ಆನ್‌ಲೈನ್‌ನಲ್ಲಿ ಕಣ್ಮುಚ್ಚಿ ನಂಬಿದರೆ ಕೆಟ್ಟೀರಿ ಜೋಕೆ

ಎಸ್.ಎ. ಶ್ರೀನಿವಾಸ್‌
9538641532
[email protected]


ಆನ್‌ಲೈನ್‌ ಹಣಕಾಸು ವಂಚನೆಗಳ ಸುದ್ದಿಗಳು ನಿರಂತರವಾಗಿ ಬರುತ್ತಿರುವ ಬೆನ್ನಲ್ಲೇ, ಗ್ರೈಂಡರ್‌ ಆಪ್ ಅನ್ನು ಬಳಸಿಕೊಂಡು ಸಲಿಂಗಿಯೊಬ್ಬರನ್ನು ಹತ್ಯೆಗೈದಿರುವುದು ಆನ್‌ಲೈನ್‌ ಅಪಾಯಗಳ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಿದೆ.

ಡಿಜಿಟಲ್ ಇಂಡಿಯಾ, ಕ್ಯಾಶ್‌ಲೆಸ್‌ ವ್ಯವಹಾರ ಇತ್ಯಾದಿ ಪದಗಳು ಕೇಳಲು ಎಷ್ಟು ಸೊಗಸಾಗಿವೆಯೋ, ಆನ್‌ಲೈನ್‌ನಲ್ಲಿ ವ್ಯವಹರಿಸುವಾಗ ಮೈ ಮರೆತರೆ ಅಷ್ಟೇ ಅಪಾಯಗಳಿವೆ. ಆನ್‌ಲೈನ್‌ನಲ್ಲಿ ವಹಿವಾಟುಗಳು ಹೆಚ್ಚಾದಷ್ಟೂ ವಂಚನೆಗಳು ಹೆಚ್ಚಾಗುತ್ತಿವೆ, ವಂಚಕರು ಹೊಸ ಹೊಸ ವಿಧಾನಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ವರ್ಷ ಒಂದರಲ್ಲೇ 32 ಸೈಬರ್ ಅಪರಾಧಗಳು ದಾಖಲಾಗಿವೆ. ಒ.ಟಿ.ಪಿ. ಪಡೆಯುವ ಮೂಲಕ ವಂಚನೆ, ಸ್ಕಿಮ್ಮಿಂಗ್, ನಕಲಿ ವೆಬ್ ತಾಣ, ನಕಲಿ ಸಹಾಯವಾಣಿ ಬಳಕೆ ಇತ್ಯಾದಿ ತಂತ್ರಗಳ ಮೂಲಕ ಅಮಾಯಕರ ಹಣ ಲೂಟಿ ಮಾಡಲಾಗುತ್ತಿದೆ.

ಇದರ ಮುಂದುವರೆದ ಭಾಗವಾಗಿ ಗ್ರೈಂಡರ್‌ ಆಪ್‌ ಬಳಸಿ ವಿಜಯಕುಮಾರ್‌ ಎಂಬುವವರನ್ನು ಸಲಿಂಗ ಸಂಬಂಧದ ಹೆಸರಿನಲ್ಲಿ ಪುಸಲಾಯಿಸಿ ಹಲ್ಲೆ ಮಾಡಿ ಹಣ ಕಸಿಯಲಾಗಿದೆ. ಹಲ್ಲೆಗೀಡಾದ ಅವರು ಸಾವನ್ನಪ್ಪಿದ್ದಾರೆ.

ಏನಿದು ಗ್ರೈಂಡರ್‌ : ಗ್ರೈಂಡರ್‌ (Grindr) ಆಪ್‌ ಆನ್‌ಲೈನ್‌ನಲ್ಲಿ ಸಲಿಂಗಿಗಳನ್ನು ಪರಿಚಯಿಸುವ ಆಪ್ ಆಗಿದೆ. ಇದಷ್ಟೇ ಅಲ್ಲದೇ ಹಲವಾರು ರೀತಿಯ ಡೇಟಿಂಗ್ (ಪ್ರೇಮಿಗಳ ಪರಿಚಯ) ಆಪ್‌ಗಳು ಲಭ್ಯವಿವೆ. ಟಿಂಡರ್ ಸೇರಿದಂತೆ ಹಲವಾರು ಆಪ್‌ಗಳು ಫೇಸ್‌ಬುಕ್‌ ಲಿಂಕ್ ಸೇರಿದಂತೆ ಹಲವಾರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಗ್ರೈಂಡರ್‌ ಸದಸ್ಯರಾ ಗಲು ಇ-ಮೇಲ್ ವಿವರ ನೀಡಿದರೆ ಸಾಕು. ಹೀಗಾಗಿ ಸಾಕಷ್ಟು ನಕಲಿ ಪ್ರೊಫೈಲ್‌ಗಳು ಇಲ್ಲಿ ಸೃಷ್ಟಿಯಾಗಿವೆ.

