22 ಕೆರೆಗಳಿಗೆ ನೀರು ತುಂಬಿಸಲು ಲೀಕೇಜ್ ವಿಘ್ನ

ಕೆ.ಎನ್. ಮಲ್ಲಿಕಾರ್ಜುನ್

ದಾವಣಗೆರೆ ಹಾಗೂ ಜಗಳೂರು ತಾಲ್ಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ `ಲೀಕೇಜ್’ ವಿಘ್ನ ಎದುರಾಗಿದ್ದು, ಈ ವರ್ಷವಾದರೂ ಕೆರೆಗಳು ತುಂಬುತ್ತವೆ ಎಂಬ ಗ್ರಾಮಸ್ಥರ ಮಹಾ ನಿರೀಕ್ಷೆ ಹುಸಿಯಾಗುವ ಹಂತದಲ್ಲಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಜಾಕ್​ವೆಲ್​ ನಿಂದ ನೀರು ಎತ್ತಲು ವಿದ್ಯುತ್ ಸಮಸ್ಯೆ ಇಲ್ಲ. ಮೋಟಾರ್ ಸಮಸ್ಯೆ ಇಲ್ಲ ಆದರೆ ಮಳೆಗಾಲದ ಆರಂಭದಲ್ಲಿಯೇ ಲೀಕೇಜ್ ಸಮಸ್ಯೆ ಹೆಚ್ಚಾಗಿ ನೀರು ತುಂಬಿಸುವ ಕಾರ್ಯಕ್ಕೆ ಅಡ್ಡಗಾಲಾಗಿದೆ. ಸಮರ್ಪಕ ನಿರ್ವಹಣೆ ಇಲ್ಲದಿರುವುದು ಹಾಗೂ ಅಧಿಕಾರಿಗಳ ಹಾಗೂ ಈ​​ ಭಾಗದ  ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ಈ ಬಾರಿಯೂ ಕೆರೆಗಳು ತುಂಬುವುದು ಅನುಮಾನವಾಗಿದೆ ಎಂದು 22 ಕೆರೆ ಏತ ನೀರಾವರಿ ಹೋರಾಟ ಸಮಿತಿ ಆರೋಪಿಸಿದೆ.

ಕಳೆದೊಂದು ವಾರದಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಆದರೆ ಸದ್ಯ ನೀರು 2ನೇ ಜಾಕ್​ವೆಲ್ ತಲುಪಿದೆಯಷ್ಟೇ. ಆನಗೋಡು ಬಳಿ ಹೈವೇ ಅಥಾರಿಟಿ ಹಾಗೂ ಕೆಇಬಿ ಕೆಲಸ ನಿರ್ವಹಿಸುವ ವೇಳೆ ಭೂಗತವಾಗಿದ್ದ ಯೋಜನೆಯ ಪೈಪ್‌ಗಳನ್ನು ಕೊರೆದು ಹಾಕಿರುವುದು ಸದ್ಯ ನೀರು ಸರಬರಾಜು ಸ್ಥಗಿತಕ್ಕೆ ಕಾರಣವಾಗಿದೆ.

ಮತ್ತೊಂದೆಡೆ ರಾಷ್ಟ್ರೀಯ ಹೆದ್ದಾರಿಯನ್ನು 6 ಪಥ ಮಾಡಲಾಗುತ್ತಿದ್ದು, ಈಗಾಗಲೇ ಅಳವಡಿಸಿದ್ದ ಪೈಪ್​ಗಳನ್ನು ಮತ್ತಷ್ಟು ದೂರಕ್ಕೆ ಸ್ಥಳಾಂತರಿಸಲಾಗಿದೆ. ಈ ಕಾರ್ಯವೂ ಕೇವಲ ಶೇ.40ರಷ್ಟು ಮಾತ್ರ ಮುಗಿದಿದೆ. ಉಳಿದ ಕೆಲಸವನ್ನು ಮುಂದಿನ ವರ್ಷ ಪೂರೈಸುವಂತೆ ಸೂಚಿಸಲಾಗಿದೆ.  ಆದರೆ ಪ್ರಸ್ತುತ ನಡೆದಿರುವ ಸ್ಥಳಾಂತರ ಕಾರ್ಯ ಸಮರ್ಪಕವಾಗಿರದ ಕಾರಣ ಆಗಿಂದಾಗ್ಗೆ ಲೀಕೇಜ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಸಮಿತಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಆರೋಪಿಸಿದ್ದಾರೆ.

ಪೈಪ್​ ಗಳ ಕೆಳಗೆ ಕಾಂಕ್ರೀಟ್ ಬೇಸ್​ಮೆಂಟ್ ಅಳವಡಿಸಿದರೆ ಲೀಕೇಜ್ ಸಮಸ್ಯೆ ತಪ್ಪಿಸಬಹುದು. ನಿರ್ವಹಣಾ ಗುತ್ತಿಗೆ ಪಡೆದವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಲೀಕೇಜ್ ಸಮಸ್ಯೆ ಕಂಡಾಕ್ಷಣ ಸಮರೋಪಾದಿಯಲ್ಲಿ ಕೆಲಸ ಮಾಡಿದರೆ ಮಾತ್ರ ಶೀಘ್ರ ನೀರು ತುಂಬಿಸಲು ಸಾಧ್ಯ.
– ಮಂಜುನಾಥ ಗೌಡ, ಅಧ್ಯಕ್ಷರು, 22 ಕೆರೆ ಏತ ನೀರಾವರಿ ಹೋರಾಟ ಸಮಿತಿ.

ಕಾಂಕ್ರೀಟ್ ಬೇಸ್​ಮೆಂಟ್ ಇಲ್ಲದೆ ಪೈಪ್ ಅಳವಡಿಕೆ: ಪೈಪ್  ಸ್ಥಳಾಂತರದ ವೇಳೆ ಕೆಳಗಡೆ ಕಾಂಕ್ರೀಟ್ ಬೇಸ್​ಮೆಂಟ್ ಹಾಕದೇ ಪೈಪ್ ಕೂರಿಸುತ್ತಿರುವ ಪರಿಣಾಮ ಮಳೆಗೆ ನೆಲ ಕುಸಿದು ಪೈಪ್​ಗಳು ಒಡೆದು ಲೀಕೇಜ್ ಸಮಸ್ಯೆ ಉಂಟಾಗುತ್ತಿದೆ.   ಕೆಳಗಡೆ ಕಾಂಕ್ರೀಟ್​ ಬೇಸ್​ಮೆಂಟ್ ಹಾಕದ ಹೊರತು ಲೀಕೇಜ್ ಸಮಸ್ಯೆಗೆ ಮುಕ್ತಿ ಸಿಗದು ಎನ್ನುತ್ತಾರೆ 22 ಕೆರೆ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ  ಡಾ.ಮಂಜುನಾಥ ಗೌಡ.

ಆರ್​ಆರ್​ ಸರ್ವೀಸ್ ಸಂಸ್ಥೆಗೆ ಪ್ರತಿ ವರ್ಷದ ನಿರ್ವಹಣಾ ಗುತ್ತಿಗೆ ನೀಡಲಾಗಿದೆ. ತಿಂಗಳಿಗೆ ಸುಮಾರು 10 ಲಕ್ಷ ರೂ.ನಷ್ಟು ಹಣ ನಿರ್ವಹಣಾ ವೆಚ್ಚವಾಗಿ ಅವರಿಗೆ ಜಮೆಯಾಗುತ್ತಿದೆ.  ಆದರೆ ಅವರು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ.  ಕಳೆದ ಐದಾರು ತಿಂಗಳು ಸುಮ್ಮನಿದ್ದು, ಮಳೆಗಾಲ ಆರಂಭವಾದಾಗ ರಿಪೇರಿ ಕೆಲಸ ಆರಂಭಿಸಿದ್ದಾರೆ. ಲೀಕೇಜ್ ಸಮಸ್ಯೆ ಶುರುವಾದರೆ ರಿಪೇರಿ ಮಾಡಲು  2 ದಿನ ತೆಗೆದುಕೊಳ್ಳುತ್ತಿದ್ದಾರೆ. ಸಮಸ್ಯೆ ಕಂಡಾಕ್ಷಣ ಸಮರೋಪಾದಿಯಲ್ಲಿ ಕೆಲಸ ಮಾಡಿದರೆ ಮಾತ್ರ ಶೀಘ್ರ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ಮಂಜುನಾಥ ಗೌಡ ಹೇಳಿದ್ದಾರೆ.

ಎರಡು ತಿಂಗಳು ಕಳೆದರೆ ಮಳೆಗಾಲವೇ ಮುಗಿಯುತ್ತದೆ. ಸದ್ಯ ನದಿಯಲ್ಲಿ ನೀರು ಹರಿಯುತ್ತಿದ್ದು ನೀರು ತುಂಬಿಸಿಕೊಳ್ಳುವ ತುರ್ತು ಅಗತ್ಯವಿದೆ. ಆದರೆ ಶಾಸಕರುಗಳು ರೆಸಾರ್ಟ್​ನಲ್ಲಿ ಕುಳಿತಿದ್ದಾರೆ. ಸಂಸದರು ಇವರನ್ನು ಕಾಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಾವೂ ಯಾರ ಬಳಿ ದೂರಬೇಕು?
– ಕೊಟ್ರೇಶ್ ಗೌಡ, ಪ್ರಧಾನ ಕಾರ್ಯದರ್ಶಿ, 22 ಕೆರೆ ಏತ ನೀರಾವರಿ ಹೋರಾಟ ಸಮಿತಿ.

