ಯುಗಾದಿ ವರ್ಷ ಭವಿಷ್ಯ-2021

ಸೂರ್ಯ ಸಿದ್ಧಾಂತ ರೀತ್ಯಾ ಭಗವಂತನಾದ ಚತುರ್ಮುಖ ಬ್ರಹ್ಮನ ಪರಮಾಯುಷ್ಯ 100 ವರ್ಷ. ಇದರಲ್ಲಿ ಬ್ರಹ್ಮಮಾನದಿಂದ ಈಗಿರುವ ಚತುರ್ಮುಖ ಬ್ರಹ್ಮನ ಪರಮಾಯುಷ್ಯ ಐವತ್ತು ವರ್ಷ ಕಳೆದಿದ್ದು (ಇದನ್ನು ಪ್ರಥಮ ಪರಾರ್ಧ ಎನ್ನುತ್ತಾರೆ). ಈಗ 51ನೇ ವರ್ಷ ಪ್ರಾರಂಭವಾಗಿದೆ. (ಇದನ್ನು ದ್ವಿತೀಯ ಪರಾರ್ಧ ಎನ್ನುತ್ತಾರೆ). 1ನೇ ತಿಂಗಳು, ಒಂದನೇ ದಿನ, ಸೂರ್ಯೋದಯ ನಂತರ 13 ಘಳಿಗೆ, 43 ವಿಘಳಿಗೆ ಕಳೆದು 44ನೇ ವಿಘಳಿಗೆ ನಡೆಯುತ್ತಿದೆ. ಈಗ ನಡೆಯುತ್ತಿರುವ ಏಳನೇ ವೈವಸ್ವತ ಮನ್ವಂತರದಲ್ಲಿ 28ನೇ ಕಲಿಯುಗವು ನಡೆಯುತ್ತಿದ್ದು, ಕಲಿಯುಗ ಪ್ರಮಾಣ 4,32,000 ವರ್ಷ. ಕಲಿಯುಗ ಆರಂಭವಾಗಿ 5,121, ವರ್ಷ ಕಳೆದು, 5122ನೇ ವರ್ಷದ ಶ್ರೀ ಪ್ಲವ ನಾಮ ಸಂವತ್ಸರವನ್ನು ಹೀಗೆ ವಿಶ್ಲೇಷಿಸಬಹುದು. 

ಶ್ರೀ ಪ್ಲವನಾಮ ಸಂವತ್ಸರದ ಫಲ :
ಈ ಪ್ಲವನಾಮ ಸಂವತ್ಸರದಲ್ಲಿ, ಭೂಮಿ ಜಲ ಸಂಪತ್ತಿನಿಂದ ಸಮೃದ್ಧಿಯಾಗಲಿದೆ. ಅಷ್ಟು ಮಾತ್ರವಲ್ಲದೇ, ಧಾನ್ಯಗಳು ಹೇರಳವಾಗಿ ಬೆಳೆಯುವುದು. ತರೀ ಜಮೀನಿನಲ್ಲಿ ಬೆಳೆದಂತಹ ಧಾನ್ಯಗಳಿಗೆ ವಿಶೇಷ ಬೆಂಬಲಿತ ಬೆಲೆ ದೊರೆಯಲಿದೆ. ಕೆಲವೊಮ್ಮೆ ಅತಿವೃಷ್ಟಿಯಿಂದಾಗಿ, ಕೈಗೆ ಬಂದ ಫಸಲು ತಪ್ಪಿಹೋಗಬಹುದು. ಎಲ್ಲೆಡೆ ನೀರು ತುಂಬಿ ಜಲಾವರಣವುಂಟಾಗಬಹುದು. ಕೆಲವು ಸಸ್ಯಗಳು ಕ್ರಿಮಿ ಕೀಟಗಳ ಬಾಧೆಗೆ ಒಳಗಾಗಲಿವೆ. ರಾಜಕಾರಣಿಗಳು, ಮಂತ್ರಿ ಮಹೋದಯರು ಪ್ರಜೆಗಳ ಹಿತವನ್ನು ಮರೆತು ಪರಸ್ಪರ ದೋಷಾರೋಪಣೆಯಲ್ಲೇ ನಿರತರಾಗುವರು. ಇದರಿಂದ ಪ್ರಜೆಗಳು ಆಳುವವರ ವಿರುದ್ಧವೇ ವೈರಿಗಳಾಗುವ ಸಂಭವವಿದೆ. ಜನರು ಕಳ್ಳಕಾಕರ ಭಯದಿಂದ ತತ್ತರಿಸಿ ಹೋಗುವರು.ಅನಿರೀಕ್ಷಿತವಾಗಿ ಉಂಟಾದ ಬರಗಾಲ ಕೃಷಿಕರನ್ನು ಕಂಗಾಲಾಗಿಸಬಹುದು. ಕಂಡರಿಯದ ರೋಗರುಜಿನಗಳು ಜನರನ್ನು ಹೈರಾಣಾಗಿಸುವುದು. ಜಾಗತಿಕ ಮಟ್ಟದಲ್ಲಿ ದೇಶದ ಪ್ರತಿಷ್ಠೆ ಹೆಚ್ಚಲಿದೆ. ಒಂದು ರೀತಿಯಲ್ಲಿ ಜನ ಜೀವನ ಕಪ್ಪೆ ಕುಪ್ಪಳಿಸಿದಂತೆ ನಡೆಯಲಿದೆ.

ಶ್ರೀ ಪ್ಲವನಾಮ ಸಂವತ್ಸರಕ್ಕೆ ಸೂರ್ಯಸಿದ್ಧಾಂತ ನವನಾಯಕರು ಮತ್ತು ಫಲಾ-ಫಲಗಳು :
ರಾಜ-ಕುಜ, ಮಂತ್ರಿ-ಬುಧ, ಸೇನಾಧಿಪತಿ-ಕುಜ, ಸಸ್ಯಾಧಿಪತಿ-ಶನಿ, ಧಾನ್ಯಾಧಿಪತಿ-ಗುರು, ಅರ್ಘಾಧಿಪತಿ-ಕುಜ, ಮೇಘಾಧಿಪತಿ-ಕುಜ, ರಸಾಧಿಪತಿ-ಚಂದ್ರ, ನೀರಸಾಧಿಪತಿ-ಶುಕ್ರ, ಪಶುನಾಯಕ-ಯಮ.

* ರಾಜನಾದ ಕುಜನ ಫಲ :
ಈ ಸಂವತ್ಸರಕ್ಕೆ ಕುಜನು ರಾಜನಾಗಿರುವುದರಿಂದ ಅಗ್ನಿಭಯ, ಕಳ್ಳಕಾಕರಿಂದ ಸುಲಿಗೆ, ಧಾನ್ಯಗಳ ನಷ್ಟವಾಗುವಿಕೆ, ನಾನಾ ರೀತಿಯ ರೋಗಗಳ ಬಾಧೆ, ಖಂಡವೃಷ್ಟಿಯಿಂದಾಗಿ ಬೆಳೆಗಳು ಸಾಧಾರಣವಾಗಿ ಬೆಳೆಯಲಿವೆ. ಪದಾರ್ಥಗಳ ಬೆಲೆ ಹೆಚ್ಚಾಗಲಿವೆ. ರಾಜಕಾರಣಿಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗುವರು. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಲಿವೆ.

