ಆರೋಗ್ಯಕರ ಹೃದಯ : ದೀರ್ಘ, ಸಂತೋಷ ಜೀವನ

Home ಲೇಖನಗಳು ಆರೋಗ್ಯಕರ ಹೃದಯ : ದೀರ್ಘ, ಸಂತೋಷ ಜೀವನ
ಆರೋಗ್ಯಕರ ಹೃದಯ : ದೀರ್ಘ, ಸಂತೋಷ ಜೀವನ

ಆರೋಗ್ಯವಂತ ಹೃದಯ, ಜೀವನದ ಅತ್ಯಂತ ಮೌಲ್ಯವಾದ ಉಡುಗೊರೆ. ಕಳೆದ ಕೆಲವು ದಶಕಗಳಲ್ಲಿ ನಮ್ಮ ಜೀವನ ಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಜಡ ಜೀವನ ಶೈಲಿಯು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿದೆ. ಹಾಗಾಗಿ ಈಗ ಹಿಂದಿಗಿಂತಲೂ ಹೃದಯದ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಡಬ್ಲ್ಯೂಹೆಚ್ಒ ಪ್ರಕಾರ ಹೃದಯ ಸಂಬಂಧಿ ಕಾಯಿಲೆಯು ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣವಾಗಿದೆ. 

ಇದನ್ನು ಗಣನೆಗೆ ತೆಗೆದುಕೊಂಡು ವಿಶ್ವ ಹೃದಯ ಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್ 29ರಂದು, ವಿಶ್ವ ಹೃದಯ ದಿನವನ್ನಾಗಿ ಆಚರಿಸಲು ಪ್ರೇರೇಪಿಸುತ್ತದೆ. ಅಂದು ಹೃದಯ ರಕ್ತನಾಳದ ಕಾಯಿಲೆ (Cardiovascular Disease) ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ತಲುಪಿಸುವ
ಪ್ರಯತ್ನ ನಡೆದಿರುತ್ತದೆ. ಇದು ಒಂದು ಜಾಗತಿಕ ಅಭಿಯಾನವಾಗಿದ್ದು, ಇದರ ಮೂಲಕ ಎಲ್ಲ ಜನತೆ ಒಗ್ಗೂಡಿಸಿ, ಹೃದಯವನ್ನು ಆರೋಗ್ಯಕರ ಹಾಗೂ ಹೃದಯ ಸಂಬಂಧಿ ಕಾಯಿಲೆಯನ್ನು ದೂರ ಮಾಡಲು ಉತ್ತೇಜನ ಹಾಗು ಪ್ರೇರೇಪಣೆ ನೀಡುವುದೇ ಗುರಿ.

ಈ ವರ್ಷದ ಥೀಮ್, `ಪ್ರತಿ ಹೃದಯಕ್ಕಾಗಿ. ಹೃದಯವನ್ನು ಬಳಸಿ’ (USE HEART FOR EVERY HEART) ಎಂದು. ಅದರಂತೆ ನಾವು ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ಹೇಗೆ ನಿರ್ವಹಿಸು ವುದು ಮತ್ತು ಅಸಮತೋಲನ ಆಹಾರ, ನಿಷ್ಕ್ರಿಯ ಧೂಮಪಾನ, ದೈಹಿಕ ಚಟುವಟಿಕೆಯ ಕೊರತೆ ಇದೆಲ್ಲದರ ಬಗ್ಗೆ ತಿಳಿದು, ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಾವು ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಸಂಭವಿಸುವ ಶೇ. 80ರಷ್ಟು ಸಾವನ್ನು ತಡೆಗಟ್ಟುವತ್ತ ಧೀರ ಹೆಜ್ಜೆ  ಇಟ್ಟ ಹಾಗೆ.

