ಒಡೆಯರ ಹತ್ತೂರು – ಗಂಗನಕೋಟೆ ಸಂಪರ್ಕ ಸೇತುವೆ ದುರಸ್ತಿಗೆ ರೇಣುಕಾಚಾರ್ಯ ಸೂಚನೆ

ಒಡೆಯರ ಹತ್ತೂರು – ಗಂಗನಕೋಟೆ ಸಂಪರ್ಕ ಸೇತುವೆ ದುರಸ್ತಿಗೆ ರೇಣುಕಾಚಾರ್ಯ ಸೂಚನೆ

ನ್ಯಾಮತಿ, ಮೇ 26- ಕಳೆದ ಕೆಲ ದಿನಗಳಿಂದ ಸುರಿದ ಬಾರೀ ಮಳೆಯಿಂದಾಗಿ ಒಡೆಯರಹತ್ತೂರು ಹಾಗೂ ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ತಕ್ಷಣ ಸೇತುವೆ ದುರಸ್ತಿ ಮಾಡಿಸುವಂತೆ ಅಧಿಕಾರಿಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೂಚಿಸಿದರು.

ಗುರುವಾರ ಒಡೆಯರಹತ್ತೂರು- ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿಹೋದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಒಡೆಯರ ಹತ್ತೂರು ಹಾಗೂ ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ಎರಡು ಗ್ರಾಮಗಳ ನಡುವಿನ
ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ಅಧಿಕಾರಿಗಳಿಗೆ ಸೇತುವೆ ದುರಸ್ತಿ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ಈಗಾಗಲೇ ಸೇತುವೆ ಮೇಲ್ದರ್ಜೆಗೇರಿಸಲು ನಾಲ್ಕು ಕೋಟಿ ಅನುದಾನ ಕೇಳಿದ್ದು, ಶೀಘ್ರದಲ್ಲೇ ಅನುದಾನ ಬಿಡುಗಡೆಯಾಗಲಿದ್ದು ಸೇತುವೆ ಮೇಲ್ದರ್ಜೆಗೇರಿಸಲಾಗುವುದು ಎಂದ ರೇಣುಕಾಚಾರ್ಯ, ಸದ್ಯ ತಾತ್ಕಾಲಿಕವಾಗಿ ಸೇತುವೆ ದುರಸ್ತಿ ಮಾಡಲಾಗುವುದು ಎಂದರು.

ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ28.8 ಮಿಮಿ ನಷ್ಟು ಹೆಚ್ಚು ಮಳೆಯಾಗಿದೆ ಎಂದ ರೇಣುಕಾಚಾರ್ಯ, ಅತಿಯಾದ ಮಳೆಯಿಂದಾಗಿ 2343.85 ಎಕರೆ ಭತ್ತ, 163.37 ಎಕರೆ ಮೆಕ್ಕೆಜೋಳ, 47.5 ಎಕರೆ ಶೇಂಗಾ, 23.5 ಎಕರೆ ಹತ್ತಿ, 18.25 ಎಕರೆ ಸೋಯಾಬಿನ್, 26.75 ಎಕರೆ ರಾಗಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲದೇ 150 ಕ್ಕೂ ಹೆಚ್ಚು ಮನೆಗಳು, 90 ಕ್ಕೂ ಹೆಚ್ಚು ಶಾಲಾ ಕೊಠಡಿಗಳು, 15 ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಗಂಗನಕೋಟೆ ಗ್ರಾಮದ ಎಂ.ಜಿ.ಚಂದ್ರಪ್ಪ ಮಾತನಾಡಿದರು. 

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಹೇಶ್ವರಪ್ಪ, ರವಿಕುಮಾರ್, ಚಂದ್ರಪ್ಪ, ಬಸಪ್ಪ, ನಾಗರಾಜ್ ಸೇರಿದಂತೆ ಮತ್ತಿತರರಿದ್ದರು.