ಪೈಪ್ ಲೈನ್ ಸ್ಥಳಾಂತರದ ವೇಳೆ  ಜಾಯಿಂಟ್ ಆಗಿರುವ 2 ಪೈಪ್​ಗಳನ್ನೇ ತೆಗೆದು ಮತ್ತೊಂದೆಡೆ ಕೂರಿಸುತ್ತಿದ್ದಾರೆ. ಈ​ಸಮಯದಲ್ಲಿ ಪೈಪ್​ಗಳು ಒಂದಿಷ್ಟು ಬಿರುಕು ಬಿಡುತ್ತವೆ. ಇದನ್ನು ಮತ್ತೆ ವೆಲ್ಡಿಂಗ್ ಮಾಡುತ್ತಿಲ್ಲ. ಆದ್ದರಿಂದ ಇಲ್ಲಿಯವರೆಗೆ ಸ್ಥಳಾಂತರ ಮಾಡಿರುವ 4 ಕಿ.ಮೀ. ಸ್ಥಳದಲ್ಲಿಯೇ ಮತ್ತೆ ಮತ್ತೆ ನೀರು ಲೀಕೇಜ್ ಆಗುತ್ತಿದೆ. ಈ ಪರಿಣಾಮ 2ನೇ ಜಾಕ್​ವೆಲ್​ಗೆ ನೀರು ತಲುಪಲು 8 ರಿಂದ 10 ದಿನಗಳು ಬೇಕಾದವು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಟ್ರೇಶ್ ನಾಯ್ಕ.

ಹರಿಹರದಿಂದ ದಾವಣಗೆರೆ ವರೆಗೆ 4 ಕಿ.ಮೀ. ವ್ಯಾಪ್ತಿಯಲ್ಲಿ ಪೈಪ್​ಗಳ ಸ್ಥಳಾಂತರ ಕಾರ್ಯ ನಡೆದಿದೆ. ಇನ್ನೂ 6 ಕಿ.ಮೀ. ದೂರ ಶಿಫ್ಟಿಂಗ್ ಕೆಲಸ ಬಾಕಿ ಇದೆ. ಮುಂದಿನ ವರ್ಷ​ ಮಾಡುವಂತೆ ಸೂಚಿಸಲಾಗಿದೆ.  ಆನಗೋಡು ಬಳಿ ಹೈವೇ ಅಥಾರಿಟಿಯವರು ಹಾಗೂ ಕೆಇಬಿ ಯವರು ಸೇರಿ ನೆಲದಲ್ಲಿನ ಪೈಪ್ ಕೊರೆದು ಹಾಕಿದ್ದಾರೆ. ಇದರಿಂದ ನೀರು ಸರಬರಾಜು ನಿಲ್ಲಿಸಲಾಗಿದೆ. ರಿಪೇರಿ ಮಾಡಿಕೊಡಲು ಹೈವೇ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಹೊಸ ಪೈಪ್ ತಂದು ಅಳವಡಿಸುವುದಾಗಿ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ರಿಪೇರಿ ಕಾರ್ಯ ಮುಗಿಯುತ್ತದೆ. 
– ಕೊಟ್ರೇಶ್, ಎಕ್ಸಿಕ್ಯೂಟಿವ್ ಇಂಜಿನಿಯರ್,  ನೀರಾವರಿ ನಿಗಮ

ಮಳೆ ವಿಳಂಬವಾದರೂ, ಸದ್ಯ ನದಿಗೆ ನೀರಿನ ಹರಿವು ಹೆಚ್ಚಳವಾಗಿದೆ. ಈಗಲಾದರೂ ತುಂಬಿಸಿಕೊಳ್ಳದಿದ್ದರೆ ಹೇಗೆ ? ಅಧಿಕಾರಿಗಳು, ಗುತ್ತಿಗೆದಾರು ಕೇವಲ ಟೈಂ ಪಾಸ್ ಮಾಡುತ್ತಿದ್ದಾರೆ. ಇನ್ನೇನು ಮಳೆಗಾಲವೇ ಮುಗಿದು ಹೋಗುತ್ತದೆ. ಸಿಕ್ಕ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಅಳಲನ್ನು ತೋಡಿಕೊಳ್ಳುವುದಾದರೂ ಯಾರ ಬಳಿ? ಜಗಳೂರು ಹಾಗೂ ಮಾಯಕೊಂಡ ಶಾಸಕರು ರೆಸಾರ್ಟ್​ನಲ್ಲಿ ಹೋಗಿ ಕುಳಿತುಕೊಂಡಿದ್ದಾರೆ. ಇಲ್ಲಿನ ಸಂಸದರು ಅ ಶಾಸಕರನ್ನು ಕಾಯುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು  ಕೊಟ್ರೇಶ್ ನಾಯ್ಕ ಆರೋಪಿಸಿದ್ದಾರೆ.

ಮುಂಗಾರು ತಡವಾಗಿದೆಯಾದರೂ ನದಿಯಲ್ಲಿ ನೀರು ಹರಿಯುತ್ತಿದೆ. ಅಧಿಕಾರಿಗಳು, ರಾಜಕಾರಣಿಗಳು ಬದ್ಧತೆ ಪ್ರದರ್ಶಿಸಿದರೆ ಸಾಧ್ಯವಾದಷ್ಟು ಕೆರೆಗಳಿಗೆ ನೀರು ತುಂಬಿಸಿಕೊಳ್ಳಬಹುದು ಎನ್ನುವುದು ರೈತರ ಆಶಯವಾಗಿದೆ.