ಮಹಿಳೆಯರ ನೆರವಿಗಾಗಿ ಬಂದ ದುರ್ಗಾ ಪಡೆ

ದಾವಣಗೆರೆ, ಅ.2- ಮಧ್ಯರಾತ್ರಿ 12 ಗಂಟೆ ವೇಳೆ ಹೆಣ್ಣು ಮಕ್ಕಳು ಒಂಟಿಯಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವಂತಹ ವಾತಾವರಣ ಎಂದು ನಿರ್ಮಾಣವಾಗುವುದೋ ಅಂದೇ ಸ್ವಾತ್ರಂತ್ರ್ಯ ಸಿಕ್ಕಂತೆ ಎಂಬುದು ಮಹಾತ್ಮ ಗಾಂಧೀಜಿಯವರ ಆಶಯ. 

ಈ ಆಶಯಕ್ಕೆ ಪೂರಕವಾಗಿ ಹೆಣ್ಣು ಮಕ್ಕಳ ರಕ್ಷಣೆಗೆ ನಿಲ್ಲುವ ಮುಖೇನ ಯಾವುದೇ ಭಯವಿಲ್ಲದೆ ನಿರ್ಭಯವಾಗಿ ಓಡಾಡುವಂತಹ ವಾತಾವರಣವನ್ನು ನಿರ್ಮಿಸಲು ಜಿಲ್ಲಾ ಮಹಿಳಾ ಪೊಲೀಸ್‌ ತಂಡವುಳ್ಳ ನಿರ್ಭಯ ಹೆಸರಿನ ದುರ್ಗಾ ಪಡೆ ಮುಂದಾಗಿದೆ.

ದುರ್ಗಾ ಪಡೆಯ ಉದ್ದೇಶ : ಮಕ್ಕಳು-ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಗಳು ಮತ್ತು ಚುಡಾಯಿಸುವುದನ್ನು ತಡೆಯುವುದು, ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವುದು, ಡ್ರಗ್ಸ್ ಸೇವನೆ ಮತ್ತು ಮಾರಾಟ ತಡೆಯುವುದು, ಅನಾಥ ಮತ್ತು ನಿರ್ಗತಿಕ ಮಕ್ಕಳ ರಕ್ಷಣೆ ಮಾಡುವುದು.

ಈ ಪಡೆಯ ರಕ್ಷಣಾ ಕಾರ್ಯಕ್ಕೆ ವಿಶೇಷವಾಗಿ ಮಹಾತ್ಮ ಗಾಂಧೀಜಿ ಜಯಂತಿ ದಿನವಾದ ಇಂದು ಚಾಲನೆ ದೊರೆತಿದ್ದು, ನಗರದ ಜಯದೇವ ವೃತ್ತ ದಲ್ಲಿ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತ ರಾಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಹಸಿರು ನಿಶಾನೆ ತೋರಿಸುವುದರ ಮೂಲಕ ವಿಧ್ಯುಕ್ತ ವಾಗಿ ಚಾಲನೆ ನೀಡಿದರು. 

