ಪೈಪೋಟಿಯ ನಡುವೆಯೂ ಪ್ರಗತಿಯತ್ತ ಶಿವ ಸಹಕಾರಿ ಬ್ಯಾಂಕ್

Home ದಾವಣಗೆರೆ ಪೈಪೋಟಿಯ ನಡುವೆಯೂ ಪ್ರಗತಿಯತ್ತ ಶಿವ ಸಹಕಾರಿ ಬ್ಯಾಂಕ್
ಪೈಪೋಟಿಯ ನಡುವೆಯೂ ಪ್ರಗತಿಯತ್ತ ಶಿವ ಸಹಕಾರಿ ಬ್ಯಾಂಕ್

ದಾವಣಗೆರೆ,ಸೆ.29- ಬ್ಯಾಂಕುಗಳ ಪೈಪೋಟಿಗಳ ನಡುವೆಯೂ ಪ್ರಗತಿಯನ್ನು ಕಾಯ್ದುಕೊಳ್ಳುವುದರ ಜೊತೆ-ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಸಮಾಜದ ಆರ್ಥಿಕ ಸದೃಢತೆಯನ್ನು ಕಾಪಾಡುವಲ್ಲಿ ಶಿವ ಸಹಕಾರಿ ಬ್ಯಾಂಕ್ ತನ್ನದೇ ಆದ ಕೊಡುಗೆ ನೀಡುವಲ್ಲಿ ಹೆಗ್ಗಳಿಕೆ ಪಡೆದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡರು ಹರ್ಷ ವ್ಯಕ್ತಪಡಿಸಿದ್ದಾರೆ. 

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಕಳೆದ ವಾರ ನಡೆದ ಶಿವ ಸಹಕಾರಿ ಬ್ಯಾಂಕಿನ 2021-22ನೇ ಸಾಲಿನ 48ನೇ ವಾರ್ಷಿಕ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2022, ಮಾರ್ಚ್ ಅಂತ್ಯಕ್ಕೆ 28.50 ಕೋಟಿ ರೂ. ಒಟ್ಟು ಆದಾಯ ಹೊಂದಿದೆ. 5.01 ಕೋಟಿ ರೂ. ಲಾಭ ಗಳಿಸಿದ್ದು, ಈ ಪೈಕಿ 1.95 ಕೋಟಿ ರೂ. ತೆರಿಗೆ ಪಾವತಿ ನಂತರ 3.06 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 6.60 ಕೋಟಿ ರೂ. ಷೇರು ಬಂಡವಾಳ ಇದ್ದು, ಬ್ಯಾಂಕಿನ ಆರ್ಥಿಕ ಸ್ಥಿರತೆಗೆ ಕಾರಣವಾಗುವ ಆಪದ್ಧನ ಮತ್ತು ಮತ್ತಿತರೆ ನಿಧಿಗಳ ಮೊತ್ತವು ಕಳೆದ ಸಾಲಿ ಗಿಂತ 4.70 ಕೋಟಿ ರೂ. ಗಳಿಗೂ ಅಧಿಕ ಗೊಂಡಿದೆ ಎಂದು ಅವರು ತಿಳಿಸಿದರು.

ಈ ಸಾಲಿನಲ್ಲಿಯೂ ಎ ಶ್ರೇಣಿಯಲ್ಲಿ ರುವ ಬ್ಯಾಂಕ್ ಮುಂಬರುವ ಆರ್ಥಿಕ ವರ್ಷಕ್ಕೂ ನಿರ್ದಿಷ್ಟ ಗುರಿಯನ್ನು ಹೊಂ ದಿದೆ. ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹ, ಸಾಲ ಮುಂಗಡಗಳ ಪ್ರಮಾಣ ಹೆಚ್ಚಿಸುವುದು, ಸುಸ್ತಿ ಸಾಲ ವಸೂಲಾತಿ ಹೆಚ್ಚಳ, ಅನುತ್ಪಾದಕ ಆಸ್ತಿ ಪ್ರಮಾಣ ಇಳಿ ಕೆ, ಅಗತ್ಯವಿದ್ದಲ್ಲಿ ಶಾಖೆಗಳನ್ನು ತೆರೆಯುವ ಚಿಂತನೆ ಇದೆ ಎಂದು ಅವರು ಹೇಳಿದರು.

ಬ್ಯಾಂಕಿನ ವ್ಯವಹಾರವನ್ನು ಡಿಜಿಟಲ್ ಗೊಳಿಸುವ ಉದ್ದೇಶದಿಂದ ಎಟಿಎಂ ಕಾರ್ಡ್, ಐಎಂಪಿಎಸ್, ಇ ಕಾರ್ಡ್ ಅನುಷ್ಠಾನಗೊಳಿಸಲಾಗಿದ್ದು, ಶೀಘ್ರದಲ್ಲೇ ಮೊಬೈಲ್ ಆಪ್ ಅಳವಡಿಸಿಕೊಳ್ಳಲು ಸಾಫ್ಟ್‌ವೇರ್ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಸಂಗಮೇಶ್ವರ ಗೌಡರು ತಿಳಿಸಿದರು.

ಬ್ಯಾಂಕಿನ ಆಡಳಿತ ಕಚೇರಿ ಹಾಗೂ ಎಪಿಎಂಸಿ ಶಾಖೆಗಳಲ್ಲಿ ಸೌರ ವಿದ್ಯುತ್ ಘಟಕವನ್ನು ಅಳವಡಿಸುವುದರ ಮೂಲಕ ಬ್ಯಾಂಕಿನ ವಿದ್ಯುಚ್ಛಕ್ತಿ ವೆಚ್ಚವನ್ನು ಕಡಿತಗೊಳಿಸಲಾಗಿದೆ. ಇದು, ದೇಶದ ಸಂಪಲ್ಮೂಲಗಳ ಸದ್ಬಳಕೆಗೆ ಪೂರಕವಾದ ಕಾರ್ಯವಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಉಳಿದ ಶಾಖೆಗಳಲ್ಲೂ ಈ ವಿಧಾನವನ್ನು ಅಳಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬ್ಯಾಂಕಿನ ಉಪಾಧ್ಯಕ್ಷರೂ ಆಗಿರುವ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಐಗೂರು ಸಿ. ಚಂದ್ರಶೇಖರ್ ಮಾತನಾಡಿ, ಕೇವಲ ಬ್ಯಾಂಕಿನ ಆರ್ಥಿಕ ಚಟುವಟಿಕೆಗಳನ್ನು ಮಾಡದೇ ಇತರೆ ಕ್ಷೇತ್ರಗಳ ಬಗ್ಗೆ ಸಾಮಾಜಿಕ ಜವಾಬ್ಧಾರಿಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಹೇಳಿದರು. ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ಅವಿನಾಶ್ ವಿ. ರಾವ್ ಸೇರಿದಂತೆ, ಬ್ಯಾಂಕಿನ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರೊಂದಿಗೆ ಉನ್ನತ ವ್ಯಾಸಂಗಕ್ಕೆ ನೆರವು ನೀಡುವ ಭರವಸೆ ನೀಡಿದರು.

ಒಟ್ಟಿನಲ್ಲಿ ಬ್ಯಾಂಕ್ ಶಾಖೆಗಳು ಪ್ರಗತಿ ಪಥದಲ್ಲಿದ್ದು, ದಾವಣಗೆರೆ, ಹರಿಹರ, ಚಿತ್ರದುರ್ಗ, ಬ್ಯಾಡಗಿ ಸೇರಿದಂತೆ ಒಟ್ಟು 8 ಶಾಖೆಗಳೂ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಮುನ್ನಡೆದಿವೆ ಎಂದು ಐಗೂರು ಚಂದ್ರಶೇಖರ್  ಹರ್ಷ ವ್ಯಕ್ತಪಡಿಸಿದರು.

ನಿರ್ದೇಶಕರುಗಳಾದ ಬಿ.ಎಸ್. ಪ್ರಕಾಶ್, ಕೆ.ಪಿ.ಪ್ರದೀಪ್,  ಗೌಡ್ರ ಜಿ. ಸಿದ್ದಪ್ಪ, ಜಿ.ಪಿ. ವಾಗೀಶ್ ಬಾಬು, ಜೆ.ಎಸ್. ಸಿದ್ದಪ್ಪ, ಶ್ರೀಮತಿ ಎನ್. ವಸಂತ, ಶ್ರೀಮತಿ ಡಿ. ನಿರ್ಮಲ, ವೃತ್ತಿಪರ ನಿರ್ದೇಶಕರುಗಳಾದ ಇ. ಚಂದ್ರಣ್ಣ, ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ವ್ಯವಸ್ಥಾಪನಾ ಮಂಡಳಿ ನಿರ್ದೇಶಕರಾದ ಬಿ.ಎಸ್. ಪ್ರಕಾಶ್, ಎಂ.ಜಿ. ರಾಜಶೇಖರಯ್ಯ, ಜಿ.ನಂಜನಗೌಡ, ಬಿ. ಕುಬೇರಪ್ಪ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ನಿರ್ದೇಶಕ ಜಿ. ಸಿದ್ದಪ್ಪ ವಾರ್ಷಿಕ ಮಹಾಸಭೆಯ ನಡವಳಿ ಮಂಡಿಸಿದರು.  ಬ್ಯಾಂಕಿನ ಸಿಬ್ಬಂದಿಗಳಾದ ಶ್ರೀಮತಿ ಎ.ಜೆ. ಕವಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಂದಿಸಿದರು. ನಿರ್ದೇಶಕ ಡಿ.ಹೆಚ್. ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎ.ಆರ್. ಸಿದ್ದರಾಮಪ್ಪ,  ಶಾಖಾ ವ್ಯವಸ್ಥಾಪಕರುಗಳಾದ ಜಿ.ಎಂ.ನಾಗಪ್ಪ, ಡಿ.ಜೆ. ಸುರೇಶ್, ಎ. ನಾರಪ್ಪ ಮತ್ತು ಇತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.