ನಗರದಲ್ಲಿ ಎತ್ತರದ ಕಟ್ಟಡಗಳನ್ನು ನಿರ್ಮಿಸಲಿ

ನಗರದಲ್ಲಿ ಎತ್ತರದ ಕಟ್ಟಡಗಳನ್ನು ನಿರ್ಮಿಸಲಿ

ದಾವಣಗೆರೆ, ಜ. 20- ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ದಾವಣಗೆರೆಯಲ್ಲಿ ಮೂರು ಅಂತಸ್ತಿಗಿಂತ ಎತ್ತರದ ವಾಣಿಜ್ಯ ಕಟ್ಟಡಗಳು ಹಾಗೂ ಅಪಾರ್ಟ್ ಮೆಂಟ್ ಗಳು ಹೆಚ್ಚು ಹೆಚ್ಚು ನಿರ್ಮಾಣವಾಗ ಬೇಕಿದೆ. ಈ ನಿಟ್ಟಿನಲ್ಲಿ ನಗರದ ಎಫ್‌.ಎ.ಆರ್ ಅಂದರೆ ಫ್ಲೋರ್ ಏರಿಯಾ ರೇಷಿಯೋ ಅನ್ನು ಹೆಚ್ಚುಗೊಳಿಸಿ ಇಲ್ಲಿನ ಇಂಜಿನಿಯರ್‌ಗಳಿಗೆ ಹಾಗೂ ಕಟ್ಟಡ ನಿರ್ಮಾತೃಗಳಿಗೆ ಅನುಕೂಲವಾಗುವಂತೆ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಾಯಿಸ ಬೇಕಿದೆ ಎಂದು ಕ್ರೆಡೈನ ನೂತನ ಅಧ್ಯಕ್ಷ ಪ್ರದೀಪ್ ರಾಯ್ಕರ್ ಕರೆ ನೀಡಿದರು. 

 ಇಂದಿಲ್ಲಿ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಫೋರಮ್ ಆಫ್ ಆರ್ಕಿಟೆಕ್ಟ್ಸ್ ಮತ್ತು ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್‌ ಆಯೋಜಿಸಿರುವ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. 

ಸ್ಮಾರ್ಟ್ ಸಿಟಿಯಾಗಿ ದಾವಣಗೆರೆ ಮಾರ್ಪಾಡುಗೊಳ್ಳುವ ಮೊದಲೇ ಈ ನಗರವನ್ನು ಸ್ಮಾರ್ಟ್ ಆಗಿ ರೂಪಿಸಲು ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಇತರೆ ಜನಪ್ರತಿನಿಧಿಗಳು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಈಗ ಸ್ಮಾರ್ಟ್ ಸಿಟಿಯಾಗಿ ಘೋಷಿತಗೊಂಡಿರುವ ಈ ನಗರದಲ್ಲಿ ಸಾಮಾನ್ಯ ಜನರು ಇಂದಿನ ದಿನಗಳಲ್ಲಿ ಸ್ವಂತ ನಿವೇಶನ ಕೊಂಡು ಮನೆ ಕಟ್ಟಿಸಿಕೊಳ್ಳುವುದು ಕಷ್ಟಸಾಧ್ಯ. ಆದ್ದರಿಂದ ಎತ್ತರದ ಕಟ್ಟಡಗಳು ತಲೆ ಎತ್ತಲು ಅನುಕೂಲವಾಗುವಂತಹ ಫ್ಲೋರ್ ಏರಿಯಾ ರೇಷಿಯೋ ಹೆಚ್ಚಿಸುವಲ್ಲಿ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಾಯಿಸಬೇಕಿದೆ ಎಂದು ಒತ್ತಿ ಹೇಳಿದರು.  ಇದರಿಂದ ಭವ್ಯವಾದ ಸುಸಜ್ಜಿತವಾದ ಎತ್ತರದ ಕಟ್ಟಡ ಕಾಮಗಾರಿಗಳು ಹೆಚ್ಚು ಆರಂಭಗೊಳ್ಳುತ್ತವೆ ಮತ್ತು ಸಾರ್ವಜನಿಕರಿಗೆ ಕಡಿಮೆ ದರಗಳಲ್ಲಿ ಸೂರು ಸಿಗುವಂತಾಗುತ್ತದೆ ಅಭಿಪ್ರಾಯ ಪಟ್ಟರು. 

