ಬಸವಣ್ಣನವರ ವಚನಗಳು ಆಧುನಿಕ ಬದುಕಿಗೆ ಸ್ಫೂರ್ತಿದಾಯಕ

ಬಸವಣ್ಣನವರ ವಚನಗಳು ಆಧುನಿಕ ಬದುಕಿಗೆ ಸ್ಫೂರ್ತಿದಾಯಕ

ಶಿವಗೋಷ್ಠಿಯಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಭರಮಣ್ಣ ಮೈಸೂರು

ದಾವಣಗೆರೆ, ಜ. 23- ಬಸವಣ್ಣನವರ ವಚನಗಳಲ್ಲಿ ಅಡಕವಾಗಿರುವ ತತ್ವಗಳು ಆಧುನಿಕ ಬದುಕಿಗೆ ಸ್ಫೂರ್ತಿ ದಾಯಕ. ವಚನಗಳಲ್ಲಿ ವೈಚಾರಿಕತೆ ಇದೆ. ವಚನದ ಯಾವ ಸಾಲೂ ಕೂಡ ನಿಷ್ಪ್ರಯೋಜಕವಲ್ಲ ಎಂದು ನಿವೃತ್ತ ಶಿಕ್ಷಣಾಧಿಕಾರಿ ಭರಮಣ್ಣ ಮೈಸೂರು ಹೇಳಿದರು.

ನಗರದ ತರಳಬಾಳು ಬಡಾವಣೆಯ ಶ್ರೀ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಶಿವಗೋಷ್ಠಿ ಸಮಿತಿ ಹಾಗೂ ಸಾದರ ನೌಕರರ ಬಳಗದ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ `ಶಿವಗೋಷ್ಠಿ-291, ಸ್ಮರಣೆ- 63′ ಕಾರ್ಯಕ್ರಮದಲ್ಲಿ `ವಚನಗಳಲ್ಲಿ ಕಾಯಕ ಮತ್ತು ವೈಚಾರಿಕ ಪ್ರಜ್ಞೆ’ ಕುರಿತು ಮಾತನಾಡಿದರು.

ಹನ್ನೆರಡನೇ ಶತಮಾನವನ್ನು ವಚನ ಚಳವಳಿ ಎಂದೇ ಕರೆಯಲಾಗುತ್ತಿದ್ದು, ಬಸವಣ್ಣನವರು ಪ್ರತಿಪಾದಿಸಿದ ತತ್ವ, ಸಿದ್ಧಾಂತಗಳು ಮನುಕುಲಕ್ಕೆ ಮಾರ್ಗದರ್ಶನ ನೀಡಿವೆ. ಆದರೆ ನಾವು ಕಾಯಕದಿಂದ ಪ್ರಜ್ಞೆಯನ್ನು ಬೆಳೆಸಿ ಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಗ್ರಾಮೀಣ ಜನರಿಗೆ ವಚ ನಗಳ ಸಾರವನ್ನು ತಿಳಿಸಿಕೊಡುವ ಅಗತ್ಯವಿದೆ ಎಂದರು.

ಕಾಯಕ ತತ್ವವನ್ನು ಪಾಲಿಸುವಲ್ಲಿ ಎಡವಿದ್ದೇವೆ. ಧಾರ್ಮಿಕತೆಯ ಹೆಸರಿನಲ್ಲಿ ಪರಿಸರ ಮಾಲಿನ್ಯ ಮಾಡುತ್ತಿದ್ದೇವೆ. ಕಾಯಕ ವ್ಯಕ್ತಿಗೆ ಅಭಿವೃದ್ಧಿ ಸ್ವಾತಂತ್ರ್ಯ ಸಾಧ್ಯ. ಕಾಯಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಅನೇಕ ದಾರ್ಶನಿಕರು ಸಮಾಜಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಪ್ರಕೃತಿ ಸಹ ಮಾನವನಿಗೆ ಅದ್ಭುತ ಕಾಣಿಕೆ ನೀಡಿದೆ. ಯಾರೂ ಕೂಡ ನೀರು, ಆಹಾರ, ಗಾಳಿಯಿಂದ ವಂಚಿತರಾಗಿಲ್ಲ. ಮನುಷ್ಯನ ಮನೆಗಳಲ್ಲಿ ಭೌತಿಕ ವಸ್ತುಗಳನ್ನು ತುಂಬಿಕೊಂಡಿದ್ದೇವೆ ಆದರೆ ಭಾವನೆಗಳು ಬರಿದಾಗಿವೆ ಎಂದರು.

