ಗಿಡಮೂಲಿಕೆ ಅಮೃತ ಬಳ್ಳಿ

ಹೆಸರೇ ಸೂಚಿಸುವಂತೆ ಇದೊಂದು ಅಮೃತ ಸಮಾನವಾದ ಗಿಡಮೂಲಿಕೆಯಾಗಿದೆ. ಎಲ್ಲಾ ಪ್ರದೇಶಗಳಲ್ಲೂ, ಎಲ್ಲಾ ಕಾಲದಲ್ಲೂ ಬೆಳೆಯುವ ಅದ್ಭುತ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ಮನೆಯ ಅಂಗಳದಲ್ಲಿ ಅಲಂಕಾರಕ್ಕಾಗಿಯೂ ಬೆಳೆಸಲಾಗುತ್ತದೆ. ಬಹಳಷ್ಟು ಜನರು ಎಲೆಗಳನ್ನು ತಿನ್ನುತ್ತಾರೆ. ಆದರೆ, ಇದರ ಪೊರೆ ಬಿಟ್ಟ ಕಾಂಡ ಬಹಳ ಉಪಯುಕ್ತವಾಗಿದೆ. ದೇವಲೋಕದ ಗರುಡ ಅಮೃತವನ್ನು ಒಯ್ಯುವಾಗ ಒಂದೆ ರಡು ಹನಿಗಳು ಇದರ ಮೇಲೆ ಬಿದ್ದಿದೆ ಯಾದ್ದರಿಂದ ಔಷಧೀಯ ಗುಣ ಗಳು ಹೇರಳವಾಗಿವೆ ಎಂದು ಹೇಳಲಾಗುತ್ತದೆ. 

ಸ್ವತಃ ಧನ್ವಂತರಿಯೇ ಸಮುದ್ರ ಮಂಥನದಲ್ಲಿ ಹುಟ್ಟುವಾಗ ಈ ಬಳ್ಳಿಯನ್ನು ತಂದಿರುವುದರಿಂದ ದೈವೀಕ ಬಳ್ಳಿ ಎಂದು ಕರೆಯುತ್ತಾರೆ ಎಂದು ಪ್ರತೀತಿ. ದೇವತೆಗಳು ರಾಕ್ಷಸರು ಅಮೃತ ಕಳಶಕ್ಕಾಗಿ ಕಿತ್ತಾಡುವಾಗ ಹನಿಗಳು ಈ ಬಳ್ಳಿಯ ಮೇಲೆ ಬಿದ್ದಿದೆ ಎಂದೂ ಹೇಳುತ್ತಾರೆ. ಅದೇನೇ ಇರಲಿ ಭಾರತ, ಶ್ರೀಲಂಕಾ, ಚೀನಾ, ಫಿಲಿಪೈನ್ಸ್, ಆಫ್ರಿಕಾಗಳಲ್ಲಿಯೂ ವೇದಗಳ ಕಾಲದಿಂದಲೂ ಬಳಸುತ್ತಿದ್ದಾರೆ. ಯಕ್ಷ, ಕಿನ್ನರರು ಮುಪ್ಪು ಮುಂದೂಡಲು ಈ ಬಳ್ಳಿಯನ್ನು ಬಳಸುತ್ತಿದ್ದರೆಂದು  ನಂಬಲಾಗಿದೆ. 

ಆಯುರ್ವೇದ, ಪಾರಂಪರಿಕ ವೈದ್ಯ ಪದ್ಧತಿಗಳಲ್ಲಿ ಅಮೃತ ಬಳ್ಳಿಯನ್ನು ಹಲವಾರು ಕಾಯಿಲೆಗಳಿಗೆ ಅಮೃತಚೂರ್ಣ, ಅಮೃತ ಸತ್ವ, ಅಮೃತ ಕಷಾಯಗಳ ಮೂಲಕ ಬಳಸುತ್ತಾರೆ. ಜ್ವರ, ರಕ್ತದೊತ್ತಡ, ಮಧುಮೇಹಕ್ಕೆ, ಕಾಮಾಲೆಗೆ, ಅಗ್ನಿ ಮಾಂದ್ಯ, ಸ್ಥೂಲ ದೇಹಕ್ಕೆ, ಸ್ಮರಣಶಕ್ತಿ ವೃದ್ಧಿಗೆ, ವೀರ್ಯ ವೃದ್ಧಿಗೆ, ಕ್ಷಯ, ತೊನ್ನು, ಮೂಲವ್ಯಾಧಿಗೆ, ಕುಷ್ಠ ರೋಗ ತಡೆಗೆ, ಸಂಧಿವಾತ, ಸೋರಿಯಾಸಿಸ್ ನಿರ್ಮೂಲನೆಗೆ ಉಪಯೋಗಿಸಲಾಗುತ್ತದೆ. ಅಮೃತದ ಎಲೆಗಳನ್ನು ಅರೆದು ಚರ್ಮಕ್ಕೆ ಲೇಪಿಸುವುದರಿಂದ ಕಲೆಗಳು ಮಾಯವಾಗಿ ಚರ್ಮ ಕಾಂತಿಯುತವಾಗುತ್ತದೆ. ಪಶುವೈದ್ಯದಲ್ಲಿ ಕೂಡಾ ಬಳಸಲಾಗುತ್ತದೆ. 

ಆಧುನಿಕ ವಿಶ್ಲೇಷಕರು ಅಮೃತ ಬಳ್ಳಿಯನ್ನು antioxidant, antipyretic, antitoxic, antimicrobial, antidiabetic, anticancer, antistress, antiinflammatory, antiallergic, liver protective ಎಂದೆಲ್ಲಾ ಗುರುತಿಸಿದ್ದಾರೆ. 

ಅಮೃತದಲ್ಲಿ ಮುಖ್ಯವಾಗಿ ಪ್ಲೇಟ್ ಲೆಟ್‌ಗಳನ್ನು ಜಾಸ್ತಿ ಮಾಡುವ ಗುಣ ಇದೆ. ವರ್ಷಕ್ಕೆ ಒಂದೆರಡು ಬಾರಿ 10-12 ದಿನ ಇದರ ಕಷಾಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜಾಸ್ತಿ ತೆಗೆದುಕೊಳ್ಳಬಾರದು. ಅಮೃತದ ಇನ್ನೊಂದು ವಿಶೇಷತೆ ಎಂದರೆ ಬೇರೆ ಕಾಯಿಲೆಗಳಿಗೆ ಬೇರೆ ಔಷಧೀಯ ಸಸ್ಯಗಳ ಜೊತೆ ಸೇರಿಸಿ ಕೊಡುವುದರಿಂದ ಆ ಔಷಧಿಯ ಬಲ ಹೆಚ್ಚುತ್ತದೆ. ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ. ಈ ಬಳ್ಳಿ ಹತ್ತಿರ ಹಾವುಗಳು ಬರುವುದಿಲ್ಲ ಎಂದು ಕೂಡಾ ಹೇಳುತ್ತಾರೆ. ಹೀಗೆ ಇಷ್ಟೆಲ್ಲಾ ಉಪಯೋಗವಿರುವ ಬಳ್ಳಿಯನ್ನು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಬೆಳೆಸಿಕೊಳ್ಳುವುದು ಒಳ್ಳೆಯದು. ಕಡೇ ಪಕ್ಷ ಅದರ ಗಾಳಿ ಸೇವನೆಯಾದರೂ ಆಗುತ್ತದೆ.


ಮಮತಾ ನಾಗರಾಜ್
ಪಾರಂಪರಿಕ ವೈದ್ಯರು, ದಾವಣಗೆರೆ.