ಬಿಲ್ಡ್ ಮ್ಯಾಟ್ ಉದ್ಘಾಟಿಸಿ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಮಾಡುವುದಾಗಿ ಹೇಳಿದರು.  ಕೋವಿಡ್ ಲಾಕ್ ಡೌನ್ ಗಳಿಂದಾಗಿ ಕಟ್ಟಡ ನಿರ್ಮಾಣ ಕಾರ್ಯಗಳು ಕುಂಠಿತಗೊಂಡಿದ್ದವು. ಈಗ ಈ ಕ್ಷೇತ್ರದಲ್ಲಿ ಕೆಲಸಗಳು ಚುರುಕುಗೊಂಡಿರುವುದು ಆಶಾದಾಯಕವಾಗಿದೆ ಎಂದರು. 

ಈ ಸಂದರ್ಭದಲ್ಲಿ ಕಾರ್ಯನಿರತ ಸಿವಿಲ್ ಇಂಜಿನಿಯರ್ ಗಳ ಒಕ್ಕೂಟ ಕಟ್ಟಡ ಸಾಮಾಗ್ರಿಗಳ ವಸ್ತು ಪ್ರದರ್ಶನ ಏರ್ಪಡಿಸಿ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿರುವುದು ಶ್ಲ್ಯಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ಕಳೆದ ಮೂರು ದಶಕಗಳಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಈ ರೀತಿಯ ವಸ್ತು ಪ್ರದರ್ಶನವನ್ನು ಏರ್ಪಡಿಸುತ್ತಿರುವ ನಗರದ ಇಂಜಿನಿಯರ್ ಗಳು ಮನೆ ಕಟ್ಟಿಸುವ ಜನರಿಗೆ ಇನ್ನೂ ಹೆಚ್ಚಿನ ಮಾಹಿತಿ ನೀಡುವಂತಹ ಕೆಲಸಗಳನ್ನು ಮಾಡಲಿ ಎಂದು ಸಲಹೆ ನೀಡಿದರು.

ಸಿವಿಲ್ ಇಂಜಿನಿಯರ್‌ಗಳ ಒಕ್ಕೂಟದ ಜಿ.ಬಿ. ಸುರೇಶ್ ಕುಮಾರ್ ಸ್ವಾಗತಿಸಿದರು. ಇಂಜಿನಿಯರ್ ಎ.ಬಿ. ರವಿ ವಂದಿಸಿದರು.

ಒಕ್ಕೂಟದ ಇ. ದೇವೇಂದ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಆರ್.ಟಿ. ಅರುಣ್ ಕುಮಾರ್ ನಿರೂಪಿಸಿದರು. 

ಎ.ಸಿ.ಸಿ.ಇ. ಐ ನ ಛೇರ್ಮನ್ ಡಾ.ರವಿಕುಮಾರ್, ಕಾರ್ಯದರ್ಶಿ ಯು. ಆರ್. ಕೊಟ್ರೇಶ್, ಖಜಾಂಚಿ ಬಿ. ಆರ್. ಸತೀಶ್, ಎಫ್.ಪೇಸ್ ನ ಕಾರ್ಯದರ್ಶಿ ಪ್ರಕಾಶ್ ಮೂಳೆ, ಖಜಾಂಚಿ ಆನಂದ್ ಷಾ ಅಲ್ಲದೇ ಮಾಜಿ ಅಧ್ಯಕ್ಷರುಗಳಾದ ಆರ್.ಎಸ್. ವಿಜಯಾನಂದ್, ಜಿ.ಎಂ. ಲೋಹಿತಾಶ್ವ, ಎಚ್.ವಿ. ಮಂಜುನಾಥ ಸ್ವಾಮಿ, ಕೊಂಡಜ್ಜಿ ಜಯಪ್ರಕಾಶ್ ಮುಂತಾದವರು ಉಪಸ್ತಿತರಿದ್ದರು. 

ವಸ್ತು ಪ್ರದರ್ಶನದ ಆಯೋಜಕರಾದ ಯು.ಎಸ್. ಕಮ್ಯುನಿಕೇಶನ್ ನ ಉಮಾಪತಿ ಬಿಲ್ಡ್ ಮ್ಯಾಟ್ ವಸ್ತು ಪ್ರದರ್ಶನ ನಾಳೆ ಶನಿವಾರ ಮತ್ತು ಭಾನುವಾರವೂ ನಡೆಯಲಿದ್ದು, ಉಚಿತ ಪ್ರವೇಶವಿರುವ ಈ ವಸ್ತು ಪ್ರದರ್ಶನವನ್ನು ಸಾರ್ವಜನಿಕರು ಭೇಟಿ ನೀಡುವುದರ ಮೂಲಕ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು