ವಿಶ್ವ ಲಿಪಿಗಳ ರಾಣಿ ಕನ್ನಡ ಭಾಷೆ

ವಿಶ್ವ ಲಿಪಿಗಳ ರಾಣಿ ಕನ್ನಡ ಭಾಷೆ

ಹರಪನಹಳ್ಳಿ ತಾಲ್ಲೂಕು ಕಸಾಪ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ

ಹರಪನಹಳ್ಳಿ, ಮೇ 26- ಆಂಗ್ಲ ಭಾಷೆಗೆ ಸ್ವಂತ ಲಿಪಿಯಿಲ್ಲ. ಆದರೆ ಕನ್ನಡ ಭಾಷೆ ಪುರಾತನ ಭಾಷೆಯಾಗಿದ್ದು, ವಿಶ್ವ ಲಿಪಿಗಳ ರಾಣಿ ಕನ್ನಡ ಭಾಷೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಹೇಳಿದರು.

ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಶ್ರೀಮತಿ ಯರಬಾಸಿ ಗಂಗಮ್ಮ ಸ್ಮರಣಾರ್ಥ ದತ್ತಿ, ದಿ. ಮುದೇನೂರು ವಿರೂಪಾಕ್ಷಪ್ಪ ದತ್ತಿ, ಶ್ರೀಮತಿ ಎನ್. ಸುಮಂಗಲಮ್ಮ ಶಿವರುದ್ರಪ್ಪ ದತ್ತಿ, ದಿ.  ಹೆಚ್. ಬಸಪ್ಪ ದತ್ತಿ, ದಿ. ಕೊಟ್ರಪ್ಪ ಶ್ರೀಮತಿ ಹೆಚ್. ಬಸಮ್ಮ ದತ್ತಿ, ದಿ. ಡಾ. ಎನ್. ರಾಮಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಮಂಗಳೂರು, ಬೆಳಗಾವಿ, ಬೆಂಗಳೂರು, ಬಳ್ಳಾರಿ ಸೇರಿದಂತೆ ಗಡಿ ಭಾಗಗಳಲ್ಲಿ ಕನ್ನಡ ಭಾಷಿಗರ ಮೇಲೆ ನಿರಂತರ ದೌರ್ಜನ್ಯಗಳು ಜರುಗುತ್ತಿರುತ್ತವೆ. ಅನ್ಯ ಭಾಷೆ ನಡುವೆ ಅನ್ನದ ಭಾಷೆ ಕನ್ನಡವನ್ನು ಉಳಿಸುವ ಪ್ರಯತ್ನ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ಕಾವೇರಿ, ಎತ್ತಿನಹೊಳೆ, ಗೋವಾಗಳಲ್ಲಿ ನಮ್ಮ ಪಾಲಿನ ನೀರಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದು, ನಾವು ಜಾಗೃತರಾಗಬೇಕಿದೆ ಎಂದರು.

ಕನ್ನಡ ಹೃದಯ ಭಾಷೆ. ಕನ್ನಡ ತಾಯಿ ಭಾಷೆಯಾಗಿದ್ದು, ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ದಲ್ಲೇ ಓದಬೇಕು. ಇಂದು ಕನ್ನಡ ಮಾಧ್ಯಮದಲ್ಲಿ ಕಲಿತ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ. ಪೋಷಕರು ಕೀಳರಿಮೆ ಬಿಟ್ಟು ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಶಿಕ್ಷಣ ಕಲಿಸುವಂತಾದರೆ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದರು.

ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ್, ರಂಗಭೂಮಿ, ವಚನ ಸಾಹಿತ್ಯ, ಜಾನಪದ ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಉಪನ್ಯಾಸ ನೀಡಿ, ಟಿ.ವಿ., ಮೊಬೈಲ್‌ಗಳ ಬಳಕೆಯಿಂದ ರಂಗಭೂಮಿ ಸೊರಗುತ್ತಿದ್ದು, ಸರ್ಕಾರ ರಂಗಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಿದೆ. 12ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಜಾನಪದ, ಸಾಹಿತ್ಯ, ಕಲೆ ಕರ್ನಾಟಕದ ತವರು ಮನೆಯಾಗಿದ್ದು, ಈ ರಾಜ್ಯ ಪುಣ್ಯ ಭೂಮಿಯಾಗಿದೆ. ನಾವುಗಳು ಇಲ್ಲಿ ಹುಟ್ಟಿರುವುದೇ ಪುಣ್ಯ ಎಂದರು.

ದತ್ತಿ ದಾನಿಗಳಾದ ಅಂಬುಜಾ ರಾಮಪ್ಪ ಮಾತನಾಡಿ, ಕನ್ನಡ ನಾಡು, ನುಡಿ, ಜಲ, ಭಾಷೆ ಉಳಿಸುವ ನಿಟ್ಟಿನಲ್ಲಿ ಹಣವನ್ನು ದತ್ತಿ ಹೆಸರಿನಲ್ಲಿ ಇಟ್ಟು, ಅದರಲ್ಲಿ ಬರುವ ಬಡ್ಡಿ ಹಣದಿಂದ ಇಂತಹ ಕಾರ್ಯಕ್ರಮಗಳ್ನು ಮಾಡಲಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವನಾತ್ಮಕ ಸಂಬಂಧಗಳನ್ನು ಹೊಂದಿದ ಜಗತ್ತಿನ ಭಾಷೆಗಳಲ್ಲಿ 3ನೇ  ಸ್ಥಾನ ಪಡೆದ ಲಿಪಿ ಇರುವ ಭಾಷೆ ಕನ್ನಡ ಭಾಷೆಯಾಗಿದೆ. ಇಂದು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕಲಿತವರು ಜ್ಞಾನವಂತರು, ಹೃದಯವಂತರಾಗಿದ್ದಾರೆ. ಬರೀ ಅಂಕ ಗಳಿಕೆಗೆ ಸೀಮಿತವಾಗದೇ ಕನ್ನಡ ಪುಸ್ತಕ, ಕನ್ನಡ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಓದುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ. ರವೀಂದ್ರನಾಥ್, ಕಸಾಪ ಗೌರವ ಕಾರ್ಯದರ್ಶಿ ಆರ್. ಪದ್ಮರಾಜ್ ಜೈನ್, ಗೌರವ ಕೋಶಾಧಿಕಾರಿ ರಾಘವೇಂದ್ರ ಶೆಟ್ಟಿ, ಶಿಕ್ಷಕರಾದ ಷಣ್ಮುಖಪ್ಪ, ಡಿ. ಶಶಿಕಲಾ, ಸಂತೋಷ್‌ ಕುಮಾರಿ, ಮಾಲಾ ಹಿರೇಮಠ, ಅಣ್ಣಪ್ಪ, ಪರಸಪ್ಪ ಉಪಸ್ಥಿತರಿದ್ದರು.