ಸಲಿಂಗಿಗಳು ತಮ್ಮ ಗುರುತನ್ನು ಗೌಪ್ಯವಾಗಿರಿಸಲು ಬಯಸುತ್ತಾರೆ. ಇದನ್ನೇ ಅಸ್ತ್ರ ಮಾಡಿಕೊಂಡ ದುಷ್ಕರ್ಮಿ ಗಳು, ಗ್ರೈಂಡರ್‌ ಮೂಲಕ ಸಲಿಂಗಿಗಳನ್ನು ಸೆಳೆದು ಹಲ್ಲೆ ನಡೆಸುವ ಲೂಟಿ ಮಾಡುವ ಹಾಗೂ ಬೆದರಿಸುವ ಪ್ರಕರಣಗಳು ಈ ಹಿಂದೆಯೂ ನಡೆದಿವೆ.  ಆದರೆ, ಸಲಿಂಗಿ ಗಳು ಸಾಕಷ್ಟು ಬಾರಿ ಈ ಪ್ರಕ ರಣಗಳನ್ನು ಬಯಲು ಮಾಡಲು ಹಿಂಜರಿಯು ತ್ತಾರೆ. ಇದು ನಕಲಿ ಪ್ರೊಫೈಲ್ ಮೂಲಕ ದುಷ್ಕೃತ್ಯ ಎಸಗುವವರಿಗೆ ಸಹಾಯಕವಾಗಿದೆ.


ಬೆಂಗಳೂರಲ್ಲಿ ಸ್ಕಿಮ್ಮಿಂಗ್ ನಗರದಲ್ಲಿ ಖಾತೆ ಲೂಟಿ
ಎಟಿಎಂಗಳಲ್ಲಿ ಕ್ಯಾಮರಾ ಹಾಗೂ ಸ್ಕಿಮ್ಮಿಂಗ್ ಯಂತ್ರಗಳನ್ನು ಅಳವಡಿಸುವ ಮೂಲಕ ಎಟಿಎಂ ಬಳಕೆದಾರರ ಹಣ ಲೂಟಿ ಮಾಡಿರುವ ಘಟನೆಗಳೂ ನಡೆದಿವೆ.
ಸ್ಕಿಮ್ಮರ್ ಹಾಗೂ ಕ್ಯಾಮರಾಗಳನ್ನು ಎಟಿಎಂ ಆವರಣದಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಗ್ರಾಹ ಕರ ಎಟಿಎಂ ವಿವರಗಳು ವಂಚಕರ ಕೈಗೆ ಸೇರುತ್ತವೆ. ಬೆಂಗಳೂರಿನಲ್ಲಿ ನಗರದ ಕೆಲವರು ಎಟಿಎಂ ಬಳಸಿ ವಾಪಸ್ ಬಂದ ವಾರಗಳ ನಂತರ ಅವರ ಖಾತೆಗಳಲ್ಲಿನ ಹಣ ಕಡಿತವಾಗಿರುವ ಪ್ರಕರಣಗಳು ನಡೆದಿವೆ.
ಅವರು ಎಟಿಎಂ ಪಿನ್ ನೀಡದಿದ್ದರೂ ಹಣ ಕಡಿತವಾಗಿರುತ್ತದೆ. ಇದಕ್ಕೆ ಬೆಂಗಳೂರಿನಲ್ಲಿ ಅವರ ಕಾರ್ಡ್‌ ಸ್ಕಿಮ್ಮಿಂಗ್‌ಗೆ ಒಳಗಾಗಿದ್ದೇ ಕಾರಣ. ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಹಣ ಮರಳಿಸುತ್ತವೆ. ಇಂತಹ ಪ್ರಕರಣಗಳಲ್ಲಿ  ಆದ ವಂಚನೆಗೆ ಬ್ಯಾಂಕುಗಳೇ ಹೊಣೆ. ಆದರೆ, ಎಟಿಎಂ ಪಿನ್ ಅನ್ನು ಗ್ರಾಹಕರು ಬೇರೆಯವರಿಗೆ ಕೊಟ್ಟಲ್ಲಿ ಬ್ಯಾಂಕುಗಳು ಹೊಣೆಯಾಗುವುದಿಲ್ಲ. ಜನರು ಸಾಧ್ಯವಾದಷ್ಟು ಕಾವಲುಗಾರರು ಇರುವ ಎಟಿಎಂ ಬಳಸುವುದು ಉತ್ತಮ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಹೊಸ ಹೊಸ ದಾರಿ : ನಿಮಗೆ ಲಾಟರಿ ಬಂದಿದೆ ಎನ್ನುವುದರಿಂದ ಹಿಡಿದು ನಿಮ್ಮ ಖಾತೆಗೆ ಪ್ರಧಾನ ಮಂತ್ರಿಗಳ ಯೋಜನೆಯಾದ ರೈತರಿಗೆ 2,000 ರೂ.ಗಳನ್ನು ಖಾತೆಗೆ ಹಾಕಿಸುತ್ತೇವೆ ಎನ್ನುವುದರ ವರೆಗೆ ಹಲವಾರು ರೀತಿಯ ವಂಚನೆಗಳನ್ನು ಎಸಲಾಗುತ್ತಿದೆ.  ಕೆಲವರು ಒ.ಎಲ್.ಎಕ್ಸ್‌.ನಲ್ಲಿ ವಾಹನಗಳ ಚಿತ್ರ ತೋರಿಸಿ, ಇಂತಿಷ್ಟು ಮುಂಗಡ ಹಣ ಕೊಟ್ಟರೆ ವಾಹನ ಕೊಡುತ್ತೇವೆ ಎಂದು ಹೇಳಿ ವಂಚಿಸಿದ್ದಾರೆ.