* ಮಂತ್ರಿಯಾದ ಬುಧನ ಫಲ :
ಮೋಡಗಳೆಲ್ಲವೂ ಗಾಳಿಯ ಹೊಡೆತಕ್ಕೆ ಚದುರಿದಂತಾಗಲಿವೆ, ಆದರೂ ಬೆಳೆಗಳು ಸಮೃದ್ಧಿಯಾಗಿಯೇ ಬೆಳೆಯಲಿವೆ. ರಾಜ್ಯದಲ್ಲಿ ಕೋಶವು ಅಭಿವೃದ್ಧಿ ಹೊಂದಲಿದೆ. ಪಶುಗಳು ಸಮೃದ್ಧಿಯಾಗಿ ಹಾಲು ಕೊಡಲಿವೆ. ಜನರು ಪಾಪಕರ್ಮಗಳಲ್ಲಿ ತೊಡಗಿಕೊಳ್ಳುವರು. ಸರ್ಕಾರಿ ಆದೇಶಗಳು ಕಾರ್ಯರೂಪಕ್ಕೆ ಬರುವುದಿಲ್ಲ. ಭೂಮಿಯಲ್ಲಿ ಯಥೇಚ್ಛವಾಗಿ ನೀರು ಸಿಗಲಿದೆ. ಗೋಧಿ, ಭತ್ತ, ಕಬ್ಬು ಹೇರಳವಾಗಿ ಬೆಳೆಯಲಿದೆ.

* ಸೇನಾಧಿಪತಿಯಾದ ಕುಜನ ಫಲ :
ಸೇನಾಧಿಪತಿ ಕುಜನಾಗಿದ್ದು, ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಲಿದ್ದು, ಪೈರುಗಳ ಬೆಳವಣಿಗೆ ಕಡಿಮೆಯಾಗಲಿದೆ. ಜನರು ಅನಾವಶ್ಯಕ ಚಿಂತೆಗೀಡಾಗು ವರು. ರಾಜರುಗಳಿಗೆ ಪರಸ್ಪರ ಕಲಹ, ಆಪತ್ತುಗಳು ಎದುರಾಗಲಿವೆ. ನೆರೆರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ, ನೆರೆರಾಜ್ಯಗಳಲ್ಲಿ ದೊಂಬಿ, ದರೋಡೆ ಹೆಚ್ಚಲಿದೆ. ನಾನಾ ವಿಧವಾದ ರೋಗಬಾಧೆ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳಲಿದೆ.

* ಸಸ್ಯಾಧಿಪತಿಯಾದ ಶನಿಯ ಫಲ :

ಸಸ್ಯಾಧಿಪತಿ ಶನಿಯಾಗಿರುವುದರಿಂದ ಜನರಿಗೆ, ರಾಜರಿಂದಲೂ, ರಾಜರಿಗೆ ಪ್ರಜೆಗಳಿಂದಲೂ ಪರಸ್ಪರ ಬೆದರಿಕೆ, ಭಯವುಂಟಾಗಲಿದೆ. ಫಲ ಕೊಡುವ ವೃಕ್ಷಗಳು ಮಧ್ಯಮ ಪ್ರಮಾಣದಲ್ಲಿ ಫಲ ಕೊಡಲಿವೆ. ಭೂಮಿಯಲ್ಲಿ ಜಲ ಪ್ರಮಾಣ ಕಡಿಮೆಯಗಲಿದೆ. ಹುರುಳಿ, ಕಡಲೆಕಾಳು, ಉದ್ದು, ಹೆಸರುಕಾಳು ಈ ಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಿವೆ. ಕೆಲವು ಕಡೆ ಬೆಂಕಿ ಅನಾಹುತ ಉಂಟಾಗಲಿದೆ. ಆಳುವ ನಾಯಕರು ಹೆಚ್ಚಿನ ಧನ ಸಂಗ್ರಹದಲ್ಲಿ ತೊಡಗುವರು. ಜನರಿಗೆ ನೆಮ್ಮದಿ ಬದುಕು ಕಷ್ಟವಾಗಲಿದೆ.

* ಧಾನ್ಯಾಧಿಪತಿಯಾದ ಗುರುವಿನ ಫಲ :
ಧಾನ್ಯಾಧಿಪತಿ ಗುರುವಾಗಿರುವುದರಿಂದ ದೇಶದಲ್ಲಿ ಉತ್ತಮ ಮಳೆಯಾಗಲಿದೆ. ಔಷಧಿ ಸಸ್ಯಗಳು ಯಥೇಚ್ಛವಾಗಿ ಬೆಳೆಯುವುದು, ಪಶು ಸಂಪತ್ತು ಹೆಚ್ಚಲಿದ್ದು, ಹೈನುಗಾರಿಕೆ ಸಂಮೃದ್ಧಿಯಾಗಲಿದೆ. ಜವೆ ಗೋಧಿ, ನವಣೆ, ಉದ್ದು, ಹೆಸರು, ಕಡಲೆ ಬೆಳೆಗಳು ಹೆಚ್ಚಲಿವೆ. ಖಾದ್ಯತೈಲ ಮೊದಲಾದ ಆಹಾರ ಪದಾರ್ಥಗಳ ಬೆಲೆ ತೇಜಿಯಾಗಿ, ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಆರ್ಥಿಕ ಚಿಂತನೆ ವಿಶೇಷವಾಗಿ ನಡೆಯಲಿದೆ. ಅಧ್ಯಾಪಕ ವರ್ಗದವರಿಗೆ ವಿಶೇಷ ಸ್ಥಾನಮಾನಗಳು ದೊರೆಯಲಿವೆ. ಹಸಿರು ಧಾನ್ಯಗಳು ಸಾಕಷ್ಟು ದೊರೆಯಲಿವೆ.

* ಅರ್ಘ್ಯಾಧಿಪತಿ ಕುಜನ ಫಲ :
ಅರ್ಘ್ಯಾಧಿಪತಿ ಕುಜನಾಗಿರುವುದರಿಂದ ಗಾಳಿ ಪ್ರಮಾಣ ಹೆಚ್ಚಾಗಲಿದ್ದು, ಮೋಡಗಳು ಚದುರಿ ಹೋಗುವುದರಿಂದ, ಖಂಡವೃಷ್ಟಿಯಾಗಲಿದೆ. ಕೆಲವು ಕಡೆ ಕಡಿಮೆ ಬೆಳೆ, ಮತ್ತೆ ಕೆಲವು ಕಡೆ ಹೆಚ್ಚು ಫಸಲು ಬರಲಿದೆ. ಇದೇ ರೀತಿಯಾಗಿ ಜನರ ಆರೋಗ್ಯದಲ್ಲೂ ವ್ಯತ್ಯಾಸವಾಗುವುದು ಹಾಗೂ ರೋಗ ನಿರೋಧಕ ಶಕ್ತಿಯೂ ಜನರಲ್ಲಿ ಕಡಿಮೆಯಾಗಲಿದೆ. ವ್ಯಾಪಾರಿ ವರ್ಗದವರಿಗೆ ವ್ಯವಹಾರದಲ್ಲಿ ಅನೇಕ ಕಾನೂನಿನ ತೊಡಕುಗಳು ಕಂಡುಬರುವುದು. ಭೂ ಸಂಬಂಧಿ ವ್ಯವಹಾರಗಳು ಹೆಚ್ಚಲಿವೆ, ಬೆಳೆಗಳಿಗೆ ಕೀಟಬಾಧೆ ಕಾಣಿಸಿಕೊಳ್ಳಲಿದೆ.

