ಬೆಲೆ ಏರಿಕೆ ತಡೆ-ನಿರುದ್ಯೋಗ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಲೆ ಏರಿಕೆ ತಡೆ-ನಿರುದ್ಯೋಗ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ, ಮೇ 26- ಬೆಲೆ ಏರಿಕೆ ತಡೆ ಮತ್ತು ನಿರುದ್ಯೋಗ ನಿವಾರಣೆ ಮಾಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷ (ಸಿಪಿಐ) ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ (ಎಂ) (ಸಿಪಿಐಎಂ) ಪಕ್ಷಗಳು ಜಂಟಿಯಾಗಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದವು.

ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮುಖೇನ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಸಂಘಟನೆಗಳ ಪದಾಧಿ ಕಾರಿಗಳು, ಉಪವಿಭಾಗಾಧಿಕಾರಿಗಳಿಗೆ  ಮನವಿ ಸಲ್ಲಿಸಿದರು.

ದಿನೇ ದಿನೇ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು, ಇದರಿಂದ ದುಡಿಯುವ ವರ್ಗದ ಜನರು ಕೊಳ್ಳುವ ಶಕ್ತಿ ಕಳೆದು ಕೊಂಡು ನಲುಗುತ್ತಿದ್ದಾರೆ. ಸರ್ಕಾರದ ಆರ್ಥಿಕ ನೀತಿಯಿಂದ ಕೈಗಾರಿಕೆಗಳನ್ನು ನಡೆಸ ಲಾಗದೇ ಮುಚ್ಚುತ್ತಿರುವುದರಿಂದ ಇರುವ ಕೆಲಸವನ್ನು ಕಾರ್ಮಿಕರು ಕಳೆದುಕೊಳ್ಳುತ್ತಿ ದ್ದಾರೆ, ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಅಡುಗೆ ಎಣ್ಣೆ, ಆಹಾರ ವಸ್ತುಗಳ ಬೆಲೆಗಳು ತಡೆ ಇಲ್ಲದಂತೆ ಏರುತ್ತಿವೆ ಎಂದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ಹೆಚ್.ಜಿ. ಉಮೇಶ್ ಕಿಡಿಕಾರಿದರು.

ಕೋವಿಡ್ ಸಂಕಷ್ಟದಿಂದ ಬಳಲಿರುವ ದೇಶದ ಎಲ್ಲಾ ದುಡಿಯುವ ಜನರಿಗೆ ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ಮಾಸಿಕ 7500 ಕೊಡಬೇಕು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರ್ಮಿಕರಿಗೆ ಕೂಲಿಯಲ್ಲಿ ಹೆಚ್ಚಳ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಗೂ ವಿಸ್ತರಿಸಿ ನಗರದ ಜನತೆಗೆ ಉದ್ಯೋಗ ಒದಗಿಸಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮನವಿ ಮಾಡಿದರು.

ಪೆಟ್ರೋಲಿಯಂ ಉತ್ಪದನಾ ವಸ್ತುಗಳ ಮೇಲಿನ ಎಲ್ಲಾ ಸರ್ ಚಾರ್ಜ್ ಹಾಗೂ ಸೆಸ್ ಅನ್ನು ಹಿಂಪಡೆಯಬೇಕು. ಈ ಹಿಂದೆ ಜಾರಿಯಲ್ಲಿದ್ದ ಅಡುಗೆ ಅನಿಲದ ಸಬ್ಸಿಡಿಯನ್ನು ದುಡಿಯುವ ಎಲ್ಲಾ ಕುಟುಂಬಗಳಿಗೆ ಪ್ರತಿ ಸಿಲಿಂಡರ್ ಗೆ   200 ರೂ., ಸಬ್ಸಿಡಿ ಪುನಃ ಜಾರಿಗೆ ತರಬೇಕು. 

ಪೆಟ್ರೋಲ್, ಡೀಸೆಲ್‍ನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಏರಿಕೆ ನೆವ ಕೈಬಿಟ್ಟು ದೇಶದ ರೈತರಿಗೆ, ನಾಗರೀಕರಿಗೆ ಕೈಗೆಟಕುವ ಬೆಲೆಯಲ್ಲಿ ಸರ್ಕಾರ ಪೂರೈಸಬೇಕು ಎಂದು ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ವಾಸು ತಿಳಿಸಿದರು.

ಪ್ರತಿಭಟನೆಯಲ್ಲಿ ಐರಣಿ ಚಂದ್ರು, ಸರೋಜ, ಷಣ್ಮುಖಪ್ಪ, ವಿ. ಲಕ್ಷ್ಮಣ್, ಶಿವಕುಮಾರ್ ಶೆಟ್ಟರ್, ಸಿಪಿಐಎಂನ ಕೆ.ಹೆಚ್. ಆನಂದರಾಜು, ಸುರೇಶ್ ಯರಗುಂಟೆ, ಬಸವರಾಜು, ಪರಶುರಾಮ್ ಇತರರು ಭಾಗವಹಿಸಿದ್ದರು.