಗೂ ಎದೆಹಾಲನ್ನಲ್ಲದೆ ಬೇರೆ ಏನನ್ನೂ ಕೊಡಬಾರದು. ಆರು ತಿಂಗಳ ನಂತರ ಎದೆಹಾಲಿನ ಜೊತೆಗೆ ಸಮ ರ್ಪಕವಾದ ಪೂರಕ ಆಹಾರವನ್ನು ಕೊಡಬೇಕು. 

ಎದೆ ಹಾಲಿನಿಂದ ಆಗುವ ಅನುಕೂಲತೆಗಳು : ಎದೆಹಾಲು ಸ್ವಚ್ಛ, ಸುರಕ್ಷಿತ, ನೈಸರ್ಗಿಕ ಹಾಗು ಯಾವುದೇ ತಯಾರಿಯ ಅಗತ್ಯವಿರುವುದಿಲ್ಲ. ತಾಯಿ ಎಲ್ಲಿ ಬೇಕಾದಲ್ಲಿ ಯಾವಾಗ ಬೇಕಾದರೂ ಎದೆಹಾಲುಣಿಸಬಹುದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿಯೂ ಕೂಡ ತಾಯಂದಿರಿಗೆ ಎದೆಹಾಲುಣಿಸಲು ಸಹಾಯ ಮಾಡುವುದಲ್ಲದೆ ಹಾಲುಣಿಸಲು ತಾಯಂದಿರನ್ನು ಉತ್ತೇಜಿಸಬೇಕು. ಮಗುವಿನ ಸರ್ವತ್ತೋಮುಖ ಬೆಳವಣಿಗೆಗೆ ಹಾಗು ಸದೃಢ ಬೆಳವಣಿಗೆಗೆ ಎದೆಹಾಲು ಅತ್ಯುತ್ತಮ. ಎದೆ ಹಾಲಿನಲ್ಲಿ ರೋಗ ನಿರೋ ಧಕ ಶಕ್ತಿ ಇರುವುದರಿಂದ ಮಗುವಿಗೆ ಸಾಮಾನ್ಯವಾಗಿ ಕಾಡುವ ಅತಿಸಾರ, ನ್ಯುಮೋನಿಯಾ, ಅಸ್ತಮಾ, ಕೆಮ್ಮು, ನೆಗಡಿ, ಅಲರ್ಜಿ ಹಾಗು ಕಿವಿ ಸೋರುವಿಕೆ ಅಂತಹ ಕಾಯಿಲೆಗಳಿಂದ ರಕ್ಷಣೆ ಒದಗಿಸುವುದು. 

ಎದೆಹಾಲು ಎಲ್ಲ ಕಾಯಿಲೆಗಳಿಗೂ ರಾಮಬಾಣ. ಅಷ್ಟೇ ಅಲ್ಲ ಕೋವಿಡ್‍ನಿಂದ ಕೂಡ ರಕ್ಷಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸುನಾಮಿ ಮಾದರಿಯಲ್ಲಿ ಕಾಡುತ್ತಿರುವ ಕೋವಿಡ್-19ಗೂ ತಾಯಿಯ ಎದೆಹಾಲಿನಲ್ಲಿ ರೋಗ ನಿರೋಧಕ ಅಂಶವಿರುವುದು ಕಂಡು ಬಂದಿದೆ. ಹಾಗಾಗಿ ಕೋವಿಡ್-19 ಇರುವ ತಾಯಂದಿರು ನಿರಾತಂಕವಾಗಿ ಎದೆಹಾಲುಣಿಸ ಬಹುದು. ಎದೆಹಾಲುಂಡು ಬೆಳೆದ ಮಕ್ಕಳ ಬುದ್ದಿ ಮಟ್ಟ ಕೂಡ ಹೆಚ್ಚಾಗಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲ, ಮುಂದೆ ಸಕ್ಕರೆ ಬಿ.ಪಿ., ಅಲರ್ಜಿ, ಅಸ್ತಮಾದಂತಹ ಖಾಯಿಲೆಗಳು ಕಡಿಮೆ. ಮಗುವಿಗೆ ಅಷ್ಟೇ ಅಲ್ಲ ಎದೆ ಹಾಲುಣಿಸುವ ತಾಯಂದಿರಿಗೂ ಕೂಡ ಅನೇಕ ಉಪಯೋಗಗಳಿವೆ. ಎದೆ ಹಾಲುಣಿಸುವುದರಿಂದ ತಾಯಿ-ಮಗುವಿನ ಬಾಂಧವ್ಯ ಬೆಳೆಯುವುದು. 

ತಾಯಿ ಹುಟ್ಟಿದ ತಕ್ಷಣ ಮಗುವನ್ನು ಅಪ್ಪಿ ಮುದ್ದಾಡುವುದರಿಂದ, ಮಗುವಿಗೆ ಸುರಕ್ಷತೆ ಒದಗಿಸುವುದಲ್ಲದೆ, ಎದೆ ಹಾಲುಣಿಸಲು ಸಹಕಾರಿಯಾಗುವುದು. ತಾಯಿಯ ತ್ವಚೆಯ ಸ್ಪರ್ಶದಿಂದ ಮಗುವಿನ ತಾಪಮಾನವನ್ನು ಕಾಪಾಡು ವಲ್ಲಿ ಸಹಕಾರಿಯಾಗುವುದು. ಇತರೆ ಹಾರ್ಮೋ ನ್‍ಗಳು ಸ್ರವಿಸಲು ಪ್ರಾರಂಭವಾಗುವುದರಿಂದ ತಾಯಿಯಲ್ಲಿ ಹೆರಿಗೆಯಿಂದಾಗಿ ಆಗುವ ರಕ್ತಸ್ರಾವವನ್ನು ತಡೆಗಟ್ಟ ಬಹುದಾಗಿದೆ. 