ಆತ್ಮರಕ್ಷಣೆ ಹಾಗೂ ಕರಾಟೆಯ ಕೌಶಲ್ಯಗಳ ತರಬೇತಿಯನ್ನು ನೀಡಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ನಗರದಲ್ಲಿ 15 ಜನ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ಶಕ್ತಿಶಾಲಿ ತಂಡದ ದುರ್ಗಾ ಪಡೆಯನ್ನು ರಚಿಸಲಾಗಿದೆ. – ಹನುಮಂತರಾಯ, ಎಸ್ಪಿ.
ಕರ್ತವ್ಯಗಳು: ಶಾಲಾ-ಕಾಲೇಜುಗಳು ಪ್ರಾರಂಭವಾಗುವ ಮತ್ತು ಬಿಡುವ ವೇಳೆ ಗಸ್ತು, ಬಸ್‌ ನಿಲ್ದಾಣ, ಸಾರ್ವಜನಿಕ ಪಾರ್ಕ್‌, ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ಜಾಗೃತಿ ಮೂಡಿಸುವುದು, ಮಹಿಳಾ ಸಂಘ-ಸಂಸ್ಥೆಗಳಿಗೆ ಮಹಿಳಾ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಹಾಗೂ ಹೆಣ್ಣುಮಕ್ಕಳ ಆತ್ಮ ರಕ್ಷಣೆ ಬಗ್ಗೆ ಅರಿವು ಮೂಡಿಸುವುದು.
ಶಾಲಾ-ಕಾಲೇಜುಗಳಲ್ಲಿ ದೂರು ಪೆಟ್ಟಿಗೆ: ಮಹಿಳೆ ಮತ್ತು ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ 100 ಮತ್ತು ಮಹಿಳಾ ಪೊಲೀಸ್ ಠಾಣೆ 08192-253088 ಸಹಾ ಯವಾಣಿ ಸಂಪರ್ಕಿಸಬಹುದು. ಶಾಲಾ ಕಾಲೇ ಜುಗಳಲ್ಲಿ ದೂರು ನೀಡುವ ಪೆಟ್ಟಿಗೆಯನ್ನು ಸಹ ಇಡಲಾಗಿದ್ದು, ಹಾಗೇನಾದರು ತೊಂದರೆಯನ್ನು ತಿಳಿಸಲು ನೇರವಾಗಿ ದೂರು ನೀಡಲು ಸಾಧ್ಯವಾಗದಿದ್ದರೆ ಈ ಬಾಕ್ಸ್‌ನಲ್ಲಿ ದೂರಿನ ಚೀಟಿಯನ್ನು ಹಾಕಬಹುದಾಗಿದೆ. – ನಾಗಮ್ಮ, ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ವಿರುದ್ದ ಹೋರಾಡುವ ಮುಖೇನ ಸ್ಪಂದಿಸುವ ಕೆಲಸ ಈ ಪಡೆಯ ಮೇಲೆ ನಿಂತಿದೆ. ನಿರ್ಭಯಾ ಎಂಬ ಹೆಸರಿಗಿಂತ ದುರ್ಗಾ ಎಂಬ ಪದದಲ್ಲಿ ಶಕ್ತಿ ಇದ್ದು, ಈ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಹೆಣ್ಣು ಮಕ್ಕಳ ತಂಟೆಗೆ ಕಿಡಿಗೇಡಿ ಹುಡುಗರು ಬರುವುದಿಲ್ಲ. ಆಗ ಮಹಿಳೆಯರು ಮತ್ತು ಮಕ್ಕಳು ಹೊರಗಡೆ ಯಾವುದೇ ಭಯವಿಲ್ಲದೆ ಓಡಾಡುವ ವಾತಾವರಣ ನಿರ್ಮಾಣವಾಗಲಿದೆ. ಇಂತಹ ವಾತಾವರಣಕ್ಕೆ ಈ ಪಡೆಯ ಮೂಲಕ ಅವಕಾಶ ಸಿಗಬೇಕಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ ಮಾತನಾಡಿ, ಮಹಿಳಾ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ಈ ಪಡೆಯು ಮಹಿಳೆ ಮತ್ತು ಮಕ್ಕಳ ಮೇಲಿನ ಕಿರುಕುಳ, ದೌರ್ಜನ್ಯ, ಚುಡಾಯಿಸುವುದನ್ನು