ಯುವ ಜನರ ಹೃದಯ ಸಂಬಂಧಿ ಕಾಯಿಲೆಯ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಅದರಲ್ಲಿ ಇರುವ ವಾಸ್ತವ ವಿಷಯಗಳನ್ನು ತಿಳಿದುಕೊಳ್ಳಲು ಇದು ಸರಿಯಾದ ಅವಕಾಶ.

ತಪ್ಪು ಕಲ್ಪನೆ : ಯುವಜನತೆ ವ್ಯಾಯಾಮ ಮಾಡುವ ಅಗತ್ಯವಿಲ್ಲ ಮತ್ತು ಪ್ರತಿದಿನವೂ ಅನಾರೋಗ್ಯಕರ ಆಹಾರವನ್ನು ಸೇವಿಸಬಹುದು.

ವಾಸ್ತವ : ಅಸಹಜ ಆಹಾರ ಪದ್ಧತಿ ಹಾಗು ಜಡ ಜೀವನ ಶೈಲಿಯು ಎಲ್ಲ ವಯಸ್ಸಿನ ಜನರಿಗೆ ಹಾನಿಕಾರಕವಾಗಿದೆ. ನಿಜಕ್ಕೂ ಹೇಳಬೇಕೆಂದರೆ, ಹೃದಯ ರಕ್ತ ನಾಳದ ಕಾಯಿಲೆ ಶುರುವಾಗುವುದೇ ಸಣ್ಣ ವಯಸ್ಸಿನಿಂದ. ಹಾಗಾಗಿ ತಮ್ಮ ಜೀವನ ಶೈಲಿ ಮತ್ತು ಆಹಾರ ಪದ್ದತಿಯನ್ನು ಬದಲಿಸಿಕೊಳ್ಳದಿದ್ದರೆ ಮುಂದೆ ಅವರಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವ ಅಪಾಯ ಹೆಚ್ಚಿನ ಮಟ್ಟದ್ದು.

ತಪ್ಪು ಕಲ್ಪನೆ : 50 ವರ್ಷ ಮೇಲ್ಪಟ್ಟವರು ಹೆಚ್ಚು ದುರ್ಬಲರಾಗಿರುವುದರಿಂದ, ಯುವಕರು ಹೃದ್ರೋಗಗಳ ಬಗ್ಗೆ ಚಿಂತಿಸಬಾರದು.

ವಾಸ್ತವ : ಇಂದಿನ ದಿನಗಳಲ್ಲಿ ಯಾರಿಗಾದರೂ ಹೃದ್ರೋಗ ಬರಬಹುದು. ಮಕ್ಕಳು ಮತ್ತು ಹದಿಹರೆಯದವರ ರಕ್ತನಾಳದಲ್ಲಿ `ಪ್ಲಾಕ್’ಗಳು ರೂಪುಗೊಂಡು ಕಡೆಯಲ್ಲಿ ಅವು ರಕ್ತನಾಳಗಳನ್ನು ಮುಚ್ಚಿಹಾಕುತ್ತವೆ. ಅಧಿಕ ತೂಕ, ಮಧುಮೇಹ ಮತ್ತು ವಿವಿಧ ರೀತಿಯ ಇತರೆ ಸಮಸ್ಯೆಗಳು ಹದಿಹರೆಯದವರಲ್ಲಿ ಮತ್ತು ಮಧ್ಯ ವಯಸ್ಕರಲ್ಲಿ ಕಂಡುಬರುವುದರಿಂದ, ಯುವಜನತೆ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಉತ್ತಮ.

ತಪ್ಪು ಕಲ್ಪನೆ : ಒಂದು ಸಾಮಾನ್ಯ ತಪ್ಪು ಕಲ್ಪನೆಯಂದರೆ, ಕುಟುಂಬದ ಸದಸ್ಯರಲ್ಲಿ ಹೃದ್ರೋಗ ಸಮಸ್ಯೆಗಳಿದ್ದರೆ, ಕುಟುಂಬದ ಇತರರು ಅದೇ ಹೃದ್ರೋಗ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು ಹಾಗೂ ಅವರೂ ಅದನ್ನೇ ಅನುಭವಿಸಬೇಕು.

