ವಾರ ಭವಿಷ್ಯ

Home ವಾರ ಭವಿಷ್ಯ

02.01.2022 ರಿಂದ 08.01.2022

ಜಯತೀರ್ಥಾಚಾರ್ ವಡೇರ್, ದಾವಣಗೆರೆ. 

ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ವ್ಯವಹಾರಗಳ ಅಭಿವೃದ್ಧಿಗೆ ಸಂಪನ್ಮೂಲವನ್ನು ಹಲವು ಮೂಲಗಳಲ್ಲಿ ಹುಡುಕಲು ಯತ್ನಿಸುವಿರಿ ಮತ್ತು ಅದರಲ್ಲಿ ಸಾಕಷ್ಟು ಯಶಸ್ವಿಯಾಗುವಿರಿ. ಸ್ನೇಹಿತರಿಗೆ ಸಲಹೆ, ಈ ಹಿಂದೆ ನಿಂತುಹೋಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸುವ ಮೊದಲು ಆತ್ಮಾವಲೋಕನವನ್ನು ಮಾಡಿಕೊಳ್ಳಿ, ಇಷ್ಟು ದಿನಗಳ ಕಾಲ ನಿಮ್ಮಿಂದ ಮುಚ್ಚಿಟ್ಟಿದ್ದ ಮನೆಯ ಹಲವು ಗಂಭೀರ ಸಮಸ್ಯೆಗಳು ಈ ವಾರ ನಿಮ್ಮ ಮುಂದೆ ಅನಾವರಣಗೊಳ್ಳಲಿವೆ.ಶಾಂತಚಿತ್ತತೆಯಿಂದ ಕುಳಿತು ವಿಚಾರ ಮಾಡಿದಲ್ಲಿ ಮಾತ್ರ ಸಮಸ್ಯೆಗಳಿಗೆ ಪರಿಹಾರ, ಹಣಕಾಸಿನ ಹರಿವು ಚೆನ್ನಾಗಿಯೇ ಇರುವುದರಿಂದ ಚಿಂತೆಬೇಡ, ರಾಜಕಾರಣಿಗಳ ಜೊತೆ ಸ್ನೇಹ, ಗುರು ಜಪ ಮಾಡಿರಿ. ಭಾನು -ಸೋಮ -ಮಂಗಳ -ಶುಭ ದಿನಗಳು.


ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)

ಅತ್ಯುತ್ತಮ ಗಾಯಕರಿಗೆ ಹಾಗು ಕಲಾವಿದರಿಗೆ ವಿದೇಶದಲ್ಲಿ ಭಾರತೀಯ ಸಂಸ್ಕೃತಿಯ ಪ್ರಚಾರ ರಾಯಭಾರಿಯಾಗುವ ಯೋಗವಿದೆ. ಹಿರಿಯರಾಡುವ ಹಿತನುಡಿಗಳನ್ನು ಕೇಳಿ, ಮತ್ತೊಬ್ಬರ ವೈಯಕ್ತಿಕ ವಿಚಾರಗಳಲ್ಲಿ ಮಧ್ಯಪ್ರವೇಶಿಸಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಮಹಿಳಾ ರಾಜಕಾರಣಿಗಳು ವಿವಾದಾತ್ಮಕ ಹೇಳಿಕೆಯನ್ನು ಕೊಡುವುದರಿಂದ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗುವರು. ಹದಗೆಟ್ಟಿದ್ದ ಹಣಕಾಸಿನ ಪರಿಸ್ಥಿತಿ ಸರಿಯಾಗಲಿದೆ. ವ್ಯಾಪಾರವ್ಯವಹಾರಗಳಲ್ಲಿ, ವಹಿ ವಾಟು ಸಾಧಾರಣ, ಜ್ಞಾನಿಗಳೊಂದಿಗೆ ಸಮಾಗಮ, ಬುಧ -ಶುಕ್ರ -ಶನಿ- ಶುಭ ದಿನಗಳು.


ಮಿಥುನ (3,4, ಆರಿದ್ರಾ, ಪುನರ್ವಸು 1,2,3)
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಆಸ್ತಿಗೆ ಸಂಬಂಧಿಸಿದ ಕಾನೂನಾತ್ಮಕ ಹೋರಾಟದಲ್ಲಿ ತಕ್ಕಮಟ್ಟಿಗೆ ಜಯ ಸಾಧಿಸುವಿರಿ. ಮನೆಯಲ್ಲಿ ಹಿರಿಯರ ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಕಡಿಮೆಯಾಗಲಿದೆ, ಆದ್ದರಿಂದ ಅದನ್ನು ಸಾಧಿಸಲು ಪ್ರಯತ್ನಿಸುವುದು ಉತ್ತಮ. ಸರ್ಕಾರಿ ಉದ್ಯೋಗ ನಿಮಿತ್ತ ಪ್ರಯಾಣ, ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಹಲವು ಮಾರ್ಗೋಪಾಯ ಹುಡುಕಲು ಯತ್ನಿಸುವಿರಿ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವೊಂದು, ಪ್ರಭಾವೀ ರಾಜಕಾರಣಿಯೊಬ್ಬರ ನೆರವಿನಿಂದ ಶೀಘ್ರದಲ್ಲಿಯೇ ನೆರವೇರಲಿದೆ. ನಿರುದ್ಯೋಗಿಗಳಿಗೆ ನೌಕರಿ ಸಿಗಲಿದೆ. ಗಣಪತಿ ಆರಾಧಿಸಿ. ಸೋಮ -ಬುಧ -ಗುರು -ಶುಭ ದಿನಗಳು.


ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಮತ್ತೊಬ್ಬರ ಬಗ್ಗೆ ಚಿಂತಿಸದಿರುವುದು ಲೇಸು, ಖಾಸಗಿ ಕಂಪನಿ ನೌಕರರು ಪದೋನ್ನತಿಗಾಗಿ ಹರ ಸಾಹಸ, ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದ ಮಕ್ಕಳು ಸಾಕಷ್ಟು ಪ್ರಗತಿ ಸಾಧಿಸಲಿದ್ದಾರೆ. ಸೋದರನೊಂದಿಗಿದ್ದ ಭಿನ್ನಾಭಿಪ್ರಾಯ ದೂರವಾಗಲಿದೆ. ಮತ್ತೊಬ್ಬರಿಗೆ  ಜಾಮೀನಾದಲ್ಲಿ ತೊಂದರೆಗಳ ಸರಮಾಲೆ, ಪೂರ್ವಯೋಜಿತ ಕಾರ್ಯಕ್ರಮಗಳು ಕಾರಣಾಂತರದಿಂದ ಮುಂದೆ ಹೋಗಲಿವೆ. ಕ್ರೀಡಾಪಟುಗಳಿಗೆ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ, ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದು, ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲಿದೆ. ಬೆಲೆಬಾಳುವ ವಸ್ತುಗಳು ಕಳ್ಳತನವಾಗದಂತೆ ಎಚ್ಚರವಹಿಸಿ. ಭಾನು -ಸೋಮ -ಬುಧ -ಶುಭ ದಿನಗಳು.


ಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ಸಮಾಜದಲ್ಲಿ ಗಣ್ಯಾತಿಗಣ್ಯರೊಂದಿಗೆ ಉತ್ತಮ ಸಂಬಂಧ, ಪ್ರಸಂಗಕ್ಕೆ ಅನುಗುಣವಾಗಿ ನಿಮ್ಮ ನಿರ್ಧಾರಗಳನ್ನು ಬದಲಾಯಿಸಿಕೊಂಡಲ್ಲಿ ಏನೂ ತಪ್ಪಿಲ್ಲ.ಅನಿರೀಕ್ಷಿತ ಘಟನೆಯಿಂದಾಗಿ ಉದ್ಯೋಗದಲ್ಲಿ ಬದಲಾವಣೆ, ವಿಚಾರಗಳನ್ನು ಸರಿಯಾಗಿ ತಿಳಿಯದೇ ಹಿರಿಯರೊಂದಿಗೆ ವಾಗ್ವಾದ ಮಾಡಲು ಹೋಗಬೇಡಿ, ವಾಹನದಲ್ಲಿ ಎಚ್ಚರದಿಂದಿರಿ, ಅನುಕೂಲಕ್ಕೆ ತಕ್ಕಷ್ಟು ಹಣಕಾಸಿನ ಹರಿವಿರುವುದರಿಂದ ಚಿಂತೆಬೇಡ.ಮಾಡಲಾಗದ ಕೆಲಸಗಳನ್ನು ಖಂಡಿತಾ ಮಾಡಲು ಹೋಗಬೇಡಿ. ಇಲ್ಲವಾದಲ್ಲಿ ತುಂಬಾ ತೊಂದರೆಗೆ ಸಿಲುಕಬೇಕಾದೀತು. ಮಾನಸಿಕ ಗೊಂದಲಗಳಿಂದ ಹೊರಬರಲು ಯತ್ನಿಸಿ.ಭಾನು, ಮಂಗಳ, ಗುರು, ಶುಭ ದಿನಗಳು.


ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಪಟ್ಟುಬಿಡದೆ ಮಾಡಿದ ಕೆಲಸಗಳು ಸಿದ್ಧಿಸಲಿವೆ. ವಿದ್ಯುದುಪಕರಣಗಳನ್ನು ಬಳಸುವಾಗ ಸಾಕಷ್ಟು ಎಚ್ಚರದಿಂದಿರಿ. ಪದವೀಧರರಾದ ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಮೂಡಲಿದೆ. ಸಜ್ಜನರ ಬಗ್ಗೆ ಹೀಯಾಳಿಕೆ ಮಾತುಗಳು ಬೇಡ, ಕೀಟನಾಶಕ ವಸ್ತುಗಳನ್ನು  ಚಿಕ್ಕಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ. ಸಮಾಜ ಸೇವೆಯಲ್ಲಿ ತೊಡಗಿಕೊಂಡವರಿಗೆ ಮಾನಾಪಮಾನಗಳು ಸಹಜ, ಎದೆಗುಂದದೆ ಮುನ್ನಡೆಯುವುದು ಉತ್ತಮ. ನೃತ್ಯ ಕಲಾವಿದರಿಗೆ ಉತ್ತಮ ವೇದಿಕೆ ದೊರೆಯುವುದಲ್ಲದೆ, ಪ್ರಯಾಣ ನಿಮಗೆ ಸಂಕಟವನ್ನುಂಟುಮಾಡಲಿದೆ. ಮಂಗಳ -ಗುರು -ಶುಕ್ರ -ಶುಭ ದಿನಗಳು.


ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)

ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲು ಹೆಚ್ಚಿನ ಅವಕಾಶ ದೊರೆಯಲಿದೆ. ನಿರುದ್ಯೋಗಿಗಳು ನೌಕರಿಯನ್ನರಸಿ ಹೆಚ್ಚಿನ ತಿರುಗಾಟ, ರಾಜಕಾರಣವನ್ನು ಸೇರಬೇಕೆಂಬ ತುಡಿತ ಸಹಜವಾಗಿದ್ದರೂ ಕೂಡ, ನಿಮ್ಮ ಇತಿಮಿತಿಗಳ ಅರಿವಿರುವುದು ಉತ್ತಮ. ಸರ್ಕಾರಿ ಮೇಲಾಧಿಕಾರಿಗಳು ಕಾಣದ ಕೈಗಳ ಪ್ರಲೋಭನೆಗಳಿಗೆ ಒಳಗಾಗಿ, ನೌಕರಿಗೆ ಸಂಚಕಾರ ತಂದುಕೊಳ್ಳುವ ಪ್ರಸಂಗ ಬರಬಹುದು. ಆತ್ಮಗೌರವದೊಂದಿಗೆ ನಡೆದುಕೊಳ್ಳುವವರಿಗೆ ಯಾರಿಂದಲೇ ಆಗಲಿ, ಯಾವುದಕ್ಕೇ ಆಗಲೀ ಹೆದರಬೇಕಾಗಿಲ್ಲ. ಮನೆಕಟ್ಟುವ ವಿಚಾರವಿದ್ದಲ್ಲಿ, ಈಗ ಅದಕ್ಕೆ ಸಕಾಲ. ಅದಕ್ಕೆ ಬೇಕಾದ ಆರ್ಥಿಕ ನೆರವು ತಾನಾಗಿಯೇ ಒದಗಿಬರಲಿದೆ. ಬುಧ -ಶುಕ್ರ -ಶನಿ -ಶುಭ ದಿನಗಳು.


ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯು.)

