ಸಮ್ಮೇಳನದಲ್ಲಿ ಸ್ಥಳೀಯ ಸಾಹಿತಿಗಳಿಗೆ ಅವಮಾನ

ಸಮ್ಮೇಳನದಲ್ಲಿ ಸ್ಥಳೀಯ ಸಾಹಿತಿಗಳಿಗೆ ಅವಮಾನ

ರಾಣೇಬೆನ್ನೂರು,ಜ.17-  ಹಾವೇರಿ   ಸಾಹಿತ್ಯ ಸಮ್ಮೇಳನದಲ್ಲಿ, ಈ ನಾಡು ಕಂಡ ಖ್ಯಾತ ಸಾಹಿತಿ, ಪತ್ರಕರ್ತ  ನಾಡೋಜ ಡಾ. ಪಾಟೀಲ ಪುಟ್ಟಪ್ಪನವರಿಗೆ ಮತ್ತು ಸ್ಥಳೀಯ ಸಾಹಿತಿಗಳಿಗೆ ರಾಜ್ಯಾಧ್ಯಕ್ಷ ಮಹೇಶ ಜೋಶಿ ಮತ್ತು ಅವರ ಪಟಾಲಂ ಹಾಗೂ ಜಿಲ್ಲಾಡಳಿತ ಮಾಡಿದ ಅವಮಾನ, ಪಕ್ಷಪಾತ, ಜಾತೀಯತೆಯನ್ನು ಎಂದಿಗೂ ಸಹಿಸಲಿಕ್ಕಾಗದು ಎಂದು ರೈತ ಹೋರಾಟಗಾರ, ಪ್ರಗತಿಪರ ಚಿಂತಕ ರವೀಂದ್ರಗೌಡ ಪಾಟೀಲ ಎಚ್ಚರಿಸಿದರು.

ಇಲ್ಲಿನ ಎಸ್.ಎಚ್. ನಲವಾಗಲ ಸ್ಪರ್ಧಾ ವಿಕಾಸ ಕರಿಯರ್ ಅಕಾಡೆಮಿಯ ಸಭಾ ಭವನದಲ್ಲಿ ರೈತ ಹೋರಾಟಗಾರರು, ಪ್ರಗತಿಪರ ಚಿಂತಕರು, ಸಾಹಿತಿಗಳು ಸೇರಿ ಏರ್ಪಡಿಸಿದ್ದ ಪಾಟೀಲ ಪುಟ್ಟಪ್ಪನವರ 103 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಟೀಲರು, ಜಿಲ್ಲೆಯ ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪನವರ ತವರು ಜಿಲ್ಲೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪಾಟೀಲರಿಗೆ ಅವಮಾನಿಸಲಾಗಿದೆ ಎಂದರು.

ಪಾಪು  ಹೆಸರಿನಲ್ಲಿ ನೆನಪು ಉಳಿಯುವಂತಹ ಕಾರ್ಯಕ್ರಮದ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯ ಮಂಡನೆಯಲ್ಲಿ ಯಾವುದೇ ವಿಷಯವನ್ನು ತೆಗೆದುಕೊಳ್ಳದೆ ಮತ್ತು ಸ್ಥಳೀಯ ಸಾಹಿತಿಗಳಿಗೆ ಆದ್ಯತೆ ನೀಡದೆ, ಸಾಹಿತಿಗಳೇ ಅಲ್ಲದವರ ದಂಡನ್ನು ಕಟ್ಟಿಕೊಂಡು ಪವಿತ್ರವಾದ ಸಾಹಿತ್ಯ ಕ್ಷೇತ್ರದಲ್ಲಿ ಜಾತಿ ಮತ್ತು ಪಕ್ಷಪಾತ ಮಾಡಿ ಆಡಳಿತ ಪಕ್ಷದವರೊಂದಿಗೆ ಸೇರಿ ಮಾಡಬಾರದ್ದನ್ನು ಮಾಡಿ, ಈ ಸಾಹಿತ್ಯ ಕ್ಷೇತ್ರವನ್ನೇ ರಾಜಕೀಯ ಕ್ಷೇತ್ರವನ್ನಾಗಿ ಮಾಡಿ ಅಪವಿತ್ರಗೊಳಿಸಿದ ಕೀರ್ತಿ ಮಹೇಶ ಜೋಶಿ ಮತ್ತು ಜಿಲ್ಲಾಧಿಕಾರಿ ನಂದನಮೂರ್ತಿ ಅವರಿಗೆ ಸಲ್ಲುತ್ತದೆ.ಸಾಹಿತ್ಯದ ಗಂಧ ಗಾಳಿ ಇಲ್ಲದವರು ತಾಲೂಕಾಧ್ಯಕ್ಷ, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷರಾಗಿ ಸಾಹಿತ್ಯದ ಮರ್ಯಾದೆಯನ್ನು ತೆಗೆದಿದ್ದಾರೆ ಎಂದು ಆರೋಪಿಸಿದರು.