* ಮೇಘಾಧಿಪತಿ ಕುಜನ ಫಲ :
ಮೇಘಾಧಿಪತಿ ಕುಜನಾಗಿರುವುದರಿಂದ ಮಳೆ ಕಡಿಮೆಯಾದರೂ, ಹೆಚ್ಚು ಧಾನ್ಯ ಬೆಳೆಯಲಿದೆ. ಪದಾರ್ಥಗಳ ಬೆಲೆ ಗಗನಮುಖಿಯಾಗಲಿದೆ. ಕೆಲವು ಕಡೆ ಸುವೃಷ್ಟಿಯಾಗಿ. ಪಶುಗಳಿಗೆ ಸಾಕಷ್ಟು ಮೇವು ಸಿಗುವುದು. ಹೈನೋದ್ಯಮದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ಜಲ ಸಸ್ಯಗಳು ಸಮೃದ್ಧಿಯಾಗುವವು. ಜನರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ, ರಾಷ್ಟ್ರ ರಾಜಕಾರಣದಲ್ಲಿ ಅನೇಕ ಗೊಂದಲಗಳು, ರಾಜಕಾರಣಿಗಳ ಪರಸ್ಪರ ನಿಂದನೆಯಿಂದಾಗಿ ಪ್ರಜೆಗಳ ವಿಶ್ವಾಸ ಕಳೆದುಕೊಳ್ಳುವರು. ಭೂ ಸಂಬಂಧಿ ವ್ಯವಹಾರಗಳು ನಿರಾತಂಕವಾಗಿ ನಡೆಯಲಿವೆ. 

* ರಸಾಧಿಪತಿಯಾದ ಚಂದ್ರನ ಫಲ :
ಜನರ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಾಣುವುದು. ಅಲ್ಪವೃಷ್ಟಿಯಿಂದಾಗಿ ರಸ ಪದಾರ್ಥಗಳ ಉತ್ಪಾದನೆ ಕುಂಠಿತಗೊಳ್ಳಲಿದೆ. ಲೋಕ ಕಲ್ಯಾಣಾರ್ಥಕ್ಕಾಗಿ ಅನೇಕ ಯಜ್ಞಯಾಗಾದಿಗಳು ನಡೆಯಲಿವೆ. ಕಬ್ಬು, ಎಣ್ಣೆ, ಗೋಧಿ, ಎಳ್ಳು, ಬೆಲ್ಲ, ಜೇನು, ಹಾಲು, ಮೊಸರು, ಸಕ್ಕರೆ, ಈ ಪದಾರ್ಥಗಳ ಬೆಲೆ ಹೆಚ್ಚಾಗುವುದು. ಜನರು ಹೆಚ್ಚು ಮೋಜಿನಲ್ಲಿ ಕಾಲಕಳೆಯುವರು. ಅಧಿಕಾರಿ ವರ್ಗದವರು ಪ್ರಜಾಹಿತಾಸಕ್ತರಾಗಿ ಕೆಲಸ ಮಾಡುವರು, ಗೋವುಗಳು ಸಾಕಷ್ಟು ಹಾಲು ಕೊಡುವವು.

* ನೀರಸಾಧಿಪತಿ ಶುಕ್ರನ ಫಲ :
ಮಹಿಳೆಯರಿಗೆ ರಾಜ್ಯ ರಾಜಕಾರಣದಲ್ಲಿ ವಿಶೇಷ ಆಸಕ್ತಿ ಮೂಡುವುದು. ಅವರಿಗೆ ಅಲಂಕಾರಿಕ ವಸ್ತುಗಳ ಮೇಲೆ ವಿಶೇಷ ಅಭಿಲಾಷೆ ಉಂಟಾಗುವುದು. ಚಿನಿವಾರ ಪೇಟೆಯಲ್ಲಿ ಬೆಳ್ಳಿ ಬಂಗಾರಗಳ ತೇಜಿ-ಮಂದಿಯುಂಟಾಗುವುದರಿಂದ, ಗ್ರಾಹಕರು ಗೊಂದಲಕ್ಕೊಳಗಾಗುವರು. ಕರ್ಪೂರ, ಅಗರು, ಸುಗಂಧ ದ್ರವ್ಯ, ಮುತ್ತು ಹಾಗೂ ಬಟ್ಟೆಗಳ ಬೆಲೆ ಸ್ವಲ್ಪ ಮಟ್ಟಿಗೆ ಇಳಿಯಲಿದೆ. ಭೋಗ್ಯ ವಸ್ತುಗಳ ಖರೀದಿ ಹೆಚ್ಚು ಎನ್ನಬಹುದು, ಹಿರಿಯರ ಆರೋಗ್ಯ ಸುಧಾರಿಸುವುದು.

* ಪಶುಪಾಲಕ ಯಮನ ಫಲ :
ಪಶುನಾಯಕ ಯಮನಾಗಿದ್ದು, ಅನೇಕ ಪ್ರಾಣಿಗಳು, ಕಂಡರಿಯದ ರೋಗಗಳಿಗೆ ತುತ್ತಾಗಲಿವೆ. ಮೇವು, ನೀರಿನ ಕೊರತೆ ಸಾಕಷ್ಟು ಕಂಡುಬರಲಿದೆ. ಹಸುಗಳು ಹಾಲನ್ನು ಕಡಿಮೆ ಪ್ರಮಾಣದಲ್ಲಿ ಕೊಡಲಿವೆ. ಜೊತೆಗೆ ಮಳೆಯ ಕೊರತೆಯೂ ಕಂಡುಬರುವುದು. ಹೈನೋದ್ಯಮದಲ್ಲಿ ವಿಪರೀತ ವ್ಯತ್ಯಾಸ ಕಂಡು ಬರಲಿದೆ. ಕೃಷಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ರಾಜಕಾರಣಿಗಳಿಗೆ ತಲೆ ನೋವಾಗಿ ಪರಿಣಮಿಸಲಿವೆ.

* ಕಂದಾಯ ಫಲ :
ಕಂದಾಯದ ಸಂಖ್ಯೆ ಹೆಚ್ಚಿದಷ್ಟೂ ಫಲ ಹೆಚ್ಚು.ಬೆಸವಾದರೆ ದ್ರವ್ಯಲಾಭ. ಸಮವಾದರೆ ಮಧ್ಯಮ ಲಾಭ. ಸೊನ್ನೆಯಾದರೆ ನಿಷ್ಫಲ. ಮೊದಲನೇ ಕಂದಾಯವು ಸೊನ್ನೆಯಾದರೆ, ರೋಗಭಯ. ಎರಡನೇ ಕಂದಾಯವು ಸೊನ್ನೆಯಾದರೆ, ಮಹಾಭಯ. ಮೂರನೇ ಕಂದಾಯ ಸೊನ್ನೆಯಾದರೆ, ಧನಹಾನಿ. ಮೂರೂ ಕಂದಾಯಗಳು ಸೊನ್ನೆಯಾದರೆ, ಮಹಾಕಷ್ಟ.

* ಪ್ರಥಮ ಕಂದಾಯ : ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ ಮಾಸಗಳು,  ದ್ವಿತೀಯ ಕಂದಾಯ : ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ ಮಾಸಗಳು, ತೃತೀಯ ಕಂದಾಯ : ಮಾರ್ಗಶಿರ, ಪುಷ್ಯ,ಮಾಘ, ಫಾಲ್ಗುಣ ಮಾಸಗಳು.

* ಮೇಘ ವಿಚಾರ :
ಈ ಆವರ್ತ ನಾಮಕ ಮೇಘವು ಮೇರು ಶಿಖರದಲ್ಲಿ ಹುಟ್ಟಿ ಗುಡುಗು, ಗಾಳಿ ಇಂದ್ರ ಚಾಪ, ಕೂಡಿಕೊಂಡು ಸಾಮಾನ್ಯ ವೃಷ್ಟಿಯಾಗಲಿದೆ. ಮಳೆ 3 ಕೊಳಗ, ಗಾಳಿ 4 ಕೊಳಗ, ಕೊಳಗವು 60 ಗಾವುದಷ್ಟು ವಿಸ್ತೀರ್ಣವಾಗಿದ್ದು, ನೂರು ಗಾವುದ ಎತ್ತರವುಳ್ಳದ್ದಾಗಿ ಇರುತ್ತದೆ. ಮಳೆಯ ಒಟ್ಟು 20 ಭಾಗಗಳಲ್ಲಿ 10 ಭಾಗ ಸಮುದ್ರದಲ್ಲೂ, 6 ಭಾಗ ಪರ್ವತಗಳ ಮೇಲೂ, ಉಳಿದ ನಾಲ್ಕು ಭಾಗ ಭೂಮಿಯ ಮೇಲಾಗಲಿದೆ.

* ಚಂದ್ರ ದರ್ಶನ : ದಿನಾಂಕ ;- 13-4-2021 ನೇ ಮಂಗಳವಾರ ಸಾಯಂಕಾಲ 6.50ಕ್ಕೆ ಚಂದ್ರ ದರ್ಶನವಾಗುವುದು.
ಸಂಭವಿಸುವ ಗ್ರಹಣಗಳು : ಈ ವರ್ಷ ಯಾವುದೇ ಗ್ರಹಣದ ಸ್ಪರ್ಶ-ಮೋಕ್ಷಾದಿಗಳು ಕರ್ನಾಟಕ ರಾಜ್ಯದ ಪ್ರಾಂತ್ಯದಲ್ಲಿ ಕಾಣದೇ ಇರುವುದರಿಂದ ಆಚರಣೆ ಇರುವುದಿಲ್ಲ.

ಮೇಷ ರಾಶಿ

ಈ ರಾಶಿಯವರಿಗೆ  ಕ್ರಮವಾಗಿ ಹತ್ತು ಮತ್ತು  ಹನ್ನೊಂದನೇ ಮನೆಯಲ್ಲಿ ಸಂಚರಿಸುವುದರಿಂದ  ಹೆಚ್ಚಿನ ಶುಭ ಫಲಗಳನ್ನೇ ಕೊಡಲಿದ್ದಾನೆ. ಸಾರ್ವಜನಿಕವಾಗಿ ಕೀರ್ತಿ ಪ್ರತಿಷ್ಠೆ ಹೆಚ್ಚಲಿದೆ  ಅಂದುಕೊಂಡ ಕೆಲಸಗಳು ಕೈಗೂಡಲಿವೆ. ಕುಟುಂಬ ವರ್ಗದಲ್ಲಿ ಶಾಂತಿ ನೆಮ್ಮದಿ ಮೂಡಲಿದೆ.ಆರೋಗ್ಯದಲ್ಲೂ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗಲಿದೆ. ಮಧ್ಯದಲ್ಲಿ ಶನಿಯು ಅಶುಭನಾಗಿದ್ದು, ದಶಮ ಸ್ಥಾನದಲ್ಲಿರುವುದರಿಂದ ಮಿಶ್ರಫಲಗಳು ಕಂಡುಬರಲಿವೆ. ಹಣ-ಕಾಸಿನ ವ್ಯವಹಾರದಲ್ಲಿ ಅನಿರೀಕ್ಷಿತವಾಗಿ ಹಿನ್ನಡೆ ಕಂಡುಬರಲಿದೆ. ಕೃಷಿಕರಿಗೆ ಬೇಸಾಯದಲ್ಲಿ ಅನೇಕ ಅಡಚಣೆ ಕಂಡುಬರುವುದರ ಜೊತೆಗೆ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಳ್ಳಬಹುದು. ನಿಮಗೆ ತಿಳಿಯದಂತೆ ಅನೇಕ ಕುಕೃತ್ಯಗಳು ನಿಮ್ಮಿಂದ ನಡೆಯುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಮಸ್ಯೆಗಳು ಕಂಡುಬರಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ನಷ್ಟಕ್ಕೆ ಕಾರಣವಾಗಬಹುದು. ವೃಥಾ ತಿರುಗಾಟ ಒಳ್ಳೆಯದಲ್ಲ.

ವೃಷಭ ರಾಶಿ 

ಭಾಗ್ಯಸ್ಥಾನದಲ್ಲಿ ಶನಿಗ್ರಹದ ಸಂಚಾರವಿರುವುದರಿಂದ ಮತ್ತು ವೃಷಭ ರಾಶಿಗೆ ಬಾಧಕನಾದ್ದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ.ನೀವು ಎಷ್ಟೇ ಪ್ರಯತ್ನಪಟ್ಟರೂ, ಆಗಬೇಕಾದ ಕೆಲಸಗಳು ಮಂದಗತಿಯಲ್ಲಿ ಸಾಗುವವು. ಆದಾಯ ಕಡಿಮೆ, ಖರ್ಚು ಹೆಚ್ಚಾಗಲಿದೆ. ಸರ್ಕಾರಿ ನೌಕರರಿಗೆ ಮೇಲಾಧಿಕಾರಿಗಳಿಂದಾದ ಅಸಹಕಾರ ಬೇಸರ ಮೂಡಿಸಲಿದೆ. ಆದರೆ ವರ್ಷದ ಮಧ್ಯದಲ್ಲಿ ಗುರುವಿನ ಅನುಗ್ರಹ ವಿಶೇಷವಾಗುವುದರಿಂದ ಮಿಶ್ರಫಲ ದೊರೆಯಲಿದೆ. ಮನೆಯಲ್ಲಿ ವಿಶೇಷ ಮಂಗಳ ಕಾರ್ಯಗಳು ನಡೆಯಲಿವೆ.ಸಾಧು-ಸಂತರ ದರ್ಶನ ಭಾಗ್ಯ ಒದಗಿಬರಲಿದ್ದು, ಅದರಿಂದಾಗಿ ನಿಮ್ಮ ಇಷ್ಟಾರ್ಥಗಳೆಲ್ಲವೂ ನೆರವೇರಲಿವೆ. ಹಣಕಾಸಿನ ವಿಚಾರದಲ್ಲಿ ಮಧ್ಯಮ ಪ್ರಗತಿ ಕಂಡು ಬರುವುದು. ವಿದ್ಯಾರ್ಥಿಗಳು ಶ್ರಮಪಟ್ಟಲ್ಲಿ ಮಾತ್ರ ಉತ್ತಮ ಫಲಿತಾಂಶ ಕಾಣಲು ಸಾಧ್ಯ. ಬಂಧು-ಮಿತ್ರರು ಹಗೆತನ ಸಾಧಿಸುವ ಸಂಭವವಿದೆ.

ಮಿಥುನ ರಾಶಿ 

ಜನ್ಮ ರಾಶಿಯಿಂದ ಅಷ್ಟಮದಲ್ಲಿ ಶನಿ ಗ್ರಹದ ಸಂಚಾರವಿದ್ದ ಕಾಲದಲ್ಲಿ ವಾಯು-ಪಿತ್ತ, ಸಂಧಿವಾತ ಮೊದಲಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಅನಾವಶ್ಯಕ ಖರ್ಚು ಎದುರಾಗಬಹುದು.ಪರಿವಾರದೊಂದಿಗೆ ವಾಸ ಸ್ಥಳದಿಂದ ದೂರವಿರಬೇಕಾದ ಪ್ರಸಂಗ ಬರಲಿದೆ.ಬೇಸಾಯ, ವ್ಯವಹಾರ, ವ್ಯಾಪಾರಗಳಲ್ಲಿ ನಷ್ಟ ಕಂಡುಬರಲಿದೆ. ವರ್ಷದ ಮಧ್ಯದಲ್ಲಿ ಬದುಕಿನಲ್ಲಿ ತುಸು ಚೇತರಿಕೆ ಕಾಣಲಿದ್ದು, ಭರವಸೆ ಮೂಡಲಿದೆ.ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯ ದೂರವಾಗಲಿದ್ದು, ಒಗ್ಗಟ್ಟು ಮೂಡಲಿದೆ. ಹಿರಿಯರ ಮಾರ್ಗದರ್ಶನ ಆರ್ಥಿಕ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಲಿದೆ. ಹೊಸ ಯೋಜನೆಗಳಿಗೆ ಅನೇಕ ಜನರಿಂದ ನೆರವು ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಿದ್ದ ಅಡಚಣೆಗಳು ನಿವಾರಣೆಯಾಗಲಿವೆ. ಅಂದುಕೊಂಡ ಕೆಲಸಗಳು ಕ್ಲುಪ್ತ ಕಾಲದಲ್ಲಿ ಮುಗಿಯುವವು. ಸದಾಚಾರ ವಿಚಾರಗಳಲ್ಲಿ ಆಸಕ್ತಿಮೂಡಲಿದೆ. ಸಾಮಾಜಿಕ ಸ್ಥಾನಮಾನ ವೃದ್ಧಿಸಲಿದೆ. ಆದಾಯದ ಮೂಲದಲ್ಲಿ ಹೆಚ್ಚಳ, ಆದರೆ ಯಾವುದೇ ಕಾರಣಕ್ಕೂ ಆರೋಗ್ಯವನ್ನು ಅಲಕ್ಷಿಸ ಬೇಡಿ. 

ಕರ್ಕಾಟಕ ರಾಶಿ

ಸಪ್ತಮ ಸ್ಥಾನದಲ್ಲಿ ಶನಿ ಗ್ರಹವಿದ್ದ ಕಾಲದಲ್ಲಿ, ಅಷ್ಟೇನು ಶುಭ ಫಲದ ನಿರೀಕ್ಷೆ ಬೇಡ. ಮಾನಸಿಕ ಕ್ಲೇಶ ವಿಪರೀತವಾಗಿ ಬಾಧಿಸಲಿದೆ. ಬಂಧು-ಮಿತ್ರರೊಂದಿಗೆ ವಿರಸ, ವಾಗ್ವಾದ, ಕಲಹಗಳು ಉಂಟಾಗಲಿದೆ. ಕಾರ್ಯ ನಿಮಿತ್ತವಾಗಿ, ಮೇಲಿಂದ ಮೇಲೆ ಪರಸ್ಥಳದಲ್ಲಿ ವಾಸ ಮಾಡಬೇಕಾದ ಪ್ರಸಂಗ ಬರುವುದು ನಿಶ್ಚಯ. ಅಮೂಲ್ಯವಾದ ವಸ್ತು ಅಥವಾ ದಾಖಲೆಗಳು ಕಳೆದು ಹೋಗಲಿವೆ. ಬೆಂಕಿ ಮೊದಲಾದ ವಸ್ತುಗಳಿಂದ ಅಪಾಯ ಸಂಭವಿಸಲಿದೆ. ಗುರು ರಾಶಿ ಸಂಚಾರದಿಂದ ಮಧ್ಯಮ ಮಟ್ಟದಲ್ಲಿ ಮಿಶ್ರಫಲ ಕಾಣುವಿರಿ, ಯಾವುದೇ ಕಾರಣಕ್ಕೂ ಆರೋಗ್ಯವನ್ನು ಅಲಕ್ಷಿಸುವುದೆಂದರೆ ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ವ್ಯಾಪಾರಿಗಳು ಹೆಚ್ಚಿನ ಬಂಡವಾಳ ಹೂಡುವುದು ಅಷ್ಟು ಸೂಕ್ತವಲ್ಲ. ಈ ಹಿಂದೆ ಆರಂಭಿಸಿದ್ದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಲ್ಲದಿದ್ದರೂ ಸಾಧಾರಣ ಮಟ್ಟದಲ್ಲಿ ಪ್ರಗತಿ ಕಾಣುವುದು.

ಸಿಂಹ ರಾಶಿ 

ಅಪೇಕ್ಷಿತ ಕಾರ್ಯಗಳು ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಫಲಪ್ರದವಾಗಲಿವೆ. ಜೀವನದಲ್ಲಿ ನವೋಲ್ಲಾಸ ಮೂಡಲಿದೆ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷವಾಗಿ ಭಾಗವಹಿಸುವಿರಿ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಿಸಲಿದೆ. ವ್ಯವಹಾರಗಳಲ್ಲಿ ಹೆಚ್ಚಿನ ಲಾಭಾಂಶವನ್ನು ನಿರೀಕ್ಷಿಸಬಹುದು. ಪರಿವಾರದೊಂದಿಗೆ ಪ್ರಯಾಣ ಮಾಡುವಿರಿ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ಸರ್ಕಾರಿ  ವಿರೋಧ ಅಷ್ಟು ಸೂಕ್ತವಲ್ಲ. ಕೈಗಾರಿಕೋದ್ಯಮಿಗಳಿಗೆ, ಸರ್ಕಾರದಿಂದ ಸಕಲ ಸೌಲಭ್ಯಗಳೂ ದೊರೆಯಲಿದೆ. ಸಜ್ಜನರ ಸಹವಾಸ, ಕಷ್ಟಗಳನ್ನು ದೂರಮಾಡುವುದು. ಹಣ-ಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಾಗಿರುವುದು ಉತ್ತಮ. ಕುಲದೇವತಾ ದರ್ಶನ ಭಾಗ್ಯ ಪುಣ್ಯಕಾರಕವಾಗುವುದು.ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು. ಸೇವಕ ವರ್ಗದಿಂದ ಸಂಪೂರ್ಣ ನೆರವು ದೊರೆಯಲಿದೆ. ದೂರದೂರಿಗೆ ಪ್ರಯಾಣ ಮಾಡದಿರುವುದು ಉತ್ತಮ.

ಕನ್ಯಾ ರಾಶಿ

ವರ್ಷಪೂರ್ತಿ ಶನಿ ಗ್ರಹವು ಅಶುಭ ಸ್ಥಾನದಲ್ಲಿ ಸಂಚರಿಸುವುದರಿಂದ ಹಾಗೂ ಗುರು ಗ್ರಹವು  ಮಧ್ಯದಲ್ಲಿ ಶುಭದಾಯಕನಾಗಿರುವುದರಿಂದಲೂ ಹೆಚ್ಚಿನ ಶುಭ ಫಲದ ನಿರೀಕ್ಷೆ ತಪ್ಪಾದೀತು. ಬೇಡದ ವಸ್ತುಗಳ ಖರೀದಿಗೆಂದು ವಿಪರೀತ ಹಣ ಖರ್ಚಾಗಲಿದೆ. ಮಾಡಬೇಕಾದ ಕೆಲಸಗಳ ಬಗ್ಗೆ ಉದಾಸೀನತೆ ಕಂಡುಬರಲಿದೆ. ಹಿರಿಯರೊಂದಿಗೆ ಮಾಡಿಕೊಳ್ಳುವ ಮನಸ್ತಾಪ ಸಂಬಂಧಕ್ಕೆ ಧಕ್ಕೆ ತರಬಹುದು. ಪ್ರವಾಸಗಳಿಗೆ ತೆರಳಿದಾಗ ಅಮೂಲ್ಯ ವಸ್ತುಗಳು ಕಳುವಾಗ ಬಹುದು. ನಂತರದ ದಿನಗಳಲ್ಲಿ ಪರಿಸ್ಥಿತಿ ಕ್ರಮೇಣ ಸುಧಾರಿಸಲಿದೆ. ಹಣ-ಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಬಂದಿದ್ದ ಅಡಚಣೆಗಳು ದೂರವಾಗಲಿವೆ. ಅವಿವಾಹಿತರಿಗೆ ಕಂಕಣ ಬಲ, ಯತ್ನ ಕಾರ್ಯಗಳಲ್ಲಿ ಅಲ್ಪ ಸಾಧನೆ ಕಂಡುಬರಲಿದೆ. ವಸ್ತ್ರಾಭರಣಗಳು ಉಡುಗೊರೆಯಾಗಿ ದೊರೆಯಲಿವೆ. ನಷ್ಟದ್ರವ್ಯಗಳು ಮರಳಿ ಸಿಗಲಿದೆ. ಸಾಧ್ಯವಾದಷ್ಟು ಗುರುವಿನ ಅನುಗ್ರಹ ಸಂಪಾದಿಸಲು ಯತ್ನಿಸುವುದು ಉತ್ತಮ. ಕುಲದೇವತಾರಾಧನೆ ಮಾಡಿ.

ತುಲಾ ರಾಶಿ

ನಿಮ್ಮ ರಾಶಿಯಿಂದ ಚತುರ್ಥ ಸ್ಥಾನದಲ್ಲಿರುವ ಗುರುವು ಅಷ್ಟು ಲಾಭ ದಾಯಕನಲ್ಲದ್ದರಿಂದ ದೈನಂದಿನ ಜೀವನದಲ್ಲಿ ಉದಾಸೀನತೆ ಕಾಡಲಿದೆ.ಕೆಲವೊಮ್ಮೆ ನಿಮ್ಮ ಇಚ್ಛೆಗೆ ವಿರುದ್ಧವಾಗಿಯೇ ಎಲ್ಲವೂ ನಡೆಯಲಿವೆ, ಮಾನಸಿಕ ಚಿಂತೆ ನಿಮ್ಮನ್ನು ಹೈರಾಣಾಗಿಸುವುದು. ಹಳೇ ರೋಗಗಳು ಮರುಕಳಿಸುವ ಸಂಭವವಿದೆ. ಆದರೂ ವರ್ಷದ ಮಧ್ಯದಲ್ಲಿ ಕೆಲವು ಉತ್ತಮ ಫಲಗಳು ಕಂಡುಬರಲಿವೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ, ಪುಣ್ಯಕ್ಷೇತ್ರಗಳ ದರ್ಶನ, ಸಾಧು-ಸಂತರ ಭೇಟಿ, ಸಾಮಾಜಿಕ ಮನ್ನಣೆ ಮುಂತಾದವುಗಳು ದೊರೆಯಲಿವೆ. ವೃಥಾ ತಿರುಗಾಟವನ್ನು ತಡೆಯುವುದು ಉತ್ತಮ. ಬಂಧು-ಮಿತ್ರರ ನೆರವು ಸಕಾಲದಲ್ಲಿ ಸಿಗಲಿದೆ. ಕೈಗಾರಿಕೋದ್ಯಮಿಗಳಿಗೆ ಕಾರ್ಮಿಕರ ಸಮಸ್ಯೆ ಕಾಡಬಹುದು. ವ್ಯಾಪಾರದಲ್ಲಿ ಪಾಲುದಾರರಿಂದ ಕಿರಿಕಿರಿ. ಸಾಂಸಾರಿಕ ಭಿನ್ನಾಭಿಪ್ರಾಯಗಳು ದೂರವಾಗಿ ನೆಮ್ಮದಿ ಕಾಣುವಿರಿ. ತಜ್ಞ ವೈದ್ಯರಿಂದ ಮಾತ್ರ ಆರೋಗ್ಯ ಸುಧಾರಿಸುವುದು. ಆದಾಯದಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರಲಿವೆ. ಆದ್ದರಿಂದ ಖರ್ಚಿನ ಮೇಲೆ ಹಿಡಿತವಿರಲಿ.

ವೃಶ್ಚಿಕ ರಾಶಿ 

ತೃತೀಯ ಸ್ಥಾನದಲ್ಲಿರುವ ಶನಿ ಗ್ರಹವು ಉತ್ತಮನಾಗಿರುವುದರಿಂದ ವರ್ಷಾರಂಭದಲ್ಲಿ ಅನೇಕ ಶುಭ ಫಲಗಳನ್ನು ನಿರೀಕ್ಷಿಸಬಹುದು. ಜೊತೆಗೆ ದೈವಬಲವೂ ಅತ್ಯುತ್ತಮವಾಗಿರುವುದರಿಂದ ಸ್ವಂತ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣಲಿದೆ. ಆದಾಯದ ಮೂಲದಲ್ಲೂ ಹೆಚ್ಚಳ ಕಂಡುಬರಲಿದೆ. ಹದಗೆಟ್ಟಿದ್ದ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುವುದು. ಅಲ್ಪಪ್ರಯತ್ನದಿಂದಲೇ ಅನೇಕ ಕಾರ್ಯಗಳನ್ನು ಸಾಧಿಸುವಿರಿ. ಸ್ಥಿರಾಸ್ತಿಗೆ ಯತ್ನಿಸುವ ನಿಮ್ಮ ಆಲೋಚನೆ ಫಲಪ್ರದವಾಗಲಿದೆ. ಹಳೇ ಸಾಲಗಳು ಕ್ರಮೇಣ ತೀರಲಿವೆ. ಆದರೆ ವರ್ಷದ ಮಧ್ಯದಲ್ಲಿ, ಗುರುಗ್ರಹವು ಅಶುಭದಾಯಕನಾಗಿರುವುದರಿಂದ ಮಕ್ಕಳ ಭವಿಷ್ಯಕ್ಕೋಸ್ಕರ ವೃಥಾ ತಿರುಗಾಟ ಅನಿವಾರ್ಯವಾಗಬಹುದು. ಅಪರಿಚಿತ ರೊಂದಿಗೆ ಮಾಡುವ ಹಣ-ಕಾಸಿನ ವ್ಯವಹಾರ ಭಾರೀ ನಷ್ಟವನ್ನುಂಟುಮಾಡಲಿದೆ. ಪ್ರತಿಯೊಂದರಲ್ಲೂ ಎಚ್ಚರದ ನಡೆಯಿಡುವುದು ಉತ್ತಮ. ಅನೇಕ ಘಟನೆಗಳು ನಿಮ್ಮನ್ನು ಕಂಗಾಲಾಗುವಂತೆ ಮಾಡಬಹುದು. ಗುರುಗಳ ಅನುಗ್ರಹವನ್ನು ಸಂಪಾದಿಸಲು ಯತ್ನಿಸಿ, ಮಹಿಳೆಯರಿಗೆ ಸಾಧಾರಣ ದಿನಗಳು. 

ಧನು ರಾಶಿ

ಸಾಡೇಸಾತಿನ ಮಧ್ಯಭಾಗದಲ್ಲಿರುವ ನಿಮಗೆ ಕೆಲವು ವಿಷಯಗಳಲ್ಲಿ ಬಂಧುಗಳಲ್ಲಿ ವಿರೋಧ ಬರಲಿದೆ. ರಾಜಕಾರಣಿಗಳ ಮಾತಿಗೆ ಬೆಲೆಯೇ ಇರುವುದಿಲ್ಲ. ಹಮ್ಮಿಕೊಂಡಿರುವ ಕೆಲಸ ಕಾರ್ಯಗಳಿಗೆ ಹಲವು ಅಡಚಣೆಗಳು ಎದುರಾಗಲಿವೆ. ಖಾಸಗಿ ಕಂಪನಿ ನೌಕರರಿಗೆ ಮೇಲಾಧಿಕಾರಿಗಳಿಂದ ಸಾಕಷ್ಟು ಕಿರಿಕಿರಿ ಅನುಭವಿಸಬೇಕಾದೀತು. ಅನಪೇಕ್ಷಿತ ಸ್ಥಳಗಳಿಗೆ ವರ್ಗಾವಣೆಯಾಗಲಿದೆ. ವ್ಯವಹಾರಗಳಲ್ಲಿ ಕಾನೂನಿನ ಅಡಚಣೆಯಿಂದಾಗಿ ಅದು ಸ್ಥಗಿತಗೊಳ್ಳುವ ಸಂಭವವಿದೆ. ಅನಾವಶ್ಯಕ ಖರ್ಚುಗಳು ಅನಿವಾರ್ಯವಾಗಲಿದ್ದು, ಆರ್ಥಿಕ ಚಿಂತನೆ ಬುಡಮೇಲಾಗಬಹುದು. ನಂತರದ ದಿನಗಳಲ್ಲಿ ಹಲವು ಶುಭ ಫಲಗಳು ಕಂಡುಬರಲಿವೆ. ಕೊಟ್ಟ ಸಾಲಗಳು ಮರಳಿ ಕೈಸೇರಲಿವೆ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ. ಸಾಮಾಜಿಕ ಸ್ಥಾನ-ಮಾನಗಳು ಹೆಚ್ಚಲಿವೆ. ವ್ಯಾಪಾರದಲ್ಲಿ ಅಲ್ಪಪ್ರಗತಿ ಕಂಡುಬರಲಿವೆ. ಕುಲದೇವತಾರಾಧನೆಯಿಂದ ನಿಮ್ಮ ಕಷ್ಟಗಳು ಪರಿಹಾರವಾಗಲಿವೆ. ಗುರುಗಳ ಸೇವೆ ಹೆಚ್ಚು ಮಾಡಿದಷ್ಟೂ ಉತ್ತಮ.

ಮಕರ ರಾಶಿ 

ಸಾಡೇಸಾತಿನಲ್ಲಿರುವ ನಿಮಗೆ ಶನಿಯು ಜನ್ಮಸ್ಥನಾಗಿರುವುದಿಂದ ಶುಭ ಫಲದ ನಿರೀಕ್ಷೆ ಬೇಡ. ಪ್ರತಿಯೊಂದು ಸಣ್ಣ-ಪುಟ್ಟ ಕೆಲಸಗಳಿಗೂ ಬಹಳ ಕಷ್ಟಪಡಬೇಕಾದೀತು. ನಿರೀಕ್ಷಿತ ಮೂಲಗಳಿಂದ ಬರಬೇಕಾದ ಹಣ ಸಕಾಲದಲ್ಲಿ ಬರದೆ ತೊಂದರೆ ಅನುಭವಿಸಬೇಕಾದೀತು. ಮಿತಿಮೀರುತ್ತಿರುವ ಖರ್ಚು-ವೆಚ್ಚಗಳು ಉಳಿತಾಯದ ಹಣವನ್ನು ಕರಗಿಸಬಹುದು. ಕೋರ್ಟ್-ಕಛೇರಿ ವ್ಯವಹಾರಗಳಲ್ಲಿ ತೀವ್ರ ಹಿನ್ನಡೆ ಉಂಟಾಗಲಿದೆ. ಸಾಧ್ಯವಾದಷ್ಟು ಸಾಲ ಮಾಡಬೇಡಿ, ಮತ್ತೊಬ್ಬರ ವೈಯಕ್ತಿಕ ವಿಚಾರದಲ್ಲಿ ಪ್ರವೇಶ ಮಾಡುವುದ ರಿಂದ ಅಪಮಾನ, ನೋವು, ಸಂಕಟಗಳನ್ನು ಅನುಭವಿಸಬೇಕಾದೀತು. ಮೇಲಾಧಿಕಾರಿಗಳಿಂದ ಕಿರುಕಳ ಅನುಭವಿಸದೇ ವಿಧಿಯಿಲ್ಲ. ವರ್ಷದ ಕೊನೆ ಭಾಗದಲ್ಲಿ ಎಲ್ಲವೂ ಸುಧಾರಿಸಲಿದ್ದು, ಪ್ರತಿಯೊಂದು ಸಮಸ್ಯೆಗಳು ಬಗೆಹರಿಯ ಲಿವೆ. ಆರ್ಥಿಕ ಮೂಲದಲ್ಲಿ ಹೆಚ್ಚಳ ಕಂಡುಬರಲಿದೆ, ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ, ಕೃಷಿಕರಿಗೆ ಉತ್ತಮ ದಿನಗಳು.