ವೈವಿಧ್ಯಮಯ ಜಗತ್ತಿನಲ್ಲಿ ಮಾನವನ ಬದುಕು ತುಂಡು ತುಂಡಾಗಿದೆ. ಹಿಂದೆ ಕುಟುಂಬಗಳು ಒಟ್ಟಾಗಿದ್ದವು. ಇಂದು ಗಂಡ-ಹೆಂಡತಿ ಒಟ್ಟಾಗಿ ಬಾಳದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯ ಕೊಳ್ಳುಬಾಕ ಸಂಸ್ಕೃತಿಗೆ ಬಲಿಯಾಗಿದ್ದಾನೆ. ಕೇವಲ ಗ್ರಾಹಕ ನಾಗಿ ಮಾತ್ರ ಉಳಿದಿದ್ದಾನೆ ಎಂದು ಹೇಳಿದರು.

ಲಿಂ. ಶರಣ ಗೌಡ್ರ ಮಲ್ಲಪ್ಪ ಮೆದಿಕೆರೆ ಇವರ ಸ್ಮರಣೆ ಮಾಡಿದ ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಹೆಚ್.ವಿ. ವಾಮದೇವಪ್ಪ ಅವರು, ವಚನ ಸಾಹಿತ್ಯವನ್ನು ಗ್ರಾಮೀಣ ಜನರಿಗೆ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯಾರಾದರೂ ಲಿಂಗೈಕ್ಯರಾದರೆ, ಅವರ ಹೆಸರಿನಲ್ಲಿ ಕೇವಲ ದಾಸೋಹ ನಡೆಸಲಾಗುತ್ತಿತ್ತು. ಆದರೀಗ ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹ ನೀಡುವ ಕೆಲಸವನ್ನು ಶಿವಗೋಷ್ಠಿ ಸಮಿತಿ ಮಾಡುತ್ತಾ ಬರುತ್ತಿದೆ ಎಂದರು.

ಗೌಡ್ರ ಮಲ್ಲಪ್ಪ ಮೆದಿಕೆೆರೆ ಅವರು ರೈತರಾಗಿ, ವರ್ತಕ ರಾಗಿ, ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿ ದ್ದರು. ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಎರಡು ಎಕರೆ ಜಮೀನನ್ನು ಶಾಲೆ ಪ್ರಾರಂಭಿಸಲು ದಾನ ಮಾಡಿದ್ದರು ಎಂದು ಮಲ್ಲಪ್ಪ ಅವರ ಸೇವಾ ಕಾರ್ಯವನ್ನು ಸ್ಮರಿಸಿದರು.

ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಎಂ.ಬಿ. ಪ್ರೇಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಕೆ.ಬಿ. ಅಜ್ಜಯ್ಯ ಸ್ವಾಗತಿಸಿದರು. ಗೌಡ್ರ ರತ್ನಮ್ಮ ಮತ್ತು ಮಕ್ಕಳು ದಾಸೋಹ ವ್ಯವಸ್ಥೆ ಮಾಡಿದ್ದರು. ಕಂದಗಲ್ ಸಿದ್ಧವೀರಪ್ಪ ಪ್ರೌಢಶಾಲೆ ಸಿಬ್ಬಂದಿ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದರು.