ನೆರೆಹೊರೆಯವರೊಂದಿಗೆ ಸಹಬಾಳ್ವೆ ಮುಖ್ಯ: ಪತ್ರಕರ್ತ ಸದಾನಂದ ಹೆಗಡೆ

ನೆರೆಹೊರೆಯವರೊಂದಿಗೆ ಸಹಬಾಳ್ವೆ ಮುಖ್ಯ: ಪತ್ರಕರ್ತ ಸದಾನಂದ ಹೆಗಡೆ

ದಾವಣಗೆರೆ, ಜ. 23- ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜ ತಮ್ಮ ಸಮಾಜಕ್ಕೆ ಸೀಮಿತವಾಗದೆ ಇತರೆ ಶಿಕ್ಷಣ ವಂಚಿತ, ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಹಬಾಳ್ವೆ ನಡೆಸಬೇಕಾಗಿದೆ ಎಂದು ಹಿರಿಯ ಪತ್ರಕರ್ತ ಸದಾನಂದ ಹೆಗಡೆ ಅಭಿಪ್ರಾಯಪಟ್ಟರು.

ನಗರದ ಶ್ರೀ ಶಂಕರ ಸಮುದಾಯ ಭವನದಲ್ಲಿ ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದ ಚೈತನ್ಯ ಸಾಂಸ್ಕೃತಿಕ ಸೌರಭ, ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಬಡವರ, ದೀನ ದಲಿತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸುವಂತೆ ಸಲಹೆ ನೀಡಿದ ಅವರು, ಸಮಾಜ ಉತ್ತಮ ಕೆಲಸಗಳನ್ನು ಕೈಗೊಳ್ಳುವ ಮೂಲಕ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಸಮುದಾಯ ಸಾಕಷ್ಟು ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದ್ದು, ಅನೇಕ ಕೌಶಲ್ಯಗಳನ್ನು ರೂಢಿಸಿಕೊಂಡಿದೆ. ಹೋಟೆಲ್ ಉದ್ಯಮದಲ್ಲೂ ಸೈ ಎನಿಸಿಕೊಂಡ ಸಮುದಾಯ ಎಂದು ಅವರು ಪ್ರಶಂಸಿಸಿದರು.

ಮಕ್ಕಳ ತಜ್ಞ ಡಾ. ಪಿ.ಎಸ್. ಸುರೇಶ್‌ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗಳೂರಿನ ಸಿವಿಲ್ ಇಂಜಿನಿಯರ್ ಟಿ.ಎಸ್. ಸತ್ಯನಾರಾಯಣ, ರಂಗಭೂಮಿ ಕಲಾವಿದೆ – ಚಿತ್ರನಟಿ ಬೆಂಗಳೂರಿನ ಸುಪ್ರಿಯಾ ಎಸ್. ರಾವ್ ಸಮಾಜದ ಉಪಾಧ್ಯಕ್ಷ ಅಂಬರೀಶರಾವ್, ಕ್ರೀಡಾ ವಿಭಾಗದ ಅಧ್ಯಕ್ಷ ಪಿ.ಎಲ್. ಶಂಕರ್, ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಬಿ.ಟಿ. ಚಂದ್ರಶೇಖರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗೀತಾ ಮುರುಳೀಧರ್, ಬಿ.ಆರ್. ಶ್ರೀಧರ ಹರಿಹರ, ಪಿ.ಸಿ. ಮಹಾಬಲೇಶ್ವರ್, ಕೆ.ವಿ. ರತ್ನಾಕರ, ಕೆ. ಸತ್ಯನಾರಾಯಣ ಹರಪನಹಳ್ಳಿ, ವಿಶ್ವನಾಥ ಕೊಂಡೆಬೆಟ್ಟು, ಸುಮಾ ವೆಂಕಟೇಶ್ ಕೊಂಡೆಬೆಟ್ಟು, ಮಂಜುಳಾ ಅಂಬರೀಶರಾವ್, ಶ್ರೀನಿವಾಸರಾವ್ ಇವರನ್ನು ಸನ್ಮಾನಿಸಲಾಯಿತು. ಮಹಿಳಾ ಮಂಡಳಿಯವರು ಪ್ರಾರ್ಥಿಸಿದರು. ಅನಿಲ್ ಬಾರೆಂಗಳ್ ನಿರೂಪಿಸಿದರು. ದಿವಾಕರ್ ಸ್ವಾಗತಿಸಿದರು. ಅಂಬರೀಶರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.