ಹೆಣ್ಣು ಮಕ್ಕಳು ಸುಶಿಕ್ಷಿತರು, ಸ್ವಾವಲಂಬಿಗಳಾದಾಗ ನೆಲೆ ಕಂಡುಕೊಳ್ಳಲು ಸಾಧ್ಯ : ಪ್ರಿಯದರ್ಶಿನಿ

ಹೆಣ್ಣು ಮಕ್ಕಳು ಸುಶಿಕ್ಷಿತರು, ಸ್ವಾವಲಂಬಿಗಳಾದಾಗ ನೆಲೆ ಕಂಡುಕೊಳ್ಳಲು ಸಾಧ್ಯ : ಪ್ರಿಯದರ್ಶಿನಿ

ದಾವಣಗೆರೆ, ಜ.24- ಸ್ನೇಹ ಮಹಿಳಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 10ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಸ್ತು ಪ್ರದರ್ಶನ ಯಶಸ್ವಿಯಾಗಿ ಸಮಾರೋಪಗೊಂಡಿತು.

 ನಗರದ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ ಹಿರೇಮಠದಲ್ಲಿ  ಮೊನ್ನೆ  ಹಮ್ಮಿಕೊಳ್ಳಲಾಗಿದ್ದ ಸಮಾರಂಭ ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಪ್ರಿಯದರ್ಶಿನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಹೆಣ್ಣು ಮಕ್ಕಳು ಸುಶಿಕ್ಷಿತರು ಹಾಗೂ ಸ್ವಾವಲಂಬಿಗಳಾದಾಗ ಪುರುಷ ಪ್ರಧಾನ ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದು ನಮ್ಮ ನೆಲೆಯನ್ನ ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

 ಸ್ನೇಹ ಮಹಿಳಾ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಮಹಿಳೆಯರಿಂದ ತಯಾರಿಸಲ್ಪಟ್ಟ ವಸ್ತುಗಳ ಮಾರಾಟ ಹಾಗೂ ಆಹಾರ ಮೇಳ ಹಮ್ಮಿಕೊಳ್ಳುವ ಮೂಲಕ ವ್ಯವಹಾರಿಕ ಶಕ್ತಿ ಹಾಗೂ ಸಾವಲಂಬಿ ಬದುಕು ಕಟ್ಟಿಕೊಳ್ಳಲು ನೀಡುತ್ತಿರುವ ಉತ್ತಮ ವೇದಿಕೆಯಾಗಿದೆ ಎಂದು ಪ್ರಶಂಸಿಸಿದರಲ್ಲದೇ, ಮಹಿಳೆಯರು ಇಂತಹ ಸದಾವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಬದುಕಿಗೆ ನೆಲೆಯನ್ನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಳಗದ ಹಿರಿಯ ಸದಸ್ಯೆಯರು ಯುವತಿಯರು ನಾಚುವಂತೆ ನೃತ್ಯ ಪ್ರತಿಭೆ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. 

ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಗಾಯತ್ರಿ ದೇವರಾಜ್, ಸ್ನೇಹ ಬಳಗದ ಆಜೀವ ಗೌರವ ಅಧ್ಯಕ್ಷರಾದ ಮಂಜುಳಾ ನಿಂಗಪ್ಪ, ಬಳಗದ ಗೌರವ ಅಧ್ಯಕ್ಷರಾದ ಮಂಜುಳಾ ಬಸವಲಿಂಗಪ್ಪ, ಅಧ್ಯಕ್ಷರಾದ ಶೋಭಾ ರವಿ, ಕಾರ್ಯದರ್ಶಿ ಭಾನುಮತಿ ಶಶಿಧರ್, ಖಜಾಂಚಿ ಸುವರ್ಣ ದೊಗ್ಗಳ್ಳಿ ಸೇರಿದಂತೆ ಬಳಗದ ಸದಸ್ಯಣಿಯರು ಇದ್ದರು.