ನಾಸ್ತಿಕ ವಾದದ ಮೂಲಕ ವೈಚಾರಿಕತೆ ಬಿತ್ತಿದ ಬಿ.ವಿ.ವೀ

ನಾಸ್ತಿಕ ವಾದದ ಮೂಲಕ ವೈಚಾರಿಕತೆ ಬಿತ್ತಿದ ಬಿ.ವಿ.ವೀ

ದಾವಣಗೆರೆ, ಜ. 24- ಜನ ಸಾಮಾನ್ಯರಿಗೆ ನಾಸ್ತಿಕ ವಾದದ ಮೂಲಕ ವೈಚಾರಿಕತೆ ಬಿತ್ತುವ ಕೆಲಸವನ್ನು ವಿಚಾರವಾದಿ ದಿ. ಪ್ರೊ. ಬಿ.ವಿ.ವೀರಭದ್ರಪ್ಪ ಮಾಡಿದ್ದರು. ಅವರ ಪ್ರಖರವಾದ ವಿಚಾರಗಳಿಂದ ಅನೇಕರು ಪ್ರೇರೇಪಿತರಾಗಿ ದ್ದಾರೆ  ಎಂದು  ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು. 

ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಭಾಂಗಣದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬಿ.ವಿ. ವೀರಭದ್ರಪ್ಪ ಹಾಗೂ ಡಾ. ನಾಗರಾಜ ಶೆಟ್ಟಿ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡದ ವಿಚಾರ ಸಾಹಿತ್ಯಕ್ಕೆ ಬಿ.ವಿ. ವೀರಭದ್ರಪ್ಪ ಅವರದು ಮಹತ್ವದ ಹೆಸರು. ಅವರ `ವೇದಾಂತ ರೆಜಿಮೆಂಟ್’, `ವಾಸ್ತು ಎಷ್ಟು ವಾಸ್ತವ’ ಮುಂತಾದ ವೈಚಾರಿಕ ಕೃತಿಗಳ ಬಗ್ಗೆ ವ್ಯಾಪಕ ಚರ್ಚೆಗಳಾಗಿದ್ದನ್ನು ಸ್ಮರಿಸಬಹುದು ಎಂದರು.

ಬಿವಿವಿ ಅವರದ್ದು ಖಚಿತ ನಿಲುವು, ಸಮರ್ಥವಾಗಿ ಹೇಳುವ ಗಟ್ಟಿತನ ಅವರಲ್ಲಿತ್ತು. ಅವರ `ಪವಾಡ ಪರೀಕ್ಷೆ’, `ದ್ವಿತೀಯ ಭಾಷಾ ಬೋಧನೆ’ ಮುಂತಾದ ಕೃತಿಗಳು ಸಹ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿವೆ. ಅವರ ನಿವಾಸಕ್ಕೆ `ಲೋಕಾಯತ’ ಎಂದು ನಾಮಕರಣ ಮಾಡಿರುವುದು ವಿಶೇಷ ಎಂದು ತಿಳಿಸಿದರು.

ಇವತ್ತಿನ ದಿನಮಾನದಲ್ಲಿ ಶಿಕ್ಷಣ, ಆರೋಗ್ಯ, ರಾಜಕೀಯ ಸೇರಿದಂತೆ ಸೇವಾ ಕ್ಷೇತ್ರಗಳು ಸಹ ದುಡ್ಡಿದ್ದರೆ ಮಾತ್ರ ಎನ್ನುವಷ್ಟರ ಮಟ್ಟಿಗೆ ವಾಣಿಜ್ಯೀಕರಣಗೊಂಡಿವೆ ಎಂದು ಹೇಳಿದರು.

ಬಿ.ವಿ. ವೀರಭದ್ರಪ್ಪ ಮತ್ತು ಡಾ. ನಾಗರಾಜಶೆಟ್ಟಿ ಅವರಿಬ್ಬರೂ ಸಹ ಸಮಾಜದ ಜನರ ಹಿತ ಬಯಸುವ ಅಪರೂಪದ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ನಾಗರಾಜ ಶೆಟ್ಟಿ ಅವರು ವೈದ್ಯಕೀಯ ಕ್ಷೇತ್ರದ ಮೂಲಕ, ಬಿವಿವೀ ವೈಚಾರಿಕ ಲೇಖನಗಳ ಮೂಲಕ ಜನರ ಹಿತ ಬಯಸಿದ ಸಹೃದಯರು ಎಂದು ಬಣ್ಣಿಸಿದರು.

