November 21, 2019

ಕೆರೆಗೆ ನೀರು; ಒಂದು ಪಕ್ಷದ ಸಾಧನೆಯಲ್ಲ: ತರಳಬಾಳು ಶ್ರೀ

ಸಿರಿಗೆರೆ, ಸೆ. 10- ನೀರಿಗೆ ಜಾತಿ, ಮತ, ಪಕ್ಷಗಳ ಭೇದವಿಲ್ಲ. ಎಲ್ಲರಿಗೂ ಬೇಕಾದ ನೀರನ್ನು ತುಂಗಭದ್ರಾ ನದಿಯಿಂದ ಬಯಲು ಸೀಮೆಯ ಕೆರೆಗಳಿಗೆ ತುಂಬಿಸುವ ನಮ್ಮ ಕನಸಿಗೆ ಪಕ್ಷಭೇದವಿಲ್ಲದೆ ಸರ್ವಪಕ್ಷದವರು ಶ್ರಮಿಸಿ ದ್ದಾರೆ. ಮೂರು ಜನ ಮುಖ್ಯಮಂತ್ರಿಗಳು ಇದಕ್ಕೆ ಅಭಿನಂದ ನಾರ್ಹರು ಎಂದು ಶ್ರೀತರಳಬಾಳು ಬೃಹನ್ಮಠದ ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಜಗಳೂರು ತಾಲ್ಲೂಕು ಹಾಗೂ ಭರಮಸಾಗರ ಹೋಬಳಿಯ ಜನಪ್ರತಿನಿಧಿಗಳು ಹಾಗೂ ರೈತರು ಶ್ರೀಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು,  ಈ ಯೋಜನೆಗೆ ಹಣ ಮಂಜೂರಾಗಿರುವುದು ಜನರಿಗೆ ಖುಷಿ ತಂದಿರುವುದು ಸಂಭ್ರಮದ ಪ್ರತೀಕ. ಇದು ಅಭಿನಂದನಾ ಸಮಾರಂಭವಲ್ಲ, ಸಂಭ್ರಮದ ದಿನ ಎಂದು ನುಡಿದರು.

ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಮಂಜೂರಾದ  ಹಣವನ್ನು ಕಡಿತಗೊಳಿಸಿದಾಗ ನಮಗೆ ನಿಜಕ್ಕೂ ಕೋಪ ಬಂದಿತು. ಆಗ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಿ ಸಿ ಪಾಟೀಲ, ಸಿ.ಟಿ. ರವಿ ಮತ್ತು ಮಾಧುಸ್ವಾಮಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪೂರ್ಣ ಪ್ರಮಾಣದ ಹಣವನ್ನು ಬಿಡುಗಡೆಗೊಳಿಸಲು ಸೂಚಿಸಿದೆವು. ಈ ಐವರನ್ನು ನಾವು ಮುತ್ತೈದೆಯರು ಎಂದು ಬಣ್ಣಿಸುತ್ತೇವೆ. ಇವರನ್ನು ಹಿರಿಯ ಶ್ರೀಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಅಭಿನಂದಿಸಲಾಗುತ್ತದೆ. ಆ ಸಮಾರಂಭಕ್ಕೆ  ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುತ್ತದೆ. ಈ ಯೋಜನೆಗಳು ಜಾರಿಗೊಳ್ಳಲು ಸಹಕರಿಸಿದ ಮಾಜಿ ಸಚಿವ ಎಚ್. ಆಂಜನೇಯ ಮತ್ತು ಎಚ್.ಪಿ. ರಾಜೇಶ್ ಅವರನ್ನೂ ಸಹ ಕೃತಜ್ಞತೆಯಿಂದ ಸ್ಮರಿಸುತ್ತೇವೆ. 
– ಡಾ|| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಮೂರು ಜನ ಮುಖ್ಯಮಂತ್ರಿಗಳು ಈ ಯೋಜನೆಗೆ ಸ್ಪಂದಿಸಿದ್ದು, ಇದನ್ನು ಕೇವಲ ಒಂದು ಪಕ್ಷದ ಸರ್ಕಾರದ ಸಾಧನೆ ಎಂದು ಬಿಂಬಿಸದೆ ಕರ್ನಾಟಕ ಸರ್ಕಾರದ ಯೋಜನೆ ಎಂದಾಗಬೇಕು ಎಂದರು. ಜಗಳೂರು ತಾಲ್ಲೂಕಿನ 22 ಕೆರೆಗಳ ಏತ ನೀರಾವರಿಯ ಲೋಪ ದೋಷಗಳನ್ನು ಸರಿಪಡಿಸಿ, ಉತ್ತಮ ಅನುಭವವುಳ್ಳ ಗುತ್ತಿಗೆದಾರರಿಗೆ ಟಿಂಡರ್ ನೀಡಿ ಯಶಸ್ವಿಗೊಳಿಸಬೇಕೆಂದು ಜನಪ್ರತಿನಿಧಿಗಳಿಗೆ ತಿಳಿಸಿದರು. ಗ್ರಾಮೀಣ ಭಾಗದ ಎಲ್ಲಾ ಕೆರೆಗಳು ಇಂಟರ್‍ಲಿಂಕ್ ಆಗಿ ಜನ, ಜಾನುವಾರು, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಲಿ ಎಂದರು.

