ಮೂಲಭೂತ ಸೌಕರ್ಯಗಳ ಸರಿಪಡಿಸಲು ಆಗ್ರಹ

ಮೂಲಭೂತ ಸೌಕರ್ಯಗಳ ಸರಿಪಡಿಸಲು ಆಗ್ರಹ

ದಾವಣಗೆರೆ, ಮೇ 26- ನಗರ ಪಾಲಿಕೆ ವ್ಯಾಪ್ತಿಯ ಭಾಷಾ ನಗರದಲ್ಲಿನ ಚರಂಡಿ, ರಸ್ತೆ, ಬೀದಿ ದೀಪ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳ ಸರಿಪಡಿಸುವಂತೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ನಗರದ ಅಕ್ತರ್ ರಜಾ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ಮಳೆ ಬಿದ್ದ ಪರಿಣಾಮ ನಗರದ ಹಲವಾರು ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸಮಸ್ಯೆಗಳು ಇಲ್ಲದಂತಾಗಿದೆ. ಮಳೆಯಿಂದಾಗಿ ಮನೆಯ ಗೋಡೆಗಳು ತನಿಸಿಯಾಗಿ ಬಟ್ಟೆ, ದಿನಸಿಗಳು ಇನ್ನಿತರೆ ದಿನಬಳಕೆ ವಸ್ತುಗಳು ಬಳಕೆಗೆ ಬಾರದಂತಾಗಿವೆ ಎಂದು ಪ್ರತಿಭಟನಾಕಾರರು ಅಸಮಾದಾನ ವ್ಯಕ್ತಪಡಿಸಿದರು.

ಮುಂಗಾರು ಮಳೆ ಪ್ರಾರಂಭ ಆಗುತ್ತಿರುವುದರಿಂದ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಅಥವಾ ಮಹಾನಗರ ಪಾಲಿಕೆಯಿಂದ ಈ ಕೂಡಲೇ ಚರಂಡಿ ಸರಿಪಡಿಸಿ, ಮಳೆಯ ನೀರು ಮನೆಯ ಒಳಗೆ ನುಗ್ಗದಂತೆ ಕಾಮಗಾರಿಯನ್ನು ನಡೆಸಬೇಕು. ಬೋರ್‍ವೆಲ್ ಸಹ ಕೆಟ್ಟು ಹೋಗಿದೆ. ಇದರಿಂದಾಗಿ ಅಲ್ಲಿನ ಜನರಿಗೆ ನೀರಿನ ತೊಂದರೆ ಆಗಿದೆ. ಕೂಡಲೇ ಬೋರ್‍ವೆಲ್‍ನ್ನು ಸರಿಪಡಿಸಬೇಕು. ಜತೆಗೆ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯಗಳಾದ ಬೀದಿ ದೀಪ, ಸಿಮೆಂಟ್ ರಸ್ತೆಯನ್ನು ಒದಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕೆ ಸ್ಥಳೀಯ ಪಾಲಿಕೆ ಸದಸ್ಯ ಅಕ್ವರ್‍ಖಾನ್ ಆಗಮಿಸಿ ಮನವಿ ಪಡೆದು, ನಾಳೆ ಬೆಳಿಗ್ಗೆಯಿಂದಲೇ ಚರಂಡಿ ದುರಸ್ತಿ, ನೀರಿನ ಸೌಲಭ್ಯ ಒದಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಸ್ಥಳೀಯ ಸಮಿತಿ ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ ಅಣಬೇರು, ಭಾರತಿ, ನಾಗಸ್ಮಿತಾ, ಮನೋಜ್, ಅಭಿಷೇಕ್, ಸ್ಥಳೀಯ ನಾಗರೀಕರಾದ ಬೀಬಿ ಆಯಿಶಾ, ಗುಲ್ಜಾರ್ ಬೀ, ಜೋಗಮ್ಮ, ದಿಲ್ಷಾದ್ ಬೀ, ಮೆಹಬೂಬ್ ಸಾಬ್, ಜಾಕೀರ್ ಸಾಬ್ ಸೇರಿದಂತೆ ಇತರರು ಭಾಗವಹಿಸಿದ್ದರು.