ಸದಾಶಿವ ಆಯೋಗದ ವರದಿ ಜಾರಿಗಾಗಿ ಡಿಎಸ್‌ಎಸ್ ಪ್ರತಿಭಟನೆ

ಸದಾಶಿವ ಆಯೋಗದ ವರದಿ ಜಾರಿಗಾಗಿ ಡಿಎಸ್‌ಎಸ್ ಪ್ರತಿಭಟನೆ

ದಾವಣಗೆರೆ, ಜ.23- ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇಂದು  ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಜಿಲ್ಲಾ ಪ್ರಧಾನ ಸಂಚಾಲಕ ಬಿ. ದುಗ್ಗಪ್ಪ ನೇತೃತ್ವದಲ್ಲಿ ನಡೆದ ಮೆರವಣಿಗೆಯು ಡಾ. ಅಂಬೇಡ್ಕರ್ ಸರ್ಕಲ್ ನಿಂದ ಆರಂಭಗೊಂಡು ಜಯದೇವ ಸರ್ಕಲ್, ಹೂವಿನ ಮಾರ್ಕೆಟ್ ಮುಖಾಂತರ ಉಪ ವಿಭಾಗಾಧಿಕಾರಿಗಳ ಕಛೇರಿವರೆಗೆ ಸಾಗಿ ನ್ಯಾ.ಸದಾಶಿವ ಆಯೋಗ ವರದಿ ಜಾರಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇಸುವಂತೆ ಒತ್ತಾಯಿಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು, ದಾವಣ ಗೆರೆಯಲ್ಲಿ ಪೌರ ಕಾರ್ಮಿಕರೇ ಹೆಚ್ಚಿರುವ ಗಾಂಧೀ ನಗರ ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು, ನೀರಿನ ಟ್ಯಾಂಕ್ ಕೆಳಗೆ ಗ್ರಂಥಾಲಯವನ್ನು ನಿರ್ಮಿಸಿ ಕೊಡಬೇಕು, ಕರೆಂಟ್ ಲೈನ್ ಕೆಳಗೆ ಬಫರ್ ಜೋನ್, ಸಿ.ಎ. ಸೈಟ್ ಮತ್ತು ಅಕ್ರಮವಾಗಿ ಮಂಜೂರು ಮಾಡಿರುವ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿ ದರು.  ಆವರಗೆರೆಯ ಎ.ಕೆ. ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಅಲ್ಲಿರುವ ಅಂಬೇಡ್ಕ‌ರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು, ಪಾಲಿಕೆ

ವ್ಯಾಪ್ತಿಯ ಬಸಾಪುರದಲ್ಲಿರುವ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸಬೇಕು. ಚನ್ನಗಿರಿ, ನ್ಯಾಮತಿ, ಹೊನ್ನಾಳಿ, ದಾವಣಗೆರೆ ತಾಲ್ಲೂಕು ಗಳಲ್ಲಿಯೂ ಇರುವ ಸಮಸ್ಯೆಗಳನ್ನು ಪರಿಹರಿಸಿ ಕೊಡುವುದೂ ಸೇರಿದಂತೆ ಮನವಿ ಪತ್ರದಲ್ಲಿ ಸಲ್ಲಿಸಿರುವ ಎಲ್ಲ ಹಕ್ಕೊತ್ತಾಯಗಳನ್ನು ಸರ್ಕಾರ ಈಡೇರಿಸಬೇಕು ಎಂದು ಮನವಿ ಮಾಡಿದರು.

 ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಖಜಾಂಚಿ ಬಿ. ಹನುಮಂತಪ್ಪ, ಜಿಲ್ಲಾ ಉಪ ಪ್ರಧಾನ ಸಂಚಾಲಕ ನಾಗಪ್ಪ ಮಂಜುನಾಥ, ಜಿಲ್ಲಾ ಸಂಘಟನಾ ಸಂಚಾಲಕ ಈಚಘಟ್ಟ ಕೆಂಚಪ್ಪ, ಕೊಡಗನೂರು ಲಕ್ಷ್ಮಣ, ಮಂಜಪ್ಪ ಕುರುವ, ಗೂಳಿ ತಿಪ್ಪೇಶಿ ಬಸಾಪುರ, ಎನ್.ರೇವಣಸಿದ್ದಪ್ಪ ಆವರಗೆರೆ, ಹನುಮಂತಪ್ಪ ಬೀರೂರು, ತರಕಾರಿ ಮಲ್ಲೇಶಪ್ಪ , ಕೃಷ್ಣ ಎಂ ಹರಿಹರ ಸೇರಿದಂತೆ ಜಿಲ್ಲೆಯ, ತಾಲ್ಲೂಕಿನ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಭಾಗವಹಿಸಿದ್ದರು.