ರಾಣೇಬೆನ್ನೂರು, ಜ. 24- ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಹರಡುತ್ತಿದ್ದ ಚರ್ಮ ಗಂಟು (ಸಿಂಪಿ) ಕಾಯಿಲೆಯ ಹತೋಟಿಗಾಗಿ ಜಿಲ್ಲಾಡಳಿತ ಜಾನುವಾರು ಮಾರುಕಟ್ಟೆ ಬಂದ್ ಮಾಡಿದಾಗ, ಮಧ್ಯವರ್ತಿಗಳು ಮನಬಂದಂತೆ ವ್ಯಾಪಾರ ಮಾಡಿಸಿ ರೈತರನ್ನು ಶೋಷಣೆ ಮಾಡುತ್ತಿದ್ದರು ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ದೂರಿದರು.
ಕಾಳಸಂತೆಯಲ್ಲಿ ಜಾನುವಾರುಗಳ ಮಾರಾಟ ಹೆಚ್ಚಾಗಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜಾತ್ರೆ ಉತ್ಸವಗಳು ಪ್ರಾರಂಭಗೊಂಡಿದ್ದರಿಂದ ಕುರಿ, ಟಗರುಗಳ ಮಾರಾಟಕ್ಕೆ ಮಾರುಕಟ್ಟೆ ಇಲ್ಲದ್ದರಿಂದ ಹಳ್ಳಿಗಳಲ್ಲೇ ವ್ಯಾಪಾರ ಮಾಡಿ ದಲ್ಲಾಲರು ರೈತರನ್ನು ಶೋಷಣೆ ಮಾಡುತ್ತಿದ್ದನ್ನು ಕಣ್ಣಾರೆ ಕಂಡ ರೈತರು ನನ್ನನ್ನು ಭೇಟಿಯಾಗಿ ಶೀಘ್ರ ಜಾನುವಾರು ಮಾರುಕಟ್ಟೆ ಪ್ರಾರಂಭಿಸಿರಿ. ಚರ್ಮ ಗಂಟು ಕಾಯಿಲೆ ಸುಮಾರು ವಾಸಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದರು ಎಂದರು.
ಹಾಗಾಗಿ ನಿರಂತರ ವಾಗಿ ರೈತ ಸಂಘಟನೆ ಹೋರಾಟ ಮಾಡಿದ್ದರಿಂದ ಈಗ ಜಾನುವಾರು ಮಾರುಕಟ್ಟೆ ಪ್ರಾರಂಭಕ್ಕೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಯವರು ಆದೇಶ ಮಾಡಿದ್ದಾರೆ. ಇದರಿಂದ ರೈತರ ಶೋಷಣೆ ತಪ್ಪಿದಂತಾಗಿದೆ ಎಂದು ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಗಳ ‘ಆಮೆ’ ವೇಗದ ನಿರ್ಧಾರಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.