ಉದ್ಯೋಗಾಕಾಂಕ್ಷಿಗಳಿಗೆ ಕನ್ನಡ ಕಲಿಕೆ ಅವಶ್ಯ

ಉದ್ಯೋಗಾಕಾಂಕ್ಷಿಗಳಿಗೆ ಕನ್ನಡ ಕಲಿಕೆ ಅವಶ್ಯ

ಮಿಲ್ಲತ್ ಶಾಲೆಯ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೈಯದ್ ಸೈಪುಲ್ಲಾ

ದಾವಣಗೆರೆ, ಮೇ 26-  ಕನ್ನಡ ನಮ್ಮ ರಾಜ್ಯ ಭಾಷೆ, ಕಲಿಯಲು ಬಲು ಸುಲಭವಾದ ಭಾಷೆ. ನಾವು ಅದನ್ನು ಗೌರವಿಸುವುದರ ಜೊತೆಗೆ ನಾವು ಕನ್ನಡಿಗರು ಎಂದು ಹೆಮ್ಮೆ ಪಡ ಬೇಕು. ಕನ್ನಡದ ಪರ ಒಲವನ್ನು ಎಲ್ಲರೂ ಮೈ ಗೂಡಿಸಿಕೊಳ್ಳಬೇಕು, ಮುಖ್ಯವಾಗಿ ಉದ್ಯೋಗಾ ಕಾಂಕ್ಷಿಗಳು ಕನ್ನಡವನ್ನು ಅವಶ್ಯವಾಗಿ ಕಲಿಯ ಬೇಕೆಂದು  ಮಿಲ್ಲತ್ ವಿದ್ಯಾಸಂಸ್ಥೆ ಗೌರವ ಕಾರ್ಯ ದರ್ಶಿ ಸೈಯದ್ ಸೈಫುಲ್ಲಾ ಕರೆ ನೀಡಿದರು.  

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವು ನಗರದ ಮಿಲ್ಲತ್ ವಿದ್ಯಾಸಂಸ್ಥೆಯ ಎಸ್.ಕೆ.ಎ. ಹೆಚ್ ಪ್ರೌಢಶಾಲೆಯಲ್ಲಿ  ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ತಾಲ್ಲೂಕು ಕಸಾಪ ಅಧ್ಯಕ್ಷರಾದ  ಶ್ರೀಮತಿ ಸುಮತಿ ಜಯಪ್ಪ, ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ, ಸೈಯದ್ ಮಿರ್ಜಾ ಅವರ ಪಾತ್ರ ಹಾಗೂ ಇನ್ನು ಇತರೆ ದತ್ತಿ ದಾನಿಗಳ ಬಗ್ಗೆ ಮೆಲುಕು ಹಾಕಿದರು, 

`ಗಾಂಧೀಜಿಯವರ ಜೀವನ ಆದರ್ಶಗಳು’ ವಿಷಯ ಕುರಿತು ದತ್ತಿ ಉಪನ್ಯಾಸ ನೀಡಿದ ಮಲೇ ಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ   ಶಿಕ್ಷಣ ಶಾಸ್ತ್ರ ಉಪನ್ಯಾಸಕರಾದ ಡಾ. ಅತಿಯಾ ಕೌಸರ್ ಮಾತನಾಡಿ, ಸತ್ಯ, ಧರ್ಮ, ನ್ಯಾಯ, ನಿಷ್ಠೆ ಮೊದಲಾದ ಆದರ್ಶಗಳನ್ನು ಮೈಗೂಡಿಸಿ ಕೊಂಡಿದ್ದ ಬಾಪೂಜಿ ಸರ್ವೋದಯವನ್ನು ಬಯಸಿದ್ದರು. ಅವರ ದೃಷ್ಟಿಯಲ್ಲಿ ತ್ಯಾಗ, ಸೇವಾ ಮನೋಭಾವನೆ ಮಹತ್ವದ್ದಾಗಿತ್ತು. ಅವರು ಗೀತೆಯನ್ನು ತಮ್ಮ ಪ್ರಾಣ ಎನ್ನುತ್ತಿದ್ದರು. ಕರ್ಮ ಮಾಡುವುದಷ್ಟೇ ನಮ್ಮ ಕೆಲಸ. ಫಲ ಸೃಷ್ಟಿಕರ್ತನ ಇಚ್ಛೆ ಎಂದು ಬಲವಾಗಿ ನಂಬಿದ್ದರು. 

ಸಮಯಪಾಲನೆ, ಶಿಸ್ತು, ಅಸ್ಪೃಶ್ಯತೆಯ ನಿರ್ಮೂಲನೆ ಗ್ರಾಮಸ್ವರಾಜ್ಯ ಗಾಂಧೀಜಿ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ನೈತಿಕತೆ ಇಲ್ಲದ ವ್ಯಾಪಾರ, ಮರ್ಯಾದಾ ರಹಿತ ಭೋಗ, ಸಿದ್ಧಾಂತವಿಲ್ಲದ ಸಂಪತ್ತು ಮತ್ತು ಬಲಿದಾನವಿಲ್ಲದ ಪೂಜೆ ಗಾಂಧೀಜಿಯವರ ದೃಷ್ಟಿಯಲ್ಲಿ ಸಪ್ತ ಪಾತಕಗಳು ಆಗಿದ್ದವು. ಬ್ರಿಟಿಷರ ದಾಸ್ಯದಲ್ಲಿ ಮುಳುಗಿದ್ದ ಭಾರತೀಯರನ್ನು ತಮ್ಮ ಜೀವನಾದರ್ಶಗಳ ಮೂಲಕ ಸೂಜಿಗಲ್ಲಿನಂತೆ ತಮ್ಮೆಡೆಗೆ ಸೆಳೆದರು. ಅವರ ಜೀವನ ಆದರ್ಶಗಳನ್ನು ನಾವು ಅನುಸರಿಸಿದರೆ ಅವು ನಮ್ಮನ್ನು ತಿದ್ದುತ್ತವೆ, ಎಚ್ಚರಿಸುತ್ತವೆ ಹಾಗೂ ಬೆಳೆಸುತ್ತವೆ ಎಂದು ಡಾ|| ಅತಿಯ ಕೌಸರ್ ಭರವಸೆಯ ಮಾತುಗಳನ್ನಾಡಿದರು.

ವಿದ್ಯಾರ್ಥಿನಿ  ಆಯಿಷಾ ಪ್ರಾರ್ಥಿಸಿದರು.  ಕಸಾಪ ನಿರ್ದೇಶಕ ಎಲೆಬೇತೂರು ಷಡಾಕ್ಷರಪ್ಪ, ಶಾಲೆಯ ಮುಖ್ಯೋಪಾಧ್ಯಾಯ ಜಾಕಿರ್, ಆಡಳಿತಾಧಿಕಾರಿ ಅಲಿ, ಹಿರಿಯ ಶಿಕ್ಷಕರಾದ ಶಿರಿನ್ ಜಾನ್, ತಸ್ಲೀಮ, ಯೂಸುಫ್, ಶಕೀಲ್ ಉಪಸ್ಥಿತರಿದ್ದರು.  ಗಣಿತ ಶಿಕ್ಷಕ  ನಾಗರಾಜ್ ನಿರೂಪಿಸಿದರು. ಜಾಕಿರ್ ವಂದಿಸಿದರು.