ವಾಸ್ತವ : ಒಬ್ಬ ವ್ಯಕ್ತಿಯು ಹೃದ್ರೋಗ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದರೂ ಸಹ, ಜೀವನ ಆಯ್ಕೆಗಳಾದ ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಬಿಗಿಯಾದ ನಿಯಂತ್ರಣವು ಹೃದಯ ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ತಪ್ಪು ಕಲ್ಪನೆ : ಮಧುಮೇಹ ಹೊಂದಿರುವ ಜನರು, ಸಕ್ಕರೆಯನ್ನು  ನಿಯಂತ್ರಣದಲ್ಲಿಟ್ಟುಕೊಂಡರೂ ಸಹ, ಹೃದಯ ಸಂಬಂಧಿ  ಸಮಸ್ಯೆಗಳನ್ನು ಹೊಂದಬಹುದು.

ವಾಸ್ತವ : ಔಷಧಿಗಳ ಮೂಲಕ ಮಧುಮೇಹವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಗಳು ಹೃದ್ರೋಗವನ್ನು ಪಡೆಯುವ ಸಾಧ್ಯತೆ ಕಡಿಮೆ. ಅಧಿಕ ರಕ್ತದೊತ್ತಡ, ಅಧಿಕ ತೂಕ, ಆಲಸ್ಯ ಮತ್ತು ಧೂಮಪಾನ ಸೇರಿದಂತೆ ಮತ್ತಿತರ ಪರಿಸ್ಥಿತಿಗಳಿಂದ ವ್ಯಕ್ತಿಯ ಅಪಾಯಗಳು ಉಲ್ಬಣಗೊಳ್ಳಬಹುದು. 

ಕೆಳಗಿನ ಹಂತಗಳನ್ನು  ಅನುಸರಿಸಿದರೆ ಆರೋಗ್ಯಕರ ಹೃದಯವನ್ನು ಖಚಿತಪಡಿಸಿಕೊಳ್ಳಬಹುದು.

ನಮ್ಮದೇ ಆದಂತಹ ಲಕ್ಷ್ಮಣ ರೇಖೆ, ಎಲ್ಲವನ್ನೂ ಮಿತವಾಗಿ ಹೊಂದಿರುವುದು ಒಳ್ಳೆಯದು, ಯಾವುದನ್ನೂ ಅತಿಯಾಗಿ ಮಾಡುವುದನ್ನು ತಪ್ಪಿಸಿ, ಅದು ಹೆಚ್ಚಿನ ಪ್ರಮಾಣದ ಕೊಬ್ಬು, ಆಲ್ಕೋಹಾಲ್, ಉಪ್ಪು, ಕಾರ್ಬೋಹೈಡ್ರೇಟ್‌ಗಳು, ಸಿಹಿ ತಿಂಡಿಗಳು, ಇತ್ಯಾದಿ. ನಿಮ್ಮ ಜೀವನ ಶೈಲಿಯ ಆಧಾರದ ಮೇಲೆ ಆಹಾರದ ಸಲಹೆಗಳಿಗಾಗಿ ನಿಮ್ಮ ಪೌಷ್ಟಿಕ ತಜ್ಞ / ಆಹಾರತಜ್ಞರೊಂದಿಗೆ ಮಾತನಾಡಿ.

