ಹೆಂಡ-ತಂಬಾಕಿನಂತೆ ಮೊಬೈಲ್ ಸಹ ವ್ಯಸನಕಾರಿ

ದಾವಣಗೆರೆ, ಏ. 28 – ಮೊಬೈಲ್ ಸಹ ಹೆಂಡ ಹಾಗೂ ತಂಬಾಕಿನ ರೀತಿಯಲ್ಲೇ ವ್ಯಸನ ತರಿಸುವ ವಸ್ತು ಎಂದಿರುವ ಮಾನಸಿಕ ರೋಗ ತಜ್ಞರಾದ ಡಾ. ಎಂ. ಅನುಪಮ, ಎರಡು ವರ್ಷದ ಒಳಗಿನ ಮಕ್ಕಳನ್ನು ಮೊಬೈಲ್‌ನಿಂದ ಸಂಪೂರ್ಣ ದೂರವಿಡಬೇಕು ಎಂದಿದ್ದಾರೆ.

ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಮಹಿಳಾ ಮತ್ತು ಮಕ್ಕಳ ಯೋಗಕ್ಷೇಮ ಟ್ರಸ್ಟ್ ಮತ್ತು ಡಾ. ನಿರ್ಮಲ ಕೇಸರಿ ಪಿಡಿಯಾಟ್ರಿಕ್ ಅಕಾಡೆಮಿಕ್ ಟ್ರಸ್ಟ್‌ಗಳ ಆಶ್ರಯದಲ್ಲಿ ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿವೇಕ ಪೋಷಕರ ಆರೋಗ್ಯ ಕಾರ್ಯಗಾರದ ಅಂಗವಾಗಿ ಮೊಬೈಲ್ ವ್ಯಸನ ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು.

ಎರಡು ವರ್ಷಗಳ ಒಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್ ಕೊಡಬಾರದು. ಎಳೆ ವಯಸ್ಸಿನಲ್ಲಿ ಮೊಬೈಲ್ ಕೊಡುವುದರಿಂದ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮವಾಗುತ್ತದೆ. ಎಳೆಯದರಲ್ಲೇ ಮೊಬೈಲ್ ಬಳಕೆ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಉಂಟಾಗುವ ಜೊತೆಗೆ, ಕಲಿಕೆಗೆ ತೊಂದರೆಯಾಗುತ್ತದೆ. ಮಾತು ಕಲಿಯುವುದು ನಿಧಾನವಾಗುವ ಜೊತೆಗೆ, ಭಾವನಾತ್ಮಕ ಬೆಳವಣಿಗೆಗೆ ಹೊಡೆತ ಬೀಳುತ್ತದೆ ಎಂದು ಡಾ. ಅನುಪಮ ಹೇಳಿದರು.

ಮದ್ಯದ ರೀತಿಯಲ್ಲೇ ಮೊಬೈಲ್ ಬಳಕೆ ಅಭ್ಯಾಸದಿಂದ ಚಟ ಹಾಗೂ ವ್ಯಸನವಾಗಿ ಪರಿವರ್ತನೆಯಾಗುತ್ತದೆ. ಮೊಬೈಲ್ ವ್ಯಸನ ಬಿಡಲು ಮಗು ಯತ್ನಿಸಿದರೂ ಆಗದ ಸ್ಥಿತಿ ಉಂಟಾಗಿ, ಚಿಕಿತ್ಸೆಯ ಅಗತ್ಯ ಬರುತ್ತದೆ ಎಂದು ಡಾ. ಅನುಪಮ ಹೇಳಿದರು.

 

ಮೊಬೈಲ್ ಚಟಕ್ಕೆ ತಿರುಗಿದ ಮಕ್ಕಳಿಂದ ಮೊಬೈಲ್ ಕಸಿದುಕೊಂಡಾಗ ಅವರು ರೊಚ್ಚಿಗೇಳುತ್ತಾರೆ, ಕಿರಿಕಿರಿ ಮಾಡುತ್ತಾರೆ. ಚಡಪಡಿಕೆ ಹಾಗೂ ಕೋಪದ ಭಾವನೆ ಬರುತ್ತದೆ. ಈ ರೀತಿಯ ವ್ಯಸನಕ್ಕೆ ಸಿಲುಕಿದ ಹಲವಾರು ಮಕ್ಕಳ ಪ್ರಕರಣಗಳು ತಮ್ಮ ಎದುರು ಬರುತ್ತಿವೆ ಎಂದವರು ತಿಳಿಸಿದರು.

ಪೋಷಕರಿಂದಲೇ ಉತ್ತೇಜನ : ಮಕ್ಕಳು ಊಟ ಮಾಡಲಿ ಎಂದು, ತಮಗೆ ತೊಂದರೆ ಕೊಡದೆ ಒಂದು ಕಡೆ ಕುಳಿತುಕೊಳ್ಳಲಿ ಎಂದೋ, ಇಲ್ಲವೇ ಮಗು ಮೊಬೈಲ್ ಬಳಸುವುದನ್ನು ಕಲಿಯುವುದು ಬುದ್ಧಿವಂತಿಕೆ ಎಂದೋ ಪೋಷಕರೇ ಮಕ್ಕಳ ಮೊಬೈಲ್ ಬಳಕೆಗೆ ಉತ್ತೇಜನ ನೀಡುತ್ತಿದ್ದಾರೆ.

ನಾಳೆ ರೋಗಗಳು ಇಂದೇ : ಮೊಬೈಲ್ ಅತಿ ಬಳಕೆಯಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದೆ. ಬೊಜ್ಜು ಬಂದರೆ ನಾಳೆ ಬರುವ ರೋಗಗಳಿಗೆ ಇಂದೇ ಅರ್ಜಿ ಹಾಕಿಕೊಂಡಂತೆ. ನಿದ್ರೆ ತೊಂದರೆ, ಓದಿನ ಕಡೆ ಗಮನ ಇಲ್ಲದೇ ಇರುವುದು, ರೋಗ ನಿರೋಧಕ ಶಕ್ತಿ ಕೊರತ, ಕಣ್ಣಿನ ಸಮಸ್ಯೆ, ವಿಕಿರಣಗಳಿಂದ ಕ್ಯಾನ್ಸರ್, ಕಿವಿ ಸಮಸ್ಯೆ ಇತ್ಯಾದಿಗಳು ಮೊಬೈಲ್ ವ್ಯಸನದಿಂದ ಬರುತ್ತವೆ ಎಂದು ಡಾ. ಅನುಪಮ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಪ್ರೊ. ಬಾಣಾಪುರ ಮಠ, ಮೊಬೈಲ್‌ ಗೀಳು ಈಗ ಸಾಮಾಜಿಕ ಗೋಳಾಗಿದೆ. ಮಕ್ಕಳಿಗೆ ಹೆಂಡ ಹಾಗೂ ತಂಬಾಕು ಕೊಡುವುದು ಎಷ್ಟು ತಪ್ಪೋ, ಮೊಬೈಲ್ ಕೊಡುವುದೂ ಸಹ ಅಷ್ಟೇ ತಪ್ಪು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಕೌಜಲಗಿ, ಡಾ. ಮೃತ್ಯುಂಜಯ ಮತ್ತಿತರರು ಉಪಸ್ಥಿತರಿದ್ದರು.