ತುಂಗಭದ್ರ ನದಿಗೆ ಬ್ಯಾರೇಜ್ ಕಟ್ಟುವ ಕಾಮಗಾರಿ ಪೂರ್ಣ ಮುಗಿಯುವ ಹಂತದಲ್ಲಿದೆ. ಮಲ್ಲಶೆಟ್ಟಿಹಳ್ಳಿ ಸಮೀಪ ಹೊಸಕೆರೆ ನಿರ್ಮಾಣವಾಗುತ್ತಿದೆ. ಜಾಕ್‍ವೆಲ್‍ಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಕೆರೆಗಳು ಶೀಘ್ರವಾಗಿ ತುಂಬಲಿವೆ ಎಂದರು. 

ದಾವಣಗೆರೆ ಸಂಸದ ಜಿ.ಎಂ. ಸಿದ್ಧೇಶ್ವರ್ ಮಾತನಾಡಿ, ಸಿರಿಗೆರೆ ಶ್ರೀಗಳ ಶ್ರಮದಿಂದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಲವು ಭಾಗಗಳ ಕೆರೆಗಳಿಗೆ ನದಿ ನೀರು ಹರಿದುಬರುವಂತಾಗುತ್ತಿದೆ. ಶ್ರೀಗಳ ಸಾಮಾಜಿಕ ಕಾಳಜಿ, ರೈತಪರ ಚಿಂತನೆ,  ದೂರದೃಷ್ಟಿ   ಅನುಕರಣೀಯ ಎಂದರು.  

ಜಗಳೂರು ಕ್ಷೇತ್ರದ ಶಾಸಕ ಎಸ್.ವಿ. ರಾಮಚಂದ್ರ ಶ್ರೀಗಳಿಗೆ ಗೌರವ ಅಭಿನಂದನೆ ಸಲ್ಲಸಿ ಮಾತನಾಡಿ,  ಬರದ ನಾಡಿಗೆ ಭಗೀರಥರಂತೆ ಗಂಗೆಯನ್ನು ಜಗಳೂರಿಗೆ ಹರಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದರು. ಒಂದುವೇಳೆ ಈ ಯೋಜನೆಗೆ ಸಮರ್ಪಕವಾಗಿ ಸರಕಾರದಿಂದ ಹಣ ಮಂಜೂರಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧನಾಗಿದ್ದೆ ಎಂದರು.

ಹೊಳಲ್ಕೆರೆ ಕ್ಷೇತ್ರದ ಶಾಸಕರಾದ ಎಂ. ಚಂದ್ರಪ್ಪ, ನಾನು ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೆ. ಪೂಜ್ಯರು  `ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಕೆಲಸಕ್ಕಿಂತ ಮಂತ್ರಿಸ್ಥಾನ ದೊಡ್ಡದಲ್ಲ’ ಎಂದು ಕಿವಿ ಮಾತು ಹೇಳಿದರು ಎಂದರು.

23 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ  ಅಧ್ಯಕ್ಷ ಡಾ. ಮಂಜುನಾಥಗೌಡ, ಹಿರಿಯ ಶ್ರೀಗಳ ಕಾಲದಲ್ಲಿ `ಸಿರಿಗೆರೆಯ ಶ್ರೀಗಳು ಗುಡುಗಿದರೆ ವಿಧಾನಸೌಧ ನಡುಗುತ್ತದೆ’ ಎಂಬ ನಾಣ್ನುಡಿ ರೂಢಿಯಲ್ಲಿತ್ತು. ಅದು ಇಂದಿಗೂ ಸತ್ಯವಾಗಿದೆ ಎಂದರು.

ಸಮಾರಂಭದಲ್ಲಿ ಜಗಳೂರು ತಾಲ್ಲೂಕು ಹಾಗೂ ಭರಮಸಾಗರ ಹೋಬಳಿಯ 3000 ಕ್ಕೂ ಹೆಚ್ಚು ಜನರು 30 ಬಸ್ಸು ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸಿದ್ದರು. ಭರಮಸಾಗರ ಹೋಬಳಿಯ ರೈತ ಮುಖಂಡರು 2500 ಲಾಡುಗಳನ್ನು ತಯಾರಿಸಿ ಉಣಬಡಿಸಿದರು.

ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಉಪನ್ಯಾಸಕ ಸುಭಾಷ್‍ಚಂದ್ರ, ರೈತ ಮುಖಂಡ ಚಟ್ನಳ್ಳಿ ಶಿವಣ್ಣ ಸಭೆಯಲ್ಲಿ ಮಾತನಾಡಿದರು.  ದೊಣ್ಣಿಹಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಕುಮಾರಿ, ರೈತ ಮುಖಂಡರಾದ ಶಶಿ ಪಾಟೀಲ್, ನಿವೃತ್ತ ಸಿಇಓ ಓಂಕಾರಪ್ಪ, ಡಿ.ವಿ. ಶರಣಪ್ಪ, ಮತ್ತಿತರರು ಉಪಸ್ಥಿತರಿದ್ದರು.