ಬೇವಿನ ಮರ ನೆಟ್ಟು, ಮಾವು ಬಯಸುವುದು ತಪ್ಪು

ಬೇವಿನ ಮರ ನೆಟ್ಟು, ಮಾವು ಬಯಸುವುದು ತಪ್ಪು

ದಾವಣಗೆರೆ, ಜ. 22- ಬೇವಿನ ಮರ ನೆಟ್ಟು, ಮಾವು ಬಯಸುವುದು ತಪ್ಪು. ಹಾಗೆಯೇ ಆರಂಭದಲ್ಲಿಯೇ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡದ ಹೊರತು, ಸಮಾಜ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು  ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಎಚ್ಚರಿಸಿದರು.

ನಗರದ ಶ್ರೀ ಸೋಮೇಶ್ವರ ವಿದ್ಯಾಲಯ ದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ `ಸೋಮೇಶ್ವರೋತ್ಸವ-2023’ರ ಸಂಗೀತೋ ತ್ಸವ ಮತ್ತು ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.

ಸ್ವಾತಂತ್ರ್ಯ ಬಂದ ಹೊಸದರಲ್ಲಿ ಪರಂಪರೆಯಿಂದ ಕಲಿತ ಶಿಕ್ಷಣ ಬಿಟ್ಟರೆ, ಸಂಸ್ಕೃತಿ, ಸಂಸ್ಕಾರ ಕುರಿತ ನೈತಿಕ ಶಿಕ್ಷಣ ಇಲ್ಲಿಯವರೆಗೂ ಶಿಕ್ಷಣ ವ್ಯವಸ್ಥೆಯಲ್ಲಿ ತರಲು ಸಾಧ್ಯವಾಗಿಲ್ಲ. ಆರು ವರ್ಷದ ಮಗುವಿಗೆ ಎಂಟು ಭಾಷೆಗಳನ್ನು ಕಲಿಯುವ ಶಕ್ತಿ ಇದೆ. ಆದರೆ ಇಂದಿಗೂ ಯಾವ ಭಾಷಾ ಸೂತ್ರ ಇರಬೇಕು ಎಂಬ ಬಗ್ಗೆ ತೀರ್ಮಾನ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ವೃದ್ಧಾಶ್ರಮ, ಅಬಲಾಶ್ರಮಗಳು ಹೆಚ್ಚಾಗುತ್ತಿರುವುದಕ್ಕೆ, ಅತ್ಯಾಚಾರಗಳು ಹೆಚ್ಚಾಗಲು ಮೂಲಭೂತ ದೇಶದ ಧರ್ಮ ಮರೆತು ಸ್ವಾರ್ಥತೆಯನ್ನು ಶಿಕ್ಷಣದಲ್ಲಿ ತಂದಿದ್ದೇ ಕಾರಣ. ನಾವು, ನಮ್ಮ ಸಮಾಜ, ನಮ್ಮ ದೇಶ, ಎಲ್ಲರೂ ಒಟ್ಟಿಗೆ ಬದುಕ ಬೇಕು ಎನ್ನುವ ಸಿದ್ಧಾಂತ ಇರುವುದು ಭಾರತ ದೇಶದಲ್ಲಿ ಮಾತ್ರ. ಅದನ್ನು ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದರು.

ಸ್ವಾಂತಂತ್ರ್ಯ, ಸಮಾನತೆ ಬಂದಿದೆ. ಆದರೆ ಸಹೋದರತ್ವ ಇನ್ನೂ ಸಿಕ್ಕಿಲ್ಲ. ಅಂದಿನಿಂದಲೂ ನಮ್ಮ ಸಮಾಜ ಕರ್ತವ್ಯ ಪ್ರಜ್ಞೆಯನ್ನು ಹೇಳಿಕೊಟ್ಟಿದೆ. ನಮ್ಮ ಸಮಾಜ ನಿಂತಿರುವುದೇ ಪಾಪ ಪುಣ್ಯಗಳ ಮೇಲೆ. ಮಕ್ಕಳು ತಮ್ಮ ಬದುಕು ಕಟ್ಟಿಕೊಳ್ಳುವಂತಹ ಶಿಕ್ಷಣ ಹೇಗಿರಬೇಕೆಂದು ಸಮಾಜ ನಿರ್ಧರಿಸ ಬೇಕಿದೆಯೇ ಹೊರತು, ಸರ್ಕಾರವಲ್ಲ ಎಂದು ಭಾನುಪ್ರಕಾಶ್ ಹೇಳಿದರು.

ಜಗಳೂರಿನ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ, ಭಾರತ ದೇಶ ತನ್ನ ಸಂಸ್ಕೃತಿ, ಸಂಪ್ರದಾಯ, ಅಧ್ಯಾತ್ಮಿಕತೆಯಿಂದಾಗಿ ವಿಶ್ವಕ್ಕೆ ಗುರುವಾಗಿ ಮೆರೆದ ದೇಶವಾಗಿದೆ. ಇಂತಹ ಸಂಸ್ಕೃತಿ ಹುಟ್ಟುಹಾಕಿದ್ದು ನಮ್ಮ ದೇಶದ ಸಂತರು, ಪುಣ್ಯ ಪುರುಷರು ಎಂದು ಹೇಳಿದರು.

ಅನ್ಯಾಯ ಮಾಡಬೇಡ. ಅದು ಸರ್ವನಾಶಕ್ಕೆ ಎಡೆ ಮಾಡಿಕೊಡುತ್ತದೆ. ಅನ್ಯಾಯವನ್ನು ತಡೆ. ತಡೆಯುವ ಶಕ್ತಿ ಇಲ್ಲದಿದ್ದರೆ ಅಲ್ಲಿರಬೇಡ ಎನ್ನುವ ಗುಣಗಳನ್ನು ಹಿರಿಯರು ಹೇಳಿದ್ದಾರೆ ಅದನ್ನು ಪಾಲಿಸಬೇಕು ಎಂದು ಹೇಳಿದರು.

ಲೇಖಕ, ಅಂಕಣಕಾರ ಎ.ಆರ್. ಮಣಿಕಾಂತ್ ಮಾತನಾಡಿ, ನಿನ್ನಿಂದ ಏನೂ ಸಾಧ್ಯವಿಲ್ಲ ಎಂದು ಬೈದು ಮಕ್ಕಳನ್ನು ನಿರಾಶೆಗೊಳಿಸಬೇಡಿ. ಪ್ರೋತ್ಸಾಹದಾಯಕ ಮಾತುಗಳನ್ನಾಡುವ ಮೂಲಕ ಪ್ರೇರೇಪಿಸಿರಿ ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.

ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಪರೀಕ್ಷೆ ಬಂದಾಗ ಓದುತ್ತೇನೆ. ಕೊನೆಯ ಒಂದು ತಿಂಗಳು ಅಥವಾ ಒಂದು ವಾರ, ಒಂದು ದಿನದಲ್ಲಿ ಓದುತ್ತೇನೆ ಎಂಬ ಆತ್ಮ ವಿಶ್ವಾಸ ಒಳ್ಳೆಯದಲ್ಲ. ಆರಂಭದ ದಿನಗಳಿಂದಲೇ ಓದಲು ಆರಂಭಿಸಿದಾಗ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ, ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪೋಷಕರಿಗೆ ಎಷ್ಟೇ ಕೆಲಸಗಳ ಒತ್ತಡವಿದ್ದರೂ, ಮಕ್ಕಳಿಗಾಗಿ ಒಂದು ಅಥವಾ ಎರಡು ಗಂಟೆ ಮೀಸಲಿಡಬೇಕು. ಒಂದೆರಡು ಬಾರಿ ಹೇಳಿಕೊಟ್ಟಿದ್ದು ಅರ್ಥವಾಗಿಲ್ಲ ಎಂದು ಮಕ್ಕಳ ಮೇಲೆ ಸಿಡಿಮಿಡಿಕೊಗೊಳ್ಳಬಾರದು. ಕೆಲ ಮಕ್ಕಳಿಗೆ, ಕೆಲವೊಮ್ಮೆ ಹತ್ತು ಬಾರಿ ಹೇಳಿದರೂ ಅರ್ಥವಾಗುವುದಿಲ್ಲ. ಇದನ್ನು ಅರಿತು ಪ್ರೀತಿಯಿಂದ ಹೇಳಿಕೊಡಬೇಕು. ಪ್ರತಿ ಮನೆಯಲ್ಲಿಯೂ ಒಬ್ಬ ಹೀರೋ ಆಗಿರುತ್ತಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ದಿವ್ಯಚೇತನ, ಅಂತರರಾಷ್ಟ್ರೀಯ ಈಜುಪಟು ವಿಶ್ವಾಸ್ ಕೆ.ಎಸ್. ಮಾತನಾಡಿ, ಅಂಗವಿಕಲತೆ ಶಾಪವಲ್ಲ, ಅದನ್ನು ವರವನ್ನಾಗಿ ಮಾರ್ಪಡಿಸಿಕೊಳ್ಳಬೇಕು. ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಹತ್ತು ವರ್ಷದವನಿದ್ದಾಗ ಆಕಸ್ಮಿಕ ಅಪ ಘಾತದಿಂದ ಕೈಗಳನ್ನು ಕಳೆದುಕೊಳ್ಳಬೇಕಾ ಯಿತು. ನನ್ನ ತಂದೆಯೂ ಮೃತಪಟ್ಟರು. ಪ್ರತಿ ಕೆಲಸಕ್ಕೂ ತಾಯಿಯನ್ನೇ ಅವಲಂಬಿಸ ಬೇಕಾಗಿತ್ತು. ಜೀವನವೇ ನಿರಾಸೆಯಾಗಿ ಖಿನ್ನತೆಗೆ ಒಳಗಾಗಿದ್ದೆ. ಆದರೆ ಸ್ನೇಹಿತರು, ಕೆಲ ಹಿತೈಷಿಗಳು ಧೈರ್ಯ ತುಂಬಿದರು.

ಮೊದಲು ಈಜು ನನಗೆ ಹವ್ಯಾಸವಾಗಿತ್ತು. ಅದನ್ನೇ ಅಭ್ಯಾಸ ಮಾಡಿ ಕ್ರೀಡೆಯಲ್ಲಿ ಭಾಗವಹಿಸತೊಡಗಿದೆ. ಛಲ ಹಾಗೂ ಆತ್ಮ ವಿಶ್ವಾಸದಿಂದ ಪ್ರಾಕ್ಟೀಸ್ ಮಾಡತೊಡಗಿದೆ.  ಭಾರತಕ್ಕೆ 9 ಪದಕ, ರಾಜ್ಯಕ್ಕೆ 21 ಪದಕ ತಂದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದು ತಮ್ಮ ಯಶೋಗಾಥೆ ವಿವರಿಸಿದರು.

ಮಾರ್ಷಲ್‌ ಆರ್ಟ್‌ನಲ್ಲಿ 7 ಪದಕ ಪಡೆದಿದ್ದಾಗಿ ಹೇಳಿದ ಅವರು, ನನ್ನದೇ ಆದ ಕಥೆಯ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ಇದೀಗ ಗೆದ್ದು ಬಂದ ಮೇಲೆ ಸಮಾಜ ಗುರುತಿಸಿ, ಸನ್ಮಾನಿಸುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕ ಎಲ್. ವಿವೇಕಾನಂದ ಬದ್ದಿ ಅವರಿಗೆ `ಸೋಮೇಶ್ವರ ಸಿರಿ’ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ 621 ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿ ಚಿ. ಡಿ.ಆರ್. ಧೀರಜ್ ಅವರಿಗೆ `ಸಾಧನಾ ಸಿರಿ’ ಪುರಸ್ಕಾರ ನೀಡಲಾಯಿತು.

ಹೆಸರಾಂತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಎಂ.ಡಿ. ಪಲ್ಲವಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.  ಸಂಸ್ಥೆಯ ಸಂಸ್ಥಾಪಕ ಕೆ.ಎಂ. ಸುರೇಶ್, ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಉಪಸ್ಥಿತರಿದ್ದರು.