ಜ್ಞಾನಕ್ಕಿಂತ ಶ್ರೇಷ್ಠ ಜಗತ್ತಿನಲ್ಲಿ ಮತ್ತೊಂದಿಲ್ಲ

ಜ್ಞಾನಕ್ಕಿಂತ ಶ್ರೇಷ್ಠ ಜಗತ್ತಿನಲ್ಲಿ ಮತ್ತೊಂದಿಲ್ಲ

ಹರಿಹರ : ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕ ಬಿ.ಬಿ. ರೇವಣ್ಣನಾಯ್ಕ್

ಹರಿಹರ, ಮೇ 26- ಜಗತ್ತಿನಲ್ಲಿ ಜ್ಞಾನಕ್ಕಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ. ವಿದ್ಯಾರ್ಥಿಗಳು ಹೆಚ್ಚು ಜ್ಞಾನ ಸಂಪಾದನೆ ಮಾಡಿದರೆ ಜಗತ್ತು ನಿಮಗೆ ಗೌರವ, ಸ್ಥಾನಮಾನವನ್ನು ನೀಡುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಮತ್ತು ತಿಪ್ಪೇರುದ್ರಸ್ವಾಮಿ ಪ್ರೌಢಶಾಲಾ ಮುಖ್ಯಶಿಕ್ಷಕ ಬಿ.ಬಿ. ರೇವಣ್ಣನಾಯ್ಕ್ ಅಭಿಪ್ರಾಯಪಟ್ಟರು.

ಹನಗವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ಶಾಲಾ-ಕಾಲೇಜು ಅಂಗಳ ದಲ್ಲಿ ಸಾಹಿತ್ಯೋತ್ಸವ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸೂರ್ಯನಿಗೆ ಸರಿ ಸಾಟಿಯಾಗಿ ನಿಲ್ಲುವ ಬೆಳಕು ಯಾವುದೂ ಜಗತ್ತಿನಲ್ಲಿಲ್ಲ. ಸೂರ್ಯನಷ್ಟೇ ಶ್ರೇಷ್ಠವಾದ ಜ್ಞಾನವನ್ನು ಸಂಪಾದನೆ ಮಾಡಿದರೆ, ಸೂರ್ಯ ಹೇಗೆ ಬೆಳಕನ್ನು ಜಗತ್ತಿಗೆ ನೀಡುತ್ತಾನೋ ಅದೇ ರೀತಿಯಲ್ಲಿ ನಮ್ಮ ಜೀವನ ಉತ್ತಮ ದಾರಿಯಲ್ಲಿ ಸಾಗುತ್ತದೆ.

ಶರಣರ ತತ್ವ ಮತ್ತು ಕಾಯಕ ತತ್ವ ಬಹಳ ಪ್ರಮುಖವಾಗಿವೆ. ಅದ್ಬುತ ಕಾವ್ಯ ಪರಂಪರೆಯನ್ನು ಸೃಷ್ಟಿ ಮಾಡಿದ ನೆಲವಾಗಿದೆ. ಜಾತಿ, ಧರ್ಮ, ಭೇದಭಾವ, ಬಲಿಷ್ಟ, ಶ್ರೇಷ್ಠ ಎಂದು ಯಾವುದೇ ರೀತಿಯ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡುತ್ತಾ ವಚನ ಸಾಹಿತ್ಯ ಬೆಳೆಯುತ್ತ ಸಾಗಿದೆ. 

ಜಗತ್ತಿನಲ್ಲಿ 6 ಸಾವಿರ ಭಾಷೆಗಳಿದ್ದು, ಕನ್ನಡ ಭಾಷೆಯಲ್ಲೂ ಇರುವಷ್ಟು ಸಾಹಿತ್ಯದ ಪರಂಪರೆ ಯಾವ ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ ಸಾಹಿತ್ಯವನ್ನು ಹೆಚ್ಚಾಗಿ ಓದಬೇಕು. ಸಾಹಿತ್ಯ ಎಂದರೆ ಅಂತರಂಗದ ಸಾಧನೆ, ಆ ಸಾಧನೆ ಮಾಡಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು‌ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಎಂ‌. ಮಂಜುನಾಥಯ್ಯ ಮಾತನಾಡಿದರು.

ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಗದಿಗೆಪ್ಪ ವೈ. ಹಳೇಮನಿ ಮಾತನಾಡಿ, ಶಾಲಾ ದಿನಗಳಲ್ಲಿ ಮಕ್ಕಳಲ್ಲಿ ಇರುವ ಜ್ಞಾನವನ್ನು ಹೊರಗಡೆ ತರುವುದಕ್ಕೆ ವಚನ ಸಾಹಿತ್ಯದ ಪ್ರಾಮುಖ್ಯತೆ ಬಹಳಿಷ್ಟಿದೆ. ಕಾರಣ ಇತ್ತೀಚೆಗೆ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿ ಪುಸ್ತಕ ಓದುಗರು ಕಡಿಮೆಯಾಗಿದ್ದಾರೆ. ಈ ಬೆಳವಣಿಗೆಯಿಂದ ಮಕ್ಕಳಿಗೆ ವಚನ ಸಾಹಿತ್ಯದ ಮತ್ತು ನಾಡಿನ ದಾರ್ಶನಿಕರ, ಸಂತರ ಮತ್ತು ಶ್ರೇಷ್ಠ ಕವಿಗಳ ಅರಿವನ್ನು ಮೂಡಿಸುವ ಕಾರ್ಯ ಹೆಚ್ಚು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಗಬೇಕೆಂದು ಹೇಳಿದರು. ‌   

ಹನಗವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸವಿತಾ ಶೇಖರಪ್ಪ, ಹನಗವಾಡಿ ಗ್ರಾಪಂ ಉಪಾಧ್ಯಕ್ಷ ಎಸ್.ರೇವಣಸಿದ್ದೇಶ್, ಮಾಗನೂರು ಬಸಪ್ಪ ಕಾಲೇಜು ಉಪನ್ಯಾಸಕ ಶಾಂತಾರಾಮ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಕುಬೇಂದ್ರಪ್ಪ ಮೆಕ್ಕಪ್ಪನವರ್, ಪಿಡಿಓ ರೇಣುಕಾ ಬಾಯಿ ಇತರರು ಮಾತನಾಡಿದರು. 

ಕಸಾಪ ಗೌರವ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶರಣ ಮಾಗನೂರು ಬಸಪ್ಪನವರ ಆತ್ಮಚರಿತ್ರೆ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಶಿಕ್ಷಕ ಸುರೇಶ್ ಹಂಚಿನ ಗೌಡ್ರು, ಜೆ. ರೇಖಾ, ಅರ್ಷಿತಾ, ಶಾಂತಕುಮಾರಿ, ಅನ್ನಪೂರ್ಣ, ಮಹೇಶ್ವರಪ್ಪ, ಶೇಖರಪ್ಪ, ಎನ್.ಇ.ಸುರೇಶ್, ನಾಗರಾಜ್ ಇತರರು ಹಾಜರಿದ್ದರು.