ದಾವಣಗೆರೆ, ಜ.23- ರಾಷ್ಟ್ರೀಯ ಹೆದ್ದಾರಿಗೆ ಕೂಡುವ ಬಾಡಾ ಕ್ರಾಸ್ ಬಳಿ ಇರುವ ಗಣೇಶ ದೇವಸ್ಥಾನದ ಮುಂಭಾಗದ ವೃತ್ತಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಂದೋಡಿ ಲೀಲಾ ಹೆಸರಿಡಲು ಒತ್ತಾಯಿಸಿ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದೆ.
ಈ ವೇಳೆ ಮಾತನಾಡಿದ ಸಮಗ್ರ ಕರವೇ ಪದಾಧಿ ಕಾರಿಗಳು, ಚಿಂದೋಡಿ ಲೀಲಾ ಅವರು ರಂಗಭೂಮಿ, ಬೆಳ್ಳಿ ತೆರೆಗಳಲ್ಲಿ ನಟಿಸಿ ಕೇಂದ್ರ, ರಾಜ್ಯ ಸರ್ಕಾರದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಇದಲ್ಲದೇ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಇಂತಹ ಮಹಿಳೆಯ ಹೆಸರನ್ನು ನಗರದ ಹಳೇ ಪಿ.ಬಿ.ರಸ್ತೆಯಿಂದ ಸಾಗಿ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಕೂಡು ರಸ್ತೆಗೆ ನಾಮಕರಣ ಮಾಡಬೇಕೆಂದು ಆಗ್ರಹಿಸಿದರು.
ಚಿಂದೋಡಿ ಲೀಲಾರ ಹೆಸರನ್ನು ಈ ರಸ್ತೆಗೆ ನಾಮಕರಣ ಮಾಡುವಂತೆ ಈ ಹಿಂದೆ 2019ರಲ್ಲಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದರು. ಆದರೆ, ಇದೀಗ ಮಹಾಪೌರರು ಬೇರೊಂದು ಹೆಸರು ಇಡಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಈಗಾಗಲೇ ಈ ಹಿಂದೆ ಪಾಲಿಕೆಯಲ್ಲಿ ಚರ್ಚೆಯಾಗಿ ನಾಮಕರಣ ಮಾಡಲು ಸಿದ್ದರಾಗಿರುವ ಚಿಂದೋಡಿ ಲೀಲಾರ ಹೆಸರನ್ನು ತೆಗೆಯಲು ಮುಂದಾಗಿದ್ದಾರೆ. ಕಾರಣ ಅವರ ಈ ನೀತಿಯನ್ನು ಕೈಬಿಟ್ಟು ಈ ಕೂಡಲೇ ವೃತ್ತಕ್ಕೆ ಚಿಂದೋಡಿಲೀಲಾ ಅವರ ಹೆಸರನ್ನು ನಾಮಕರಣ ಮಾಡಿ, ವೃತ್ತ ಉದ್ಘಾಟನೆ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ರಾಜ್ಯಾಧ್ಯಕ್ಷ ವಿ.ಅವಿನಾಶ್, ಪದಾಧಿಕಾರಿಗಳಾದ ಮಾಲಾ ನಾಗರಾಜ್, ಇಟ್ಟಿಗುಡಿ ಆನಂದ, ನಲ್ಲೂರು ವೇಣಗೋಪಾಲ್, ಫಯಾಜ್ ಅಹ್ಮದ್, ಅಕ್ಬರ್ ಭಾಷಾ, ಜಗದಿಶ್, ಲೋಕೇಶ್, ಅಂಬಾರಿ, ಈರಣ್ಣ, ರಾಜು, ಮಂಜಣ್ಣ ಇದ್ದರು.