ನಿವೃತ್ತಿಯಂಚಿನಲ್ಲಿರುವವರಿಗೆ ನಯವಂಚಕರಿಂದ ಭಾರೀ ಮೋಸ, ಬಗೆಹರಿಯದ ಆರೋಗ್ಯ ಸಮಸ್ಯೆ ನಿಮ್ಮನ್ನು ಹೈರಾಣಾಗಿಸಲಿದೆ. ತುಸು ತಾಳ್ಮೆಯಿಂದ ಬಗೆಹರಿಯ ಬೇಕಾಗಿರುವ ವ್ಯಾಜ್ಯಗಳು ಕೋರ್ಟ್-ಕಛೇರಿಯೆಂದು ಅಲೆದಾಡ ಬೇಕಾದೀತು. ಈಗಲೂ ಕಾಲಮಿಂಚಿಲ್ಲ, ರಾಜೀ-ಪಂಚಾಯ್ತಿ ಮುಖಾಂತರ ಬಗೆಹರಿಸಿ ಕೊಳ್ಳಲು ಪ್ರಯತ್ನಿಸಿ. ಚಿಕ್ಕಮಕ್ಕಳ ಜಗಳಗಳಲ್ಲಿ  ದೊಡ್ಡವರು ಪ್ರವೇಶ ಮಾಡದಿರುವುದು ಲೇಸು. ಸಂದೇಹಾಸ್ಪದ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು ಉತ್ತಮ. ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣುವ ನಿಮಗೆ ಸಾಮಾಜಿಕ ಜೀವನದಲ್ಲಿ ಕಳಂಕ ತಪ್ಪಿದ್ದಲ್ಲ.  ಯುವಕರು ಅನಾವಶ್ಯಕವಾಗಿ ಹಣವನ್ನು ಪೋಲು ಮಾಡುವರು. ಅವಿವಾಹಿತರಿಗೆ ಕಂಕಣಭಾಗ್ಯ. ಸೋಮ -ಮಂಗಳ- ಬುಧ -ಶುಭ ದಿನಗಳು.


ಧನಸ್ಸು (ಮೂಲ, ಪೂರ್ವಾಷಾಡ, ಉತ್ತರಾಷಾಡ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಹೊಸ ವಾಹನದ ಖರೀದಿ ವಿಚಾರ ಸದ್ಯಕ್ಕೆ ಬೇಡ, ಬಂಧುಗಳೊಬ್ಬರ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ. ನಿರುದ್ಯೋಗಿ ಮಗನಿಗೆ ನೌಕರಿ ಕೊಡಿಸು ವಿಚಾರದಲ್ಲಿ ಹರಸಾಹಸ, ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯರಿಗೆ, ಈ ವಾರದಿಂದ ಸಾಕಷ್ಟು ಸುಧಾರಣೆ, ಸಮಾಜ ಸೇವೆಯಲ್ಲಿ ತೊಡಗಿಕೊಂಡವರಿಗೆ ಸರ್ಕಾರದಿಂದ ಸನ್ಮಾನವಾಗಲಿದೆ. ವಾರದ ಮಧ್ಯದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿತ ಕಾಣುವುದರಿಂದ ಖರ್ಚುವೆಚ್ಚಗಳ ಮೇಲೆ ಹಿಡಿತಸಾಧಿಸುವುದು ಒಳಿತು. ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ವಹಿವಾಟು ಉತ್ತಮ ಲಾಭ, ಜೊತೆಗೆ ಆದಾಯದಲ್ಲಿ ವೃದ್ಧಿಕಾಣಲಿದೆ. ದುರ್ಗಾರಾಧನೆಯಿಂದ ಹೆಚ್ಚಿನ ಪುಣ್ಯಲಭಿಸಲಿದೆ. ಭಾನು -ಸೋಮ -ಗುರು -ಶುಭ ದಿನಗಳು.


ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ರಾಜಕಾರಣಿಗಳ ಭರವಸೆ ನಂಬಿಕೊಂಡು ಯಾವುದೇ ಕೆಲಸ ಕಾರ್ಯಗಳನ್ನು ಕಾರ್ಯರೂಪಕ್ಕೆ ತರುವ ಹುಚ್ಚು ಸಾಹಸಕ್ಕೆ ಕೈಹಾಕಬೇಡಿ, ಲಘು ಊಟ -ಉಪಹಾರಗಳ ತಯಾರಕರಿಗೆ ಬೇಡಿಕೆ ಹೆಚ್ಚಲಿದ್ದು, ಆದಾಯ ದುಪ್ಪಟ್ಟಾಗಲಿದೆ. ಪ್ರತಿಯೊಂದು ಕೆಲಸಗಳಿಗೂ ಪರರನ್ನು ಅವಲಂಬಿಸುವುದನ್ನು ಬಿಡದೇ ಹೋದಲ್ಲಿ ಭಾರೀ ನಷ್ಟ, ಸಂಶೋಧನಾ ವಿದ್ಯಾರ್ಥಿಗಳ ವಿಚಾರಾತ್ಮಕವಾದ ಚಿಂತನ-ಮಂಥನಗಳಿಂದ ಕೂಡಿದ ಪ್ರಬಂಧಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ, ಸರ್ಕಾರದಿಂದ ಸಾಕಷ್ಟು ಆರ್ಥಿಕ ನೆರವು, ಅವಿವೇಕಿಗಳೊಂದಿಗೆ ವಾದ-ವಿವಾದ ಬೇಡ, ಉಳಿತಾಯದ ಬಗ್ಗೆ ಯೋಚಿಸಬಹುದು. ಸಾಕುಪ್ರಾಣಿಗಳಿಂದ ಅಪಾಯ, ಎಚ್ಚರದಿಂದಿರಿ. ಬುಧ -ಗುರು- ಶನಿ -ಶುಭ ದಿನಗಳು.


ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ಹಣಕಾಸಿನ ಮೂಲದಲ್ಲಿ ಹೆಚ್ಚಳ, ಖರ್ಚು-ವೆಚ್ಚಗಳು ಮಿತಿಮೀರಿದಲ್ಲಿ ಮುಂದೆ ಉಳಿತಾಯದ ಗಂಟೂ ಕೂಡ ಕರಗಬಹುದು. ಹಿರಿಯರಿಗೆ ಸಂಘ-ಸಂಸ್ಥೆಗಳಲ್ಲಿ ಉನ್ನತ ಹುದ್ದೆ ದೊರೆಯಲಿದ್ದು, ಸ್ಥಿರ ಆಸ್ತಿಗಳನ್ನು ಕೊಳ್ಳುವ ವೇಳೆ ತಪ್ಪು ದಾಖಲೆಗಳಿಂದಾಗಿ ಮುಂಗಡ ಹಣವನ್ನು ಕಳೆದುಕೊಳ್ಳುವ ಸಂಭವವಿದೆ. ಯುವಕರಿಗೆ ಆತ್ಮವಿಶ್ವಾಸ ಉತ್ತಮ.ಶೃಂಗಾರ ಸಾಧನಗಳ ಮಾರಾಟಗಾರರಿಗೆ ವ್ಯವಹಾರ ಹೆಚ್ಚಲಿದೆ. ಕೆಲವೊಂದು ಸಮಸ್ಯೆಗಳಿಗೆ ನಿಮ್ಮಲ್ಲೇ ಪರಿಹಾರ, ತುಸು ತಾಳ್ಮೆಯಿಂದ ವರ್ತಿಸುವುದನ್ನು ಕಲಿಯಿರಿ. ಅತಿಯಾದ ಮೋಜು, ಮಸ್ತಿಗಳಿಂದಾಗಿ ಆರೋಗ್ಯದಲ್ಲಿ ಏರುಪೇರು, ಕರಿದ ಪದಾರ್ಥಗಳನ್ನು ವರ್ಜಿಸುವುದು ಎಲ್ಲಾ ರೀತಿಯಿಂದ ಉತ್ತಮ. ಗುರು -ಶುಕ್ರ -ಶನಿ -ಶುಭ ದಿನಗಳು.


ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)

ಸ್ನೇಹಿತರೊಂದಿಗಿದ್ದ ಹಣಕಾಸಿನ ವ್ಯವಹಾರವನ್ನು ರಾಜೀ ಪಂಚಾಯ್ತಿ ಯೊಂದಿಗೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ ಏಕಕಾಲದಲ್ಲಿಯೇ ಹತ್ತು ಹಲವು ಕೆಲಸಗಳನ್ನು ಮಾಡುತ್ತೇನೆಂಬ ಹುಂಬತನಕ್ಕೆ ಬೀಳಬೇಡಿ. ಇದರಿಂದ ಎಲ್ಲಾ ಕೆಲಸಗಳು ಅರ್ಧದಲ್ಲೇ ನಿಂತು ಅಪಹಾಸ್ಯಕ್ಕೆ ಈಡಾಗುವಿರಿ. ಈ ಸಂದರ್ಭದಲ್ಲಿ ಉತ್ತಮ ಗುರುಗಳ ಸಲಹೆ ಮತ್ತು ಮಾರ್ಗದರ್ಶನ ಪಡೆಯುವುದು ಮೇಲು. ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಾರಾಟಗಾರರಿಗೆ ಮತ್ತು ಕಟ್ಟಡ ಕಟ್ಟುವ ಕಾರ್ಮಿಕರಿಗೆ ಉತ್ತಮ ಸಂಪಾದನೆ, ಸಂಗಾತಿಯ ಕೋರಿಕೆಯನ್ನು ಪೂರೈಸಲು ಹೆಚ್ಚು ಹಣ ಖರ್ಚಾಗಬಹುದು. ಭಾನು -ಸೋಮ -ಗುರು -ಶುಭ ದಿನಗಳು.