ದಿನನಿತ್ಯದ ತಪಾಸಣೆಗಳು : ನಿಮ್ಮ ವೈದ್ಯರೊಂದಿಗೆ ಸಮಾಲೋಚನೆಯು ಪ್ರತಿ ವರ್ಷವೂ ನಿರ್ಣಾಯಕವಾಗಿರಲಿ. ನಮಗೆಲ್ಲರಿಗೂ ತಿಳಿದಿರುವಂತೆ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ. ನೀವು ಹೃದಯ ಸಂಬಂಧಿ ಕಾಯಿಲೆಗಳು ಅಥವಾ ಮಧುಮೇಹ ಕುಟುಂಬದ ಇತಿಹಾಸವನ್ನು ಹೊಂದಿದ್ದರೆ ನಿಮ್ಮ ವೈದ್ಯರಲ್ಲಿ ಮೊದಲೇ ಗುರುತಿಸಿಕೊಳ್ಳಿ. ಅವರಿಗೂ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ಮಧುಮೇಹಿಗಳಲ್ಲಿ ನೆನಪಿಡಿ, ಹೃದಯಾಘಾತವು ಸಾಮಾನ್ಯವಾಗಿ ಮೌನವಾಗಿರುತ್ತದೆ ಅಂದರೆ ಅವರಿಗೆ ಹೃದಯಾಘಾತವಾದಾಗ ಎದೆನೋವಿಗಿಂತ ಬೆವರುವುದು, ವಾಂತಿಯಾಗುವುದು ಸಾಮಾನ್ಯ.

ದೈಹಿಕ ಚಟುವಟಿಕೆಯು ಗಮನಾರ್ಹ : ನಿಮ್ಮನ್ನು ನೀವು  ಸಕ್ರಿಯವಾಗಿ ಇರಿಸಿಕೊಳ್ಳಿ. ನೀವು ಎಷ್ಟೇ ದಣಿದಿದ್ದರೂ, ವ್ಯಾಯಾಮ ಮಾಡುವುದು ಮುಖ್ಯ, ಏಕೆಂದರೆ ಕೇವಲ ಆಹಾರ ಕ್ರಮವು ಸಹಾಯ ಮಾಡುವುದಿಲ್ಲ. 

ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ವಿರಮಿಸಿ : ನಮ್ಮ ಜೀವನವು ಒತ್ತಡದಿಂದ ಕೂಡಿದೆ. ನಮ್ಮ ದೇಹ ಮತ್ತು ಮನಸ್ಸನ್ನು ವಿರಮಿಸಲು, ವಿಶ್ರಾಂತಿ ಪಡೆಯಲು ಸಮಯವನ್ನು ಕಂಡುಕೊಳ್ಳಿ. ನಿಮ್ಮ ಅಂಗಾಂಗಗಳಿಗೆ ನೀವು ಅತಿಯಾದ ಕೆಲಸ ಮಾಡಿದರೆ, ನಿಮ್ಮ ಹೃದಯ, ರಕ್ತನಾಳಗಳು, ಮೆದುಳು ಇತ್ಯಾದಿಗಳು ಅಂತಿಮವಾಗಿ ಬಳಲುತ್ತವೆ ಮತ್ತು ಕುಗ್ಗುತ್ತವೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. 

ತಿಳಿದಿರಲಿ : ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯಾಘಾತ, ಇತ್ಯಾದಿಗಳಂತಹ ಸಾಮಾನ್ಯ ಹೃದಯ ಕಾಯಿಲೆಗಳ ಲಕ್ಷಣಗಳನ್ನು ಹೇಗೆ ಗುರುತಿಸುವುದು ಮತ್ತು ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿಯಿರಿ. ತಕ್ಷಣ ಕಾರ್ಯನಿರ್ವಹಿಸಿ ಮತ್ತು ಸೂಕ್ತ ಕ್ರಮಗಳನ್ನು ತೆಗೆದು ಕೊಳ್ಳುವ ಮೂಲಕ ನಿಮ್ಮ ಪ್ರೀತಿ ಪಾತ್ರರ ಜೀವವನ್ನು ಉಳಿಸಿ.

– ಡಾ|| ಲೋಹಿತಾಶ್ವ ಎಸ್. ಬಿ 

ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್,

ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯ

ಮೈ ಹಾರ್ಟ್ ಕೇರ್ ಕ್ಲಿನಿಕ್,
ಪಿ.ಜೆ. ಬಡಾವಣೆ, ದಾವಣಗೆರೆ. 

ಮೊ. : 9902877098