ತಡೆಗಟ್ಟಲಿದೆ. ಅಲ್ಲದೇ ಮಹಿಳೆಯರು, ಮಕ್ಕಳು, ಕಾಲೇಜು ವಿದ್ಯಾರ್ಥಿನಿ ಯರಿಗೆ ಧೈರ್ಯ ತುಂಬುವ ಕೆಲಸಕ್ಕೆ ಈ ಪಡೆ ಮುಂದಾಗಿದೆ. ಈ ಪಡೆಯ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಹನುಮಂತರಾಯ ಅವರು ಮುತುವರ್ಜಿ ವಹಿಸಿ ಕ್ರಿಯಾತ್ಮಕವಾಗಿ ಪ್ರಯತ್ನಿಸಿರುವುದು ಸಂತಸದ ವಿಚಾರ. ಈ ಪಡೆಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ ಮಾತನಾಡಿ, ಈ ಪಡೆಯಲ್ಲಿ ಮಹಿಳಾ ಎಎಸ್‌ಐ ಇರಲಿದ್ದಾರೆ. ಜೊತೆಗೆ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ನಾಗಮ್ಮ ಅವರ ಮಾರ್ಗ ದರ್ಶನದಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ. ನಿರ್ಭಯ ಯೋಜನೆಯಡಿ ಮಹಿಳೆಯರು ಮತ್ತು ಮಕ್ಕಳಿಗೆ ಸಾಕಷ್ಟು ರಕ್ಷಣೆ, ಆತ್ಮವಿಶ್ವಾಸ ತುಂಬುವ ಪ್ರಯತ್ನಕ್ಕೆ ಈ ಪಡೆ ಮುಂದಾಗಿದ್ದು, ಕಿರುಕುಳ, ತೊಂದರೆಗಳು ಉಂಟಾದಲ್ಲಿ ತಕ್ಷಣವೇ ಸ್ಪಂದಿಸ ಲಿದೆ. ಗಸ್ತು ತಿರುಗಲು ಸುಸಜ್ಜಿತವಾದ ವಾಹನ ಕೂಡ ನೀಡಲಾಗಿದೆ. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪರಿಣಾಮಕಾರಿಯನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ನಾಗಮ್ಮ ಮಾತನಾಡಿ, ಈ ಪಡೆಯು ಪ್ರತಿನಿತ್ಯ 7 ಕಡೆ ಸಂಚರಿಸಲಿದ್ದು, ಇಬ್ಬರು ಸಿಬ್ಬಂದಿಗಳು ಒಟ್ಟಾಗಿ ಸೇರಿ ಬೆಳಗ್ಗೆ ಮತ್ತು ಸಂಜೆ ಗುರುತು ಮಾಡಿರುವಂತ ಶಾಲಾ-ಕಾಲೇಜು, ಮಹಿಳಾ ಹಾಸ್ಟೆಲ್‌ಗಳು ಸೇರಿ ದಂತೆ ಎಲ್ಲೆಲ್ಲಿ ಮಹಿಳೆ ಮತ್ತು ಮಕ್ಕಳಿಗೆ ತೊಂದರೆ ಯಾಗಲಿದೆ ಎಂಬುದನ್ನು ಗಸ್ತು ತಿರುಗಿ ಪರಿಶೀಲಿ ಸಲಿದೆ. ಈ ವೇಳೆ ತೊಂದರೆಗೊಳಪಟ್ಟವರು ನೇರವಾಗಿ ಈ ಪಡೆಗೆ ದೂರು ನೀಡಬಹುದು. ಪೊಲೀಸ್ ಠಾಣೆಗೂ ಕೂಡ ದೂರು ನೀಡುವಂತೆ ಮನವಿ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಸಹಾಯವಾಣಿಯನ್ನು ಬಳಸಿಕೊಳ್ಳಬಹುದು. ಯಾವುದೇ ಸಮಯದಲ್ಲಾದರೂ ತೊಂದರೆ ಇದ್ದರೆ ದೂರು ನೀಡಬಹುದಾಗಿದೆ. ತಕ್ಷಣವೇ ಈ ಪಡೆ ಸ್ಪಂದಿಸಲಿದೆ ಎಂದರು.

ಪುಂಡರು ದಾಳಿ ಮಾಡಿದಾಗ ಮಹಿಳೆಯರು ಮತ್ತು ಮಕ್ಕಳು ಆತ್ಮ ರಕ್ಷಣೆ ಮಾಡಿಕೊಳ್ಳುವ ವಿಧಾನವನ್ನು ದುರ್ಗಾ ಪಡೆಯ ಮಹಿಳಾ ಪೊಲೀಸ್‌ ತಂಡವು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿತು.