ಶಿಕ್ಷಕರಿಗೂ ನೈತಿಕ ಶಿಕ್ಷಣ ಅಗತ್ಯ

ಶಿಕ್ಷಕರಿಗೂ ನೈತಿಕ ಶಿಕ್ಷಣ ಅಗತ್ಯ

ಮಹಿಳಾ ಸಮಾಜದ ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರಿ ಲೀಲಾಜಿ 

ದಾವಣಗೆರೆ, ಜ. 20-  ಮೊದಲು ಶಿಕ್ಷಕರಿಗೆ ನೈತಿಕ, ಅಧ್ಯಾತ್ಮಿಕ, ಮೌಲ್ಯಯುತ ಶಿಕ್ಷಣ ನೀಡುವುದು ಇಂದಿನ ಅಗತ್ಯವಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ  ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜ ಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಪ್ರತಿಪಾದಿಸಿದರು.

ನಗರದಲ್ಲಿ ಇಂದು ನಡೆದ ಮಹಿಳಾ ಸೇವಾ ಸಮಾಜ ಶಾಲಾ ಆವರಣದಲ್ಲಿ ಮಹಿಳಾ ಸೇವಾ ಸಮಾಜ ನರ್ಸರಿ, ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಜತ ಮಹೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತ ಪೋಷಕರು, ಶಿಕ್ಷಕರು, ಮಕ್ಕಳಲ್ಲಿ ಮೌಲ್ಯ ಗಳು ಮರೆಯಾಗುತ್ತಿವೆ. ಪ್ರಮುಖವಾಗಿ ಮಕ್ಕಳಲ್ಲಿರುವ ಕಲಹ, ಕ್ಲೇಶ, ದ್ವೇಷ ಭಾವನೆಗಳನ್ನು ತೊಡೆದು ಹಾಕಲು ಅವರಿಗೆ ನೈತಿಕ ಶಿಕ್ಷಣ ನೀಡುವುದು ಅವಶ್ಯ ಎಂದರು.

ಇಂದಿನ ವಿದ್ಯಾರ್ಥಿಗಳಲ್ಲಿ ವಿನಯ, ಸಹನೆ ಗುಣಗಳು ಕಾಣಸಿಗದು. ಓದು ಕೇವಲ ಹಣ ಗಳಿಕೆಗೆ ಸೀಮಿತವಾಗುತ್ತಿದೆ. ವಿದೇಶಕ್ಕೆ ಹೋಗಬೇಕು, ಇಂಜಿನಿಯರ್, ಡಾಕ್ಟರ್ ಆಗಬೇಕೆಂಬ ಮನೋಭಾವನೆ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿನ ವಿದ್ಯಾರ್ಥಿಗಳು ವಿಧ್ವಂಸಕ ಕೃತ್ಯಗಳಲ್ಲಿ ತೊಡಗುತ್ತಿರುವುದು ವಿಷಾದದ ಸಂಗತಿಯಾಗಿದೆ. ವಿನಯ, ವಿಚಾರವಂತಿಕೆ, ನೈತಿಕತೆ ಇಲ್ಲವಾಗಿದೆ. ಹಾಳು ಮಾಡುವುದರಲ್ಲಿಯೇ ಆನಂದ ಸಿಗುತ್ತದೆ ಎಂಬ ಭ್ರಮೆಯಲ್ಲಿ ಬದುಕು ಸಾಗಿಸುವವರಿದ್ದಾರೆ ಎಂದರು.

ವಿದ್ಯಾರ್ಥಿಗಳು ಮೊಬೈಲ್, ಟಿವಿ ಗೀಳಿಗೆ ಅಂಟಿಕೊಂಡಿದ್ದಾರೆ. ಪೋಷಕರೂ ಸಹ ಮೊಬೈಲ್ ಗೆ ದಾಸರಾಗಿದ್ದು, ಮಕ್ಕಳ ಬಗೆಗಿನ ಕಾಳಜಿ ಕಡಿಮೆಯಾ ಗುತ್ತಿದೆ. ತಾಯಿಗೆ ಮಕ್ಕಳಿಗೆ ಊಟ ಬಡಿಸುವ ಸೌಜನ್ಯ ಇಲ್ಲದಷ್ಟು ಮೊಬೈಲ್ ಬಳಕೆಯಲ್ಲಿ ಮುಳುಗಿರುತ್ತಾರೆ. ಜೀವನದ ಮಹತ್ವವನ್ನೇ ಮರೆಯುತ್ತಿದ್ದಾರೆಂದರು.

ಮಕ್ಕಳು ವಿನಾಶ ಭಾವನೆ ಬಿಟ್ಟು ರಚನಾತ್ಮಕ, ಹೊಸ ಹೊಸ ಆವಿಷ್ಕಾರಗಳ ಕಡೆ ಗಮನಹರಿಸುವುದು ಒಳ್ಳೆಯದು. ಜಾತೀಯತೆ ಬಿಟ್ಟು ಭ್ರಾತೃತ್ವ ಭಾವನೆ ಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.ಶಿಕ್ಷಕರಿಗೆ ನೈತಿಕ ಶಿಕ್ಷಣದ ತರಬೇತಿ ಏರ್ಪಡಿಸುವ ಮೂಲಕ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕಾಗಿದೆ. ತನ್ಮೂಲಕ ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವಂತೆ ಶಿಕ್ಷಕರು ಮತ್ತು ಪಾಲಕರಲ್ಲಿ ಮನವಿ ಮಾಡಿದರು.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ. ದಾರುಕೇಶ್ ರಜತ ಸೌರಭ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಮಹಿಳಾ ಸೇವಾ ಸಮಾಜ ಅಧ್ಯಕ್ಷೆ ಕೆ.ಕೆ. ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನೀಲಗುಂದ ಜಯಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಬೂಸನೂರು ಪ್ರಕಾಶ್ ಮಾತನಾಡಿದರು. ಶಾಲಾ ಆಡಳಿತಾಧಿಕಾರಿ ವಾಮದೇವಪ್ಪ, ಎಮ್ಮಿ ಶಾರದಮ್ಮ, ಪ್ರಾಚಾರ್ಯರಾದ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ದಿವ್ಯ ಜಂಬಗಿ ಪ್ರಾರ್ಥಿಸಿದರು. ಆರ್. ದಾಕ್ಷಾಯಿಣಮ್ಮ ಸ್ವಾಗತಿಸಿದರು. ಎಂ.ಬಿ. ಜಗದೀಶ್, ಜ್ಯೋತಿ ಭಟ್ ವರದಿ ಮಂಡಿಸಿದರು. ಎಸ್.ಪಿ. ರಾಜಪ್ಪ, ಟಿ. ಜ್ಯೋತಿ ನಿರೂಪಿಸಿದರು. ರವಿಕುಮಾರ್ ವಂದಿಸಿದರು.