ಓಲ್ಡ್ ಪಿ.ಬಿ. ರೋಡ್‌ – ಎ ಜರ್ನಿ ಟುವರ್ಡ್ಸ್‌ ಡೆತ್‌

ಸ್ನೇಹಿತರೇ, ಒಂದು ವೇಳೆ ನೀವು ಹಳೇ ಪಿ.ಬಿ. ರಸ್ತೆ, ದೇವರಾಜ್‌ ಅರಸ್‌ ಬಡಾವಣೆಯಿಂದ ದೊಡ್ಡಬಾತಿ ಕಡೆಗೆ ವಾಹನ ಪ್ರಯಾಣ ಮಾಡಬಯಸಿದ್ದಲ್ಲಿ ತಮ್ಮ ಮನೆಯವರಿಗೋ ಅಥವಾ ತಮ್ಮ ಮೊಬೈಲ್‌ನ ವಾಟ್ಸಾಪ್‌ ಗ್ರೂಪ್‌ನಲ್ಲಿ ಒಂದು ಸಂದೇಶ ಕೊಟ್ಟರೆ ಉತ್ತಮ.

ಹೌದು ಸ್ನೇಹಿತರೇ ವೇಗವಾಗಿ ಬೆಳೆಯುತ್ತಿರುವ ದಾವಣಗೆರೆ ನಗರದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟು ಕೈಲಾಸ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಇದೇ ರಸ್ತೆಯಲ್ಲಿ ಸಂಚರಿಸಿ ಅಪಘಾತ ಸಂಭವವಿಸಿ ಕೆಲವರು ತಮ್ಮ ಹೆತ್ತವರನ್ನು, ಅಕ್ಕ-ತಂಗಿಯರನ್ನು, ಅಣ್ಣ-ತಮ್ಮಂದಿರನ್ನು ಅಪಘಾತದಲ್ಲಿ ಕಳೆದುಕೊಂಡಿರುತ್ತಾರೆ.

ಎರಡು ವಾರದ ಹಿಂದೆ ಗುರುವಾರದಂದು ನಂದಿನಿ ಡೈರಿ ಎದುರುಗಡೆ ವ್ಯಕ್ತಿಯು ಅಪಘಾತಕ್ಕೀಡಾಗಿ ವ್ಯಕ್ತಿಯೊಬ್ಬರು ತಮ್ಮ ಅಮೂಲ್ಯ ಜೀವ ಕಳೆದುಕೊಂಡರು. 5.5.2022 ರ ಗುರುವಾರದಂದು ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಡಿಸಿ ಆಫೀಸಿನ ಎದುರಿಗೆ ರಸ್ತೆ ಅಪಘಾತ ಸಂಭವಿಸಿದೆ. ನಗರ ವ್ಯಾಪ್ತಿಯಲ್ಲಿರುವ ಈ ರಸ್ತೆಯಲ್ಲಿ ಘನವಾಹನಗಳ ಚಾಲಕರು ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ತಮ್ಮ ವಾಹನಗಳನ್ನು ಚಲಿಸಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. 

ಈ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ, ಬ್ಯಾರಿಕೇಡ್‌ಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿಲ್ಲ. ಸಂಬಂಧಪಟ್ಟ  ಅಧಿಕಾರಿಗಳು ವೇಗಮಾಪಕ ಯಂತ್ರಗಳನ್ನು ಬಳಸಿಕೊಂಡು ಅತಿವೇಗದಿಂದ ಬರುವ ವಾಹನ ಚಾಲಕರಿಗೆ ದಂಡ ವಿಧಿಸುತ್ತಿಲ್ಲ, ದ್ವಿ-ಚಕ್ರ ವಾಹನ ಸವಾರರು ಮೊಬೈಲ್‌ನಲ್ಲಿ ಮಾತನಾಡುತ್ತಲೇ ಫ್ಯಾಷನ್‌ಗಾಗಿ ಜೀವದ ಭಯವಿಲ್ಲದೇ ಸವಾರಿ ಮಾಡುತ್ತಿರುತ್ತಾರೆ. ಬೇರೆಯವರ ಅಜಾಗರೂಕತೆಯಿಂದ ನಿಯತ್ತಾಗಿ ಸವಾರಿ ಮಾಡುತ್ತಿರುವವರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 

ಇನ್ನೊಂದು ವಿಷಯವೇನೆಂದರೆ ವೇರ್‌ಹೌಸ್‌, ಗೋಡಾನ್‌ಗಳು ಬಾರಿ ಹತ್ತಿರವಿರುವುದರಿಂದ ಲಾರಿ ಚಾಲಕರು ಸ್ಪರ್ಧಾತ್ಮಕ ವೇಗದಿಂದ ವಾಹನ ಚಲಿಸಿ ಹೆಚ್ಚಿನ ಲಾಭದ ಆಸೆಗಾಗಿ ಅಮಾಯಕರ ಜೀವಕ್ಕೆ ಸಂಚಕಾರ ತಂದಿರುತ್ತಾರೆ.

ಬಾತಿ ಕೆರೆಯಿಂದ ದೊಡ್ಡಬಾತಿ ಕಡೆ ಹೋಗುವ ದಾರಿಯ ನಂದಿನಿ ಹಾಲಿನ ಡೈರಿ ಹತ್ತಿರದ ರಸ್ತೆ ಕಿರಿದಾಗಿದ್ದು, ಎಡಗಡೆ ವಾಹನಗಳ ಸರ್ವೀಸ್‌ ಸ್ಟೇಷನ್‌ಗಳು ಸಾಲು ಸಾಲಾಗಿರುತ್ತವೆ ಮತ್ತು ರಸ್ತೆ ತಿರುವಿದ್ದರೂ ಅವೈಜ್ಞಾನಿಕತೆಯಿಂದ ಕೂಡಿರುತ್ತದೆ. ಇಲ್ಲಿ ಹೆಚ್ಚಿನ ಸುರಕ್ಷತೆಯ ಅಗತ್ಯವಿರುತ್ತದೆ.

ದಾವಣಗೆರೆ ಸಿಟಿಯೇನೋ ಸ್ಮಾರ್ಟಾಗುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳು ತಡಮಾಡದೇ ಸ್ಮಾರ್ಟಾಗಿ ತಮ್ಮ ಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸಿದರೆ, ಜನರ ಜೀವ ಉಳಿಸಬಹುದು. ಈ ಸಾವಿನ ರಸ್ತೆಯಲ್ಲಿ ನಿಮ್ಮ ಮನೆಯ ಸದಸ್ಯರೋ ಅಥವಾ ನಿಮ್ಮ ಬಂಧುಗಳೋ ಪ್ರಯಾಣಿಸುತ್ತಿರಬಹುದು… ಒಮ್ಮೆ ಯೋಚಿಸಿ….


– ಶಶಿಧರ್ ಸಿ. 95615 89811