ಕುಂಭ ರಾಶಿ

ವರ್ಷಪೂರ್ತಿ ಈ ರಾಶಿಯವರು ಸಾಕಷ್ಟು ಎಚ್ಚರದಿಂದಲೇ ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಲೇಸು. ಸಂಪಾದಿಸಿದ್ದೆಲ್ಲವೂ ಅಲ್ಲಿಗಲ್ಲಿಗೆ ಸರಿಹೋಗುವುದರಿಂದ ಉಳಿತಾಯದ ಮಾತು ದೂರವಾದೀತು. ವಿಶೇಷವಾಗಿ ಮಹಿಳೆಯರು ತಾವಾಡುವ ಮಾತಿನ ಮೇಲೆ ಹಿಡಿತವಿಡುವುದು ಉತ್ತಮ. ಮನೆಯಲ್ಲಿ ಈ ಹಿಂದೆ ಗೊತ್ತುಪಡಿಸಿದ್ದ ಮಂಗಳ ಕಾರ್ಯವು ಕಾರಣಾಂತರದಿಂದ ಮುಂದೆ ಹೋಗುವುದು. ಕುಟುಂಬದ ಹಿರಿಯರೊಂದಿಗೆ ಅನಾವಶ್ಯಕ ವಾಗ್ವಾದಬೇಡ. ಆಪ್ತಮಿತ್ರರೊಂದಿಗೆ ಮನಸ್ತಾಪ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ವಾಹನಗಳು ಕಳೆದು ಹೋಗುವ ಸಂಭವವಿದೆ. ಅಮೂಲ್ಯ ವಸ್ತು ಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಉತ್ತಮ.ಸ್ವಯಂ ವೈದ್ಯಕೀಯ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಹುದು. ಯಾವುದೇ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ನಷ್ಟಕ್ಕೆ ಕಾರಣವಾದೀತು. ಮಾನಹಾನಿಯಾಗುವ ಪ್ರಸಂಗದಿಂದ ದೂರವಿರುವುದು ಲೇಸು.

ಮೀನ ರಾಶಿ 

ಈ ರಾಶಿಯವರಿಗೆ ವರ್ಷಪೂರ್ತಿ ಶನಿಗ್ರಹವು ಲಾಭ ಸ್ಥಾನದಲ್ಲಿ ಇರುವುದರ ಜೊತೆಗೆ, ಗುರುಗ್ರಹವೂ ಕೂಡ ವರ್ಷದ ಮಧ್ಯದಲ್ಲಿ ಉತ್ತಮ ಸ್ಥಾನದಲ್ಲಿರುವುದರಿಂದ ಅನೇಕ ಶುಭ ಫಲಗಳು ಕಂಡುಬರಲಿವೆ. ಹದಗೆಟ್ಟಿದ್ದ ಆರ್ಥಿಕ ಪರಿಸ್ಥಿತಿ ಹತೋಟಿಗೆ ಬರಲಿದೆ. ಬಂಧು-ಮಿತ್ರರೊಂದಿಗಿದ್ದ ವಿರೋಧ ದೂರವಾಗಿ ಸೌಹಾರ್ದತೆ ಮೂಡಲಿದೆ. ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆ ಪರಿಹಾರವಾಗಲಿದೆ. ಗಳಿಕೆಯಲ್ಲಿ ಕೊಂಚ ಉಳಿಕೆ ಮಾಡಬಹುದು. ಸಾಮಾಜಿಕ ಸೇವೆಗೆ ವಿಶೇಷ ದೇಣಿಗೆ ನೀಡುವಿರಿ. ದಾನ-ಧರ್ಮ ಮಾಡಿ, ಮಾನಸಿಕ ನೆಮ್ಮದಿ ಪಡೆಯುವಿರಿ. ಖಾಸಗಿ ಕಂಪನಿ ನೌಕರರಿಗೆ ವರ್ಗಾವರ್ಗಿ ಯಾಗಲಿದೆ. ಮಕ್ಕಳು ಮಾಡಬಹುದಾದ ದುಂದುವೆಚ್ಚಗಳಿಗೊಂದು ಕಡಿವಾಣ ಹಾಕದೇ ಹೋದಲ್ಲಿ ತೊಂದರೆ ಅನುಭವಿಸಬೇಕಾದೀತು. ಅನಗತ್ಯ ಪ್ರಯಾಣ ಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ವಸ್ತ್ರಾಭರಣಗಳ ಖರೀದಿ ಜೋರಾಗಿ ನಡೆಯಲಿದೆ. ಹಿರಿಯರ ಸಲಹೆಯಂತೆ ನಡೆದುಕೊಳ್ಳುವುದು, ವ್ಯವಹಾರ ವೃದ್ಧಿಗೆ ಕಾರಣವಾಗುವುದು. ಕುಲದೇವತಾರಾಧನೆ ಮಾಡುವುದು ಶ್ರೇಯಸ್ಕರ.

(ವಿಶೇಷ ಸೂಚನೆ :- ಮೇಲ್ಕಂಡ ದ್ವಾದಶ ರಾಶಿಗಳ ಫಲಾಫಲಗಳು ಸರ್ವೇಸಾಮಾನ್ಯವಾಗಿದ್ದು, ಅವರವರ ಜಾತಕಗಳಲ್ಲಿ ಕಂಡು ಬರುವ ದಶಾ, ಅಂತರ್ದಶಾಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುವ ಸಂಭವವಿರುತ್ತದೆ.ಆದ್ದರಿಂದ ವಿಶೇಷವಾಗಿ ತಿಳಿದುಕೊಳ್ಳಲು ನಿಮ್ಮ ವಿಶ್ವಸನೀಯ ಜ್ಯೋತಿಷ್ಕರನ್ನು ಸಂಪರ್ಕಿಸಿ.)


ಜಯತೀರ್ಥಾಚಾರ್ ವಡೇರ್, ದಾವಣಗೆರೆ.
[email protected]