ಇದರಿಂದ ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಎದೆಹಾಲುಣಿಸುವ ತಾಯಂದಿರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್‌ ಕೂಡ ಕಡಿಮೆ. ಎದೆಹಾಲು ಉತ್ಪಾದಿಸಲು ತಾಯಿ ಹೆರಿಗೆ ಸಮಯದಲ್ಲಿ ಹೊಂದಿದ ಹೆಚ್ಚಿನ ತೂಕವು ಬಳಕೆಯಾಗುವುದರಿಂದ ತೂಕವು ಕಡಿಮೆ ಆಗಿ, ಮರಳಿ ತನ್ನ ಸೌಂದರ್ಯವನ್ನು ಪಡೆಯಬಹುದು. ಈ ಎಲ್ಲ ಉಪಯೋಗಗಳ ಬಗ್ಗೆ ತಾಯಂದಿರಿಗೆ ಮಾಹಿತಿ ಒದಗಿಸುವುದಲ್ಲದೆ, ಪರ್ಯಾಯ ಹಾಲಿನ ಹಾಗು ಕೃತಕ ಹಾಲನ್ನು ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗು ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಡ ಬೇಕು. ಹೆರಿಗೆಯ ನಂತರ ಆಕೆಗೆ ಅದರಲ್ಲೂ ಮೊದಲನೆಯ ಹೆರಿಗೆಯಾಗಿದ್ದಲ್ಲಿ ಎದೆ ಹಾಲುಣಿಸಲು ಸಹಾಯ ಬೇಕಾಗುವುದು. ಸಿಸೇರಿಯನ್ ಆಗಿ ಹೆರಿಗೆಯಾದ ತಾಯಂದಿರಿಗೂ ಎದೆಹಾಲುಣಿಸಲು ಸಹಾಯ ಬೇಕಾಗುವುದು. ಬಾಣಂತಿಯರನ್ನು ನೋಡಿಕೊಳ್ಳುವ ಸಹಾಯಕರಿಗೂ ಎದೆಹಾಲಿನ ಮಾಹಿತಿಯೊಂದಿಗೆ, ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. 

ಸಮುದಾಯ : ತಾಯಿ ಆಸ್ಪತ್ರೆಯಿಂದ ಹೋಗುವಾಗ ಅವಳಿಗೆ ಎದೆ ಹಾಲುಣಿಸಲು ಬೇಕಾದ ಎಲ್ಲ ಸಲಹೆ ಹಾಗು ಮಾಹಿತಿಯನ್ನು ನೀಡುವುದಲ್ಲದೆ, ಮನೆಗೆ ಹೋದ ನಂತರ ತಾಯಿಗೆ ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಯಾರ ಬಳಿಗೆ ಹೋಗಬೇಕು, ಯಾರಿಂದ ಸಹಾಯ ಪಡೆಯಬೇಕು ಎಂಬುದರ ಬಗ್ಗೆ ಸಲಹೆ ಕೊಡಬೇಕು. ದೂರವಾಣಿಯ ಮೂಲಕ ಸಲಹೆ ಪಡೆಯಲು ವ್ಯವಸ್ಥೆ ಕಲ್ಪಿಸಬೇಕು. ಎರಡು ವಾರಗಳ ನಂತರ ಒಮ್ಮೆ ಮನೆಗೆ ಭೇಟಿಕೊಟ್ಟು ತಾಯಿ-ಮಗು ಹೇಗಿದ್ದಾರೆ ಎಂಬುದನ್ನು ತಿಳಿಯಬೇಕು. ಯಶಸ್ವಿಯಾಗಿ ಹಾಲುಣಿಸಿ ಮಕ್ಕಳನ್ನು ಬೆಳೆಸಿದ ತಾಯಂದಿರು ಇತರೆ ತಾಯಂದಿರಿಗೆ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಉತ್ತೇಜಿಸಿ. ಸಮುದಾಯದಲ್ಲಿ, ಸಿಗುವ ಎಲ್ಲರ ಸಹಾಯದಿಂದ ತಾಯಿಗೆ ಸಂದರ್ಭಕ್ಕನುಗುಣವಾಗಿ ಬೆಂಬಲ ಸಿಗುವ ಹಾಗೆ ನೋಡಿಕೊಳ್ಳಬೇಕು. ಇದಕ್ಕೆ ಎಲ್ಲರೂ ಬದ್ದರಾಗಿ, ಹೊಣೆಗಾರಿಕೆಯಿಂದ ಕೆಲಸ ಮಾಡಿದರೆ ಶಿಶು ಮರಣದ ಪ್ರಮಾಣವನ್ನು ಕಡಿಮೆ ಮಾಡುಬಹುದಾಗಿದೆ ಹಾಗು ಎಲ್ಲ ತಾಯಂದಿರು ಯಶಸ್ವಿಯಾಗಿ ಹಾಲುಣಿಸಲು ಬೆಂಬಲಿಸಿದಂತಾಗುತ್ತದೆ.


ಡಾ. ಜಿ.ಎಸ್. ಲತಾ
ಮಕ್ಕಳ ತಜ್ಞರು,
ಎಸ್ಸೆಸ್‌ಐಎಂಎಸ್‌ ಆಸ್ಪತ್ರೆ, ದಾವಣಗೆರೆ.