ಸಾಹಿತ್ಯ ಸಮ್ಮೇಳನವನ್ನು ಈ ಹಿಂದೆ ಹಾವೇರಿಯಲ್ಲಿ ನಡೆಸುವ ಬಗ್ಗೆ ಗೊಂದಲವಾಗಿ ಹಾಸನ ಜಿಲ್ಲೆಗೆ ವರ್ಗವಾಗಿ ಮತ್ತೆ ಎರಡನೇ ಬಾರಿ ಒದಗಿದ ಅವಕಾಶ ಕೈತಪ್ಪಿ, ನಮ್ಮ ಹಾವೇರಿಯ ಮರ್ಯಾದೆ ಹರಾಜು ಆಗಬಾರದೆಂಬ ಉದ್ದೇಶದಿಂದ ಸುಮ್ಮನಿದ್ದೇವೆಯೇ ಹೊರತು, ಬೇರೆ ಯಾವುದಕ್ಕ್ಕೂ ಅಲ್ಲ, ಪರಿಷತ್ ಮತ್ತು ಜಿಲ್ಲಾಡಳಿತ ಸೇರಿ ಸಾಕಷ್ಟು ಹಣದ ಅವ್ಯವಹಾರ ಮಾಡಿದ್ದು, ಸಾರ್ವಜನಿಕರಿಗೆ ಹಣಕಾಸಿನ ಮಾಹಿತಿ ನೀಡಬೇಕು.

ಸಾಕಷ್ಟು ಜನಸಮೂಹ ಸೇರಿತ್ತು ಎನ್ನುವ ಅಹಂಕಾರ ಬೇಡ, ಜನ ಸೇರಿರುವ ಸಮ್ಮೇಳನದಲ್ಲಿ ಸರಿಯಾದ ರೀತಿಯಲ್ಲಿ ಸಾಹಿತ್ಯದ ಬಗ್ಗೆ ಕಾರ್ಯಕ್ರಮಗಳು ನಡೆಯಲಿಲ್ಲ. ಚಿಂತನ ಮಂಥನಗಳು ನಡೆಯಲಿಲ್ಲ. ನಿಜವಾದ ಸಾಹಿತಿಗಳಿಗೆ, ಜಿಲ್ಲೆ ಹೋರಾಟಗಾರರಿಗೆ, ಸಾಧಕರಿಗೆ ಗೌರವ ಸಿಗಲಿಲ್ಲ. ಊಟ ಉಪಚಾರದ ಕಡೆ ಜನತೆಯ ಗಮನ ಹೋಗಿತ್ತೇ ಹೊರತು ಸಾಹಿತ್ಯದ ಕಡೆಯಲ್ಲ ಎಂದು ಆರೋಪಿಸಿದರು. 

ವೇದಿಕೆ ಮೇಲೆ ಸಾಹಿತಿ ಅಶೋಕ ಹಳ್ಳಿಯವರ, ಎಸ್.ಎಂ. ರಾಜಶೇಖರ, ಡಿ.ಕೆ. ಆಂಜನೇಯ, ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ನಲವಾಗಲ, ರೈತ ಹೋರಾಟಗಾರ  ಹರಿಹರಗೌಡ ಎಸ್. ಪಾಟೀಲ ಉಪಸ್ಥಿತರಿದ್ದರು. ಇಂದುಮತಿ ಸಂಶಿ ಕಾರ್ಯಕ್ರಮ ನಿರೂಪಿಸಿದರು. ಹಾಲೇಶ ರಟ್ಟಿಹಳ್ಳಿ ವಂದಿಸಿದರು.