ಅಲ್ಲಿಯ ಬರ, ಇಲ್ಲಿಯ ನೆರೆ ಸೇರಿ ‘ಸಾಮಾನ್ಯ‌’

Home ಲೇಖನಗಳು ಅಲ್ಲಿಯ ಬರ, ಇಲ್ಲಿಯ ನೆರೆ ಸೇರಿ ‘ಸಾಮಾನ್ಯ‌’
ಅಲ್ಲಿಯ ಬರ, ಇಲ್ಲಿಯ ನೆರೆ ಸೇರಿ ‘ಸಾಮಾನ್ಯ‌’

– ಎಸ್.ಎ. ಶ್ರೀನಿವಾಸ್

2022ರ ಮುಂಗಾರು ಮಳೆಯ ಅವಧಿ ಬಹುತೇಕ ಮುಕ್ಕಾಲು ಪಾಲು ಮುಗಿದಿದೆ. ಕೇಂದ್ರ ಹವಾಮಾನ ಇಲಾಖೆಯ ವರದಿಯ ಪ್ರಕಾರ ಸೆಪ್ಟೆಂಬರ್‌ ಮೊದಲ ವಾರದವರೆಗೆ ದೇಶದಲ್ಲಿ ಸರಾಸರಿ 795.7 ಮಿ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ ಸರಾಸರಿಯ ಮಳೆಯ ಪ್ರಮಾಣ 760.6 ಮಿ.ಮೀ. ಆಗಿದೆ. ಹೀಗಾಗಿ ಒಟ್ಟಾರೆ ಮಳೆಯ ಪ್ರಮಾಣವನ್ನು ಪರಿಗಣಿಸಿದಾಗ ಭಾರತ ದಲ್ಲಿ ಮಳೆ ‘ಸಾಮಾನ್ಯ’ ಆಗಿದೆ. ಈ ತಿಂಗಳ ಅಂತ್ಯಕ್ಕೆ ಮುಂಗಾರು ಅವಧಿ ಮುಗಿಯಲಿದ್ದು, ಹವಾಮಾನ ಇಲಾಖೆ ಈ ವರ್ಷದ ಮಳೆ ‘ಸಾಮಾನ್ಯ’ ಎಂದು ಘೋಷಿಸಿದರೆ ಅಚ್ಚರಿ ಪಡಬೇಕಿಲ್ಲ.

ದೀರ್ಘಾವಧಿ ಸರಾಸರಿಯ ಶೇ.10ಕ್ಕಿಂತ ಹೆಚ್ಚು ಇಲ್ಲವೇ ಕಡಿಮೆ ಮಳೆಯಾದರೆ, ಅದನ್ನು ‘ಸಾಮಾನ್ಯ’ ಎಂದು ಪರಿಗಣಿಸಲಾಗುತ್ತದೆ. ಸೆಪ್ಟೆಂ ಬರ್ ಮೊದಲ ವಾರದವರೆಗೆ ದೇಶದಲ್ಲಿ ಮಳೆಯ ಪ್ರಮಾಣ ದೀರ್ಘಾವಧಿ ಸರಾಸರಿಗಿಂತ ಶೇ.5ರಷ್ಟು ಹೆಚ್ಚಾಗಿದೆ. ಹೀಗಾಗಿ ಹವಾಮಾನ ಇಲಾಖೆಯ ವ್ಯಾಖ್ಯಾನದ ಪ್ರಕಾರ 2022 ಮುಂಗಾರು ಮಳೆ ‘ಸಾಮಾನ್ಯ’ದ ಮಿತಿಯಲ್ಲೇ ಇದೆ.

ಕೆರೆ, ಅಣೆಕಟ್ಟೆಗಳಿರುವುದು ಕೇವಲ ನೀರು ತುಂಬಿಕೊಳ್ಳಲಿಕ್ಕಲ್ಲ….

