ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವುದೇ ಗ್ರಾಮ ವಾಸ್ತವ್ಯದ ಸದುದ್ದೇಶ

ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವುದೇ ಗ್ರಾಮ ವಾಸ್ತವ್ಯದ ಸದುದ್ದೇಶ

ಗಂಗನಕಟ್ಟೆ ಗ್ರಾಮದಲ್ಲಿ ತಾಲ್ಲೂಕು ಆಡಳಿತದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಶ್ವತ್ಥ್‌

ಇತ್ತೀಚೆಗೆ ಹೆಚ್ಚಾಗಿ ಅಡಿಕೆ ಬೆಳೆಯುವ ರೈತರು, ಅಂತರಬೆಳೆಯಾಗಿ ಕೋಕೋ ಬೆಳೆಯುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಮಳೆಗಾಲದಲ್ಲಿ ತೋಟದಲ್ಲಿ ನೀರು ನಿಂತಾಗ ಅದನ್ನು ಬಸಿಗಾಲುವೆ ಮಾಡುವ ಮೂಲಕ  ಹೊರಹಾಕಬೇಕು.

– ರೇಷ್ಮಾ ಪರ್ವಿನ್, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ

ದಾವಣಗೆರೆ, ಜ.23-  ಗ್ರಾಮಸ್ಥರು ಮತ್ತು ಸರ್ಕಾರದ ಮಧ್ಯ ಇರುವ ಅಂತರವನ್ನು ಕಡಿಮೆ ಮಾಡುವುದೇ ಗ್ರಾಮ ವಾಸ್ತವ್ಯದ ಉದ್ದೇಶವಾಗಿದೆ. ಸಣ್ಣಪುಟ್ಟ ಕೆಲಸಗಳಿಗಾಗಿ ಕಚೇರಿ, ಕಚೇರಿ ಅಲೆಯುವುದನ್ನು ತಪ್ಪಿಸಿ, ಜನರ ಮನೆಯ ಬಾಗಿಲಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸುವುದು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಹಶೀಲ್ದಾರ್ ಅಶ್ವತ್ಥ್‌ ಎಂ.ವಿ ಹೇಳಿದರು.

ಆನಗೋಡು ಹೋಬಳಿ ಗಂಗನಕಟ್ಟೆ ಗ್ರಾಮದಲ್ಲಿ ನಿನ್ನೆ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕ್ರಾಂತಿಕಾರಕ ಬದಲಾವಣೆ ಆಗಿದೆ. ಮೊದಲು ಖಾತೆ ಬದಲಾವಣೆಗೆ ಒಂದು ತಿಂಗಳ ಸಮಯ ಆಗುತ್ತಿತ್ತು, ಆದರೆ ಈಗ ಕೇವಲ ಏಳು ದಿನಗಳಲ್ಲಿ ಖಾತೆ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ ಎಂದು  ಮಾಹಿತಿ ನೀಡಿದರು.

15 ದಿನಗಳಲ್ಲಿ ಅಂಗವಿಕಲರು, ಹಿರಿಯ ನಾಗರಿಕರು, ವಿಧವೆಯರ ಪಿಂಚಣಿ ಸಕಾಲದಲ್ಲಿ ಒದಗಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಪೌತಿ ಖಾತೆ ಆಂದೋಲನವನ್ನು ಗ್ರಾಮದಲ್ಲಿ ಮಾಡುತ್ತೇವೆ, ಗ್ರಾಮಸ್ಥರಿಗೆ  ಪೌತಿ ಖಾತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಹಾಗೂ ಕಾರ್ಯಕ್ರಮದಲ್ಲಿ ಕೆಲವು ಸೌಲಭ್ಯಗಳನ್ನು ಗ್ರಾಮಸ್ಥರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.

ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಎನ್.ಜಿ. ಆನಂದ್ ಮಾತನಾಡಿ,  ಗ್ರಾಮಸ್ಥರು ಗ್ರಾಮ ಪಂಚಾಯಿತಿಯಲ್ಲಿನ ಯೋಜನೆಗಳ ಅವಕಾಶವನ್ನು ಹೆಚ್ಚಾಗಿ ಬಳಸಿಕೊಳ್ಳುವ ಮೂಲಕ ವೈಯಕ್ತಿಕವಾಗಿ ಅಭಿವೃದ್ಧಿ ಕಾಣಬೇಕು ಎಂದು ಮನವಿ ಮಾಡಿಕೊಂಡರು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಮಾತನಾಡಿ,  ಈಕೆವೈಸಿ ಗೆ ನೋಂದಣಿ ಮಾಡಿಕೊಳ್ಳದೆ ಹೋದರೆ ಪಂಚಾ ಯಿತಿಯ ಬೇರೆ ಬೇರೆ ಯೋಜನೆಗಳನ್ನು ಪಡೆ ಯಲು ಅವಕಾಶವಿರುವುದಿಲ್ಲ. ಆದ್ದರಿಂದ ಗ್ರಾಮ ದಲ್ಲಿ ಈಕೆವೈಸಿ ನೋಂದಣಿ ಮಾಡಿಕೊಳ್ಳದೇ ಇರುವ ಗ್ರಾಮದ 50 ಜನ ರೈತರು  ಕಾರ್ಯಕ್ರಮ ದಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ.

ಹೋಬಳಿ ಮಟ್ಟದ ರೈತ ಕೇಂದ್ರವನ್ನು ಸಂಪರ್ಕಿಸಿ ಕೀಟನಾಶಕಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬೇಕು. ಆನಗೋಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿಗೆ ಹೆಚ್ಚಾಗಿ ರೈತರು ಸೋಯಾಬೀನ್ ಬೆಳೆಯುತ್ತಿದ್ದಾರೆ. ಆದರೆ ಈ ವೇಳೆ ಬೆಳೆಯಲು ಮುಂಗಾರಿನ ವಾತಾವರಣ ಸೂಕ್ತವಾಗಿರುವುದರಿಂದ ಸೋಯಾಬೀನ್ ಬೆಳೆಯಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಷ್ಮಾ ಪರ್ವಿನ್ ಮಾತ ನಾಡಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ಪ್ರದೇಶ ವಿಸ್ತರಣೆಗೆ  ಹಾಗೂ ಉದ್ಯೋಗ ಖಾತ್ರಿ ಯೋಜನೆ ಅಡಿ ವಿವಿಧ ಬೆಳೆ ಬೆಳೆಯಲು ಸಹಾಯಧನ ನೀಡಲಾಗುತ್ತಿದೆ.

ಸ್ಥಳದಲ್ಲೇ ಮಾಸಾಶನ ಮಂಜೂರಾತಿ: ಗ್ರಾಮದ ವಿವಿಧ ಸಮಸ್ಯೆಗಳ ಮನವಿಗಳ ಕುರಿ ತಂತೆ 143 ಅರ್ಜಿಗಳನ್ನು ಸ್ವೀಕರಿಸಲಾಯಿತು. ಮಾಸಾಶನ ಹಾಗೂ ಸ್ಥಳದಲ್ಲಿಯೇ ಪರಿಹರಿಸಬಹುದಾದ ಸಮಸ್ಯೆಗಳ ಅರ್ಜಿಗಳನ್ನು ವಿಲೇವಾರಿಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಇಓ, ಸಮಾಜ ಕಲ್ಯಾಣ ಇಲಾಖೆಯ ಡಿಎಸ್‍ಡಬ್ಲ್ಯೂ ಸುನೀತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್, ಬೆಸ್ಕಾಂನ ಎಸ್.ಓ ಜಯಣ್ಣ ಇತರರು ಉಪಸ್ಥಿತರಿದ್ದರು.