ಮತ್ತೊಂ  ಪ್ರಕರಣದಲ್ಲಿ ಕೆಲ ಭೂಪರು ಆನ್‌ ಲೈನ್‌ ಖರೀದಿ ತಾಣಗಳ ನಕಲಿ ಸಹಾಯವಾಣಿ ಸಂಖ್ಯೆ ಇರುವ ವೆಬ್ ತಾಣವನ್ನೇ ಸೃಷ್ಟಿಸಿದ್ದಾರೆ. ಈ ನಕಲಿ ತಾಣಗಳ ಸಹಾಯವಾಣಿಗಳಿಗೆ ಕರೆ ಮಾಡಿದಾಗ ಗ್ರಾಹಕ ರನ್ನು ತಪ್ಪು ದಾರಿಗೆಳೆದು ಹಣ ಲೂಟಿ ಮಾಡಿದ್ದಾರೆ.

ಬೇಟಿ ಬಚಾವೋ  ಬೇಟಿ ಪಢಾವೋ ಯೋಜನೆ ಯಲ್ಲಿ ಹಣ ಕೊಡುತ್ತಾರೆ ಎಂದು ಹೇಳಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್‌ನ ಮಾಹಿತಿಯನ್ನು ಸಾಕಷ್ಟು ಜನರು ರವಾನಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ಜನ ಎಚ್ಚೆತ್ತುಕೊಂಡಿಲ್ಲ. ಹೋದರೆ 20 ರೂಪಾಯಿ, ಬಂದರೆ 50 ಸಾವಿರ ಎಂಬ ಉಡಾಫೆಯ ವರ್ತನೆ ಜನರದ್ದು. ಈ ರೀತಿ ವೈಯಕ್ತಿಕ ಮಾಹಿತಿ ಬಹಿರಂಗ ಮಾಡುವುದು ಕೇವಲ 20 ರೂಪಾಯಿಯಷ್ಟೇ ಅಲ್ಲ ಅದಕ್ಕೂ ಹೆಚ್ಚಿನ ಅಪಾಯ ತರಬಲ್ಲದು.

ತಕ್ಷಣ ಮಾಹಿತಿ ಕೊಡಿ : ಆನ್‌ಲೈನ್‌ನಲ್ಲಿ ವಂಚನೆಗೆ ಗುರಿಯಾದವರು ತಕ್ಷಣವೇ ಪೊಲೀಸರಿಗೆ ಹಾಗೂ ಬ್ಯಾಂಕುಗಳಿಗೆ ಮಾಹಿತಿ ಕೊಡಬೇಕು. ಎಷ್ಟು ಬೇಗ ಮಾಹಿತಿ ಕೊಡುತ್ತಾರೋ ಅಷ್ಟು ಬೇಗ ಹಣ ವಾಪಸ್ ಪಡೆಯಲು ನೆರವಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಗಳು ತಿಳಿಸಿದ್ದಾರೆ. ಈ ವರ್ಷ ಎಟಿಎಂ ಪಿನ್ ನೀಡುವ ಮೂಲಕ ವಂಚನೆಗೆ ಗುರಿಯಾದವರ 3-4 ಲಕ್ಷ ರೂ.ಗಳನ್ನು ವಾಪಸ್ ಕೊಡಿಸ ಲಾಗಿದೆ. ಕಳೆದ ಎರಡು ವರ್ಷ ಗಳಲ್ಲಿ ಈ ರೀತಿ ವಾಪಸ್ ಕೊಡಿಸಲಾದ ಹಣದ ಪ್ರಮಾಣ 12 ಲಕ್ಷ ರೂ.ಗಳು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಪ್ ಬಳಕೆ, ಆನ್‌ಲೈನ್‌ನಲ್ಲಿ ಮಾಹಿತಿ ಹಂಚಿಕೆ ಹಾಗೂ ಎಟಿಎಂ ವಿವರ ಗಳನ್ನು ನೀಡುವಾಗ ಗ್ರಾಹಕರು ಎಚ್ಚರವಾಗಿರುವುದೇ ವಂಚನೆ ತಡೆಯಲು ಇರುವ ಮಾರ್ಗವಾಗಿದೆ. ಕಣ್ಣಿಗೆ ಕಾಣದೇ ದೂರದಲ್ಲಿರುವವರ ಬಗ್ಗೆ ಅತಿಯಾದ ನಂಬಿಕೆ ಬೇಡ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತಿರುವಾಗ, ಕಾಣದೇ ಇರುವವರ ಆಮಿಷದ ಮಾತುಗಳಿಗೆ ಜನರು ಮರುಳಾಗುವುದನ್ನು ಬಿಡಬೇಕಿದೆ.