ಕೆಎಸ್‍ಆರ್‌ಟಿಸಿ ನೌಕರರ ಧರಣಿ ಸತ್ಯಾಗ್ರಹ

ಕೆಎಸ್‍ಆರ್‌ಟಿಸಿ ನೌಕರರ ಧರಣಿ ಸತ್ಯಾಗ್ರಹ

ದಾವಣಗೆರೆ, ಜ.24- ಮೂಲ ವೇತನಕ್ಕೆ ಬಿಡಿಎ ಸಮ್ಮಿಳಿತಗೊಳಿಸಿ ಪರಿಷ್ಕೃತ ವೇತನ ಹೆಚ್ಚಿಸಿ ವೇತನ ಶ್ರೇಣಿ ಸಿದ್ದಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕೆಎಸ್‍ಆರ್ ಟಿಸಿ ನೌಕರರು ನಗರದಲ್ಲಿ ಇಂದು ಧರಣಿ ಸತ್ಯಾಗ್ರಹ ನಡೆಸಿದರು.

ಪಿ.ಬಿ.ರಸ್ತೆಯಲ್ಲಿನ ತಾಲ್ಲೂಕು ಕಚೇರಿ ಎದುರಿನ ಕೆಎಸ್‍ಆರ್ ಟಿಸಿ ನೂತನ ಕಟ್ಟಡದ ಮುಂಭಾಗ ಜಮಾಯಿಸಿದ್ದ ನೌಕರರು, ಧರಣಿ ನಡೆಸಿ ನಂತರ ಕೆಎಸ್‍ಆರ್ ಟಿಸಿ ದಾವಣಗೆರೆ ವಿಭಾಗದ ಸಂಬಂಧಿಸಿದ ಅಧಿಕಾರಿಗೆ ಮನವಿ ಸಲ್ಲಿಸಿದರು.

ಮೂಲ ವೇತನಕ್ಕೆ ಬಿ.ಡಿ.ಎ ಸಮ್ಮಿಳಿತಗೊಳಿಸಿ ಪರಿಷ್ಕೃತ ಮೂಲ ವೇತನದ ಶೇ.25ರಷ್ಟನ್ನು ಹೆಚ್ಚಳ ಮಾಡಿ, ವೇತನ ಶ್ರೇಣಿಯನ್ನು ಸಿದ್ಧಪಡಿಸಬೇಕು. ಇಂಕ್ರಿಮೆಂಟ್ ದರ ಪರಿಷ್ಕೃತ ಮೂಲ ವೇತನದ ಶೇ.3 ಇರಬೇಕು. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಸಿದ್ಧಪಡಿಸಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ಒಮ್ಮೆ ನೀಡಬೇಕು ಎಂದು ಯೂನಿಯನ್ ಜಿಲ್ಲಾಧ್ಯಕ್ಷ ಹೆಚ್.ಜಿ. ಉಮೇಶ್ ಆಗ್ರಹಿಸಿದರು.

ಚಾಲಕ, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳಿಗೂ ಮತ್ತು ಇತರೆ ಎಲ್ಲಾ ನೌಕರರಿಗೂ, ಹಾಲಿ ಇರುವ ಬಾಟಾ, ಮಾಸಿಕ, ದೈನಂದಿನ ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು. ಹೊಲಿಗೆ ಭತ್ಯೆ, ಷೂ, ಜೆರ್ಸಿ, ರೈನ್ ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು 3 ಪಟ್ಟು ಹೆಚ್ಚಿಸಬೇಕು. ಎಲ್ಲಾ ನಿರ್ವಾಹಕರಿಗೆ ಕ್ಯಾಷಿಯರ್ ಗಳಿಗೆ ಸಮಾನವಾದ ಕ್ಯಾಷ್ ಆಲೋ ವೆನ್ಸ್  ನೀಡಬೇಕು ಎಂದು ಒತ್ತಾಯಿಸಿದರು.

ಇ.ಎಸ್.ಐ ಮಾದರಿಯಲ್ಲಿ ಆಡಳಿತ ವರ್ಗದವರಿಂದ ನೌಕರರ ಮೂಲ ವೇತನದ ಶೇ. 35 ಹಾಗೂ ಕಾರ್ಮಿಕರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಆ ಮೂಲಕ ಸಾರಿಗೆ ನೌಕರರಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಬೇಕು. ಈ ಸೌಲಭ್ಯವನ್ನು ನಿವೃತ್ತ ಕಾರ್ಮಿಕರಿಗೆ ಮತ್ತು ಅವರ ಪತಿ ಅಥವಾ ಪತ್ನಿಗೂ ನೀಡುವುದು ಸೇರಿದಂತೆ ಹಲವಾರು ಮುಷ್ಕರ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೆ, ಮರು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

ಮುಷ್ಕರದಲ್ಲಿ ದಾವಣಗೆರೆ ವಿಭಾಗದ ಪ್ರಧಾನ ಕಾರ್ಯದರ್ಶಿ ಮಿರ್ಜಾ ರೆಹಮತ್ ಉಲ್ಲಾ, ಪ್ರಕಾಶ್, ಹೆಚ್. ಹನುಮಂತಪ್ಪ, ಉಮೇದ್ ಉಲ್ಲಾ, ಕರಿಗೌಡಪ್ಪ, ಆನಂದ ನಾಯ್ಕ, ಎಂ.ಎನ್.ಲೋಕಪ್ಪ, ವಸಂತ್ ಸೇರಿದಂತೆ ಇತರರು ಭಾಗವಹಿಸಿದ್ದರು.