ಬೆಳ್ಳೂಡಿ-ರಾಮತೀರ್ಥ ಸೇತುವೆ 5 ಕೋಟಿ ರೂ. ವೆಚ್ಚದಲ್ಲಿ ಶೀಘ್ರ ನಿರ್ಮಾಣ

ಬೆಳ್ಳೂಡಿ-ರಾಮತೀರ್ಥ ಸೇತುವೆ  5 ಕೋಟಿ ರೂ. ವೆಚ್ಚದಲ್ಲಿ ಶೀಘ್ರ ನಿರ್ಮಾಣ

ಮಲೇಬೆನ್ನೂರು, ಜ.24 – ಒಂದು ಗ್ರಾಮದಲ್ಲಿ ಇರುವ ಸಮಸ್ಯೆಗಳನ್ನು  ಎಲ್ಲಾ ಇಲಾಖೆಗಳು ಒಂದೇ ಕಡೆ ಬಂದು ಸಾರ್ವಜನಿಕರ ಕಛೇರಿ ಅಲೆದಾಟ ತಪ್ಪಿಸಿ ಸಮಸ್ಯೆಗಳನ್ನು ಬಗೆಹರಿಸುವುದೇ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ದೇಶ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.

ಬೆಳ್ಳೂಡಿ ಗ್ರಾಮದ ಪಟೇಲ್ ಗುರುಬಸಪ್ಪ ಪ್ರೌಢ ಶಾಲೆಯ ಆವರಣದಲ್ಲಿ ಹರಿಹರ ತಾಲ್ಲೂಕು ಆಡಳಿತ ಇಂದು ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ತಮ್ಮ ಕೆಲಸಗಳನ್ನು ಬಿಟ್ಟು ಕಛೇರಿಗಳಿಗೆ ಅಲೆದಾಡುತ್ತಿದ್ದರು, ಅದನ್ನು ತಪ್ಪಿಸಲು ಸರ್ಕಾರ ಈ ಮಹಾತ್ವಕಾಂಕ್ಷಿ ಯೋಜನೆ ಜಾರಿಗೆ ತಂದಿರುವುದು ಉತ್ತಮವಾಗಿದೆ, ಆದ್ದರಿಂದ ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.

ಮಳೆಗೆ ಕೊಚ್ಚಿಹೊಗಿರುವ ಬೆಳ್ಳೂಡಿ – ರಾಮತೀರ್ಥ ಸೇತುವೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ಶೀಘ್ರವೇ ನಿರ್ಮಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ ಡಾ. ಬಿ.ಎಂ.ಅಶ್ವತ್ಥ್‌, ಗ್ರಾಮ ಮಟ್ಟದಿಂದಲೇ ಸರ್ಕಾರ ರಚನೆಯಾಗಿದ್ದು, ಸರ್ಕಾರ ಗ್ರಾಮಗಳ ಉದ್ಧಾರಕ್ಕಾಗಿ ಅಧಿಕಾರಿ ಗಳನ್ನು ಗ್ರಾಮಗಳಿಗೆ ಈ ಕಾರ್ಯಕ್ರಮದ ಮೂಲಕ ಕಳುಹಿಸಿದೆ. ಅಧಿಕಾರಿಗಳಾಗಲೀ, ಚುನಾಯಿತರಾಗಲೀ ಭಾರತ ಮಾತೆಯ ಋಣ ತೀರಿಸಲು ಮುಂದಾಗಿದ್ದು ಅದರ ಸದುಪಯೊಗವನ್ನು ಪಡೆದುಕೊಳ್ಳಲು ಸರ್ವರೂ ಮುಂದಾಗಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸರಬರಾಜು ಆಗುತ್ತಿರುವ ಉಚಿತ ಅಕ್ಕಿ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಅಕ್ಕಿಯಲ್ಲಿ ವಿಟಮಿನ್ ಬಿ ಇರುವ ಮಾತ್ರೆಯ ಅಕ್ಕಿಯನ್ನು ಬೆರೆಸಲಾಗಿದೆ. ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ ಅದು ಪೌಷ್ಠಿಕಾಂಶದ ಅಕ್ಕಿಯಾಗಿದೆ. ಅದನ್ನು ಎಲ್ಲರೂ ಊಟಕ್ಕೆ ಬಳಸಬೇಕು. ಅದೇ ರೀತಿ ಜಲಾಸಿರಿ ಯೋಜನೆಯನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.

ಗ್ರಾ.ಪಂ ಸದಸ್ಯ ಬಿ.ಸಿದ್ದೇಶ್ ದುಂಡಿ ಮಾತನಾಡಿ, ಮರಳು ತುಂಬಾ ದುಬಾರಿಯಾಗಿದೆ, ಆದ್ದರಿಂದ ಬಡವರು ಮನೆ ನಿರ್ಮಾಣ ಮಾಡುವುದು ತುಂಬಾ ಕಷ್ಟವಾಗಿದೆ. ಹಳ್ಳದಲ್ಲಿ ಸಿಗುವ ಮರಳನ್ನು ತಂದು ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ತಹಶೀಲ್ದಾರ್ ಅಶ್ವತ್ಥ್ ಅವರು ಸಂಬಂಧಪಟ್ಟ ಅಧಿಕಾರಿ ಜೊತೆ ಮಾತನಾಡಿ, ಕಾನೂನಿನ ಮೂಲಕ ಹಳ್ಳದ ಮರಳು ಕೊಡಿಸುವ ವ್ಯವ್ಯಸ್ಥೆಯನ್ನು ಮಾಡುತ್ತೇನೆ ಎಂದರು.

ಬೆಳ್ಳೂಡಿ ಗ್ರಾ.ಪಂ ಅಧ್ಯಕ್ಷೆ ಬಿ.ಸುನೀತಾ ಕೋಂ ಪರಶುರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಜಿ.ಎಸ್.ಸುದೀಪ್, ಸದಸ್ಯರಾದ ಎಂ.ಎನ್ ಗೀತಾ ನಾಗರಾಜ್, ಎನ್.ವೀರೇಶ್, ರತ್ನಮ್ಮ ಸಿದ್ದೇಶ್, ಸುಧಾ ಶಿವಕುಮಾರ್, ತಾ ಪಂ ಇಓ ಗಂಗಾಧರನ್, ಟಿ.ಹೆಚ್.ಓ ಡಾ ಚಂದ್ರಮೋಹನ್, ಕೃಷಿ ನಿರ್ದೇಶಕ ಎ. ನಾರನಗೌಡ, ಸಿಡಿಪಿಒ ನಿರ್ಮಲ, ಪಟೇಲ್ ಗುರುಬಸಪ್ಪ ಪ್ರೌಢ ಶಾಲೆಯ ಅಧ್ಯಕ್ಷ ಹನುಮೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಕೆ.ವಿ. ರುದ್ರೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ ಸಿದ್ಧವೀರಪ್ಪ, ತಾ.ಪಂ ಮಾಜಿ ಅಧ್ಯಕ್ಷೆ ಮಂಜುಳಮ್ಮ, ಬೆಸ್ಕಾಂ ಎಇಇ ನಾಗರಾಜ್ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸೈಯದ್ ನಾಸಿರ್ ಹುಸೇನ್, ಕಂದಾಯ ನಿರೀಕ್ಷಕ ಮಂಜು ಮದಕರಿ, ತಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಉಮ್ಮಣ್ಣ  ಮತ್ತಿತರರು ಮಾತನಾಡಿದರು.

ತಹಶೀಲ್ದಾರ್‌ ಕಛೇರಿಯಿಂದ ನೀಡುವ ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಮಾಸಾಶನ ಕೋರಿ ಬಂದ ಅರ್ಜಿಗಳಿಗೆ ಸ್ಥಳದಲ್ಲಿಯೇ ಆದೇಶ ಪತ್ರ ನೀಡಲಾಯಿತು. ಶಾಲಾ ವಿದ್ಯಾರ್ಥಿಗಳು, ಗ್ರಾ.ಪಂ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಊರಿನ ಮುಖಂಡರು, ಮಹಿಳೆಯರು, ರೈತ ಸಂಘದ ಮುಖಂಡರು ಇದ್ದರು.