ಅಭಿವ್ಯಕ್ತಿಗೆ `ಸ್ವಾತಂತ್ರ್ಯ’ ಕೊಡಲು ಸಮಾಜ ಸಿದ್ಧವೇ…?

ಅಭಿವ್ಯಕ್ತಿಗೆ `ಸ್ವಾತಂತ್ರ್ಯ’ ಕೊಡಲು ಸಮಾಜ ಸಿದ್ಧವೇ…?

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕುರಿತ ಪುಸ್ತಕವಾದ `ಸಿದ್ದು ನಿಜ ಕನಸುಗಳು’ ಬಿಡುಗಡೆ ಮಾಡದಂತೆ ಬೆಂಗಳೂರಿನ ನ್ಯಾಯಾಲಯ ಇತ್ತೀಚೆಗೆ ನಿರ್ಬಂಧಿಸಿದೆ. ಈ ಸುದ್ದಿ ನೋಡಿದಾಗ ನನ್ನ ಮಿತ್ರರೊಬ್ಬರು, ವ್ಯಕ್ತಿಗಳ ತೇಜೋವಧೆ ಮಾಡುವ ಪುಸ್ತಕ ಪ್ರಕಟಿಸಲು ಭಾರತದ ಕಾಯ್ದೆಯಲ್ಲಿ ಅವಕಾಶವಿದೆಯೇ? ಎಂಬುದು. 

ಈ ಪ್ರಶ್ನೆ ಕೇಳಿದಾಗ ನನಗೆ ನೆನಪಿಗೆ ಬಂದಿದ್ದು ಕೆಲ ವರ್ಷಗಳ ಹಿಂದಿನ ದಲಿತ ಲೇಖಕ ಹಾಗೂ ವಿಚಾರವಾದಿ ಕಾಂಚ ಇಲಯ್ಯ ಅವರು ಬರೆದಿದ್ದ ಪುಸ್ತಕದ ಪ್ರಕರಣ. ಅವರು `ಸಾಮಾಜಿಕ ಸ್ಮಗ್ಲುರುಲು ಕೊಮಟೊಲ್ಲು’ ಎಂಬ ಪುಸ್ತಕ ಬರೆದಿದ್ದರು. ಈ ಪುಸ್ತಕದ ಶೀರ್ಷಿಕೆಯ ಅರ್ಥ ಆರ್ಯ ವೈಶ್ಯ ಸಮುದಾಯದವರು ಸಾಮಾಜಿಕ ಕಳ್ಳಸಾಗಣೆದಾರರು ಎಂಬುದಾಗಿತ್ತು.

ಸಮುದಾಯವೊಂದನ್ನು ಆಧಾರ ರಹಿತವಾಗಿ ಅವಹೇಳನ ಮಾಡಲಾಗಿದೆ. ಈ ಪುಸ್ತಕ ನಿಷೇಧಿಸಬೇಕು ಎಂದು ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಪುಸ್ತಕ ನಿಷೇಧಿಸಲಾಗದು ಎಂದು ಹೇಳಿತ್ತು.

ಪ್ರತಿಯೊಬ್ಬ ಲೇಖಕ, ಇಲ್ಲವೇ ಬರಹಗಾರ ತನ್ನ ವಿಚಾರಗಳನ್ನು ಮುಕ್ತವಾಗಿ ಹೇಳುವ ಹಾಗೂ ಸಮರ್ಪಕವಾಗಿ ತಿಳಿಸುವ ಮೂಲಭೂತ ಹಕ್ಕು ಹೊಂದಿದ್ದಾನೆ. ಲೇಖಕ ಹಾಗೂ ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರ್ಯ ಕಡಿತವನ್ನು ಎಂದೂ ಹಗುರವಾಗಿ ಪರಿಗಣಿಸಬಾರದು ಎಂದು ಕೋರ್ಟ್ ತಿಳಿಸಿತ್ತು.

ನಾವು ವಿವರಗಳನ್ನು ಉಲ್ಲೇಖಿಸಲು ಬಯಸುವುದಿಲ್ಲ. ಲೇಖಕರೊಬ್ಬರು ಪುಸ್ತಕ ಬರೆದಾಗ, ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಪುಸ್ತಕ ನಿಷೇಧಿಸುವುದು ಸಂವಿಧಾನದ 32ನೇ ವಿಧಿಗೆ ಸೂಕ್ತವಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಬಾರದೆಂಬ ಸುಪ್ರೀಂ ಕೋರ್ಟ್‌ನ ಈ ತೀರ್ಪು ನನ್ನ ಪ್ರಕಾರ ಅತ್ಯುನ್ನತ ಆದರ್ಶವಾಗಿದೆ. ಯಾವುದೇ ವ್ಯಕ್ತಿ ತನಗೆ ಇಷ್ಟವಾಗದ ಅಭಿಪ್ರಾಯ ಕೇಳಿದ ತಕ್ಷಣ ರೊಚ್ಚಿಗೇಳುವುದು, ಆಕ್ರೋಶಗೊಳ್ಳುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಆದರೆ, ಇದೇ ತೀರ್ಪು ಉಳಿದ ಎಲ್ಲ ಪ್ರಕರಣಗಳಿಗೂ ಅನ್ವಯವಾಗುವಂತಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ನನ್ನ ಭಾವನೆಗಳಿಗೆ ಧಕ್ಕೆಯಾಯಿತು ಎಂದು ಹೇಳಿಕೊಂಡು ಜನ ಪೊಲೀಸರಲ್ಲಿ ದೂರು ನೀಡುವ, ಇಲ್ಲವೇ ನ್ಯಾಯಾಲಯದ ಮೊರೆ ಹೋಗುವ ಪದ್ಧತಿಯಾದರೂ ತಪ್ಪುತ್ತಿತ್ತು. ದುರದೃಷ್ಟವಶಾತ್ ಆ ರೀತಿ ಆಗಲಿಲ್ಲ.