ಬಿವಿವೀ ಕೃತಿಗಳು, ಲೇಖನಗಳನ್ನು ಓದುವ, ಮೆಲುಕು ಹಾಕುವ ಹಾಗೂ ಜನರೊಂದಿಗೆ ವಿಚಾರ ವಿನಿಮಯ ಮಾಡಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಮಾಜಿ ಶಾಸಕರೂ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಿರ್ದೇಶಕರೂ ಆದ ಮಹಿಮಾ ಜೆ. ಪಟೇಲ್ ಮಾತನಾಡಿ, ಪ್ರಸ್ತುತ ವಿಷಯುಕ್ತ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಕಾಣುತ್ತಿದ್ದೇವೆ. ಹೆಚ್ಚು ಆರೋಗ್ಯದ ಬಗ್ಗೆ ನಿಗಾ ವಹಿಸುವ ಅವಶ್ಯವಿದೆ ಎಂದು ಹೇಳಿದರು.

ಸಾವಯುವ ಕೃಷಿ, ಸಾವಯುವ ರಾಜಕಾರಣ, ಸಾವಯವ ಬದುಕಿನತ್ತ ಚಿತ್ತ ಹೊರಳಿಸಬೇಕಿದೆ. ಹೊಸ ಬದಲಾವಣೆ, ಪರಿವರ್ತನೆಯ ಬಗ್ಗೆ ಚಿಂತನೆಗಳು ನಡೆಯಬೇಕಾಗಿದೆ. ಪ್ರಸ್ತುತ ಶಿಕ್ಷಣ, ಆರೋಗ್ಯ ವಾಣಿಜ್ಯೀಕರಣಗೊಂಡರೆ, ರಾಜಕೀಯ ದಂಧೆಯಾಗಿದೆ ಎಂದರು.

ಫೆ. 13 ರಂದು ರೈತ ಚಳವಳಿಯ ರೂವಾರಿ ದಿ. ಪ್ರೊ. ನಂಜುಂಡಸ್ವಾಮಿ ಅವರ ಜನ್ಮದಿನ. ಅಂದು ನಗರದಲ್ಲಿ ರೈತ ಮುಖಂಡರೂ ಸೇರಿದಂತೆ ನೂರು ಜನ ಆಸಕ್ತರನ್ನು ಸೇರಿಸಿ ಒಂದು ಸಂವಾದ ಏರ್ಪಡಿಸುವ ಚಿಂತನೆ ತಮ್ಮದಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಬಿವಿವೀ ಕುರಿತು ಮಾತನಾಡಿ, ದೇವರು, ಧರ್ಮದ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡುತ್ತಿದ್ದವರ ವಿಚಾರಗಳ ಬಗ್ಗೆ ಬಿವಿವೀ ಬೆಳಕು ಚೆಲ್ಲಿದ್ದರು. ನಾಡಿನಲ್ಲಿನ ಮೌಢ್ಯಗಳನ್ನು ನೇರವಾಗಿ ಖಂಡಿಸುವ ಮೂಲಕ ಪ್ರಗತಿಪರ ಲೇಖನಗಳನ್ನು ಪ್ರಕಟಿಸುತ್ತಿದ್ದರು ಎಂದು ತಿಳಿಸಿದರು.

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಹೆಚ್.ಎನ್. ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಬಿವಿವೀ ಪತ್ನಿ ಅನಂತಮ್ಮ, ಪುತ್ರಿಯರಾದ ಬಿ.ವಿ.  ಸುಧಾ, ಡಾ. ಬಿ.ವಿ. ವೀಣಾ, ಪ್ರೊ. ಬಸವರಾಜ್, ಬಸವರಾಜ್ ವಡೆಯರ್, ಜೆ. ಕಲೀಂಬಾಷಾ ಮತ್ತಿತರರು ಉಪಸ್ಥಿತರಿದ್ದರು. 

ಟ್ರಸ್ಟ್ ಕಾರ್ಯಕರ್ತರು ಸ್ವಾಗತ ಗೀತೆ ಹಾಗೂ ಜಾಗೃತಿ ಗೀತೆಗಳನ್ನಾಗಿದರು. ಶ್ರೀಮತಿ ಮಂಜುಳಾ ಬಸವಲಿಂಗಪ್ಪ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.