ಅಣೆಕಟ್ಟೆಗಳು ಹಾಗೂ ಕೆರೆಗಳನ್ನು ಕೇವಲ ನೀರು ತುಂಬಿಕೊಳ್ಳುವುದಕ್ಕಷ್ಟೇ ಅಲ್ಲದೇ, ಪ್ರವಾಹ ನಿಯಂತ್ರಣಕ್ಕೂ ಬಳಸಿಕೊಳ್ಳಬೇಕಿದೆ. ಅಣೆಕಟ್ಟೆ ನಿರ್ಮಾಣದ ಮೂಲ ಉದ್ಧೇಶ ಕೇವಲ ನೀರಿನ ಸಂಗ್ರಹವಲ್ಲ. ಅತಿ ಮಳೆಯಾದಾಗ ಪ್ರವಾಹದ ನೀರು ನದಿಯಲ್ಲಿ ಹರಿದು ಜನರಿಗೆ ತೊಂದರೆಯಾಗದಂತೆ ತಡೆಯಲು ಅಣೆಕಟ್ಟೆಗಳು ಹಾಗೂ ಕೆರೆಗಳನ್ನು ಬಳಸಿಕೊಳ್ಳಬಹುದು. ಬದಲಾಗುತ್ತಿರುವ ಹವಾಮಾನದಿಂದಾಗಿ ಬರ ಹಾಗೂ ಪ್ರವಾಹಗಳೆರಡೂ ಹೆಚ್ಚಾಗಬಹುದು ಎಂಬ ಕಳವಳ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೀತಿ ರೂಪಿಸುವವರು ಜಲ ಸಂಗ್ರಹದ ನೀತಿಗಳನ್ನೂ ಸೂಕ್ತವಾಗಿ ರೂಪಿಸುವ ಅಗತ್ಯವಿದೆ.

ಆದರೆ, ಈ ವರ್ಷದ ಮಳೆಯನ್ನು ಸಾಮಾನ್ಯ ಎಂದು ಪರಿಗಣಿಸಲು ಸಾಧ್ಯವೇ? ಒಂದು ವೇಳೆ ಮಳೆ ಸಾಮಾನ್ಯ ಎಂದಾಗಿದ್ದರೆ ಭಾರತ ಅಕ್ಕಿ ಹಾಗೂ ಗೋಧಿಯ ರಫ್ತಿನ ಮೇಲೆ ನಿಷೇಧ ಹೇರುವ ಪರಿಸ್ಥಿತಿ ಬರುತ್ತಿರಲಿಲ್ಲ. ಬೆಂಗಳೂರು ನೀರಿನಲ್ಲಿ ಮುಳುಗುತ್ತಿರಲಿಲ್ಲ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್‌ಗಳು ಬರದಿಂದ ಒಣಗುತ್ತಿರಲಿಲ್ಲ. ಮಣಿಪುರ, ತ್ರಿಪುರ ಹಾಗೂ ಮಿಜೋರಾಂಗಳೂ ಬರದಿಂದ ಬಳಲುತ್ತಿವೆ. ಈ ಬಾರಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.70ರಷ್ಟು ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ.55ರಷ್ಟು ಹೆಚ್ಚು ಮಳೆ ಸುರಿದಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳಗಳ ಕೆಲ ಭಾಗಗಳಲ್ಲಿ ಶೇ.40ರವರೆಗೆ ಕಡಿಮೆ ಮಳೆಯಾಗಿದೆ. ಇಡೀ ಭಾರತದ ಮಳೆ ಸರಾಸರಿಯನ್ನು ಲೆಕ್ಕ ಹಾಕಿದಾಗ, ಕರ್ನಾಟಕದ ಅತಿ ಮಳೆಯು ಉತ್ತರ ಭಾಗದ ಕೊರತೆಯನ್ನು ನಿವಾರಿಸಿ ಮಳೆ ‘ಸಾಮಾನ್ಯ’ ಎಂಬಂತಾಗುತ್ತದೆ!

ಒಂದು ವೇಳೆ ಬ್ರಿಟಿಷರು ಸ್ವಾತಂತ್ರ್ಯ ನೀಡುವಾಗ ಹಿಂದೂಸ್ತಾನವನ್ನು ಒಡೆಯದೇ ಹೋಗಿದ್ದಿದ್ದರೆ, ಈಗ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಸುರಿದಿರುವ ಮಳೆಯನ್ನೂ, ಉತ್ತರಪ್ರದೇಶದ ಮಳೆಯನ್ನೂ ಸರಿದೂಗಿಸಿ ಮಳೆಯನ್ನು ‘ಸಾಮಾನ್ಯ’ ಎನ್ನಲಾಗುತ್ತಿತ್ತೋ ಏನೋ?! ಸಿಂಧ್‌ನಲ್ಲಿ ಸುರಿದ ಮಳೆಯನ್ನು ಉತ್ತರ ಪ್ರದೇಶದ ಬರದ ಜೊತೆ ಸೇರಿಸಲಾಗದು ಎನ್ನುವುದಾದರೆ, ಕರ್ನಾಟಕದ ನೆರೆಯನ್ನು ಉತ್ತರ ಪ್ರದೇಶದ ಬರದ ಜೊತೆ ಸೇರಿಸುವುದು ಎಷ್ಟು ಸರಿ?

ಇತ್ತೀಚಿನ ವರ್ಷಗಳಲ್ಲಿ ಪರಿಸರ ಬದಲಾವಣೆಯ ಕಾರಣದಿಂದ ಸೀಮಿತ ಅವಧಿಯಲ್ಲಿ ಭಾರೀ ಮಳೆ ಸುರಿದು ಉಳಿದ ಅವಧಿಯಲ್ಲಿ ಒಣ ಹವೆ ಇರುವುದು ಹೆಚ್ಚಾಗುತ್ತಿದೆ. ಅದೇ ರೀತಿ ಒಂದು ಕಡೆ ಧಾರಾಕಾರ ಮಳೆಯಾಗಿ ಇನ್ನೊಂದು ಕಡೆ ಬರ ಕಂಡು ಬರುವುದೂ ಕಂಡು ಬರುತ್ತಿದೆ. ಇದೆಲ್ಲವನ್ನೂ ಪರಿಗಣಿಸಿಯೇ ಈ ಬಾರಿಯ ಮಳೆ ಸಾಮಾನ್ಯವೋ, ಅಸಾಮಾನ್ಯವೋ ಎಂಬುದನ್ನು ಪರಿಗಣಿಸಬೇಕಾಗುತ್ತದೆ.

ಪ್ರತಿಯೊಂದು ಹವಾಮಾನ ವಿಭಾಗವನ್ನೂ ಪ್ರತ್ಯೇಕವಾಗಿ ಪರಿಗಣಿಸಬೇಕಿದೆ. ಒಂದು ವಿಭಾಗದಲ್ಲಿ ಸುರಿದ ಮಳೆಯನ್ನು ಮತ್ತೊಂದು ವಿಭಾಗದ ಲೆಕ್ಕಾಚಾರದಲ್ಲಿ ಸೇರಿಸುವುದನ್ನು ಇನ್ನಾದರೂ ನಿಲ್ಲಿಸಬೇಕು. ಇಲ್ಲವಾದರೆ ಹವಾಮಾನ ವೈಪರೀತ್ಯದ ಕುರಿತು ಸ್ಪಷ್ಟ ಚಿತ್ರಣ ಸಿಗುವುದಿಲ್ಲ. 2022ರ ಅತಿರೇಕದ ಮಳೆಯನ್ನೂ ಸಾಮಾನ್ಯ ಎಂದು ಹೇಳುವುದು ಸಾಮಾನ್ಯ ಜ್ಞಾನದ ಮೇಲೆ ಮಾಡುವ ಪ್ರಹಾರವಾಗುತ್ತದೆ.