ಇತ್ತೀಚೆಗಷ್ಟೇ ನಡೆದ ನೂಪುರ್ ಶರ್ಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಟಿಪ್ಪಣಿ ಆಸಕ್ತಿಕರವಾಗಿತ್ತು. ಶರ್ಮ ಅವರ ಮಾತುಗಳು ಇಡೀ ದೇಶದಲ್ಲಿ ಬೆಂಕಿ ಹತ್ತಿಕೊಳ್ಳಲು ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಟಿಪ್ಪಣಿ ಮಾಡಿದ್ದರು.

ನಿಜ ಬೆಂಕಿ ಹತ್ತಿಕೊಂಡಿರಬಹುದು. ಆದರೆ, ಬೆಂಕಿ ಹತ್ತಿಕೊಳ್ಳಲು ಮೂರು ಅಂಶಗಳು ಬೇಕು ಎಂದು ವಿಜ್ಞಾನ ಹೇಳುತ್ತದೆ. ಇಂಧನ, ಆಕ್ಸಿಜನ್ ಹಾಗೂ ಶಾಖ. ಇವು ಮೂರು ಇದ್ದರಷ್ಟೇ ಬೆಂಕಿ ಕಾಣಿಸಿಕೊಳ್ಳುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರುವವರು ಆಡುವ ಮಾತುಗಳು, ಕೇಳಿಸಿಕೊಂಡವರು ಅರ್ಥ ಮಾಡಿಕೊಳ್ಳುವ ರೀತಿ ಹಾಗೂ ನಂತರ ಎಸಗುವ ಕೃತ್ಯಗಳು ಸೇರಿಕೊಂಡು ಬೆಂಕಿ ಹತ್ತಿಕೊಳ್ಳುತ್ತದೆ.

2017ರ ಕಾಂಚ ಇಲಯ್ಯ ಅವರ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿಯಲಾಗಿತ್ತು. ಇದು ಅತ್ಯಂತ ಮಹತ್ವದ್ದು. ಏಕೆಂದರೆ ವ್ಯಕ್ತಿಯೋರ್ವ ಆಡುವ ಯಾವ ಮಾತು ಬೆಂಕಿಗೆ ಕಾರಣವಾಗುತ್ತದೆ ಎಂಬುದನ್ನು ಯಾರೂ ಊಹಿಸಲಾರರು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದೇ ಕೆಲವರಿಗೆ ಆಕ್ರೋಶ ತರಬಹುದು. ಹಾಗೆಂದು ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ್ಯಗೊಳಿಸಲಾದೀತೇ?

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಕೆನ್ನೆಗೆ ಹಾಲಿವುಡ್ ನಟ ರಿಚರ್ಡ್ ಗೆರೆ ಅವರು 2007ರಲ್ಲಿ ವೇದಿಕೆಯ ಮೇಲೆ ಮುತ್ತಿಟ್ಟಿದ್ದನ್ನು ಆಕ್ಷೇಪಿಸಿ, ಮುಂಬೈ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದಲ್ಲಿ ಹುರುಳಿಲ್ಲ ಎಂದು 15 ವರ್ಷಗಳ ನಂತರ ತೀರ್ಪು ಬಂದಿದೆ. ಮುತ್ತಿಟ್ಟವರು, ಮುತ್ತು ಕೊಡಿಸಿಕೊಂಡವರು ಇಬ್ಬರಿಗೂ ಸಮಸ್ಯೆ ಇಲ್ಲ. ದೇಶದ 140 ಕೋಟಿ ಜನರಲ್ಲಿ ಯಾರೋ ಕೆಲವರಿಗೆ ನೋವಾಯಿತಂತೆ. ಹೀಗಾಗಿ ಪ್ರಕರಣ ದಾಖಲಿಸಲಾಯಿತು.

140 ಕೋಟಿ ಜನರಲ್ಲಿ ಯಾರಿಗೆ ಯಾವ ವಿಷಯಕ್ಕೆ ಯಾವಾಗ ಯಾವ ರೀತಿ ನೋವಾಯಿತು? ಎಂಬುದನ್ನು ಯಾವ ರೀತಿ ಕಂಡುಕೊಳ್ಳಬೇಕು? ಒಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಡುತ್ತಲೇ, ಮತ್ತೊಂದೆಡೆ ನನ್ನ ಭಾವನೆಗಳಿಗೆ ಧಕ್ಕೆಯಾಗಬಾರದು ಎಂಬ ಹಕ್ಕು ಕೊಡುವುದು ಎಷ್ಟರ ಮಟ್ಟಿಗೆ ಸರಿ? ಎರಡರಲ್ಲಿ ಒಂದು ಮಾತ್ರ ಇರಲು ಸಾಧ್ಯ. 

ಅಭಿವ್ಯಕ್ತಿ ಹಾಗೂ ಭಾವನೆ ಇವುಗಳಲ್ಲಿ ಯಾವುದು ಬೇಕೆಂಬುದನ್ನು ದೇಶದ ಮಹಾಜನತೆ ನಿರ್ಧರಿಸುವುದರ ಮೇಲೆ ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭವಿಷ್ಯ ನಿರ್ಧಾರವಾಗಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿರಬಹುದು. ಅಭಿವ್ಯಕ್ತಿಗೆ ಸ್ವಾತಂತ್ರ್ಯ ನೀಡುವಲ್ಲಿ ನಾವು ಇನ್ನೂ ಸಾಕಷ್ಟು ದೂರ  ಸಾಗಬೇಕಿದೆ.


ಎಸ್.ಎ. ಶ್ರೀನಿವಾಸ್‌
[email protected]